ದೇಶದಲ್ಲಿ ಮತ್ತೆ ಕೋವಿಡ್‌ ಆತಂಕ : ರಾಜ್ಯದಲ್ಲಿ 38 ಕೇಸ್‌ - ಬೆಂಗಳೂರಲ್ಲೇ 32 ಸೋಂಕಿತರು

ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೀರ್ಘಕಾಲೀನ ಅನಾರೋಗ್ಯ ಹಾಗೂ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 84 ವರ್ಷದ ಕೊರೋನಾ ಸೋಂಕಿತ ವೃದ್ಧರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ.

Follow Us

 ಬೆಂಗಳೂರು : ರಾಜ್ಯದಲ್ಲಿ ಕೊರೋನಾ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ದೀರ್ಘಕಾಲೀನ ಅನಾರೋಗ್ಯ ಹಾಗೂ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ 84 ವರ್ಷದ ಕೊರೋನಾ ಸೋಂಕಿತ ವೃದ್ಧರೊಬ್ಬರು ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಪ್ರಸಕ್ತ ವರ್ಷದಲ್ಲಿ ಕೊರೋನಾಗೆ ರಾಜ್ಯದಲ್ಲಿ ಮೊದಲ ಬಲಿ ಆದಂತಾಗಿದೆ.

ಪ್ರಸ್ತುತ ರಾಜ್ಯದಲ್ಲಿ ಒಟ್ಟು 38 ಮಂದಿಗೆ ಸೋಂಕಿತ ಪ್ರಕರಣಗಳು ವರದಿಯಾಗಿದ್ದು, ಬೆಂಗಳೂರು ನಗರದಲ್ಲೇ 32 ಮಂದಿಗೆ ಸೋಂಕು ದೃಢಪಟ್ಟಿರುವುದು ಆತಂಕ ಮೂಡಿಸಿದೆ.

ತೀವ್ರ ಅನಾರೋಗ್ಯ:

ಇದೀಗ ಮೃತಪಟ್ಟಿರುವ ವೃದ್ಧ ವ್ಯಕ್ತಿಗೆ ಬಹು ಅಂಗಾಂಗ ವೈಫಲ್ಯದ ಕಾಯಿಲೆ ಇತ್ತು. ಜತೆಗೆ ನ್ಯುಮೋನಿಯಾ ಸಮಸ್ಯೆಯೂ ತೀವ್ರವಾಗಿತ್ತು. ಅಲ್ಲದೆ ಅಂಗಾಂಗ ವೈಫಲ್ಯ, ಸೆಪ್ಟಿಕ್‌ ಶಾಕ್‌ ಸಮಸ್ಯೆಯಿಂದ ಬಳಲುತ್ತಿರುವ ಅವರಿಗೆ 2024ರಲ್ಲಿ ಹಿಪ್‌ ರಿಪ್ಲೇಸ್‌ಮೆಂಟ್‌ ಶಸ್ತ್ರಚಿಕಿತ್ಸೆ ನಡೆದಿತ್ತು. ಏತನ್ಮಧ್ಯೆ, 2019ರಲ್ಲಿ ಹೃದಯದ ಬೈಪಾಸ್‌ ಶಸ್ತ್ರಚಿಕಿತ್ಸೆ ನಡೆದಿತ್ತು. ಹೈಪೊಥೈರಾಯಿಡಿಸಂ, ಹೈಪರ್‌ಟೆನ್ಷನ್‌ ಸೇರಿ ವಿವಿಧ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ವೈಟ್‌ಫೀಲ್ಡ್‌ ಆಸ್ಪತ್ರೆಯೊಂದರಲ್ಲಿ ಮೇ 17ರಂದು ಮೃತಪಟ್ಟಿದ್ದಾರೆ. ಅವರು ಮೇ 13ರಂದು ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

108 ಪರೀಕ್ಷೆ 38 ಸೋಂಕು ದೃಢ:

