ಕೊರೋನಾ ಅಕ್ರಮ: ಭ್ರಷ್ಟ ನಿಗ್ರಹ ಕಾಯ್ದೆಯಡಿ ತನಿಖೆ?

ಸಾರಾಂಶ

ಕೊರೋನಾ ಕಾಲದ ಬಹುಕೋಟಿ ಹಗರಣ ಸಂಬಂಧ ಆರೋಪಿತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಲು ಪೂರ್ವಾನುಮತಿ ನೀಡುವಂತೆ ಸರ್ಕಾರಕ್ಕೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಕೋರಿದೆ.

ಗಿರೀಶ್ ಮಾದೇನಹಳ್ಳಿ

ಬೆಂಗಳೂರು : ಕೊರೋನಾ ಕಾಲದ ಬಹುಕೋಟಿ ಹಗರಣ ಸಂಬಂಧ ಆರೋಪಿತ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆ ನಡೆಸಲು ಪೂರ್ವಾನುಮತಿ ನೀಡುವಂತೆ ಸರ್ಕಾರಕ್ಕೆ ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಕೋರಿದೆ.

ಪ್ರಕರಣದ ಎಫ್‌ಐಆರ್‌ನಲ್ಲಿ ಹೆಸರು ಉಲ್ಲೇಖವಾಗಿದ್ದ ವೈದ್ಯಕೀಯ ಶಿಕ್ಷಣ ಇಲಾಖೆಯ ಮಾಜಿ ನಿರ್ದೇಶಕ ಡಾ.ಪಿ.ಜಿ.ಗಿರೀಶ್‌, ಲೆಕ್ಕಪತ್ರ ಇಲಾಖೆ ಜಂಟಿ ನಿಯಂತ್ರಕ ಜಿ.ಪಿ.ರಘು ಹಾಗೂ ಆರೋಗ್ಯ ಸಂರಕ್ಷಣಾಧಿಕಾರಿ ಎನ್‌.ಮುನಿರಾಜು ಅ‍ವರಿಗೆ ಪ್ರಾಸಿಕ್ಯೂಷನ್ ಸಂಕಷ್ಟ ಎದುರಾಗಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ.

ಮೊದಲು ಎಫ್‌ಐಆರ್ ದಾಖಲಿಸಿದಾಗ ವಂಚನೆ ಹಾಗೂ ವಿಶ್ವಾಸ ದ್ರೋಹದ ಆರೋಪಗಳು ಉಲ್ಲೇಖವಾಗಿದ್ದವು. ಆದರೆ ಕೊವೀಡ್ ವೇಳೆ ವೈದ್ಯಕೀಯ ಉಪಕರಣ ಖರೀದಿ ಸಂಬಂಧ ಗುತ್ತಿಗೆ ನೀಡಿಕೆಯಲ್ಲಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಲಂಚ ಪಡೆದಿರುವ ಶಂಕೆ ಇದೆ. ಹೀಗಾಗಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ತನಿಖೆಗೆ ಸಿಐಡಿ ಮುಂದಾಗಿದೆ.

ಈ ಮನವಿಗೆ ಈವರೆಗೆ ಪ್ರತಿಕ್ರಿಯೆ ನೀಡದ ರಾಜ್ಯ ವೈದ್ಯಕೀಯ ಶಿಕ್ಷಣ ಇಲಾಖೆ, ಹಗರಣಕ್ಕೆ ಸಂಬಂಧಿಸಿದ 200ಕ್ಕೂ ಹೆಚ್ಚಿನ ಕಡತಗಳನ್ನು ತನಿಖಾಧಿಕಾರಿಗಳಿಗೆ ಸಲ್ಲಿಸಿದೆ. ಈ ಕಡತಗಳನ್ನು ಆಧರಿಸಿ ಕೋವಿಡ್ ಕಾಲದಲ್ಲಿ ಹಣ ದೋಚಿದವರ ಕುರಿತು ಸಿಐಡಿ ಶೋಧನೆಗಿಳಿದಿದ್ದು, ಮುಂದಿನ ಹಂತದ ತನಿಖೆಯು ಸರ್ಕಾರದ ತೀರ್ಮಾನವನ್ನು ಆಧರಿಸಿದೆ ಎನ್ನಲಾಗಿದೆ.

