ಸಿಇಟಿಗೆ ವೆಬ್‌ಕಾಸ್ಟಿಂಗ್‌ ಕಣ್ಗಾವಲು ಮತ್ತು ಫೇಸ್‌ ರೆಕಗ್ನಿಷನ್‌ ಜಾರಿಗೆ ಮೀನಾಮೇಷ!

Published : Feb 03, 2025, 07:30 AM IST
GATE 2025 Exam Day Instructions

ಸಾರಾಂಶ

ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ 2025ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹತ್ತಿರವಾಗುತ್ತಿದ್ದರೂ ಅಕ್ರಮಗಳಿಗೆ ಕಡಿವಾಣ ಹಾಕಿ ಪರೀಕ್ಷೆಯನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸಲು ಪೂರಕವಾದ ವೆಬ್‌ಕಾಸ್ಟಿಂಗ್‌ ಕಣ್ಗಾವಲು ಮತ್ತು ಫೇಸ್‌ ರೆಕಗ್ನಿಷನ್‌ ವ್ಯವಸ್ಥೆ ಜಾರಿಗೆ ಸರ್ಕಾರ ಇನ್ನೂ ಮೀನಾಮೇಷ 

ಲಿಂಗರಾಜು ಕೋರಾ

ಬೆಂಗಳೂರು : ವೃತ್ತಿಪರ ಕೋರ್ಸುಗಳ ಪ್ರವೇಶಕ್ಕೆ 2025ರ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹತ್ತಿರವಾಗುತ್ತಿದ್ದರೂ ಅಕ್ರಮಗಳಿಗೆ ಕಡಿವಾಣ ಹಾಕಿ ಪರೀಕ್ಷೆಯನ್ನು ಮತ್ತಷ್ಟು ಪಾರದರ್ಶಕವಾಗಿ ನಡೆಸಲು ಪೂರಕವಾದ ವೆಬ್‌ಕಾಸ್ಟಿಂಗ್‌ ಕಣ್ಗಾವಲು ಮತ್ತು ಫೇಸ್‌ ರೆಕಗ್ನಿಷನ್‌ ವ್ಯವಸ್ಥೆ ಜಾರಿಗೆ ಸರ್ಕಾರ ಇನ್ನೂ ಮೀನಾಮೇಷ ಎಣಿಸುತ್ತಿದೆ.

ಎಷ್ಟೇ ಭದ್ರತೆ, ಕಟ್ಟುನಿಟ್ಟಾಗಿ ಪರೀಕ್ಷೆ ನಡೆಸಿದರೂ ಪ್ರತೀ ವರ್ಷ ಒಂದಿಲ್ಲೊಂದು ಕೇಂದ್ರಗಳಲ್ಲಿ ಪರೀಕ್ಷಾ ನಕಲು, ಬದಲಿ ಅಥವಾ ನಕಲಿ ಅಭ್ಯರ್ಥಿಗಳು ಪರೀಕ್ಷೆ ಬರೆಯುವಂಥ ಪ್ರಕರಣಗಳು ಮರುಕಳಿಸುತ್ತಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸಕ್ತ ವರ್ಷದಿಂದ ಸಿಇಟಿ ಸೇರಿ ಇತರೆ ಎಲ್ಲ ಪರೀಕ್ಷೆಗಳಿಗೂ ವೆಬ್‌ಕಾಸ್ಟಿಂಗ್‌ ಕಣ್ಗಾವಲು ಮತ್ತು ಮುಖ ಗುರುತಿಸುವ (ಫೇಸ್‌ ರೆಕಗ್ನಿಷನ್‌) ವ್ಯವಸ್ಥೆ ಜಾರಿಗೊಳಿಸಲು ಅನುಮತಿ ಕೋರಿ ಸಲ್ಲಿಸಿರುವ ಪ್ರಸ್ತಾವನೆಗೆ ಆರು ತಿಂಗಳು ಕಳೆದರೂ ಸರ್ಕಾರ ಅನುಮೋದನೆ ನೀಡಿಲ್ಲ.

