ರಾಜ್ಯದಲ್ಲಿ ಮುಂದುವರೆದ ಮಳೆ: 5 ಜಿಲ್ಲೆಗಳಲ್ಲಿ ಬಾರಿ ಬೆಳೆ ಹಾನಿ

Published : May 24, 2025, 11:39 AM IST
Karnataka Rain

ಸಾರಾಂಶ

ರಾಜ್ಯದಲ್ಲಿಮುಂಗಾರು ಪೂರ್ವ ಮಳೆ ಮುಂದುವರೆದಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಕೊಡಗು ಸೇರಿ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರವೂ ವರ್ಷಧಾರೆ ಸುರಿದಿದೆ

 ಬೆಂಗಳೂರು : ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಮುಂದುವರೆದಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಧಾರವಾಡ, ಕೊಡಗು ಸೇರಿ ವಿವಿಧ ಜಿಲ್ಲೆಗಳಲ್ಲಿ ಶುಕ್ರವಾರವೂ ವರ್ಷಧಾರೆ ಸುರಿದಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ ಒಟ್ಟು 18.4 ಮಿ.ಮೀ. ಮಳೆ ಆಗಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಮಳೆ-ಗಾಳಿಗೆ ಇಂದಬೆಟ್ಟು ಗ್ರಾಮದಲ್ಲಿ ಅಪಾರ ಹಾನಿಯಾಗಿದೆ. ತೋಟವೊಂದರಲ್ಲಿ ಗೊನೆ ಹಾಕಿರುವ 300ಕ್ಕಿಂತ ಅಧಿಕ ನೇಂದ್ರ ಬಾಳೆ ಗಿಡಗಳು ಧರಾಶಾಹಿಯಾಗಿದ್ದು, ಇನ್ನೊಂದು ತೋಟದಲ್ಲಿ ನೂರಾರು ಅಡಕೆ ಗಿಡಗಳು ಮುರಿದುಬಿದ್ದಿವೆ. 1 ಮನೆ ಹಾಗೂ ಅಂಗನವಾಡಿ ಕಟ್ಟಡ ಹಾನಿಗೆ ಒಳಗಾಗಿವೆ. ಅಲ್ಲದೆ, 6ಕ್ಕೂ ಅಧಿಕ ವಿದ್ಯುತ್ ಕಂಬಗಳು ಉರುಳಿಬಿದ್ದಿವೆ.

ಉಡುಪಿ ಜಿಲ್ಲೆಯಲ್ಲಿ ಗುರುವಾರ ರಾತ್ರಿ 33.40 ಮಿ.ಮೀ. ಮಳೆಯಾಗಿದ್ದು, ಕಾರ್ಕಳ ತಾಲೂಕಿನ ಮನೆಯೊಂದಕ್ಕೆ ಹಾನಿಯಾಗಿದೆ. ಶುಕ್ರವಾರವೂ ಜೋರಾದ ಮಳೆಗೆ ಸುರಿದಿದೆ.

ಇನ್ನು ಕೊಡಗು ಜಿಲ್ಲಾದ್ಯಂತ ಮಳೆಯಿಂದ ಜನ ಜೀವನ ಅಸ್ತವ್ಯಸ್ತವಾಗಿದ್ದು, ಕೆಲವು ಕಡೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ವಿರಾಜಪೇಟೆ-ಮಡಿಕೇರಿ ರಸ್ತೆಯ ಕಾಕೋಟುಪರಂಬು ಮೂರ್ನಾಡು ರಸ್ತೆಗೆ ಅಡ್ಡಲಾಗಿ ಮರ ಬಿದ್ದು ಸಂಚಾರ ಸ್ಥಗಿತಗೊಂಡಿತ್ತು. ಸೋಮವಾರಪೇಟೆ ತಾಲೂಕಿನ ಮೂಕ್ರಿಗುಡ್ಡ-ದೊಡ್ಡಮನೆಕೊಪ್ಪ ಬೆಟ್ಟದಿಂದ ಬೃಹತ್ ಕಲ್ಲುಗಳು ಉರುಳಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕರಾವಳಿಗೆ ರೆಡ್‌ ಅಲರ್ಟ್‌:

ಕರಾವಳಿಯ 3 ಜಿಲ್ಲೆಗಳಲ್ಲಿ ಭಾರತೀಯ ಹವಾಮಾನ ಇಲಾಖೆ ಮೇ 24ರಿಂದ 30ರವರೆಗೆ ರೆಡ್‌ ಅಲರ್ಟ್‌ ಘೋಷಿಸಿದ್ದು, ಮುಂದಿನ 7 ದಿನ ಭಾರಿ ಮಳೆ ನಿರೀಕ್ಷಿಸಲಾಗಿದೆ. ಕರಾವಳಿ ತೀರದಲ್ಲಿ 45-60 ಕಿ.ಮೀ. ವೇಗದ ಗಾಳಿ ಬೀಸುವ ಬಗ್ಗೆಯೂ ಮುನ್ನೆಚ್ಚರಿಕೆ ನೀಡಿದ್ದು, ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿರುವ ಬಹುತೇಕ ಎಲ್ಲಾ ಬೋಟುಗಳು ದಡಕ್ಕೆ ಮರಳಿವೆ.

PREV
Read more Articles on

Recommended Stories

ಈರುಳ್ಳಿ, ಹೂ, ಪಚ್ಚ ಬಾಳೆ ಬೆಲೆ ಧರೆಗೆ!
ರಾಜ್ಯದಲ್ಲಿ ಇನ್ನೂ 3-4 ದಿನ ಮಳೆ ಸಾಧ್ಯತೆ