ಎಸ್‌ಐಟಿ ರಚನೆಗೆ ಮುಂದಾಗಿದ್ದ ಸರ್ಕಾರ:

ರಾಜ್ಯ ರಾಜಕೀಯದಲ್ಲಿ ಭಾರೀ ಆರೋಪ-ಪ್ರತ್ಯಾರೋಪಕ್ಕೆ ತುತ್ತಾಗಿದ್ದ ಬಿಜೆಪಿ ಆಡಳಿತಾವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳಲ್ಲಿ ಕೋವಿಡ್ ಅಕ್ರಮ ಸಹ ಒಂದಾಗಿದೆ. ಈ ತನಿಖೆಗೆ ಮೊದಲು ವಿಶೇಷ ತನಿಖಾ ದಳ (ಎಸ್‌ಐಟಿ) ರಚನೆಗೆ ಸರ್ಕಾರ ನಿರ್ಧರಿಸಿತ್ತು. ಆದರೆ ಐಪಿಎಸ್ ಅಧಿಕಾರಿಗಳ ಅಸಹಕಾರ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿಐಡಿ ತನಿಖೆಗೆ ವಹಿಸಿತ್ತು.

ಈ ಸಂಬಂಧ ಮೊದಲು ವಿಧಾನಸೌಧ ಠಾಣೆಯಲ್ಲಿ ದಾಖಲಾದ ಎಫ್‌ಐಆರ್‌ನಲ್ಲಿ ವಂಚನೆ ಹಾಗೂ ವಿಶ್ವಾಸ ದ್ರೋಹದಡಿ ಆರೋಪಗಳು ಉಲ್ಲೇಖವಾಗಿದ್ದವು. ಆದರೆ ಪ್ರಾಥಮಿಕ ಹಂತದ ವಿಚಾರಣೆ ನಡೆಸಿದಾಗ ವೈದ್ಯಕೀಯ ಉಪಕರಣ ಖರೀದಿ ಗುತ್ತಿಗೆ ನೀಡಿಕೆಯಲ್ಲಿ ಖಾಸಗಿ ವ್ಯಕ್ತಿಗಳಿಂದ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಕಿಕ್ ಬ್ಯಾಕ್ ಪಡೆದಿರುವ ಶಂಕೆ ಇದೆ. ಹೀಗಾಗಿ ಭ್ರಷ್ಟಾಚಾರ ನಿಗ್ರಹ ಕಾಯ್ದೆ 71ಎ ಅಡಿ ತನಿಖೆ ನಡೆಸಲು ಸಿಐಡಿ ಮುಂದಾಗಿದೆ. ಕಾಯ್ದೆಯಡಿ ಸರ್ಕಾರಿ ಅಧಿಕಾರಿಗಳ ವಿರುದ್ಧ ತನಿಖೆಗೆ ಸರ್ಕಾರ ಮತ್ತು ಚುನಾಯಿತ ಪ್ರತಿನಿಧಿಗಳ ವಿರುದ್ಧ ತನಿಖೆಗೆ ರಾಜ್ಯಪಾಲರಿಂದ ಪೂರ್ವಾನುಮತಿ ಬೇಕಿದೆ. ಈ ಹಿನ್ನೆಲೆಯಲ್ಲಿ ಆರೋಪ ಹೊತ್ತ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳ ಮೇಲೆ ತನಿಖೆಗೆ ಆ ಇಲಾಖೆಯಿಂದ ಅನುಮತಿ ಕೋರಿ ಸಿಐಡಿ ಪತ್ರ ಬರೆದಿದೆ ಎಂದು ವಿಶ್ವಸನೀಯ ಉನ್ನತ ಮೂಲಗಳು ಮಾಹಿತಿ ನೀಡಿವೆ.

ಏನಿದು 167 ಕೋಟಿ ರು. ಕೋವಿಡ್ ಕೇಸ್‌?