ಈಗಾಗಲೇ ಏ.18 ಮತ್ತು 19ಕ್ಕೆ ಸಿಇಟಿ ಪರೀಕ್ಷೆ ನಿಗದಿಯಾಗಿದೆ. ಇನ್ನು ಎರಡೂವರೆ ತಿಂಗಳಷ್ಟೇ ಬಾಕಿ ಇದೆ. ಈ ವ್ಯವಸ್ಥೆ ಜಾರಿಗೆ ದುಬಾರಿ ವೆಚ್ಚ, ಸಮಯದ ಅಭಾವ ಹಾಗೂ ಜಾಗತಿಕ ಟೆಂಡರ್‌ ಕರೆಯಬೇಕೆಂಬ ಸಬೂಬು ಹೇಳಿಕೊಂಡು ಹಿಂದೆ ಸರಿಯುವ ಲಕ್ಷಣಗಳು ಕಂಡುಬರುತ್ತಿವೆ ಎನ್ನುವುದು ಉನ್ನತ ಶಿಕ್ಷಣ ಇಲಾಖೆ ಮೂಲಗಳ ಮಾಹಿತಿ. ಆದರೆ, ಕೆಇಎ ಅಧಿಕಾರಿಗಳು ಹೇಳುವ ಪ್ರಕಾರ, ವೆಬ್‌ಕಾಸ್ಟಿಂಗ್‌ ಮತ್ತು ಫೇಸ್‌ ರೆಕಗ್ನಿಷನ್‌ ವ್ಯವಸ್ಥೆ ಜಾರಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಿದ್ಧವಿದೆ. ಪ್ರಾಧಿಕಾರದಲ್ಲಿ ಈ ಸಂಬಂಧ ಹಣಕ್ಕೂ ಕೊರತೆ ಇಲ್ಲ. ಅಲ್ಲದೆ, ಈ ವ್ಯವಸ್ಥೆ ಜಾರಿಗೆ ಸುಮಾರು ₹10 ಕೋಟಿ ಬೇಕಾಗಬಹುದೆಂದು ಅಂದಾಜಿಸಲಾಗಿದೆ. ಇಷ್ಟು ಕಡಿಮೆ ಮೊತ್ತಕ್ಕೆ ಜಾಗತಿಕ ಟೆಂಡರ್‌ ಅಗತ್ಯವಿಲ್ಲ. ಹಗಲು ರಾತ್ರಿ ಕಷ್ಟಪಟ್ಟು ಪ್ರಮಾಣಿಕವಾಗಿ ಓದುತ್ತಿರುವ ಅಭ್ಯರ್ಥಿಗಳು ಸಿಇಟಿ ಪರೀಕ್ಷೆ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಸಂಪೂರ್ಣ ಪಾರದರ್ಶಕವಾಗಿ ನಡೆಸಬೇಕೆಂದು ಎದುರು ನೋಡುತ್ತಿದ್ದಾರೆ. ಆದರೆ, ಸರ್ಕಾರ ಮಾತ್ರ ಮೀನಾಮೇಷ ಎಣಿಸುತ್ತಿದೆ.

ಇಂಗಿತ ವ್ಯಕ್ತಪಡಿಸಿದ್ದ ಸಚಿವ ಸುಧಾಕರ್‌: ಕಳೆದ ವರ್ಷ ವಿವಿಧ ಪರೀಕ್ಷೆಗಳಿಗೆ ವೆಬ್‌ಕಾಸ್ಟಿಂಗ್‌ ಮತ್ತು ಮುಖಗುರುತು ವ್ಯವಸ್ಥೆಯ ಪ್ರಯೋಗ ಯಶಸ್ವಿಯಾದಾಗ ಉನ್ನತ ಶಿಕ್ಷಣ ಸಚಿವ ಡಾ। ಎಂ.ಸಿ.ಸುಧಾಕರ್‌ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಅಂದು ಸಿಇಟಿ ಸೇರಿ ಎಲ್ಲ ಪರೀಕ್ಷೆಗಳಲ್ಲೂ ಇದನ್ನು ಜಾರಿಗೊಳಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಆದರೆ, ಈಗ ಈ ಬಗ್ಗೆ ಪ್ರಶ್ನಿಸಿದರೆ ಇನ್ನೂ ಸಮಯವಿದೆ, ಪರಿಶೀಲಿಸೋಣ ಎಂದು ಹೇಳುತ್ತಿದ್ದಾರೆ.

