ಪೂರ್ವಾನುಮತಿ ಪಡೆಯದೆ ಹೈಕೋರ್ಟ್‌ ಕಲಾಪ ವಿಡಿಯೋ ತೋರಿಸುವ ಚಾನಲ್‌ಗಳಿಗೆ ಸಂಕಷ್ಟ !

Published : Nov 04, 2024, 11:30 AM IST
Highcourt

ಸಾರಾಂಶ

ಪೂರ್ವಾನುಮತಿ ಪಡೆಯದೆ ನ್ಯಾಯಾಲಯ ಕಲಾಪಗಳ ವಿಡಿಯೋ ಪ್ರಸಾರ ಮಾಡುತ್ತಿರುವ ಯೂಟ್ಯೂಬ್‌ ಚಾನಲ್‌ ಹಾಗೂ ಇತರೆ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲು ಹೈಕೋರ್ಟ್‌ ಮುಂದಾಗಿದೆ.

ವೆಂಕಟೇಶ್‌ ಕಲಿಪಿ

 ಬೆಂಗಳೂರು : ಪೂರ್ವಾನುಮತಿ ಪಡೆಯದೆ ನ್ಯಾಯಾಲಯ ಕಲಾಪಗಳ ವಿಡಿಯೋ ಪ್ರಸಾರ ಮಾಡುತ್ತಿರುವ ಯೂಟ್ಯೂಬ್‌ ಚಾನಲ್‌ ಹಾಗೂ ಇತರೆ ಸಾಮಾಜಿಕ ಜಾಲತಾಣ ಖಾತೆಗಳ ವಿರುದ್ಧ ಕ್ರಮ ಕೈಗೊಳ್ಳಲು ಹೈಕೋರ್ಟ್‌ ಮುಂದಾಗಿದೆ. ಈ ಸಂಬಂಧ ಅನುಮತಿ ಪಡೆಯದೇ ಪ್ರಸಾರ ಮಾಡುತ್ತಿರುವ ಖಾತೆಗಳ ವಿವರಗಳನ್ನು ಖುದ್ದು ಹೈಕೋರ್ಟ್‌ ಕಂಪ್ಯೂಟರ್‌ ವಿಭಾಗವೇ ಸಂಗ್ರಹಿಸಿ ಪಟ್ಟಿ ಸಿದ್ಧಪಡಿಸುತ್ತಿದೆ.

ಕೋರ್ಟ್‌ ಕಲಾಪಗಳ ಲೈವ್‌ ಸ್ಟ್ರೀಮಿಂಗ್‌ ಮಾನದಂಡ ಪ್ರಕಟಿಸಿ, ನಂತರ ವಿಡಿಯೋ ಪ್ರಸಾರ ಮಾಡದಂತೆ ಹೈಕೋರ್ಟ್‌ ಆದೇಶ ಹೊರಡಿಸಿದ ಬಳಿಕವೂ ಯೂಟ್ಯೂಬ್‌, ಎಕ್ಸ್‌ ಮತ್ತು ಫೇಸ್‌ಬುಕ್‌ ಸೇರಿದಂತೆ ಇತರೆ ಸಾಮಾಜಿಕ ಮಾಧ್ಯಮಗಳಲ್ಲಿ ಹೈಕೋರ್ಟ್‌ ಕಲಾಪಗಳ ವಿಡಿಯೋಗಳನ್ನು ಪ್ರಸಾರ ಮಾಡಲಾಗುತ್ತಿದೆ. ಅದೂ ಸಹ ವಿಡಿಯೋಗಳನ್ನು ತಮಗೆ ಬೇಕಾದಂತೆ ಎಡಿಟ್‌ ಮಾಡಿ, ತಲೆಬರಹ-ಅಡಿಬರಹ, ಥಂಬ್‌ನೇಲ್‌ ನೀಡಿ ಪ್ರಸಾರ ಮಾಡುತ್ತಿವೆ.