ಈವರೆಗೆ 108 ಮಂದಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು, 38 ಮಂದಿಗೆ ಸೋಂಕು ದೃಢಪಟ್ಟಿದೆ. ಅಲ್ಲದೆ ಬೆಂಗಳೂರು ನಗರದಲ್ಲಿ 92 ಪರೀಕ್ಷೆ ನಡೆಸಿದ್ದು, 32 ಮಂದಿಗೆ ಸೋಂಕು ಇರುವುದು ಖಚಿತವಾಗಿದೆ. ಬಳ್ಳಾರಿಯಲ್ಲಿ 1, ಬೆಂಗಳೂರು ಗ್ರಾಮಾಂತರ 1, ದಕ್ಷಿಣ ಕನ್ನಡ 1, ಮೈಸೂರು 2, ವಿಜಯನಗರ 1 ಸೇರಿ ಮೇ 24ರ ವೇಳೆಗೆ ಒಟ್ಟು 38 ಸೋಂಕು ವರದಿಯಾಗಿದೆ ಎಂದು ಮೂಲಗಳು ತಿಳಿಸಿವೆ.

ಜಿನೋಮ್‌ ಸೀಕ್ವೆನ್ಸಿಂಗ್‌ಗೆ ನಿರ್ಧಾರ

ಬೆಂಗಳೂರಿನಲ್ಲಿ ಮೃತಪಟ್ಟಿರುವ 84 ವರ್ಷದ ವೃದ್ಧ ವ್ಯಕ್ತಿಗೆ ತಗುಲಿದ್ದ ಕೊರೋನಾ ಸೋಂಕು ರೂಪಾಂತರಿಯೇ ಎಂಬುದು ಖಚಿತಪಟ್ಟಿಲ್ಲ. ಹೀಗಾಗಿ ಸ್ವ್ಯಾಬ್‌ ಮಾದರಿಯನ್ನು ವೈರಾಣುವಿನ ವಂಶವಾಹಿ ರಚನೆ ಪರೀಕ್ಷೆಗೆ (ಜಿನೋಮ್‌ ಸೀಕ್ವೆನ್ಸಿಂಗ್‌ ಪರೀಕ್ಷೆ) ಒಳಪಡಿಸಲು ತೀರ್ಮಾನಿಸಲಾಗಿದೆ. ವರದಿ ಬಂದ ಬಳಿಕವಷ್ಟೇ ರೂಪಾಂತರಿ ಕೊರೋನಾದಿಂದ ಉಂಟಾಗಿರುವ ಸಾವೇ ಅಥವಾ ಅಲ್ಲವೇ ಎಂಬುದು ಖಚಿತವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರ ಸಾವಿನ ಸಂಖ್ಯೆ ಈಗ 4ಕ್ಕೇರಿಕೆ

ಮುಂಬೈ/ಥಾಣೆ: ದೇಶಾದ್ಯಂತ ಕೋರೊನಾ ಕೇಸು ಸಂಖ್ಯೆ ಹೆಚ್ಚಳ ಆತಂಕ ನಡುವೆ ಮಹಾರಾಷ್ಟ್ರದ ಥಾಣೆಯಲ್ಲಿ 21 ವರ್ಷದ ಯುವಕನೊಬ್ಬ ಬಲಿಯಾಗಿದ್ದಾನೆ. ಇದರೊಂದಿಗೆ ಇತ್ತೀಚಿನ ದಿನಗಳಲ್ಲಿ ಹೊಸ ಕೊರೋನಾ ಅಲೆ ಆರಂಭವಾದ ನಂತರ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 4ಕ್ಕೇರಿದೆ. ಈ ಮುಂಚಿನ 3 ಸಾವು ಮುಂಬೈನಲ್ಲಿ ಸಂಭವಿಸಿವೆ.

ಈ ನಡುವೆ, ಶನಿವಾರ ರಾಜ್ಯದಲ್ಲಿ 8 ಹೊಸ ಕೇಸು ಪತ್ತೆ ಆಗಿದ್ದು, ಸಕ್ರಿಯ ಪ್ರಕರಣ 18ಕ್ಕೇರಿಕೆಯಾಗಿದೆ.

