ಮಳೆ ನೀರಿಗೆ ಅಡ್ಡವಾಗಿರುವ ಕಟ್ಟಡ ಕೆಡವಿ : ಬಿಬಿಎಂಪಿ ಅಧಿಕಾರಿಗಳಿಗೆ ಡಿ.ಕೆ. ಶಿವಕುಮಾರ್ ನಿರ್ದೇಶನ

Published : May 30, 2025, 08:15 AM IST
DK Shivakumar

ಸಾರಾಂಶ

ಮಳೆ ನೀರು ಸರಾಗವಾಗಿ ಹರಿಯಲು ಅಡ್ಡವಿರುವ ಕಟ್ಟಡಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ ತೆರವುಗೊಳಿಸಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಬಿಎಂಪಿಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

 ಬೆಂಗಳೂರು : ಮಳೆ ನೀರು ಸರಾಗವಾಗಿ ಹರಿಯಲು ಅಡ್ಡವಿರುವ ಕಟ್ಟಡಗಳನ್ನು ವಿಪತ್ತು ನಿರ್ವಹಣೆ ಕಾಯ್ದೆ ಅಡಿ ತೆರವುಗೊಳಿಸಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಿಬಿಎಂಪಿಯ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಗುರುವಾರ ಯಲಹಂಕದ ಮಾನ್ಯತಾ ಟೆಕ್ ಪಾರ್ಕ್‌ ಬಳಿಕ ರಾಜಕಾಲುವೆ ಒತ್ತುವರಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು. ಮಳೆ ಬಂದಾಗ ಇಲ್ಲಿಂದಲೇ ಸಮಸ್ಯೆ ಆರಂಭಗೊಂಡ ನಂತರ ಉಳಿದ ಪ್ರದೇಶಗಳಲ್ಲಿ ಸಮಸ್ಯೆಯಾಗುತ್ತಿದೆ. ಕೆಲವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಅಡ್ಡಿಪಡಿಸುತ್ತಿದ್ದಾರೆ. ಅಧಿಕಾರಿಗಳಿಗೂ ಸಹಕಾರ ನೀಡುತ್ತಿರಲಿಲ್ಲ. ಹೀಗಾಗಿ ಸಮಸ್ಯೆಗೆ ಕಾರಣವಾಗಿರುವ ಪ್ರದೇಶಗಳಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಕಟ್ಟಡ ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಯಾರ ಆಸ್ತಿಯನ್ನೂ ನಷ್ಟ ಮಾಡಲು ಇಷ್ಟವಿಲ್ಲ. ಯಾರಿಗೂ ಅನ್ಯಾಯ ಮಾಡಲು ಬಯಸುವುದಿಲ್ಲ. ನೀರು ಸರಾಗವಾಗಿ ಹರಿಯಬೇಕು. ಹೀಗಾಗಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇನೆ. ಕಾಮಗಾರಿ ಮುಂದುವರಿಸಲು ಎಲ್ಲರೂ ಒಪ್ಪಿಕೊಂಡಿದ್ದಾರೆ ಎಂದು ತಿಳಿಸಿದರು.

ಒತ್ತುವರಿ ತೆರವಿಗೆ ಸಂಪೂರ್ಣ ಅಧಿಕಾರ ಮಳೆ ನೀರು ಸರಾಗವಾಗಿ ಹರಿಯುವುದು ಮುಖ್ಯ. ಇನ್ಯಾರೂ ಮುಖ್ಯವಲ್ಲ. ಬೆಂಗಳೂರಿನ ಘನತೆ ಹಾಳಾಗಲು ಬಿಡುವುದಿಲ್ಲ. ಸಾರ್ವಜನಿಕರೂ ಸಹಕಾರ ನೀಡಬೇಕು. ತಾಂತ್ರಿಕ ಕಾರಣದಿಂದ ತಪ್ಪಾಗಿದ್ದರೆ ಅದಕ್ಕೆ ಪರಿಹಾರ ನೀಡುತ್ತೇವೆ. ಪಾಲಿಕೆ ಮುಖ್ಯ ಆಯುಕ್ತರಿಗೆ ಹಾಗೂ ಕಾರ್ಯದರ್ಶಿಗಳಿಗೆ ಒತ್ತುವರಿ ತೆರವುಗೊಳಿಸಲು ಸಂಪೂರ್ಣ ಅಧಿಕಾರ ನೀಡಲಾಗಿದೆ. ರಾಜಕಾಲುವೆಯ ನಕ್ಷೆಗಳ ಗೊಂದಲ ಏನೇ ಇದ್ದರೂ ನೀರು ಹರಿಯಲು ಜಾಗ ಮಾಡಲೇಬೇಕು ಎಂದು ತಿಳಿಸಿದರು.