ಈ ಧೋರಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್‌ ಕಂಪ್ಯೂಟರ್‌ ವಿಭಾಗ, ನ್ಯಾಯಾಲಯಗಳ ಕಲಾಪಗಳನ್ನು ಪ್ರಸಾರ ಮಾಡುತ್ತಿರುವ ಯೂಟ್ಯೂಬ್‌ ಚಾನಲ್‌, ಅವು ಪ್ರಸಾರ ಮಾಡಿರುವ ವಿಡಿಯೋ ಹಾಗೂ ಯುಆರ್‌ಎಲ್‌ ಲಿಂಕ್‌ಗಳನ್ನು ಪಟ್ಟಿ ಮಾಡುತ್ತಿದೆ. ಈಗಾಗಲೇ ಸುಮಾರು 10ಕ್ಕೂ ಹೆಚ್ಚು ಚಾನಲ್‌ ಹೆಸರು, ಅವುಗಳು ಪ್ರಸಾರ ಮಾಡಿರುವ ವಿಡಿಯೋ, ಯುಆರ್‌ಎಲ್‌ ಲಿಂಕ್‌ಗಳ ಪಟ್ಟಿ ಸಿದ್ಧಪಡಿಸಿದೆ. ಮುಂದಿನ ದಿನಗಳಲ್ಲಿ ಆ ಎಲ್ಲ ಮಾಹಿತಿಯನ್ನು ಪ್ರಕರಣದ ವಿಚಾರಣೆ ಮಾಡುತ್ತಿರುವ ಹೈಕೊರ್ಟ್‌ನ ನ್ಯಾಯಪೀಠಕ್ಕೆ ಸಲ್ಲಿಸಲು ನಿರ್ಧರಿಸಿದೆ. ಅಷ್ಟೇ ಅಲ್ಲದೆ, ಕೋರ್ಟ್‌ ಕಲಾಪದ ವಿಡಿಯೋ ಪ್ರಸಾರದ ವಿಚಾರವನ್ನು ಗೂಗಲ್‌, ಯೂಟ್ಯೂಬ್‌ ಚಾನಲ್‌ನ ಲೀಗಲ್‌ ಟೀಮ್‌ನ ಮುಂದಿಟ್ಟು, ಅಗತ್ಯ ಕ್ರಮಕ್ಕೆ ಸೂಚಿಸಲಾಗಿದೆ.

ಕೋವಿಡ್‌ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಹೈಕೋರ್ಟ್‌ ಕಲಾಪಗಳ ಯೂಟ್ಯೂಬ್‌ ನೇರ ಪ್ರಸಾರ ಆರಂಭಿಸಲಾಯಿತು. ಇದರಿಂದ ಯೂಟ್ಯೂಬ್‌ನಲ್ಲಿ ಕೋರ್ಟ್‌ ಕಲಾಪಗಳನ್ನು ಜನ ವೀಕ್ಷಿಸುವುದು ಹೆಚ್ಚಾಯಿತು. ಅದನ್ನೇ ಬಂಡವಾಳ ಮಾಡಿಕೊಂಡ ಕೆಲ ಸುದ್ದಿವಾಹಿನಿಗಳು, ಯೂಟ್ಯೂಬ್‌ ಚಾನಲ್‌ಗಳು ಕೋರ್ಟ್‌ ಕಲಾಪಗಳನ್ನು ತಮ್ಮ ವಾಹಿನಿಗಳಲ್ಲಿಯೂ ನೇರ ಪ್ರಸಾರ, ರೆಕಾರ್ಡಿಂಗ್‌ ಮಾಡಿ ಪ್ರಸಾರ ಮಾಡತೊಡಗಿದವು. ಪರಿಣಾಮ ಕೋರ್ಟ್‌ ಕಲಾಪದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆದವು.

ಈ ಮಧ್ಯೆ ಕಳೆದ ಸೆಪ್ಟೆಂಬರ್‌ನಲ್ಲಿ ಕಲಾಪದ ವೇಳೆ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ವ್ಯಕ್ತಪಡಿಸಿದ ಮೌಖಿಕ ಅಭಿಪ್ರಾಯಗಳು ವಿವಾದಕ್ಕೀಡಾದವು. ಅದರ ಬೆನ್ನಲ್ಲೇ ಪೂರ್ವಾನುಮತಿ ಪಡೆಯದೆ ವಿಡಿಯೋ ರೆಕಾರ್ಡಿಂಗ್‌, ಹಂಚಿಕೆ ಮಾಡದಂತೆ ವೀಕ್ಷಕರಿಗೆ ಎಚ್ಚರಿಸಿ ಕೋರ್ಟ್‌ ಕಲಾಪದ ಲೈವ್‌ ಸ್ಟ್ರೀಮಿಂಗ್‌ಗೂ ಮುನ್ನ ಎಚ್ಚರಿಕೆಯ ಸಂದೇಶವನ್ನು ಸೆ.20ರಿಂದ ಹೈಕೋರ್ಟ್‌ ಹಾಕಲಾರಂಭಿಸಿತು. ಮರುದಿನವೇ ನ್ಯಾಯಾಲಯ ಕಲಾಪದ ಪ್ರಕ್ರಿಯೆಯ ನೇರ ಪ್ರಸಾರವನ್ನು ಸಾಮಾಜಿಕ ಜಾಲಾತಾಣಗಳು, ವ್ಯಯಕ್ತಿಕ ಖಾತೆಗಳು, ಸಂಕಲನ ಮಾಡುವುದು, ಮರು ಪ್ರಸಾರ ಮಾಡುವುದನ್ನು ತಕ್ಷಣ ಸ್ಥಗಿತಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಬೆಂಗಳೂರು ವಕೀಲರ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತು.