ಮಧುಮೇಹದಿಂದ ಬಳಲುತ್ತಿದ್ದ 21 ವರ್ಷದ ಯುವಕ ಥಾಣೆಯ ಛತ್ರಪತಿ ಶಿವಾಜಿ ಮಹಾರಾಜ ಆಸ್ಪತ್ರೆಗೆ ದಾಖಲಾಗಿದ್ದ. ಪರೀಕ್ಷೆ ವೇಳೆ ಶುಕ್ರವಾರ ರಾತ್ರಿ ಕೋವಿಡ್‌ ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ. ಆದರೆ ಆತ ಮಧುಮೇಹ ಕಾಯಿಲೆಯಿಂದ ಮೃತ ಪಟ್ಟಿದ್ದಾನೆ ಎಂದು ಥಾಣೆ ಮಹಾನಗರಪಾಲಿಕೆ ಹೇಳಿದೆ.

ಕೋವಿಡ್ ಹೆಚ್ಚ: ಕೇಂದ್ರದಿಂದ ನಿಗಾ

ನವದೆಹಲಿ: ಕೇರಳ, ತಮಿಳುನಾಡು, ಮಹಾರಾಷ್ಟ್ರ, ಕರ್ನಾಟಕ ಸೇರಿ ಕೆಲವೆಡೆ ಕೋವಿಡ್-19 ಹೆಚ್ಚುತ್ತಿರುವ ಮೇಲೆ ಕೇಂದ್ರ ಸರ್ಕಾರ ನಿಗಾ ಇರಿಸಿದ್ದು, ಶನಿವಾರ ಕೇಂದ್ರ ಆರೋಗ್ಯ ಕಾರ್ಯದರ್ಶಿ ಪರಿಶೀಲನಾ ಸಭೆ ನಡೆಸಿದ್ದಾರೆ. ಹೆಚ್ಚಿನ ಪ್ರಕರಣ ಸೌಮ್ಯವಾಗಿದ್ದು, ಮನೆ ಆರೈಕೆಯಲ್ಲಿವೆ. ಆದರೂ ಸೋಂಕು ನಿಯಂತ್ರಣಕ್ಕೆ ಮೇಲ್ವಿಚಾರಣೆ ಮಾಡಲಾಗುತ್ತಿದೆ. ಒಟ್ಟು ಕೇಸಲ್ಲಿ ಜೆಎನ್‌.1 ವೈರಸ್‌ ತಳಿ ಪಾಲು ಶೇ.53 ಆಗಿದೆ. ಒಂದು ಎನ್‌ಬಿ.1.8.1 ಮತ್ತು 4 ಎಲ್‌ಎಫ್‌.7 ತಳಿಯ ಕೇಸಿವೆ ಎಂದು ಮೂಲಗಳು ಹೇಳಿವೆ.