ಪ್ರತಿ ವರ್ಷ ಐದರಿಂದ ಏಳು ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳಿಗೆ ಸರ್ಕಾರ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮೂಲಕ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ ಜಾರಿಗೊಳಿಸಿದೆ. ಆದರೆ, ಸುಮಾರು ಮೂರೂವರೆ ಲಕ್ಷ ಮಕ್ಕಳು ಪರೀಕ್ಷೆ ಬರೆಯುವ ಸಿಇಟಿಗೆ ಈ ವ್ಯವಸ್ಥೆ ಜಾರಿ ಏಕೆ ಸಾಧ್ಯವಿಲ್ಲ ಎನ್ನುವುದು ವಿದ್ಯಾರ್ಥಿಗಳು ಹಾಗೂ ಪೋಷಕರ ಪ್ರಶ್ನೆ.

ಹೇಗಿರುತ್ತೆ ವೆಬ್‌ಕಾಸ್ಟಿಂಗ್‌ ವ್ಯವಸ್ಥೆ?

ನಿಯಮಾನುಸಾರ 24 ವಿದ್ಯಾರ್ಥಿಗಳಿಗೆ ಒಂದು ಕೊಠಡಿಯಂತೆ ಮೂರೂವರೆ ಲಕ್ಷ ವಿದ್ಯಾರ್ಥಿಗಳಿಗೆ 13,541 ಪರೀಕ್ಷಾ ಕೊಠಡಿಗಳು ಬೇಕಾಗಬಹುದು. ಪ್ರತಿ ಕೊಠಡಿಗೂ ಸಿಸಿ ಕ್ಯಾಮೆರಾ, ಈ ಕ್ಯಾಮೆರಾಗಳ ಐಪಿ ಸಂಖ್ಯೆ(ಇಂಟರ್ನೆಟ್‌ ಪ್ರೋಟೋಕಾಲ್‌ ನಂಬರ್‌) ಬಳಸಿಕೊಂಡು ಪರೀಕ್ಷಾ ಕೊಠಡಿಗಳ ಚಿತ್ರಣವನ್ನು ಅಧಿಕಾರಿಗಳು ವೀಕ್ಷಿಸಲು ಪ್ರತೀ ಜಿಲ್ಲಾ ಕೇಂದ್ರಗಳಲ್ಲಿ ಸ್ಥಾಪಿಸಿದ ನಿಯಂತ್ರಣ ಕೊಠಡಿಯಲ್ಲಿ ಪ್ರೊಜೆಕ್ಟರ್‌, ಸ್ಕ್ರೀನ್‌ ಬೋರ್ಡ್‌ ಸೇರಿ ಇನ್ನಿತರೆ ಉಪಕರಣಗಳ ಅಗತ್ಯವಿದೆ. ಈ ವ್ಯವಸ್ಥೆಗೆ ಎಐ ಬಳಕೆ ಮಾಡಿದರೆ ಯಾವುದೇ ಕೇಂದ್ರಗಳಲ್ಲಿ ಅಕ್ರಮಗಳು ನಡೆದರೆ ಉದಾಹರಣೆಗೆ ವಿದ್ಯಾರ್ಥಿಗಳು ಪರಸ್ಪರ ಮಾತನಾಡುವುದು, ನಕಲು ಮಾಡುವುದು, ಚೀಟಿ ಇಟ್ಟುಕೊಂಡು ಪರೀಕ್ಷೆ ಬರೆಯುವಂತಹ ಅಕ್ರಮಗಳು ಕಂಡುಬಂದಾಗ ತಾನೇ ಗುರುತಿಸಿ ಮಾಹಿತಿ ನೀಡುತ್ತದೆ. ಅಕ್ರಮಗಳು ಕಂಡುಬಂದರೆ ಅಧಿಕಾರಿಗಳು ತಕ್ಷಣ ಸಂಬಂಧಿಸಿದ ಕೇಂದ್ರದ ಮುಖ್ಯಸ್ಥರಿಗೆ ಮಾಹಿತಿ ನೀಡಿ ಮೇಲ್ವಿಚಾರಕರು ಅಥವಾ ವಿದ್ಯಾರ್ಥಿಗಳ ವಿರುದ್ಧ ಕ್ರಮಕ್ಕೆ ಸೂಚಿಸಬಹುದು. ಇನ್ನು ಫೇಸ್‌ರೆಕಗ್ನಿಷನ್‌ ಯಂತ್ರವನ್ನು ಪರೀಕ್ಷಾ ಕೇಂದ್ರಗಳಲ್ಲಿ ಅಳವಡಿಸುವುದರಿಂದ ಸಿಇಟಿಗೆ ನೋಂದಣಿಗೊಂಡ ಅಥವಾ ಅಸಲಿ ವಿದ್ಯಾರ್ಥಿ ಮಾತ್ರ ಪರೀಕ್ಷಾ ಕೇಂದ್ರ ಪ್ರವೇಶಿಸಲು ಅವಕಾಶವಾಗುತ್ತದೆ.