ಆ ಅರ್ಜಿಯನ್ನು ಸೆ.24ರಂದು ವಿಚಾರಣೆ ನಡೆಸಿದ್ದ ಹೈಕೋರ್ಟ್‌ ಏಕ ಸದಸ್ಯ ಪೀಠ, ಕೋರ್ಟ್‌ ಲೈವ್‌ಸ್ಟ್ರೀಮ್‌ ವಿಡಿಯೊಗಳನ್ನು ತಕ್ಷಣ ತೆಗೆದು ಹಾಕುವಂತೆ ಯೂಟ್ಯೂಬ್‌, ಫೇಸ್‌ಬುಕ್‌, ಎಕ್ಸ್‌ ಕಾರ್ಪ್‌ಗಳಿಗೆ ನಿರ್ದೇಶಿಸಿದೆ. ಜೊತೆಗೆ, ಖಾಸಗಿ ವೇದಿಕೆಗಳು ಹೈಕೋರ್ಟ್‌ನ ಲೈವ್‌ಸ್ಟ್ರೀಮ್‌ ವಿಡಿಯೋಗಳನ್ನು ಬಳಸಕೂಡದು. ‘ಕರ್ನಾಟಕ ನ್ಯಾಯಾಲಯ ಕಲಾಪಗಳ ನೇರಪ್ರಸಾರ (ಲೈವ್‌ಸ್ಟ್ರೀಮ್‌) ಮತ್ತು ರೆಕಾರ್ಡಿಂಗ್‌ ನಿಯಮಗಳು 2021’ ನಿಯಮಗಳನ್ನು ಕಡ್ಡಾಯವಾಗಿ ಎಲ್ಲರೂ ಪಾಲಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಮಾಡಿದೆ. ಇಷ್ಟಾದರೂ ಯೂಟ್ಯೂಬ್‌ ಚಾನಲ್‌ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಕೋರ್ಟ್‌ ಕಲಾಪಗಳ ವಿಡಿಯೋ ಪ್ರಸಾರ ನಿಂತಿಲ್ಲ.

ಹೀಗಾಗಿಯೇ ಹೈಕೊರ್ಟ್‌ ಕಂಪ್ಯೂಟರ್‌ ವಿಭಾಗವು ಕೋರ್ಟ್‌ ಆದೇಶದ ನಂತರವೂ ಕೋರ್ಟ್‌ ಕಲಾಪಗಳನ್ನು ಪ್ರಸಾರ ಮಾಡಿರುವ ಯೂಟ್ಯೂಬ್‌ ಚಾನಲ್‌ಗಳು, ವಿಡಿಯೋ ಮತ್ತು ಅವುಗಳ ಯುಆರ್‌ಎಲ್‌ ಲಿಂಕ್‌ ಸಂಗ್ರಹಿ ಪಟ್ಟಿಸಿದ್ಧಪಡಿಸುತ್ತಿದೆ.

ಕೋರ್ಟ್‌ ಆದೇಶದ ಬಳಿಕವೂ ಲೈವ್‌ ಸ್ಟ್ರೀಮಿಂಗ್‌, ರೆಕಾರ್ಡೆಡ್‌ ವಿಡಿಯೋ ಪ್ರಸಾರ ಮಾಡುತ್ತಿರುವ ಚಾನಲ್‌ಗಳ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ಆ ಪಟ್ಟಿಯನ್ನು ಮುಂದಿನ ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು. ಜೊತೆಗೆ, ಈ ವಿಚಾರವನ್ನು ಗೂಗಲ್‌, ಯೂಟ್ಯೂಬ್‌ ಚಾನಲ್‌ಗಳ ಕಾನೂನು ವಿಭಾಗದವರ ಮುಂದೆ ಇಡಲಾಗಿದೆ.

- ಎಚ್‌.ಜಿ. ದಿನೇಶ್‌, ಹೈಕೋರ್ಟ್‌ ರಿಜಿಸ್ಟ್ರಾರ್‌  

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ವಿಪ್ರ ಸಮುದಾಯದ ಯುವಕರು ಸಂಘಟಿತರಾಗಿ
ಬಾಶೆಟ್ಟಿಹಳ್ಳಿ ಪಪಂ ಚುನಾವಣೆ: ಮತಗಟ್ಟೆಗೆ ರಾಜ್ಯ ಚುನಾವಣಾ ಆಯುಕ್ತ ಭೇಟಿ