ದೇಶದ ಜನರಿಗೆ ವೈದ್ಯರ ಸಲಹೆ ಕೋವಿಡ್‌ ಸೋಂಕು ಹೆಚ್ಚಳ ಬಗ್ಗೆ ಆತಂಕ ಬೇಡ, ಎಚ್ಚರಿಕೆ ಇರಲಿ

 ನವದೆಹಲಿ : ‘ದೇಶ-ವಿದೇಶಗಳಲ್ಲಿ ಕೊರೋನಾ ವೈರಸ್‌ನ ಹೊಸ ರೂಪಾಂತರಿ ಜೆಎನ್‌.1 ಪತ್ತೆಯಾಗುತ್ತಿದ್ದರೂ ಆ ಬಗ್ಗೆ ಭಯ ಪಡುವ ಅಗತ್ಯವಿಲ್ಲ. ಜೆಎನ್‌.1 ತಳಿ ಗಂಭೀರವಲ್ಲ, ಸೋಂಕಿತರಲ್ಲಿ ಸೌಮ್ಯ ಸ್ವರೂಪದ ರೋಗಲಕ್ಷಣ ಮಾತ್ರ ಕಂಡುಬರುತ್ತದೆ’ ಎಂದು ತಜ್ಞ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇದಕ್ಕೆ ದೆಹಲಿಯಲ್ಲಿನ ಉದಾಹರಣೆ ನೀಡಿರುವ ಅವರು, ‘ದೆಹಲಿಯಲ್ಲಿ 23 ಮಂದಿ ಕೊರೋನಾ ಸೋಂಕಿತರಿದ್ದು, ಅವರಲ್ಲಿ ಸೌಮ್ಯ ಲಕ್ಷಣಗಳಷ್ಟೇ ಕಂಡುಬಂದಿವೆ. ಅವರ ಪೈಕಿ 22 ಜನರು ಆಸ್ಪತ್ರೆಗೆ ದಾಖಲಾಗದೆ, ಮನೆಯಲ್ಲೇ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ತಿಳಿಸಿದ್ದಾರೆ.

ಭಾರತೀಯ ವೈದ್ಯಕೀಯ ಸಂಘದ ಕಿರಿಯ ವೈದ್ಯರ ನೆಟ್‌ವರ್ಕ್‌ನ ರಾಷ್ಟ್ರೀಯ ವಕ್ತಾರ ಡಾ। ಧೃವ್‌ ಚೌಹಾಣ್‌ ಮಾತನಾಡಿ, ‘ಇದು ರೂಪಾಂತರಿ ವೈರಸ್‌. ಮಾರಕವಲ್ಲ. ಆದರೂ ಮುನ್ನೆಚರಿಕೆ ಕ್ರಮವಾಗಿ ಕೈಗಳ ಸ್ವಚ್ಛತೆ, ಆಸ್ಪತ್ರೆ, ಜನಜಂಗುಳಿ ಇರುವಂತಹ ಪ್ರದೇಶಗಳಲ್ಲಿ ಮಾಸ್ಕ್‌ ಧಾರಣೆ, ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಅಂತೆಯೇ, ಕೋವಿಡ್‌ ಲಕ್ಷಣಗಳು ಕಂಡುಬಂದಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ರೋಗಕ್ಕಿಂತ ಜಾಸ್ತಿ ದಿಗಿಲಿಂದಲೇ ಆರೋಗ್ಯ ಸಮಸ್ಯೆಗಳಾಗುತ್ತವೆ’ ಎಂದು ಮನವಿ ಮಾಡಿದ್ದಾರೆ.

ಸರ್ ಗಂಗಾ ರಾಮ್ ಆಸ್ಪತ್ರೆಯಲ್ಲಿ ಸಹಾಯಕ ಸಲಹೆಗಾರ ಡಾ। ಅವಿರಳ ಮಾಥುರ್‌ ಅವರು, ‘ಈ ರೂಪಾಂತರಿಯು ಬೇಗ ಹರಡುತ್ತದೆ. ಆದರೆ ಲಕ್ಷಣಗಳು ಮಾತ್ರ ಸೌಮ್ಯವಾಗಿರುತ್ತವೆ. ಆದರೂ 2ನೇ ಡೋಸ್, ಬೂಸ್ಟರ್‌ ಡೋಸ್ ಪಡೆಯುವುದು ಅಗತ್ಯ’ ಎಂದು ಹೇಳಿದರು.

ಆಸ್ಪತ್ರೆಗಳಲ್ಲಿ ತಯಾರಿ ಚುರುಕು:

ಸರ್ಕಾರದಿಂದ ಆದೇಶ ಬಂದ ಬೆನ್ನಲ್ಲೇ ದೆಹಲಿ ಸೇರಿದಂತೆ ವಿವಿಧ ರಾಜ್ಯಗಳ ಆಸ್ಪತ್ರೆಗಳು ಆಮ್ಲಜನಕ ಸಿಲಿಂಡರ್‌, ರೋಗನಿರೋಧಕ, ಪರೀಕ್ಷಾ ಯಂತ್ರ, ಲಸಿಕೆ, ವೆಂಟಿಲೇಟರ್‌, ಹಾಸಿಗೆಗಳಂತಹ ಅಗತ್ಯತೆಗಳ ವ್ಯವಸ್ಥೆಯನ್ನು ಚುರುಕುಗೊಳಿಸಿವೆ.