ಸಿಇಟಿ ಸೇರಿ ತಾನು ನಡೆಸುವ ಎಲ್ಲ ಪರೀಕ್ಷೆಗಳಿಗೂ ವೆಬ್‌ಕಾಸ್ಟಿಂಗ್‌ ಮತ್ತು ಫೇಸ್‌ ರೆಕಗ್ನಿಷನ್‌ ವ್ಯವಸ್ಥೆ ಜಾರಿಗೊಳಿಸಲು ಅನುಮತಿ ಕೋರಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಸ್ತಾವನೆ ಸಲ್ಲಿಸಿದೆ. ಸಿಇಟಿಗೆ ಈ ವರ್ಷ ಈ ವ್ಯವಸ್ಥೆ ಜಾರಿ ಮಾಡುತ್ತೇವೆ, ಇಲ್ಲ ಎನ್ನುವ ಬಗ್ಗೆ ಈಗಲೇ ಹೇಳಲಾಗುವುದಿಲ್ಲ. ಇನ್ನೂ ಸಮಯಾವಕಾಶವಿದ್ದು ಪರಿಶೀಲಿಸಲಾಗುವುದು.

-ಡಾ। ಎಂ.ಸಿ.ಸುಧಾಕರ್‌, ಉನ್ನತ ಶಿಕ್ಷಣ ಸಚಿವ.

ಸಿಇಟಿ ಸೇರಿ ಕೆಇಎ ನಡೆಸುವ ಎಲ್ಲ ಪರೀಕ್ಷೆಗಳಲ್ಲಿ ಅಕ್ರಮಗಳಿಗೆ ಅವಕಾಶವಾಗದಂತೆ, ಮತ್ತಷ್ಟು ಪಾರದರ್ಶಕವಾಗಿ ನಡೆಸಲು ವೆಬ್‌ಕಾಸ್ಟಿಂಗ್‌ ಮತ್ತು ಫೇಸ್‌ ರೆಕಗ್ನಿಷನ್‌ ವ್ಯವಸ್ಥೆ ಜಾರಿ ಅಗತ್ಯವಿದೆ. ಹಾಗಾಗಿ ಈ ಸಂಬಂಧ ಅನುಮತಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಂದೇ ಬಾರಿ ಎಲ್ಲ ಕೇಂದ್ರಗಳಲ್ಲೂ ಜಾರಿ ಕಷ್ಟವಾದಲ್ಲಿ ಸಿಇಟಿಯ ಸೂಕ್ಷ್ಮ, ಅತಿ ಸೂಕ್ಷ್ಮ ಕೇಂದ್ರಗಳಲ್ಲಾದರೂ ಈ ವ್ಯವಸ್ಥೆಗೆ ಸರ್ಕಾರ ಅನುಮೋದನೆ ನೀಡಿದರೆ ಒಳ್ಳೆಯದು.

-ಎಚ್.ಪ್ರಸನ್ನ, ಕೆಎಇ ಕಾರ್ಯನಿರ್ವಾಹಕ ನಿರ್ದೇಶಕ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!