ಲಿವ್‌ಇನ್ನಲ್ಲಿ ಜನಿಸಿದ ಮಗುಗೆ ಜೀವನಾಂಶ ಕೊಡಿಸಿದ ಕೋರ್ಟ್‌

Published : Jul 14, 2025, 11:15 AM IST
Consumer Court Order

ಸಾರಾಂಶ

ಮದುವೆಯಾಗುವ ಭರವಸೆ ನೀಡಿ ಯುವತಿಯೊಂದಿಗೆ ಸಹ ಜೀವನ ನಡೆಸಿದ್ದರಿಂದ ಹುಟ್ಟಿದ ಮಗನಿಗೆ ಜೀವನಾಂಶ ಪಾವತಿಸುವುದಿಲ್ಲ ಎಂದು ಹಠ ಹಿಡಿದಿದ್ದ ಮಾಜಿ ಮುಖ್ಯ ಶಿಕ್ಷಕನಿಗೆ ಕಿವಿ ಹಿಂಡಿರುವ ಹೈಕೋರ್ಟ್‌

 ವೆಂಕಟೇಶ್‌ ಕಲಿಪಿ

 ಬೆಂಗಳೂರು :  ಮದುವೆಯಾಗುವ ಭರವಸೆ ನೀಡಿ ಯುವತಿಯೊಂದಿಗೆ ಸಹ ಜೀವನ ನಡೆಸಿದ್ದರಿಂದ ಹುಟ್ಟಿದ ಮಗನಿಗೆ ಜೀವನಾಂಶ ಪಾವತಿಸುವುದಿಲ್ಲ ಎಂದು ಹಠ ಹಿಡಿದಿದ್ದ ಮಾಜಿ ಮುಖ್ಯ ಶಿಕ್ಷಕನಿಗೆ ಕಿವಿ ಹಿಂಡಿರುವ ಹೈಕೋರ್ಟ್‌, ಮಗನಿಗೆ ಮಾಸಿಕ ₹3 ಸಾವಿರ ಜೀವನಾಂಶ ಪಾವತಿಸುವಂತೆ ತಾಕೀತು ಮಾಡಿದೆ.

ಮಗನಿಗೆ ಜೀವನಾಂಶ ಪಾವತಿಸಲು ಒಪ್ಪದೆ ಮೊಂಡುವಾದ ಮಾಡಿದ್ದ ತುಮಕೂರು ಜಿಲ್ಲೆಯ ರಮೇಶ್‌ (48) ಎಂಬುವವರಿಗೆ ಹೈಕೋರ್ಟ್‌ ಈ ಆದೇಶ ಮಾಡಿದೆ.

ಮಗ ರಕ್ಷಿತ್‌ಗೆ ಮಾಸಿಕ ಮೂರು ಸಾವಿರ ರು. ಜೀವನಾಂಶ ಪಾವತಿಸುವಂತೆ 2018ರಲ್ಲಿ ನಿರ್ದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ರದ್ದು ಕೋರಿ ಹೈಕೋರ್ಟ್‌ಗೆ ರಮೇಶ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಜಾಗೊಳಿಸಿರುವ ಹೈಕೋರ್ಟ್‌, ಡಿಎನ್‌ಎ ಪರೀಕ್ಷೆಯಲ್ಲಿ ರಕ್ಷಿತ್‌, ರಮೇಶ್‌ ಪುತ್ರ ಎಂಬುದು ಸಾಬೀತಾಗಿದೆ. ಹಾಗಾಗಿ, ಮಗನ ಜೀವನ ನಿರ್ವಹಣೆ ಮಾಡುವುದು ತಂದೆಯ ಜವಾಬ್ದಾರಿಯಾಗಿದೆ. ಎಲ್ಲ ಅಂಶ ಪರಿಗಣಿಸಿಯೇ ಮಗನಿಗೆ ಮಾಸಿಕ ಮೂರು ಸಾವಿರ ರು. ಜೀವನಾಂಶ ನೀಡುವಂತೆ ಕೌಟುಂಬಿಕ ನ್ಯಾಯಾಲಯದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸಲು ಸಕಾರಣವಿಲ್ಲ ಎಂದು ಆದೇಶಿಸಿದೆ.