ಆಸ್ಪತ್ರೆಗೆ ದಾಖಲಾದವರಿಗೆ ಕಡ್ಡಾಯ ಕೋವಿಡ್‌ ಪರೀಕ್ಷೆ

 ಬೆಂಗಳೂರು : ರಾಜ್ಯದಲ್ಲಿ ಕಳೆದ ವಾರದಿಂದ ಕೊರೋನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಕೊರೋನಾ ಸೋಂಕು ಪರೀಕ್ಷೆಗೆ ಆರೋಗ್ಯ ಇಲಾಖೆ ಚಾಲನೆ ನೀಡಿದೆ. ಹೀಗಾಗಿ ತೀವ್ರ ಉಸಿರಾಟ ಸಮಸ್ಯೆ (ಸಾರಿ) ಹೊಂದಿರುವವರು ಹಾಗೂ ಉಸಿರಾಟ, ಹೃದಯ ಸಂಬಂಧಿ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿರುವವರಿಗೆ ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆ ನಡೆಸುವಂತೆ ಆದೇಶ ಮಾಡಲಾಗಿದೆ.

ಕೊರೋನಾ ಸೋಂಕು ಕುರಿತ ಪರೀಕ್ಷೆಗೆ ಭಾನುವಾರದಿಂದ ಚಾಲನೆ ನೀಡಲಿದ್ದು, ಇದಕ್ಕಾಗಿ ತಿಂಗಳಿಗೆ ತಲಾ 5,000 ಆರ್‌ಟಿಪಿಸಿಆರ್‌ ಹಾಗೂ ಆ್ಯಂಟಿಜೆನ್‌ ಪರೀಕ್ಷಾ ಕಿಟ್‌ಗಳನ್ನು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಜತೆಗೆ ಪ್ರಯೋಗಾಲಯಗಳನ್ನೂ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ.

ಜತೆಗೆ ಬಾಣಂತಿಯರು, ಗರ್ಭಿಣಿಯರು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸಬೇಕು. ರಾಜ್ಯದಲ್ಲಿ ಕೋವಿಡ್ ಪಾಸಿಟಿವ್ ಹೊಂದಿರುವ 35 ಜನರಲ್ಲಿ ಸೋಂಕು ಗಂಭೀರವಾಗಿಲ್ಲ. ಸೌಮ್ಯ ಸ್ವಭಾವದ ಲಕ್ಷಣಗಳು ಕಂಡುಬಂದಿವೆ. ಹೀಗಾಗಿ ಸಾರ್ವಜನಿಕರು ಆತಂಕಗೊಳ್ಳದೆ ಮುನ್ನೆಚ್ಚರಿಕೆ ಪಾಲಿಸಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಈ ಬಗ್ಗೆ ಶನಿವಾರ ಸುದ್ದಿಗಾರರೊಮದಿಗೆ ಮಾತನಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಒಟ್ಟು 35 ಮಂದಿ ಕೋವಿಡ್ ಪಾಸಿಟಿವ್ ಹೊಂದಿದ್ದಾರೆ‌. ಬೆಂಗಳೂರಿನಲ್ಲೇ 32 ಕೋವಿಡ್ ಪಾಸಿಟಿವ್ ಪ್ರಕರಣ ವರದಿಯಾಗಿವೆ. ಹೀಗಾಗಿ ಆರೋಗ್ಯ ಇಲಾಖೆಯಿಂದ ಅಗತ್ಯ ಮಾರ್ಗಸೂಚಿ ಹೊರಡಿಸಲಾಗಿದೆ ಎಂದು ಹೇಳಿದರು.

