ಮುಂಗಾರಲ್ಲಿ ಉತ್ತರ ಒಳನಾಡಲ್ಲಿ ಬಿತ್ತನೆ ಜೋರು

Published : Jul 04, 2025, 07:47 AM IST
Karnataka farmers

ಸಾರಾಂಶ

ಮುಂಗಾರು ಹಂಗಾಮಿನ ಆರಂಭದ ಜೂನ್‌ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ ಉತ್ತರ ಒಳನಾಡಿನಲ್ಲಿ ಬಿತ್ತನೆ ಚುರುಕಾಗಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ಮಾತ್ರ ಭಾರೀ ಹಿನ್ನಡೆ ಉಂಟಾಗಿದೆ.

ಸಿದ್ದು ಚಿಕ್ಕಬಳ್ಳೇಕೆರೆ

 ಬೆಂಗಳೂರು :  ಮುಂಗಾರು ಹಂಗಾಮಿನ ಆರಂಭದ ಜೂನ್‌ ತಿಂಗಳಿನಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ ಉತ್ತರ ಒಳನಾಡಿನಲ್ಲಿ ಬಿತ್ತನೆ ಚುರುಕಾಗಿದೆ. ಆದರೆ ದಕ್ಷಿಣ ಒಳನಾಡಿನಲ್ಲಿ ಮಾತ್ರ ಭಾರೀ ಹಿನ್ನಡೆ ಉಂಟಾಗಿದೆ.

ಮುಂಗಾರು ಹಂಗಾಮಿನಲ್ಲಿ ರಾಜ್ಯದಲ್ಲಿ ಒಟ್ಟಾರೆ 82.50 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಆಗಬಹುದು ಎಂದು ಕೃಷಿ ಇಲಾಖೆ ನಿರೀಕ್ಷಿಸಿದೆ. ಈಗಾಗಲೇ 43.55 ಲಕ್ಷ ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು ಶೇ.53 ರಷ್ಟು ಸಾಧನೆಯಾಗಿದೆ. ಮುಂದಿನ ದಿನಗಳಲ್ಲಿ ಮುಂಗಾರು ಬಿರುಸಾಗುವುದರಿಂದ ಬಿತ್ತನೆ ಪ್ರಮಾಣ ಗುರಿ ಮೀರುವ ಸಾಧ್ಯತೆಯಿದೆ.

ಉತ್ತರ ಒಳನಾಡಿನಲ್ಲಿ ಸಾಮಾನ್ಯವಾಗಿ ಜೂನ್‌ ತಿಂಗಳಿನಲ್ಲಿ 66 ಮಿ.ಮೀ. ಮಳೆ ಆಗಬೇಕಿತ್ತು. ಆದರೆ 50 ಮಿ.ಮೀ. ಮಳೆಯಾಗಿದೆ. ಆದರೂ ಮೇ ತಿಂಗಳಿನಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಬಿತ್ತನೆ ಚುರುಕಾಗಿದೆ. ದಕ್ಷಿಣ ಒಳನಾಡಿನಲ್ಲೂ ಮೇ ಮಾಹೆಯಲ್ಲಿ ಅಧಿಕ ಮಳೆಯಾಗಿತ್ತಾದರೂ ಜೂನ್‌ನಲ್ಲಿ ವಾಡಿಕೆಗಿಂತ 6 ಮಿಮೀ ಮಳೆ ಕಡಿಮೆಯಾಗಿದ್ದರಿಂದ ಬಿತ್ತನೆಗೆ ಹಿನ್ನಡೆ ಉಂಟಾಗಿದೆ. ಈಗಾಗಲೇ ಬಿತ್ತಿರುವ ಪೈರುಗಳು ಸಕಾಲಕ್ಕೆ ಮಳೆಯಿಲ್ಲದೆ ರೈತರು ಸಂಕಷ್ಟ ಅನುಭವಿಸುವಂತಾಗಿದೆ.

