ಅರಣ್ಯ ಇಲಾಖೆಯಲ್ಲಿ ಇನ್ಮುಂದೆ ಡಿಜಿಟಲ್‌ ಎಫ್‌ಐಆರ್‌ - ಗರುಡಾಕ್ಷಿ ವೆಬ್‌ಸೈಟ್‌ ಲೋಕಾರ್ಪಣೆ

Published : Jan 08, 2025, 11:56 AM IST
forest

ಸಾರಾಂಶ

ಆಧುನಿಕತೆಗನುಗುಣವಾಗಿ ಅರಣ್ಯ ಇಲಾಖೆ ಬದಲಾಗುತ್ತಿದ್ದು, ಅರಣ್ಯ ಒತ್ತುವರಿ, ಅಕ್ರಮ ಮರ ಕಡಿತ, ಕಳ್ಳಬೇಟೆ, ಅತಿಕ್ರಮ ಪ್ರವೇಶ ಸೇರಿ ಇತ್ಯಾದಿ ಅರಣ್ಯ ಅಪರಾಧಗಳಿಗೆ ಇನ್ನು ಮುಂದೆ ‘ಗರುಡಾಕ್ಷಿ’ ಅಸ್ತ್ರ ಪ್ರಯೋಗಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಬೆಂಗಳೂರು : ಆಧುನಿಕತೆಗನುಗುಣವಾಗಿ ಅರಣ್ಯ ಇಲಾಖೆ ಬದಲಾಗುತ್ತಿದ್ದು, ಅರಣ್ಯ ಒತ್ತುವರಿ, ಅಕ್ರಮ ಮರ ಕಡಿತ, ಕಳ್ಳಬೇಟೆ, ಅತಿಕ್ರಮ ಪ್ರವೇಶ ಸೇರಿ ಇತ್ಯಾದಿ ಅರಣ್ಯ ಅಪರಾಧಗಳಿಗೆ ಇನ್ನು ಮುಂದೆ ‘ಗರುಡಾಕ್ಷಿ’ ಅಸ್ತ್ರ ಪ್ರಯೋಗಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ತಿಳಿಸಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಡಿಜಿಟಲ್‌ ಎಫ್‌ಐಆರ್‌ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದ ಅವರು, ದಿನೇ ದಿನೇ ಅರಣ್ಯ ಅಪರಾಧಗಳು ಹೆಚ್ಚಾಗುತ್ತಿವೆ. ಅರಣ್ಯ ಅಪರಾಧಗಳನ್ನು ತಡೆಯಲು, ತಪ್ಪಿತಸ್ಥರಿಗೆ ಶಿಕ್ಷೆಯಾಗುವುದನ್ನು ಖಾತ್ರಿಪಡಿಸುವ ನಿಟ್ಟಿನಲ್ಲಿ ಅನ್‌ಲೈನ್‌ ಎಫ್ಐಆರ್‌ ವ್ಯವಸ್ಥೆ ಜಾರಿಗೆ ತರಲಾಗಿದೆ. ಅರಣ್ಯ ಸಚಿವರಾದ ಬಳಿಕ ಇಲಾಖೆಯಲ್ಲಿ ಹಂತ ಹಂತವಾಗಿ ಸುಧಾರಣೆ ತರಲಾಗುತ್ತಿದ್ದು, ಪೊಲೀಸ್ ಇಲಾಖೆಯ ಮಾದರಿಯಲ್ಲೇ ಅರಣ್ಯ ಇಲಾಖೆಯಲ್ಲೂ ಗರುಡಾಕ್ಷಿ ಹೆಸರಿನಲ್ಲಿ ಅನ್‌ಲೈನ್‌ ಎಫ್‌ಐಆರ್‌ ವ್ಯವಸ್ಥೆ ಕಾರ್ಯರೂಪಕ್ಕೆ ತರಲಾಗುತ್ತಿದೆ ಎಂದು ಹೇಳಿದರು.