ಶುಕ್ರವಾರ ಕೋವಿಡ್ ತಾಂತ್ರಿಕ ಸಮಿತಿ ಸಭೆ ನಡೆಸಿದ್ದು, ಕೇಂದ್ರ ಸರ್ಕಾರದ ಜೊತೆ ಕೂಡ ಸಂಪರ್ಕದಲ್ಲಿದ್ದೇವೆ. ದೇಶದಲ್ಲಿ ಒಟ್ಟು 257 ಪ್ರಕರಣ ದಾಖಲಾಗಿವೆ. ಕೋವಿಡ್ ಪಾಸಿಟಿವ್ ಹೊಂದಿದವರಿಗೆ ಸೌಮ್ಯ ಸ್ವಭಾವದ ಲಕ್ಷಣ ಬಿಟ್ಟರೆ ಗಂಭೀರವಾದ ಸಮಸ್ಯೆಗಳು ಕಂಡುಬಂದಿಲ್ಲ. ಆದರೂ ಉಸಿರಾಟದ ತೀವ್ರ ತೊಂದರೆ (ಸಾರಿ) ಹೊಂದಿರುವವರಿಗೆ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಲು ಸೂಚಿಸಲಾಗಿದೆ. ಉಸಿರಾಟ ಹಾಗೂ ಹೃದಯಸಂಬಂಧಿ ಕಾಯಿಲೆ ಇರುವವರು ಆಸ್ಪತ್ರೆಗಳಲ್ಲಿ ದಾಖಲಾದರೆ ಅಲ್ಲೇ ಸ್ವ್ಯಾಬ್‌ ಮಾದರಿ ಸಂಗ್ರಹಿಸಿ ಕಡ್ಡಾಯವಾಗಿ ಕೊರೋನಾ ಪರೀಕ್ಷೆ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಎಲ್ಲರಿಗೂ ಮಾಸ್ಕ್ ಕಡ್ಡಾಯವಿಲ್ಲ:

ಬಾಣಂತಿಯರು ಜನ ಹೆಚ್ಚಿರುವ ಕಡೆ ಮಾಸ್ಕ್ ಧರಿಸಲು ಸಲಹೆ ನೀಡಲಾಗಿದೆ. ತಕ್ಷಣಕ್ಕೆ ಮಾಸ್ಕ್ ಎಲ್ಲರಿಗೂ ಕಡ್ಡಾಯ ಮಾಡಿಲ್ಲ. ಸ್ವಚ್ಛತೆ ಕಾಪಾಡಿಕೊಂಡು ಸ್ಯಾನಿಟೈಸರ್ ಬಳಸುವುದು ಉತ್ತಮ. ಸಾರ್ವಜನಿಕರು ಪ್ರಯಾಣ ಮಾಡಲು ಯಾವುದೇ ಅಡ್ಡಿಯಿಲ್ಲ. ಈ ಬಗ್ಗೆ ಅನಗತ್ಯ ಆತಂಕಕ್ಕೆ ಒಳಗಾಗದೆ ಜಾಗೃತಿ ಹರಡಬೇಕು ಎಂದು ದಿನೇಶ್ ಗುಂಡೂರಾವ್‌ ಕರೆ ನೀಡಿದರು.

ತಿಂಗಳಿಗೆ ಆಗುವಷ್ಟು ಪರೀಕ್ಷಾ ಕಿಟ್‌

ಕೊರೋನಾ ಪರೀಕ್ಷೆಗೆ ಅಗತ್ಯವಾಗಿರುವ ಪರೀಕ್ಷಾ ಕಿಟ್‌ಗಳನ್ನು ಒಂದು ತಿಂಗಳಿಗೆ ಆಗುವಷ್ಟು ದಾಸ್ತಾನು ಮಾಡಲು ಸೂಚಿಸಲಾಗಿದೆ. ಒಂದು ತಿಂಗಳಿಗೆ ಬೇಕಾಗುವ 5 ಸಾವಿರ ಆರ್‌ಟಿಪಿಸಿಆರ್‌ ಹಾಗೂ 5 ಸಾವಿರ ವಿಡಿಆರ್‌ಎಲ್‌ ಆ್ಯಂಟಿಜೆನ್ ಪರೀಕ್ಷೆ ಕಿಟ್‌ಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ದಿನೇಶ್ ಗುಂಡೂರಾವ್‌ ಇದೇ ವೇಳೆ ತಿಳಿಸಿದರು.