ಅಲ್ಲದೆ, ರಕ್ಷಿತ್‌ ತಾಯಿ ಮೀನಾಕ್ಷಿ (ಎಲ್ಲ ಹೆಸರು ಬದಲಿಸಲಾಗಿದೆ) ದಾಖಲಿಸಿದ್ದ ಕ್ರಿಮಿನಲ್‌ ಪ್ರಕರಣದಲ್ಲಿ ಖುಲಾಸೆ ಆಗಿರುವುದರಿಂದ ರಕ್ಷಿತ್‌ಗೆ ಜೀವನಾಂಶ ಪಾವತಿಸುವ ಅಗತ್ಯವಿಲ್ಲ ಎಂದು ರಮೇಶ್‌ ಮಂಡಿಸಿದ್ದ ವಾದವನ್ನು ಇದೇ ವೇಳೆ ಹೈಕೋರ್ಟ್‌ ಸಾರಾಸಗಟಾಗಿ ತಿರಸ್ಕರಿಸಿದೆ.

ಕ್ರಿಮಿನಲ್ ಪ್ರಕರಣದಲ್ಲಿ ಖುಲಾಸೆಗೊಂಡ ಮಾತ್ರಕ್ಕೆ ರಮೇಶ್‌ನಿಂದ (ತಂದೆ) ಜೀವನಾಂಶ ಪಡೆಯುವ ಅರ್ಹತೆಯನ್ನು ಪುತ್ರ ರಕ್ಷಿತ್‌ನಿಂದ ನ್ಯಾಯಾಲಯ ಕಸಿದುಕೊಳ್ಳಲು ಸಾಧ್ಯವಿಲ್ಲ ಎಂದು ಹೈಕೋರ್ಟ್‌ ಹೇಳಿದೆ. ಜೊತೆಗೆ, ಕೌಟುಂಬಿಕ ನ್ಯಾಯಾಲಯ ಆದೇಶದಂತೆ ಪುತ್ರ ರಕ್ಷಿತ್‌ಗೆ ಮಾಸಿಕ ಮೂರು ಸಾವಿರ ರು. ಜೀವನಾಂಶ ಪಾವತಿಸುವಂತೆ ರಮೇಶ್‌ಗೆ ನಿರ್ದೇಶಿಸಿದೆ.

ಪ್ರಕರಣದ ವಿವರ:

ರಮೇಶ್‌ 2012ರ ಅ.21ರಂದು ಪೋಷಕರ ಮನೆಯಲ್ಲಿ ಒಂಟಿಯಾಗಿದ್ದ ಮೀನಾಕ್ಷಿ ಮೇಲೆ ಅತ್ಯಾಚಾರ ನಡೆಸಿದ್ದರು. ಸಂತ್ರಸ್ತೆಯಿಂದ ಘಟನೆ ಮಾಹಿತಿ ಪಡೆದ ಪೋಷಕರು ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು. ಆಗ ಸಂತ್ರಸ್ತೆ ಸಂಬಂಧಿಕರು ಮತ್ತು ಗ್ರಾಮದ ಹಿರಿಯರು ರಾಜೀ ಪಂಚಾಯತಿ ನಡೆಸಿದ್ದರು. ಆಗ ದೂರು ದಾಖಲಿಸುವುದು ಬೇಡ. ಮೀನಾಕ್ಷಿಯನ್ನು ಮದುವೆಯಾಗುವುದಾಗಿ ರಮೇಶ್‌ ಒಪ್ಪಿಕೊಂಡಿದ್ದರು. ಇದರಿಂದ ಪೊಲೀಸರಿಗೆ ದೂರು ನೀಡುವ ನಿರ್ಧಾರದಿಂದ ಮೀನಾಕ್ಷಿ ಮತ್ತು ಪೋಷಕರು ಹಿಂದೆ ಸರಿದಿದ್ದರು.

