ಬೆಂಗಳೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಅವರು ಬುಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರ ಹೆಸರನ್ನು ಘೋಷಿಸಿದ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರ ಮಧ್ಯೆ ರಾಜಕೀಯ ಜಟಾಪಟಿ ಶುರುವಾಗಿದ್ದು, ಕೇಸರಿ ಪಡೆ ಬಾನು ಅವರ ಹೆಸರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಈ ಕುರಿತು ಮೈಸೂರಲ್ಲಿ ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಬಾನು ಮುಷ್ತಾಕ್ ಬಗ್ಗೆ ಹೆಮ್ಮೆ ಇದೆ. ಆದರೆ, ದಸರಾ ಜಾತ್ಯಾತೀತತೆಯ ಪ್ರತೀಕಲ್ಲ. ಹಿಂದೂ ಧಾರ್ಮಿಕ ಆಚರಣೆಯಾಗಿದ್ದು, ಮುಷ್ತಾಕ್ ಅವರಿಗೆ ಚಾಮುಂಡೆಶ್ವರಿ ದೇವಿಯ ಮೇಲೆ ನಂಬಿಕೆ ಇದಿಯಾ? ಅಲ್ಲಾ ಬಿಟ್ಟರೆ ಬೇರೆ ಯಾವ ದೇವರಿಲ್ಲ ಎನ್ನುತ್ತದೆ ಇಸ್ಲಾಂ. ಹಾಗಾದರೆ ಬಾನು ಅವರು ತಾಯಿ ಚಾಮುಂಡಿಯನ್ನು ದೇವರು ಎಂದು ಒಪ್ಪಿಕೊಳ್ಳುತ್ತಾರೆಯೇ ಎಂದು ಕಿಡಿಕಾರಿದರು.
ಇನ್ನು ಎಕ್ಸ್ ಖಾತೆಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಪೋಸ್ಟ್ ಮಾಡಿದ್ದು, ಪೂಜೆಯನ್ನು ದಿಕ್ಕರಿಸಿರುವ ಇಸ್ಲಾಂಗೆ ಸೇರಿದ ಬಾನು ಅವರು ದೇವಿಗೆ ದೀಪ ಬೆಳಗಿಸಿ, ಪುಷ್ಪಾರ್ಚನೆ ಮಾಡುವುದು ಅವರ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದಿದ್ದಾರೆ.
ಸಂಡೂರಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಸಂತೋಷ್ ಲಾಡ್, ಬಾನುರನ್ನು ದಸರಾ ಉದ್ಘಾಟನೆಗೆ ಕರೆಯಬಾರದೆಂದು ಸಂವಿಧಾನದಲ್ಲಿ ಇದೆಯೇ? ಎಲ್ಲದಕ್ಕೂ ಆಕ್ಷೇಪ ಸರಿಯಲ್ಲ. ಸರ್ಕಾರದ ತೀರ್ಮಾನ ಗೌರವಿಸಬೇಕು ಎಂದರು.
ಅಜೀಂ ಪ್ರೇಮ್‌ಜಿ ಎರಡುವರೆ ಲಕ್ಷ ಕೋಟಿ ಹಣವನ್ನು ಬಡವರಿಗೆ ದಾನ ನೀಡಿದ್ದಾರೆ. ಅಬ್ದುಲ್ ಕಲಾಂ ರಾಷ್ಟ್ರಪತಿ ಮಾಡಿದಾಗ ನಾವು ವಿರೋಧ ಮಾಡಿದ್ವಾ? ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಬಾನು ಮುಷ್ತಾಕ್ ವಿರುದ್ಧ ಆಕ್ಷೇಪಾರ್ಹ
ಪೋಸ್ಟ್: ಇಬ್ಬರ ಮೇಲೆ ಕೇಸ್ ದಾಖಲು
ಉಡುಪಿ: ಈ ಬಾರಿಯ ಮೈಸೂರು ದಸರಾವನ್ನು ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಅವರು ಉದ್ಘಾಟಿಸುವುದನ್ನು ವಿರೋಧಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದ ಇಬ್ಬರ ವಿರುದ್ಧ ಪೊಲೀಸರು ಕೋಮುಸೌಹಾರ್ದ ಕೆಡಿಸಲೆತ್ನಿಸಿದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲ್ಲೂರು ನಿವಾಸಿ ಜಗದೀಶ್ ಉಡುಪ ಎಂಬವರು ತಮ್ಮ ಪೇಸ್‌ಬುಕ್ ಖಾತೆಯಲ್ಲಿ ‘ರಾಜ್ಯದಲ್ಲಿ ಹಿಂದೂ ಧರ್ಮದ ನಾಡಹಬ್ಬ ಉದ್ಘಾಟನೆಗೆ ಹಿಂದೂಗಳಿಲ್ಲವೇ? ಒಂದು ಸಮುದಾಯದ ಓಲೈಕೆಗಾಗಿ ಹಿಂದೂ ಧರ್ಮದ ಅವಹೇಳನ ಮಾಡುವುದು ತಪ್ಪು’ ಎಂದು ಪೋಸ್ಟ್ ಮಾಡಿದ್ದಾರೆ. ಇವರ ವಿರುದ್ಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ನಿಟ್ಟೆಯ ಸುದೀಪ್ ಶೆಟ್ಟಿ, ‘ಸನಾತನ ಹಿಂದೂ ಸಂಸ್ಕೃತಿಯನ್ನು ಒಪ್ಪದ ಬಾನು ಮುಷ್ಕಾರ್ ಅವರಿಂದ ದಸರಾ ಉದ್ಘಾಟನೆ ಮಾಡಿಸುವ ದರ್ದು ಏನಿದೆ? ಹಿಂದೂ ವಿರೋಧಿ ಕಾಂಗ್ರೆಸ್’ ಎಂದು ಪೋಸ್ಟ್ ಹಾಕಿದ್ದಾರೆ. ಇವರ ವಿರುದ್ಧ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.