ಬೆಳಗಾವಿ, ವಿಜಯನಗರ ಬಳ್ಳಾರಿಯಲ್ಲಿ ಸೋಂಕು

  ಬೆಳಗಾವಿ / ಬಳ್ಳಾರಿ : ವಿಶ್ವವನ್ನೇ ಬೆಚ್ಚಿಬೀಳಿಸಿದ್ದ ಕೊರೋನಾ ಮಹಾಮಾರಿ ರಾಜ್ಯಕ್ಕೆ ಮತ್ತೆ ವಕ್ಕರಿಸಿದ್ದು, ಬೆಳಗಾವಿ, ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಕೊವೀಡ್ ಪಾಸಿಟಿವ್ ದೃಢಪಟ್ಟಿದೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ಬೆಳಗಾವಿ ನಗರದ 25 ವರ್ಷದ ಗರ್ಭಿಣಿಗೆ ಕೊವೀಡ್‌ ವೈರಸ್‌ ಕಂಡು ಬಂದಿದ್ದು, ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 8 ಜನರ ಪರೀಕ್ಷೆ ಮಾಡಲಾಗಿದ್ದು, ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆ. ಕೊರೋನಾ ಮುಂಜಾಗ್ರತಾ ಕ್ರಮಕ್ಕಾಗಿ ಸರ್ಕಾರದಿಂದ ಗೈಡ್‌ಲೈನ್ಸ್ ಬಂದಿದ್ದು, ಸದ್ಯ ಆತಂಕ ಪಡುವ ಸ್ಥಿತಿ ಇಲ್ಲ ಎಂದು ಬೆಳಗಾವಿ ಡಿಎಚ್ಒ ಡಾ.ಈಶ್ವರ ಗಡಾದ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಕೊವೀಡ್‌ ಪಾಸಿಟಿವ್ ಆಗಿದ್ದ 40 ವರ್ಷದ ವ್ಯಕ್ತಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆಯ 54 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದ್ದು, ಹೋಂ ಐಸೋಲೇಷನ್‌ನಲ್ಲಿದ್ದಾರೆ. ಈ ಇಬ್ಬರೂ ಉಸಿರಾಟದ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾಗ ಕೊರೋನಾ ತಪಾಸಣೆ ಮಾಡಲಾಗಿತ್ತು. ಆಗ ಇಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. ಹೊಸಪೇಟೆ ಮಹಿಳೆ ಮುಂಬಯಿ ಟ್ರಾವೆಲ್ ಹಿಸ್ಟರಿ ಹೊಂದಿದ್ದು, ಬಳ್ಳಾರಿ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎಂದು ಬಳ್ಳಾರಿ ಡಿಎಚ್ಒ ಡಾ.ಎಲ್.ಆರ್.ಶಂಕರ ನಾಯ್ಕ ಮಾಹಿತಿ ನೀಡಿದ್ದಾರೆ.