ಕೋವಿಡ್ ಕಾಲದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮೂಲಕ ಎನ್‌-95 ಮಾಸ್ಕ್‌ ಹಾಗೂ ಪಿಪಿಇ ಕಿಟ್‌ ಸೇರಿ ಇತರೆ ಉಪಕರಣಗಳ ಖರೀದಿಯಲ್ಲಿ 167 ಕೋಟಿ ರು. ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು. ಈ ಸಂಬಂಧ 2024ರ ಡಿ.13 ರಂದು ವೈದ್ಯಕೀಯ ಶಿಕ್ಷಣ ಇಲಾಖೆ ಮುಖ್ಯ ಲೆಕ್ಕಾಧಿಕಾರಿ ಡಾ.ಎಂ.ವಿಷ್ಣುಪ್ರಸಾದ್ ದೂರು ನೀಡಿದ್ದರು. ಅದರನ್ವಯ ವೈದ್ಯಕೀಯ ಶಿಕ್ಷಣ ಇಲಾಖೆಯ ಆಗಿನ ನಿರ್ದೇಶಕ ಡಾ.ಪಿ.ಜಿ.ಗಿರೀಶ್‌, ಲೆಕ್ಕಪತ್ರ ಇಲಾಖೆ ಜಂಟಿ ನಿಯಂತ್ರಕ ಜಿ.ಪಿ.ರಘು ಹಾಗೂ ಆರೋಗ್ಯ ಸಂರಕ್ಷಣಾಧಿಕಾರಿ ಎನ್‌.ಮುನಿರಾಜು, ಲಾಜ್‌ ಎಕ್ಸ್‌ಪೊರ್ಟ್ಸ್‌, ಮುಂಬೈ ಮೂಲದ ಎಂ.ಎಸ್‌. ಪ್ರುಡೆಂಟ್‌ ಮ್ಯಾನೇಜ್‌ಮೆಂಟ್‌ ಹಾಗೂ ಚುನಾಯಿತ ಪ್ರತಿನಿಧಿಗಳು ಸೇರಿ ಇತರೆ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಬಳಿಕ ತನಿಖೆಯನ್ನು ಸಿಐಡಿಗೆ ಸರ್ಕಾರ ವಹಿಸಿತ್ತು.

ಕಡತ ಸಲ್ಲಿಸಿದರೂ ತನಿಖೆಗೆ ವಿಳಂಬ

ಕೋವಿಡ್‌ ಅಕ್ರಮಕ್ಕೆ ಸಂಬಂಧಿಸಿದ ಕಡತಗಳು ಸೇರಿ ಸಾವಿರಾರು ಪುಟಗಳ ದಾಖಲೆಗಳನ್ನು ಸಿಐಡಿಗೆ ವೈದ್ಯಕೀಯ ಶಿಕ್ಷಣ ಇಲಾಖೆ ಸಲ್ಲಿಸಿದೆ. ಆದರೆ ಆರೋಪಿ ಅಧಿಕಾರಿಗಳ ವಿರುದ್ಧ ತನಿಖೆಗೆ ಮಾತ್ರ ಅನುಮತಿ ನೀಡಲು ವಿಳಂಬ ನೀತಿ ಅನುಸರಿಸುತ್ತಿರುವುದು ಅನುಮಾನಗಳಿಗೆ ಕಾರಣ‍ವಾಗಿದೆ. ಈ ತನಿಖೆ ಮುಂದುವರಿಕೆಗೆ ಅನುವು ಮಾಡಿಕೊಡುವಂತೆ ಕೋರಿದರೂ ಇಲಾಖೆ ಪೂರಕವಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಸರ್ಕಾರದ ನಿರ್ದೇಶನ ಮೇರೆಗೆ ವೈದ್ಯಕೀಯ ಶಿಕ್ಷಣ ಇಲಾಖೆ ತೀರ್ಮಾನಿಸಲಿದೆ ಎಂದು ತಿಳಿದು ಬಂದಿದೆ.

Share this article