ಮಂಗಳೂರು : ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಸೋಮವಾರ ಎಸ್ಐಟಿ ಕಚೇರಿಗೆ 1986ರಲ್ಲಿ ಅಸಹಜವಾಗಿ ಮೃತಪಟ್ಟಿದ್ದ ಬೋಳಿಯಾರಿನ ಪದ್ಮಲತಾ ಕುಟುಂಬಸ್ಥರು ಹಾಜರಾಗಿ, ಪ್ರಕರಣದ ಮರುತನಿಖೆಗೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.
1986ರ ಡಿಸೆಂಬರ್ 22ರಂದು ಕಾಲೇಜಿಗೆ ಹೋಗಿ ವಾಪಸ್ ಧರ್ಮಸ್ಥಳ ತನಕ ಬಂದಿದ್ದ ಪದ್ಮಲತಾ ಕಾಣೆಯಾಗಿದ್ದರು. 56 ದಿನಗಳ ಬಳಿಕ 1987ರಲ್ಲಿ ಅಸಹಜ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ನೆರಿಯದ ನೇತ್ರಾವತಿ ನದಿತೀರದಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿತ್ತು.
ಆಕೆಯನ್ನು ಕೊಲೆ ಮಾಡಲಾಗಿದೆ ಎಂದು ಪದ್ಮಲತಾ ಮನೆಯವರು ಆರೋಪಿಸಿದ್ದರು. ಈ ಬಗ್ಗೆ ಅಂದು ಸಿಒಡಿ ತನಿಖೆ ನಡೆಸಲಾಗಿತ್ತು. ಆದರೆ, ಪತ್ತೆಯಾಗದ ಕೇಸ್ ಎಂದು ಪ್ರಕರಣವನ್ನು ಕ್ಲೋಸ್ ಮಾಡಲಾಗಿತ್ತು. ಈಗ ಉತ್ಖನನ ಮಾಡಿ, ಪ್ರಕರಣದ ಮರು ತನಿಖೆ ನಡೆಸುವಂತೆ ಎಸ್ಐಟಿಗೆ ಮನವಿ ಮಾಡಲಾಗಿದೆ ಎಂದು ತಿಳಿದು ಬಂದಿದೆ.