ನ್ಯುಮೋನಿಯಾದಿಂದ ಬಳಲುತ್ತಿದ್ದ ಬೆಳಗಾವಿ ನಗರದ 25 ವರ್ಷದ ಗರ್ಭಿಣಿಗೆ ಕೊವೀಡ್‌ ವೈರಸ್‌ ಕಂಡು ಬಂದಿದ್ದು, ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇವರ ಜತೆಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ 8 ಜನರ ಪರೀಕ್ಷೆ ಮಾಡಲಾಗಿದ್ದು, ಎಲ್ಲರ ರಿಪೋರ್ಟ್ ನೆಗೆಟಿವ್ ಬಂದಿದೆ. ಕೊರೋನಾ ಮುಂಜಾಗ್ರತಾ ಕ್ರಮಕ್ಕಾಗಿ ಸರ್ಕಾರದಿಂದ ಗೈಡ್‌ಲೈನ್ಸ್ ಬಂದಿದ್ದು, ಸದ್ಯ ಆತಂಕ ಪಡುವ ಸ್ಥಿತಿ ಇಲ್ಲ ಎಂದು ಬೆಳಗಾವಿ ಡಿಎಚ್ಒ ಡಾ.ಈಶ್ವರ ಗಡಾದ ತಿಳಿಸಿದ್ದಾರೆ.

ಬಳ್ಳಾರಿಯಲ್ಲಿ ಕೊವೀಡ್‌ ಪಾಸಿಟಿವ್ ಆಗಿದ್ದ 40 ವರ್ಷದ ವ್ಯಕ್ತಿ ಗುಣಮುಖರಾಗಿ ಚೇತರಿಸಿಕೊಂಡಿದ್ದಾರೆ. ವಿಜಯನಗರ ಜಿಲ್ಲೆ ಹೊಸಪೇಟೆಯ 54 ವರ್ಷದ ಮಹಿಳೆಯಲ್ಲಿ ಕೊರೋನಾ ದೃಢಪಟ್ಟಿದ್ದು, ಹೋಂ ಐಸೋಲೇಷನ್‌ನಲ್ಲಿದ್ದಾರೆ. ಈ ಇಬ್ಬರೂ ಉಸಿರಾಟದ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾಗ ಕೊರೋನಾ ತಪಾಸಣೆ ಮಾಡಲಾಗಿತ್ತು. ಆಗ ಇಬ್ಬರಿಗೆ ಪಾಸಿಟಿವ್ ದೃಢಪಟ್ಟಿದೆ. ಹೊಸಪೇಟೆ ಮಹಿಳೆ ಮುಂಬಯಿ ಟ್ರಾವೆಲ್ ಹಿಸ್ಟರಿ ಹೊಂದಿದ್ದು, ಬಳ್ಳಾರಿ ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಎಂದು ಬಳ್ಳಾರಿ ಡಿಎಚ್ಒ ಡಾ.ಎಲ್.ಆರ್.ಶಂಕರ ನಾಯ್ಕ ಮಾಹಿತಿ ನೀಡಿದ್ದಾರೆ.

ವೈದ್ಯರು ಹೇಳೋದೇನು?

- ದೇಶ-ವಿದೇಶಗಳಲ್ಲಿ ಪತ್ತೆಯಾಗುತ್ತಿರುವುದು ಕೋವಿಡ್‌ ಹೊಸ ರೂಪಾಂತರಿ ಜೆಎನ್‌.1

- ಇದು ಮಾರಕವಲ್ಲ. ಸೌಮ್ಯ ಸ್ವರೂಪದ ರೋಗ ಲಕ್ಷಣಗಳು ಮಾತ್ರವೇ ಕಂಡುಬರುತ್ತವೆ

- ದೆಹಲಿಯಲ್ಲಿ 23 ಮಂದಿ ಕೋವಿಡ್‌ ಸೋಂಕಿತರಿದ್ದು, ಯಾರೂ ಆಸ್ಪತ್ರೆಗೆ ದಾಖಲಾಗಿಲ್ಲ

- ಜನರು ಕೈ ಸ್ವಚ್ಛವಾಗಿಟ್ಟುಕೊಳ್ಳಬೇಕು. ಜನದಟ್ಟಣೆ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸಬೇಕು

- ಕೋವಿಡ್‌ ಲಕ್ಷಣ ಕಂಡುಬಂದರೆ ತಪಾಸಣೆ ಮಾಡಿಸಿಕೊಳ್ಳಿ. ರೋಗಕ್ಕಿಂತ ದಿಗಿಲೇ ಅಪಾಯ

Read more Articles on