ಗರುಡಾಕ್ಷಿ ಅನ್‌ಲೈನ್‌ ಎಫ್‌ಐಆರ್‌ ವ್ಯವಸ್ಥೆ ಅರಣ್ಯ ಮತ್ತು ವನ್ಯಜೀವಿ ಅಪರಾಧಗಳ ನಿರ್ವಹಣೆಯಲ್ಲಿ ಅತ್ಯಂತ ಮಹತ್ವದ ಮೈಲಿಗಲ್ಲಾಗಿದ್ದು, ಪಾರದರ್ಶಕ, ಸುವ್ಯವಸ್ಥಿತ, ಪರಿಹಾರವಾಗಿ ಅರಣ್ಯ ಅಪರಾಧ ತಡೆಯಲು ಇಲಾಖೆಗೆ ಬಲ ತುಂಬುತ್ತದೆ. ಈವರೆಗೆ ಎ-4 ಹಾಳೆಯ ಅರ್ಧಭಾಗದಷ್ಟು ಅಳತೆಯ ಎಫ್ಐಆರ್‌ನಲ್ಲಿ ಕಾರ್ಬನ್ ಶೀಟ್ ಹಾಕಿ ಕೈಬರಹದಲ್ಲಿ ಪ್ರಕರಣ ದಾಖಲಿಸಲಾಗುತ್ತಿತ್ತು. ಸಾವಿರಾರು ಪ್ರಕರಣಗಳು ದಾಖಲಾದರೂ ಎಷ್ಟು ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಹಾಕಲಾಗುತ್ತಿದೆ ಎಂಬುದನ್ನು ಮೇಲ್ವಿಚಾರಣೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆನ್‌ಲೈನ್‌ ಎಫ್ಐಆರ್ ವ್ಯವಸ್ಥೆಯಿಂದ ಎಷ್ಟು ಪ್ರಕರಣದಲ್ಲಿ ಆರೋಪಪಟ್ಟಿ ಸಲ್ಲಿಸಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಲಿದೆ. ಅಲ್ಲದೇ, ಇಲಾಖೆಯ ಇಲಾಖೆಯ ಅಧಿಕಾರಿಗಳು ಕುಳಿತ ಜಾಗದಿಂದಲೇ ಎಲ್ಲ ವಲಯಗಳ ಅರಣ್ಯ ಅಪರಾಧ ಪ್ರಕರಣಗಳ ಬಗ್ಗೆ ನಿಗಾವಹಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಪ್ರಸ್ತುತ ಗರುಡಾಕ್ಷಿ ತಂತ್ರಾಂಶವನ್ನು ಪ್ರಾಯೋಗಿಕವಾಗಿ ಬೆಂಗಳೂರು ನಗರ ವಿಭಾಗ, ಬೆಂಗಳೂರು ಅರಣ್ಯ ಸಂಚಾರಿ ದಳ ವಿಭಾಗ, ಭದ್ರಾವತಿ ವಿಭಾಗ, ಶಿರಸಿ ವಿಭಾಗ ಮತ್ತು ಮಲೈ ಮಹದೇಶ್ವರ ವನ್ಯ ಜೀವಿ ವಿಭಾಗಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತದೆ. ಈ ತಂತ್ರಾಂಶದ ಕಾರ್ಯನಿರ್ವಹಣೆ ಬಗ್ಗೆ ಕ್ಷೇತ್ರ ಮಟ್ಟದ ಪ್ರತಿಕ್ರಿಯೆ ಆಧಾರದ ಮೇಲೆ ಇನ್ನೂ ಹೆಚ್ಚು ಕ್ರಿಯಾಶೀಲಗೊಳಿಸಿ ಹಂತ ಹಂತವಾಗಿ ರಾಜ್ಯದ ಎಲ್ಲ ವಿಭಾಗಕ್ಕೂ ವಿಸ್ತರಿಸಲಾಗುವುದು ಮತ್ತು ಎಫ್ಐಆರ್ ಅನ್ನು ಗರುಡಾಕ್ಷಿ ತಂತ್ರಾಂಶದ ಮೂಲಕವೇ ದಾಖಲಿಸುವುದನ್ನು ಕಡ್ಡಾಯಗೊಳಿಸಲಾಗುವುದು ಎಂದರು.

ವಲಯ ಅರಣ್ಯಾಧಿಕಾರಿಗಿಂತ ಕಡಿಮೆ ದರ್ಜೆಯ ಅಧಿಕಾರಿಗಳು ಈ ಮೊದಲು ಎಫ್ಐಆರ್ ಹಾಕುತ್ತಿದ್ದರು. ತಾಂತ್ರಿಕ ಕಾರಣದಿಂದಾಗಿ ಪ್ರಕರಣಗಳು ನ್ಯಾಯಾಲಯದಲ್ಲಿ ವಜಾ ಆಗುತ್ತಿತ್ತು. ಈ ತಂತ್ರಾಂಶ ಜಾರಿ ಕಾರಣ ಇದಕ್ಕೆ ಆಸ್ಪದ ಇರುವುದಿಲ್ಲವಾಗಿದ್ದು, ಡಿಜಿಟಲ್ ಸಹಿ ಇರುತ್ತದೆ. ಅರಣ್ಯ ಭೂಮಿ ತನ್ನ ಸ್ವರೂಪ ಕಳೆದುಕೊಂಡರೆ ಮತ್ತೆ ಅರಣ್ಯ ಬೆಳೆಸಬಹುದು. ಆದರೆ ಅರಣ್ಯಕ್ಕೆ ಭೂಮಿಯೇ ಇಲ್ಲದಿದ್ದರೆ ಅರಣ್ಯ ಬೆಳೆಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ಅರಣ್ಯ ಒತ್ತುವರಿಯಾಗದಂತೆ ತಡೆಯಲು ಆನ್‌ಲೈನ್‌ ಎಫ್ಐಆರ್ ಕ್ರಾಂತಿಕಾರಿ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಂಜುಂ ಪ್ರವೇಜ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಬ್ರಿಜೇಶ್ ದೀಕ್ಷಿತ್, ವನ್ಯ ಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸುಭಾಷ್ ಮಾಲ್ಕಡೆ ಉಪಸ್ಥಿತರಿದ್ದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ
‘ಆತ್ಮನಿರ್ಭರ ಭಾರತ’ಕ್ಕೆ ಅಮೆಜಾನ್ ಪುಷ್ಟಿ