ತದ ನಂತರ ಮದವೆಯಾಗದಿದ್ದರೂ ಕೆಲ ಸಮಯ ಮೀನಾಕ್ಷಿಯೊಂದಿಗೆ ರಮೇಶ್ ಸಹ ಜೀವನ ಮುಂದುವರಿಸಿದ್ದರು. ಮದುವೆಯಾಗಲು ಒತ್ತಡ ಹೆಚ್ಚು ಮಾಡಿದಾಗ ಮದುವೆಯಾಗಲು ನಿರಾಕರಿಸಿದ್ದರು. ಇದರಿಂದ 2013ರ ಆ.8ರಂದು ಮೀನಾಕ್ಷಿ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದ್ದ ಪೊಲೀಸರು ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ಎಲ್ಲ ಆರೋಪಗಳಿಂದ ರಮೇಶ್‌ ಅವರನ್ನು ವಿಚಾರಣಾ ನ್ಯಾಯಾಲಯ ಖುಲಾಸೆಗೊಳಿಸಿತ್ತು.

ನಂತರ ರಮೇಶ್‌ ಬೆಳೆಸಿದ್ದ ಸಂಬಂಧದಿಂದ ಮೀನಾಕ್ಷಿಗೆ 2015ರಲ್ಲಿ ಗಂಡು ಮಗು ಜನಿಸಿತ್ತು. 2016ರಲ್ಲಿ ಮಗನಿಗೆ ಜೀವನಾಂಶ ನೀಡಲು ರಮೇಶ್‌ಗೆ ನಿರ್ದೇಶಿಸುವಂತೆ ಕೋರಿ ಮಗನ (ರಕ್ಷಿತ್‌) ಹೆಸರಿನಲ್ಲಿಯೇ ಮೀನಾಕ್ಷಿ ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ರಮೇಶ್‌ ಮುಖ್ಯೋಪಾಧ್ಯಾಯರಾಗಿದ್ದು, ಮಾಸಿಕ ₹30 ಸಾವಿರ ವೇತನ ಪಡೆಯುತ್ತಿದ್ದಾರೆ. ಮಗನ ನಿರ್ವಹಣೆಗೆ ಹಣಕಾಸು ತೊಂದರೆ ಎದುರಾಗಿದೆ ಎಂದು ಕಷ್ಟ ಹೇಳಿಕೊಂಡಿದ್ದರು.

ರಕ್ಷಿತ್‌ ಅರ್ಜಿ ವಿಚಾರಣೆ ನಡೆಸಿದ್ದ ತುಮಕೂರು ಪ್ರಧಾನ ಕೌಟುಂಬಿಕ ನ್ಯಾಯಾಲಯ, ಮಗನಿಗೆ ಮಾಸಿಕ 3 ಸಾವಿರ (ಅರ್ಜಿ ದಾಖಲಿಸಿದ ದಿನದಿಂದ) ಜೀವನಾಂಶ ನೀಡುವಂತೆ ರಮೇಶ್‌ಗೆ 2018ರ ಡಿ.10ರಂದು ಆದೇಶಿಸಿತ್ತು. ಈ ಮಧ್ಯೆ ಸೇವೆಯಿಂದ ವಜಾಗೊಂಡಿದ್ದ ರಮೇಶ್‌ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಕುಸಿದ ಕರ್ನಾಟಕ ಕ್ರಿಕೆಟ್‌ ಗುಣಮಟ್ಟ - ಈ ಸಲ 7 ಟಿ20ಯಲ್ಲಿ ಗೆದ್ದಿದ್ದು ಕೇವಲ 2
ಬುರುಡೆ ಕೇಸ್‌ ಹಿಂದೆ ಅರ್ಬನ್‌ ನಕ್ಸಲ್‌ : ಬಿಜೆಪಿ