ಸಾಮಾಜಿಕ, ಆರ್ಥಿಕ, ಶಿಕ್ಷಣ ಸಮೀಕ್ಷೆ ನಡೆಸಿ : ಸಿದ್ದರಾಮಯ್ಯ ಆಗ್ರಹ

Published : May 01, 2025, 05:41 AM ISTUpdated : May 01, 2025, 06:28 AM IST
Karnataka Chief Minister Siddaramaiah  (File Photo/ANI)

ಸಾರಾಂಶ

ರಾಷ್ಟ್ರೀಯ ಜನಗಣತಿ ಜೊತೆ ಜಾತಿ ಗಣತಿಯನ್ನೂ ನಡೆಸುವ ಕೇಂದ್ರ ಸರ್ಕಾರದ ತೀರ್ಮಾನವನ್ನು ನಮ್ಮ ಸರ್ಕಾರ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸುವಂತೆ ಇದೇ ವೇಳೆ ಒತ್ತಾಯಿಸಿದ್ದಾರೆ.

ಬೆಂಗಳೂರು : ರಾಷ್ಟ್ರೀಯ ಜನಗಣತಿ ಜೊತೆ ಜಾತಿ ಗಣತಿಯನ್ನೂ ನಡೆಸುವ ಕೇಂದ್ರ ಸರ್ಕಾರದ ತೀರ್ಮಾನವನ್ನು ನಮ್ಮ ಸರ್ಕಾರ ಹೃತ್ಪೂರ್ವಕವಾಗಿ ಸ್ವಾಗತಿಸುತ್ತದೆ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಾತಿ ಗಣತಿ ಜೊತೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸುವಂತೆ ಇದೇ ವೇಳೆ ಒತ್ತಾಯಿಸಿದ್ದಾರೆ.

ಕೇಂದ್ರ ಸರ್ಕಾರ ಜಾತಿಗಣತಿ ನಡೆಸುವ ನಿರ್ಧಾರ ಮಾಡಿದ ಬೆನ್ನಲ್ಲೇ ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಜಾತಿ ಗಣತಿ ನಡೆಸುವುದರಿಂದ ಜಾತಿ ಸಂಘರ್ಷಗಳು ಹೆಚ್ಚಾಗಿ ಸಮಾಜ ಒಡೆದುಹೋಗುತ್ತದೆ, ಜಾತಿ ಗಣತಿ ಎನ್ನುವುದು ಹಿಂದೂ ಸಮಾಜ ಒಡೆಯುವ ಹುನ್ನಾರ ಎಂದೆಲ್ಲ ವರ್ಷಗಳ ಕಾಲ ಬಿಜೆಪಿ ಟೀಕೆ ಮಾಡಿತ್ತು. ಇದೀಗ ಬಿಜೆಪಿ ಹಾಗೂ ಅದರ ನೇತೃತ್ವದ ಸರ್ಕಾರ ಕೊನೆಗೂ ಜಾತಿ ಗಣತಿಯ ಸಾಮಾಜಿಕ ಮಹತ್ವ ಅರ್ಥಮಾಡಿಕೊಂಡಿರುವುದು ಸ್ವಾಗತಾರ್ಹ ಬೆಳವಣಿಗೆ’ ಎಂದು ತಿಳಿಸಿದ್ದಾರೆ.

ಸಲಹೆ-ಸಹಕಾರ ನೀಡಲು ಸಿದ್ಧ:

