ಬರದ ಅಧ್ಯಯನಕ್ಕೆ ಡಿಜಿಟಲ್‌ ಸರ್ವೇ - ಎಐ, ಡ್ರೋನ್‌ ಮೂಲಕ ಸಮೀಕ್ಷೆ

Published : Jul 20, 2026, 06:28 AM IST
DK Shivakumar

ಸಾರಾಂಶ

ರಾಜ್ಯದಲ್ಲಿ ಆವರಿಸಿರುವ ತೀವ್ರ ಬರದ ಹಿನ್ನೆಲೆಯಲ್ಲಿ ಬರದ ತಳಮಟ್ಟದ ವರದಿ ನೀಡಲು ಹಾಗೂ ರಾಜ್ಯದ ಕೃಷಿ ಬೆಳೆಗಳ ಡಿಜಿಟಲ್‌ ಸಮೀಕ್ಷೆಯ ನಿಖರತೆಯನ್ನು ಮತ್ತಷ್ಟು ಹೆಚ್ಚಿಸಲು 36 ಕೋಟಿ ರು. ವೆಚ್ಚದಲ್ಲಿ ಎಐ, ಡ್ರೋನ್‌ ಹಾಗೂ ಜಿಯೋ ಸ್ಪೇಷಿಯಲ್‌ ಅನಾಲಿಟಿಕ್ಸ್‌ ತಂತ್ರಜ್ಞಾನದ ನೆರವಿನಿಂದ ‘ಸಮಗ್ರ ಡಿಜಿಟಲ್‌ ಬೆಳೆ ಸಮೀಕ್ಷೆ

 ಬೆಂಗಳೂರು :  ರಾಜ್ಯದಲ್ಲಿ ಆವರಿಸಿರುವ ತೀವ್ರ ಬರದ ಹಿನ್ನೆಲೆಯಲ್ಲಿ ಬರದ ತಳಮಟ್ಟದ ವರದಿ ನೀಡಲು ಹಾಗೂ ರಾಜ್ಯದ ಕೃಷಿ ಬೆಳೆಗಳ ಡಿಜಿಟಲ್‌ ಸಮೀಕ್ಷೆಯ ನಿಖರತೆಯನ್ನು ಮತ್ತಷ್ಟು ಹೆಚ್ಚಿಸಲು 36 ಕೋಟಿ ರು. ವೆಚ್ಚದಲ್ಲಿ ಎಐ, ಡ್ರೋನ್‌ ಹಾಗೂ ಜಿಯೋ ಸ್ಪೇಷಿಯಲ್‌ ಅನಾಲಿಟಿಕ್ಸ್‌ ತಂತ್ರಜ್ಞಾನದ ನೆರವಿನಿಂದ ‘ಸಮಗ್ರ ಡಿಜಿಟಲ್‌ ಬೆಳೆ ಸಮೀಕ್ಷೆ’ ನಡೆಸಲು ಭಾನುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ರಾಜ್ಯದ ಕೃಷಿ ಬೆಳೆಗಳ ಡಿಜಿಟಲ್‌ ಸಮೀಕ್ಷೆಯ ನಿಖರತೆಯನ್ನು ಮತ್ತಷ್ಟು ಹೆಚ್ಚಿಸಲು ಸರ್ಕಾರ ಕರ್ನಾಟಕ ಅಗ್ರಿಟೆಕ್‌ ಮಿಷನ್‌ -2026 ಜಾರಿಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಉಪಗ್ರಹ ಚಿತ್ರಣ, ಡ್ರೋನ್ ಸಮೀಕ್ಷೆಗಳು, ಜಿಐಎಸ್‌, ಎಐ/ಎಂಎಲ್‌ ಮತ್ತು ಕ್ಷೇತ್ರ ಪರಿಶೀಲನೆಗಳನ್ನು ಸಂಯೋಜಿಸಿಸಲಾಗುತ್ತದೆ. ಆ ಮೂಲಕ ರಾಜ್ಯದ ಬೆಳ ಸಮೀಕ್ಷೆಯ ದತ್ತಾಂಶದ ನಿಖರತೆ ಮತ್ತು ವಿಶ್ವಾಸಾರ್ಹತೆ ಹೆಚ್ಚಿಸಲು ‘ಸಮಗ್ರ ಡಿಜಿಟಲ್ ಬೆಳೆ ಸಮೀಕ್ಷೆ’ಗೆ ಅನುಮೋದನೆ ಪಡೆಯಲಾಗಿದೆ ಎಂದು ಹೇಳಿದರು.