ಬಿಬಿಎಂಪಿ ಆಡಳಿತಾಧಿಕಾರಿ ತುಷಾರ್‌ ಗಿರಿನಾಥ್‌, ಮುಖ್ಯ ಆಯುಕ್ತ ಮಹೇಶ್ವರ್‌ ರಾವ್‌, ವಿಶೇಷ ಆಯುಕ್ತ ಮುನೀಶ್‌ ಮೌದ್ಗೀಲ್, ವಲಯ ಆಯುಕ್ತ ಕರಿಗೌಡ ಸೇರಿದಂತೆ ಮೊದಲಾದವರಿದ್ದರು.

ಬಿಜೆಪಿ ಅಭಿಪ್ರಾಯಕ್ಕೆ ಗೌರವ: ಡಿಕೆಶಿ

ನಗರದಲ್ಲಿ ಘನತ್ಯಾಜ್ಯ ಶುಲ್ಕ ಕಡಿಮೆ ಮಾಡಬೇಕೆಂದು ಬಿಜೆಪಿ ನಿಯೋಗದ ಮನವಿಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ಬಿಜೆಪಿ ಕಾಲದಲ್ಲಿ ತೆಗೆದುಕೊಂಡ ತೀರ್ಮಾನವನ್ನು ಬಿಜೆಪಿ ಅವರಿಗೆ ಮನವರಿಕೆ ಮಾಡಿಕೊಡುತ್ತೇನೆ. ಬಿಜೆಪಿ ನಿಯೋಗ ಏನು ಪ್ರಸ್ತಾವನೆ ಸಲ್ಲಿಸಿದ್ದಾರೆಂಬುದನ್ನು ಪರಿಶೀಲಿಸಿ ಮಾತನಾಡುತ್ತೇನೆ. ಅವರ ಅಭಿಪ್ರಾಯಕ್ಕೂ ಗೌರವ ನೀಡುತ್ತೇನೆ ಎಂದು ತಿಳಿಸಿದರು.

‘ಓವರ್ ಆಗಿ ಆಡಿದರೆ, ಎಲ್ಲ ಒಡೆಸಿ ಹಾಕಿಸ್ತೇನೆ’

ಮಾನ್ಯಾತಾ ಟೆಕ್‌ ಪಾರ್ಕ್‌ ಬಳಿ ರಾಜಕಾಲುವೆ ಒತ್ತುವರಿ ಕುರಿತು ಬಿಬಿಎಂಪಿಯ ಅಧಿಕಾರಿಗಳು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ವಿವರಿಸುತ್ತಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಕಾರ್ಲೆ ಇನ್ಫೋಟೆಕ್ ಕಂಪನಿಯ ಮಾಲೀಕನಿಗೆ ಉಪ ಮುಖ್ಯಮಂತ್ರಿ, ನಿಮಗೆ ಮಾತನಾಡುವುದಕ್ಕೆ ಅವಕಾಶ ನೀಡುತ್ತೇನೆ. ಓವರ್‌ ಆಗಿ ಆಡಿದರೆ, ದೊಡ್ಡ ಬಿಲ್ಡಿಂಗ್‌ ಆದರೂ ಪರವಾಗಿಲ್ಲ. ಎಲ್ಲವನ್ನೂ ಒಡೆಸಿ ಹಾಕಿ ಬಿಡುತ್ತೇನೆ. ನೀರು ಹರಿಯುವುದನ್ನು ನಾನು, ನೀನು ನಿರ್ಧಾರ ಮಾಡುವುದಕ್ಕೆ ಆಗಲ್ಲ ಎಂದು ಖಾಸಗಿ ಅವರು ಎಚ್ಚರಿಕೆ ನೀಡಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಗುಣಮಟ್ಟದ ಹಿಪ್ಪುನೇರಳೆ ಬೆಳೆದು ಲಾಭ ಗಳಿಸಿ
ರಾಮಗೊಂಡನಹಳ್ಳಿ ಕ್ರಿಕೆಟ್ ತಂಡಕ್ಕೆ ಪ್ರಥಮ ಬಹುಮಾನ