ಕಲಬುರಗಿಯ ಕಂಟ್ರಾಕ್ಟರ್ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದಲೂ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್.ರವಿ.ಕುಮಾರ್ ಆಗ್ರಹಿಸಿದ್ದಾರೆ.
ಬೆಂಗಳೂರು : ಈ ಹಿಂದೆ ಗುತ್ತಿಗೆದಾರನೊಬ್ಬನ ಆತ್ಮಹತ್ಯೆ ಪ್ರಕರಣವೊಂದರಲ್ಲಿ ಅಂದಿನ ಸಚಿವ ಕೆ.ಎಸ್.ಈಶ್ವರಪ್ಪನವರ ರಾಜೀನಾಮೆ ಪಡೆದ ಮಾದರಿಯಲ್ಲೇ ಇದೀಗ ಕಲಬುರಗಿಯ ಕಂಟ್ರಾಕ್ಟರ್ ಸಚಿನ್ ಪಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಂದಲೂ ರಾಜೀನಾಮೆ ಪಡೆಯಬೇಕು ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ಎನ್.ರವಿ.ಕುಮಾರ್ ಆಗ್ರಹಿಸಿದ್ದಾರೆ.
ಶನಿವಾರ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳೆಯರ ದುರ್ಬಳಕೆ ಸಂಚು ಸೇರಿ ಅನೇಕ ವಿಷಯಗಳು ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಬರೆದಿರುವ ಮರಣ ಪತ್ರದಲ್ಲಿದೆ. ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕು ಮತ್ತು ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಒಂದು ವೇಳೆ ತನಿಖೆಯಲ್ಲಿ ಅವರ ಪಾತ್ರ ಏನೂ ಇಲ್ಲ ಎಂಬುದು ಸಾಬೀತಾದರೆ ಬಳಿಕ ಅವರನ್ನು ಮುಖ್ಯಮಂತ್ರಿಯಾಗಿ ನೇಮಿಸಿದರೂ ನಮ್ಮ ಅಭ್ಯಂತರವಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜ್ಯದಲ್ಲಿ ಸರ್ವಾಧಿಕಾರ ತಾಂಡವವಾಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಜಾಪ್ರಭುತ್ವವಾದಿ, ಸಮಾಜವಾದಿ ಎಂದು ಹೇಳುತ್ತಿದ್ದು ಅದೆಲ್ಲ ಬೋಗಸ್, ಬೂಸಾ ಎಂಬುದು ಸಾಬೀತಾಗಿದೆ. ಪ್ರತಿಪಕ್ಷ ನಾಯಕರು, ಪಕ್ಷದ ಕಾರ್ಯಕರ್ತರ ಮೇಲೆ ಎಫ್‍ಐಆರ್ ಆಗುತ್ತಿದೆ. ಆದರೆ, ಪ್ರತಿಪಕ್ಷದವರು ಆಡಳಿತ ಪಕ್ಷದವರ ವಿರುದ್ಧ ದೂರು ನೀಡಿದರೆ ಎಫ್‍ಐಆರ್ ಆಗುತ್ತಿಲ್ಲ ಎಂದು ಕಿಡಿಕಾರಿದರು.
ಸಿಐಡಿ ತನಿಖೆ ಆಗಲಿ
ವೈಯಕ್ತಿಕ ವ್ಯವಹಾರಗಳಿಂದ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಫ್‌ಐಆರ್‌ನಲ್ಲಿ ನನ್ನ ಹೆಸರಿಲ್ಲ ಹಾಗೂ ಸಚಿನ್ ಬರೆದಿದ್ದರು ಎನ್ನಲಾದ ಡೆತ್‌ನೋಟ್‌ನಲ್ಲೂ ನನ್ನ ಮೇಲೆ ಆರೋಪವಿಲ್ಲ. ಆದರೂ ಬಿಜೆಪಿ ನಾಯಕರು ನನ್ನ ರಾಜೀನಾಮೆ ಕೇಳುತ್ತಿದ್ದಾರೆ. ಹೀಗಾಗಿ ಪ್ರಕರಣವನ್ನು ಸಿಐಡಿ ಅಥವಾ ಬೇರೆ ತನಿಖಾ ಸಂಸ್ಥೆಯಿಂದ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ.
- ಪ್ರಿಯಾಂಕ್ ಖರ್ಗೆ, ಗ್ರಾಮೀಣಾಭಿವೃದ್ಧಿ ಸಚಿವ