ಬೆಂಗ್ಳೂರಲ್ಲಿ 59 ಮಹಡಿ ಟ್ವಿನ್‌ ಟವರ್‌ ನಿರ್ಮಾಣ? - ಇಂದು ಸಂಪುಟದಲ್ಲಿ ನಿರ್ಣಯ ಸಾಧ್ಯತೆ

ಸಾರಾಂಶ

ಬೆಂಗಳೂರು ಕೇಂದ್ರ ಭಾಗದಲ್ಲಿರುವ ಆನಂದ್‌ರಾವ್‌ ವೃತ್ತದ ಬಳಿ 59 ಮಹಡಿಗಳ ಬೃಹತ್‌ ಅವಳಿ ಗೋಪುರ ನಿರ್ಮಾಣಕ್ಕೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಬೆಂಗಳೂರು : ಬೆಂಗಳೂರು ಕೇಂದ್ರ ಭಾಗದಲ್ಲಿರುವ ಆನಂದ್‌ರಾವ್‌ ವೃತ್ತದ ಬಳಿ 59 ಮಹಡಿಗಳ ಬೃಹತ್‌ ಅವಳಿ ಗೋಪುರ ನಿರ್ಮಾಣಕ್ಕೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಸಾಧ್ಯತೆಯಿದೆ.

ಆನಂದ್‌ರಾವ್ ವೃತ್ತದ ಬಳಿಯ 8.30 ಎಕರೆ ಸರ್ಕಾರಿ ಜಾಗದಲ್ಲಿ 5.23 ಎಕರೆ ಜಾಗ ಬಳಸಿಕೊಂಡು ಬಹುಮಹಡಿ ಅವಳಿ ಕಟ್ಟಡ ನಿರ್ಮಾಣಕ್ಕೆ 2020ರಲ್ಲೇ ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಇದೀಗ ರಾಷ್ಟ್ರೀಯ ಕಟ್ಟಡಗಳ ನಿರ್ಮಾಣ ನಿಗಮ ಲಿಮಿಟೆಡ್‌ (ಎನ್‌ಬಿಸಿಸಿ) ಸಂಸ್ಥೆಯಿಂದ ನಿರ್ಮಾಣದ ವೆಚ್ಚ ಭರಿಸಿ ಅವಳಿ ಗೋಪುರ ನಿರ್ಮಾಣ ಕುರಿತು ಪ್ರಸ್ತಾವನೆಗೆ ಸಂಪುಟದಲ್ಲಿ ಒಪ್ಪಿಗೆ ದೊರೆಯುವ ಸಾಧ್ಯತೆಯಿದೆ.

ಸುಮಾರು 1,500 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲುದ್ದೇಶಿಸಲಾಗಿದ್ದು, ಇಲ್ಲಿಂದ ಕೆಂಪೇಗೌಡ ಬಸ್ಸು ನಿಲ್ದಾಣ ಮತ್ತು ಮೆಟ್ರೋ ನಿಲ್ದಾಣ, ಸಂಗೊಳ್ಳಿ ರಾಯಣ್ಣ ಕೇಂದ್ರ ರೈಲ್ವೆ ನಿಲ್ದಾಣದವರೆಗೆ ಸ್ಕೈವಾಕ್‌ ನಿರ್ಮಾಣಕ್ಕೂ ಉದ್ದೇಶಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜೀವ ಸಾರ್ಥಕತೆ ಯೋಜನೆ ವಿಸ್ತರಣೆ:

ಇನ್ನು ರಾಜ್ಯದಲ್ಲಿ ಈಗಾಗಲೇ ಅನುಷ್ಠಾನಗೊಂಡಿರುವ ಜೀವ ಸಾರ್ಥಕತೆ ಅಂಗಕಸಿ ಯೋಜನೆಯಡಿ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆ ಕಸಿ (ಬೋನ್‌ ಮ್ಯಾರೋ) ಶಸ್ತ್ರಚಿಕಿತ್ಸೆಗಳನ್ನೂ ಸೇರಿಸಿ ಯೋಜನೆ ವಿಸ್ತರಣೆ ಮಾಡುವುದು ಸೇರಿ ವಿವಿಧ ಪ್ರಸ್ತಾವನೆಗಳ ಬಗ್ಗೆ ಸಂಪುಟದಲ್ಲಿ ನಿರ್ಧಾರ ಮಾಡುವ ಸಾಧ್ಯತೆಯಿದೆ.

Share this article