ಉತ್ತರ ಒಳನಾಡಿನಲ್ಲಿ ಪೂರ್ವ ಮುಂಗಾರಿನಲ್ಲಿ 138 ಮಿ.ಮೀ. ಮಳೆ ಆಗಬೇಕಿತ್ತಾದರೂ 229 ಮಿ.ಮೀ. ಮಳೆಯಾಗಿತ್ತು. ಇದರಿಂದಾಗಿ ಬಿತ್ತನೆಗೆ ಪೂರಕ ವಾತಾವರಣ ನಿರ್ಮಾಣವಾಗಿದ್ದರಿಂದ ಮುಂಗಾರಿನಲ್ಲಿ ತೊಗರಿ, ಹತ್ತಿ, ಉದ್ದು, ಹೆಸರು, ಅಲಸಂಧೆ ಮತ್ತಿತರ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತಲಾಗಿದೆ. ಧಾರವಾಡದಲ್ಲಿ ಅತಿ ಹೆಚ್ಚು ಅಂದರೆ ಮುಂಗಾರು ಹಂಗಾಮಿನ ಒಟ್ಟಾರೆ ನಿರೀಕ್ಷೆಯಲ್ಲಿ ಈಗಾಗಲೇ ಶೇ.94 ರಷ್ಟು ಬಿತ್ತನೆಯಾಗಿದೆ. ಗದಗ (ಶೇ.93), ಬಾಗಲಕೋಟೆ(ಶೇ.88), ಬೆಳಗಾವಿ(ಶೇ.85), ಹಾವೇರಿ(ಶೇ.83), ಬೀದರ್‌ (ಶೇ.80) ಮತ್ತಿತರ ಜಿಲ್ಲೆಗಳಲ್ಲೂ ಉತ್ತಮ ಬಿತ್ತನೆಯಾಗಿದೆ.

ದ.ಒಳನಾಡಿನಲ್ಲಿ ನಲುಗುತ್ತಿವೆ ಬೆಳೆ:

ಆದರೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಪೂರ್ವ ಮುಂಗಾರಿನಲ್ಲಿ 79 ಮಿ.ಮೀ. ಮಳೆಗೆ ಬದಲಾಗಿ 189 ಮಿ.ಮೀ. ಮಳೆಯಾಗಿತ್ತು. ಆದರೆ, ಮುಂಗಾರಿನಲ್ಲಿ 103 ಮಿ.ಮೀ. ಗೆ ಬದಲಾಗಿ 97 ಮಿ.ಮೀ. ಮಳೆಯಾಗಿದ್ದು ಕೊರತೆ ಕಂಡುಬಂದಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಿದ್ದು ಹೊರತುಪಡಿಸಿದರೆ ಇನ್ನುಳಿದ ಜಿಲ್ಲೆಗಳಲ್ಲಂತೂ ಕಳೆದ ಹದಿನೈದಿಪ್ಪತ್ತು ದಿನದಿಂದ ಮಳೆಯ ಪ್ರಮಾಣ ಭಾರೀ ಕುಂಠಿತವಾಗಿದೆ. ಇದರಿಂದಾಗಿ ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿತ್ತನೆಗೆ ಹೊಡೆತ ಬಿದ್ದಿದೆ. ಮತ್ತೊಂದೆಡೆ, ಈಗಾಗಲೇ ಬಿತ್ತನೆಯಾಗಿರುವ ಶೇಂಗಾ, ಹೆಸರು, ಸಾಮೆ ಮತ್ತಿತರ ಬೆಳೆಗಳೂ ಮಳೆಯ ಅಭಾವದಿಂದ ನಲುಗುತ್ತಿವೆ.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಅತಿ ಕಡಿಮೆ, ಶೇ.1 ರಷ್ಟು ಮಾತ್ರ ಬಿತ್ತನೆಯಾಗಿದೆ. ಬೆಂಗಳೂರು ನಗರ ಮತ್ತು ಗ್ರಾಮಾಂತರ(ಶೇ.2), ದಕ್ಷಿಣ ಕನ್ನಡ(ಶೇ.4), ತುಮಕೂರು(ಶೇ.12), ಉಡುಪಿ ಮತ್ತು ಚಿಕ್ಕಮಗಳೂರು(ಶೇ.13), ಮಂಡ್ಯ(ಶೇ.15), ಶಿವಮೊಗ್ಗ(ಶೇ.17), ಚಿತ್ರದುರ್ಗ(ಶೇ.32), ಹಾಸನ(ಶೇ.40) ಸೇರಿ ಹಲವು ಜಿಲ್ಲೆಗಳಲ್ಲಿ ಬಿತ್ತನೆ ಕುಂಠಿತವಾಗಿದೆ.

