ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಸಮಾಧಿ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 19 ದಿನಗಳಿಂದ ನಡೆಯುತ್ತಿರುವ ಶೋಧ ಕಾರ್ಯಾಚರಣೆಗೆ ಶುಕ್ರವಾರ ಬಿಡುವು ನೀಡಿದ್ದು, ಶನಿವಾರ ಮುಂದುವರಿಯುವ ಸಾಧ್ಯತೆ ಇದೆ.
ಅನಾಮಿಕ ದೂರುದಾರ ನೀಡಿದ ದೂರಿನಂತೆ ಎಸ್‌ಐಟಿ ತನಿಖಾ ತಂಡದಿಂದ ಜು.28ರಂದು ಆರಂಭಿಸಿದ ಶೋಧ ಕಾರ್ಯ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಅಧಿಕಾರಿಗಳು ಭಾಗವಹಿಸಬೇಕಾಗಿದ್ದ ಕಾರಣ ಆ.15ರಂದು ನಡೆದಿರಲಿಲ್ಲ. ಉಳಿದ 15 ದಿನಗಳಲ್ಲಿ ನಾನಾ ಭಾಗಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ.
ಶೋಧ ಕಾರ್ಯಕ್ಕೆ ವಿರಾಮ?:
ಗೃಹ ಸಚಿವರು ಸೋಮವಾರ ಈ ಪ್ರಕರಣದ ಕುರಿತು ಉತ್ತರ ನೀಡಲಿದ್ದಾರೆ ಎಂದು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದು, ಇದರಿಂದ ಎಸ್‌ಐಟಿಯ ಒಂದು ಹಂತದ ತನಿಖೆ, ಶೋಧ ಕಾರ್ಯಕ್ಕೆ ವಿರಾಮ ಬೀಳಲಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಇದುವರೆಗಿನ ಕಾರ್ಯಾಚರಣೆಯಲ್ಲಿ ದೂರುದಾರ ತಿಳಿಸಿದಂತಹ ಯಾವುದೇ ಕುರುಹುಗಳು ಕಂಡು ಬಾರದ ಹಿನ್ನೆಲೆಯಲ್ಲಿ ಈ ಪ್ರಕರಣ ಅನೇಕರ ಕೆಂಗಣ್ಣಿಗೂ ಗುರಿಯಾಗಿದೆ. ಈ ನಿಟ್ಟಿನಲ್ಲಿ ಶನಿವಾರದ ಕಾರ್ಯಾಚರಣೆ ಯಾವ ರೀತಿ ಇರಬಹುದು ಎಂಬ ಕುತೂಹಲವು ಹೆಚ್ಚಿದೆ.
ಇದುವರೆಗೆ ಒಟ್ಟು 17 ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದ್ದು, ಸ್ಥಳ ಸಂಖ್ಯೆ 6ರಲ್ಲಿ ಹಾಗೂ ಬಂಗ್ಲೆಗುಡ್ಡೆ ಪರಿಸರದಲ್ಲಿ ಶೋಧ ಕಾರ್ಯಕ್ಕೆ ತೆರಳುವ ವೇಳೆ ಭೂಮಿಯ ಮೇಲ್ಭಾಗದಲ್ಲಿ ಕಳೇಬರದ ಅವಶೇಷಗಳು ಸಿಕ್ಕಿದ್ದು ಬಿಟ್ಟರೆ ಉಳಿದ ಕಡೆಗಳಲ್ಲಿ ದೂರುದಾರನ ದೂರಿಗೆ ಯಾವುದೇ ಫಲ ಸಿಕ್ಕಿಲ್ಲ. ಇದರಿಂದ ಈ ಪ್ರಕರಣ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೂ ಗ್ರಾಸವಾಗಿದೆ.
ಮಾಹಿತಿ ಬಿಟ್ಟುಕೊಡದ ಎಸ್‌ಐಟಿ
ಪ್ರಕರಣದ ಕುರಿತು ಇದುವರೆಗೂ ಎಸ್‌ಐಟಿ ಯಾವ ಒಂದು ಮಾಹಿತಿಯನ್ನೂ ಬಿಟ್ಟು ಕೊಟ್ಟಿಲ್ಲ. ಇದರಿಂದ ಸಾರ್ವಜನಿಕ ವಲಯದಲ್ಲಿ ಗೊಂದಲ, ಅನಗತ್ಯ ಚರ್ಚೆಗಳು ನಡೆಯುವಂತಾಗಿದೆ. ಶೋಧ ಕಾರ್ಯ ಆರಂಭದ ವೇಳೆ ಕಂಡುಬರುತ್ತಿದ್ದ ಕುತೂಹಲಿಗರ ಸಂಖ್ಯೆ ದಿನ ಕಳೆದಂತೆ ಕಡಿಮೆಯಾಗಿದೆ. ಹೆಚ್ಚಿನ ಅಧಿಕಾರಿ ವರ್ಗದವರು ಶೋಧ ಕಾರ್ಯಾಚರಣೆ ತಂಡದ ಭಾಗವಾಗಿರುವ ಕಾರಣ ಜನಸಾಮಾನ್ಯರ ಕಚೇರಿ ಕೆಲಸಗಳು ವಿಳಂಬವಾಗುತ್ತಿವೆ ಎಂಬ ದೂರು ಕೇಳಿಬಂದಿದೆ.