ಮುಂದಿನ 3 ವರ್ಷಗಳ ಅವಧಿಯಲ್ಲಿ, 36 ಕೋಟಿ ರು. ವೆಚ್ಚದಲ್ಲಿ ‘ಅಗ್ರಿಟೆಕ್ ಮಿಷನ್’ ಜಾರಿಗೆ ತರಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ ಕೃಷಿ ಸಲಹಾ ಸೇವೆಗಳು, ಬೆಳೆ ಮೇಲ್ವಿಚಾರಣೆ ಮತ್ತು ಬೆಳೆ ಗುರುತಿಸುವಿಕೆ ವ್ಯವಸ್ಥೆಗಳನ್ನು ಬಲಪಡಿಸಲು ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ, ಡ್ರೋನ್‌ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ , ಜಿಯೋಸ್ಪೇಷಿಯಲ್ ಅನಾಲಿಟಿಕ್ಸ್ ಮತ್ತು ಇತರ ನವೀನ ಡಿಜಿಟಲ್‌ ತಂತ್ರಜ್ಞಾನಗಳಂತಹ ಬಳಸಿಕೊಳ್ಳಲಾಗುವುದು ಎಂದರು.

ಎಂಬಿಬಿಎಸ್‌ ವಿದ್ಯಾರ್ಥಿಗಳಿಗೆ ಹೊಸ ಹಾಸ್ಟೆಲ್‌:

ಬೆಂಗಳೂರಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಎಂಬಿಬಿಎಸ್‌ ಮತ್ತು ಬಿಡಿಎಸ್‌ ವಿದ್ಯಾರ್ಥಿಗಳ ಹೊಸದಾಗಿ ಬಾಲಕರ ಹಾಸ್ಟೆಲ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಇದಕ್ಕಾಗಿ ಬಿಎಂಸಿ (ಬೆಂಗಳೂರು ವೈದ್ಯಕೀಯ ಕಾಲೇಜು)ಯಿಂದ 3-4 ಕಿ.ಮೀ. ದೂರದಲ್ಲೇ ಜಾಗ ಗುರುತಿಸಲಾಗುವುದು ಎಂದು ಮಾಹಿತಿ ನೀಡಿದರು.

ಹಾಸ್ಟೆಲ್‌ನ ನವೀಕರಣಕ್ಕೆ 83.50 ಕೋಟಿ ರು. ಅಂದಾಜು ವೆಚ್ಚದಲ್ಲಿ ಪ್ರಸ್ತಾಪಿಸಿದ್ದರು. 80 ಕೋಟಿ ರು. ವೆಚ್ಚ ಮಾಡಿ ಹಳೆಯ ಹಾಸ್ಟೆಲ್‌ ನವೀಕರಣ ಮಾಡುವ ಬದಲು ಹೊಸದಾಗಿಯೇ ನಿರ್ಮಾಣ ಮಾಡುವಂತೆ ಸೂಚಿಸಿದ್ದೇನೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು.