‘ದಕ್ಷಿಣ ಒಳನಾಡಿನಲ್ಲಿ ಜುಲೈ ಮತ್ತು ಆಗಸ್ಟ್‌ ತಿಂಗಳಿನಲ್ಲಿ ರಾಗಿ ಮತ್ತಿತರ ಬೆಳೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡುವುದರಿಂದ ಒಟ್ಟಾರೆ ಬಿತ್ತನೆಗೆ ಭಾರೀ ಹಿನ್ನಡೆ ಆಗುವುದಿಲ್ಲ. ಈ ಭಾಗದಲ್ಲಿ ಅಣೆಕಟ್ಟುಗಳೂ ಬಹುತೇಕ ಭರ್ತಿಯಾಗುತ್ತಿರುವುದರಿಂದ ಕಬ್ಬು ಮತ್ತು ಭತ್ತಕ್ಕೆ ನೀರಿನ ಅಭಾವ ಕಾಡುವುದಿಲ್ಲ. ಮುಂದಿನ ದಿನಗಳಲ್ಲಿ ಮುಂಗಾರು ಬಿರುಸಾಗುವುದರಿಂದ ಕೃಷಿ ಚಟುವಟಿಕೆಗೆ ಯಾವುದೇ ಹಿನ್ನಡೆ ಉಂಟಾಗುವುದಿಲ್ಲ’ ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ವಲಯ ಜೂನ್‌ ಮಳೆ (ಮಿಮೀನಲ್ಲಿ)

ಸಾಮಾನ್ಯ ವಾಸ್ತವ

ಉತ್ತರ ಒಳನಾಡು 66 50

ದಕ್ಷಿಣ ಒಳನಾಡು 103 97

ಮಲೆನಾಡು 363 415

ಕರಾವಳಿ 832 881

ಜಿಲ್ಲೆ ಬಿತ್ತನೆ ಪ್ರಮಾಣ(ಶೇಕಡಾವಾರು)

ಧಾರವಾಡ 94

ಗದಗ 93

ಬಾಗಲಕೋಟೆ 88

ಬೆಳಗಾವಿ 85

ಹಾವೇರಿ 83

ಬೀದರ್‌ 80

ಚಿಕ್ಕಬಳ್ಳಾಪುರ 1

ದಕ್ಷಿಣ ಕನ್ನಡ 4

ತುಮಕೂರು 12

ಉಡುಪಿ, ಚಿಕ್ಕಮಗಳೂರು 13

ಮಂಡ್ಯ 15

ಶಿವಮೊಗ್ಗ 17

ಚಿತ್ರದುರ್ಗ 32

ಹಾಸನ 40

ಜುಲೈನಲ್ಲಿ ವಾಡಿಕೆಗಿಂತ ಅಧಿಕ ಮಳೆ

ಜುಲೈ ತಿಂಗಳಿನಲ್ಲಿ ಸಾಮಾನ್ಯವಾಗಿ ರಾಜ್ಯದಲ್ಲಿ ಒಟ್ಟಾರೆ 271 ಮಿ.ಮೀ. ಮಳೆ ನಿರೀಕ್ಷಿಸಲಾಗಿದೆ. ಆದರೆ ವಾಸ್ತವದಲ್ಲಿ ಇದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದ್ದು ಬಿತ್ತನೆ ಪ್ರಮಾಣ ಅಧಿಕವಾಗಲಿದೆ ಎಂದು ಹವಾಮಾನ ತಜ್ಞ ಪ್ರೊ.ಎಂ.ಎನ್‌.ತಿಮ್ಮೇಗೌಡ ಅಭಿಪ್ರಾಯಪಟ್ಟಿದ್ದಾರೆ.

‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಜುಲೈ ಮೊದಲ ವಾರದಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದೆ. ಆದರೆ ಎರಡನೇ ವಾರದಲ್ಲಿ ಮುಂಗಾರು ಪ್ರಬಲವಾಗಲಿದ್ದು ರಾಜ್ಯದಲ್ಲಿ ಮೆಕ್ಕೆಜೋಳ, ಶೇಂಗಾ, ಅಲಸಂಧೆ, ಅವರೆ, ಸೂರ್ಯಕಾಂತಿ ಮತ್ತಿತರ ಬೆಳೆಗಳ ಬಿತ್ತನೆ ಅಧಿಕವಾಗಲಿದೆ ಎಂದು ವಿವರಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!