ನಮ್ಮ ಪಕ್ಷದ ಪಂಚ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಲೇ, ಕೊನೆಗೆ ಅದನ್ನು ತಮ್ಮ ಪಕ್ಷದ ಕಾರ್ಯಕ್ರಮವನ್ನಾಗಿ ನರೇಂದ್ರ ಮೋದಿ ಮಾಡಿಕೊಂಡಿದ್ದರು. ಅದೇ ರೀತಿ ನಮ್ಮ ಜಾತಿಗಣತಿ ಕಾರ್ಯಕ್ರಮವನ್ನೂ ಮೋದಿ ಸರ್ಕಾರ ಕೈಗೆತ್ತಿಕೊಂಡಿರುವುದು ಕಾಂಗ್ರೆಸ್ ಪಕ್ಷದ ನೀತಿ ಮತ್ತು ಕಾರ್ಯಕ್ರಮಗಳು ಜನಪರವಾಗಿರುವುದಕ್ಕೆ ಸಾಕ್ಷಿ. ನಮ್ಮ ಸರ್ಕಾರ ನಡೆಸಿರುವ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಒಂದು ಪರಿಪೂರ್ಣ ಮಾದರಿಯಾಗಿದ್ದು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಯಾವುದೇ ಸಲಹೆ-ಸಹಕಾರ ನೀಡಲು ರಾಜ್ಯ ಸರ್ಕಾರ ಸಿದ್ಧ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ವೈಜ್ಞಾನಿಕವಾದ ಮೀಸಲಾತಿ ನೀತಿ ರೂಪಿಸುವುದೇ ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ಮೂಲ ಉದ್ದೇಶ. ಪ್ರತಿ ಬಾರಿ ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳು ವಿಚಾರಣೆಗೆ ಬಂದಾಗೆಲ್ಲ ಸುಪ್ರೀಂಕೋರ್ಟ್ ಇಂತಹದ್ದೊಂದು ಸಮೀಕ್ಷೆ ನಡೆಸುವ ಅಗತ್ಯವನ್ನು ಒತ್ತಿ ಹೇಳುತ್ತಾ ಬಂದಿದೆ ಎನ್ನುವುದನ್ನು ಕೇಂದ್ರ ಸರ್ಕಾರ ಗಮನಿಸಬೇಕು. ಹೀಗಾಗಿ ಜಾತಿಗಣತಿ ಜತೆಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕು ಎಂದು ಒತ್ತಾಯ ಮಾಡಿದ್ದಾರೆ.

ರಾಹುಲ್‌ ಗಾಂಧಿ ಪ್ರಯತ್ನದ ಫಲ:

ಜಾತಿ ಗಣತಿ ಜೊತೆ ಮೀಸಲಾತಿ ಮಿತಿ ಏರಿಕೆ ನಿರ್ಧಾರವನ್ನು ಸಂಪೂರ್ಣ ಬೆಂಬಲಿಸಿ ಅದನ್ನು ನಮ್ಮ ಪಕ್ಷದ ರಾಷ್ಟ್ರೀಯ ಕಾರ್ಯಕ್ರಮವನ್ನಾಗಿ ರಾಹುಲ್‌ಗಾಂಧಿ ರೂಪಿಸಿದ್ದರು. ಈ ಬಗ್ಗೆ ದೇಶಾದ್ಯಂತ ಪ್ರಚಾರ ಮಾಡಿ ಕೇಂದ್ರದ ಮೇಲೆ ಒತ್ತಡ ಹೇರಿದ ಫಲದಿಂದ ಮೋದಿ ಅವರು ಜಾತಿಗಣತಿ ನಿರ್ಧಾರ ಕೈಗೊಂಡಿದ್ದಾರೆ. ಇದನ್ನು ಅವರು ಒಪ್ಪದಿದ್ದರೂ ದೇಶ ಒಪ್ಪುತ್ತದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಮೋದಿ ರಾಜ್ಯ ಬಿಜೆಪಿ ನಾಯಕರ

ಕಿವಿ ಹಿಂಡಲಿ: ಸಿಎಂ ಸಿದ್ದರಾಮಯ್ಯ

ರಾಜ್ಯದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿರುವ ವರದಿಯನ್ನು ಬಿಜೆಪಿ ರಾಜ್ಯ ಘಟಕದ ನಾಯಕರು ವಿವಿಧ ಸಬೂಬು ಹೇಳಿ ವಿರೋಧಿಸುತ್ತಲೇ ಇದ್ದಾರೆ. ವರದಿ ಆಧರಿಸಿ ಮೀಸಲಾತಿ ಪರಿಷ್ಕರಿಸಿ ಈಗಿನ ಶೇ.50ರ ಮಿತಿ ಹೆಚ್ಚಿಸುವ ಪ್ರಯತ್ನ ಕೂಡಾ ನಡೆದಿದೆ. ಈ ಎಲ್ಲ ಪ್ರಯತ್ನಗಳಿಗೆ ಅಡ್ಡಗಾಲು ಹಾಕುತ್ತಿರುವ ಬಿಜೆಪಿಯ ರಾಜ್ಯಘಟಕದ ನಾಯಕರಿಗೆ ಪ್ರಧಾನಿ ಮೋದಿ ಅವರು ಕಿವಿ ಹಿಂಡಿ ಬುದ್ದಿ ಹೇಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''