15,000 ಹಾಸಿಗೆ, 7,500 ಕಾಟ್:

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಹೊಸದಾಗಿ ಮಂಜೂರು ಮಾಡಿರುವ ವಿದ್ಯಾರ್ಥಿನಿಲಯಗಳಿಗೆ 7500 ಟೂ-ಟಯರ್ ಕಾಟ್‌, 15 ಸಾವಿರ ಹಾಸಿಗೆಗಳನ್ನು ಒಟ್ಟು 29.98 ಕೋಟಿ ರು. ಅಂದಾಜು ವೆಚ್ಚದಲ್ಲಿ ಖರೀದಿಸಲು ಅನುಮೋದನೆ ನೀಡಲಾಗಿದೆ.

ಅಲೆಮಾರಿಗಳಿಗೆ ವಸತಿ:

ಅಲೆಮಾರಿ/ ಅರೆ ಅಲೆಮಾರಿ ಕಾಲೋನಿಗಳ ಸಮಗ್ರ ಅಭಿವೃದ್ಧಿಗಾಗಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡಂತೆ ಮನೆಗಳನ್ನು ನಿರ್ಮಿಸುವ ಕುರಿತು 10 ಲಕ್ಷ ರು. ಗಳ ಘಟಕ ವೆಚ್ಚದಲ್ಲಿ 380 ಚದರ ಅಡಿಗಳ ವಿಸ್ತೀರ್ಣದ ಮನೆಗಳ ನಿರ್ಮಾಣಕ್ಕೆ ಅನುಮೋದನೆ ನೀಡಲಾಗಿದೆ.

15 ಸಾವಿರ ಶಿಕ್ಷಕರ ನೇಮಕಕ್ಕೆ ಅಸ್ತು:

ಇನ್ನು ಕರ್ನಾಟಕ ಶಿಕ್ಷಣ ಇಲಾಖೆ ಸೇವೆಗಳು (ಸಾರ್ವಜನಿಕ ಶಿಕ್ಷಣ ಇಲಾಖೆ) (ಕೆಲವು ಬೋಧನಾ ಹುದ್ದೆಗಳಿಗೆ ನೇಮಕಾತಿ) (ವಿಶೇಷ) ನಿಯಮಗಳು, 2026’ರ ಕರಡು ಅಧಿಸೂಚನೆಗೆ ಘಟನೋತ್ತರ ಅನುಮೋದನೆ. ಈಗಾಗಲೇ 15,000 ಶಿಕ್ಷಕರ ನೇಮಕಾತಿಗೆ ಸರ್ಕಾರ ಆದೇಶ ಹೊರಡಿಸಿದ್ದು, ಈ ಸಂಬಂಧ ಈ ಘಟನೋತ್ತರ ಅನುಮೋದನೆ ಪಡೆಯಲಾಗಿದೆ ಎಂದು ಶಿವಕುಮಾರ್‌ ತಿಳಿಸಿದರು.

ನಾನೇ ಖುದ್ದು ಹಳ್ಳಿಗೆ ಹೋಗುವೆ

ಬರಗಾಲದ ಹಿನ್ನೆಲೆಯಲ್ಲಿ ಪ್ರತಿ ಗ್ರಾಮಗಳಿಗೆ ತೆರಳಿ ವಾಸ್ತವ ಸ್ಥಿತಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾನೂ ಸಮಯ ಹೊಂದಿಸಿಕೊಂಡು ಶೀಘ್ರದಲ್ಲೇ ಖುದ್ದು ರಾಜ್ಯದ ವಿವಿಧೆಡೆ ತೆರಳಿ ಬರ ಪರಿಸ್ಥಿತಿ ಪರಿಶೀಲಿಸಲಿದ್ದೇನೆ.

- ಡಿ.ಕೆ. ಶಿವಕುಮಾರ್‌, ಮುಖ್ಯಮಂತ್ರಿ

7 ದಿನದಲ್ಲಿ ಬರ ವರದಿಗೆ ತಾಕೀತು

ಬೆಂಗಳೂರು: ರಾಜ್ಯದ 178 ತಾಲೂಕಲ್ಲಿ ಬರಗಾಲ ಇದೆ. ಬರಗಾಲ ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ 15 ದಿನಗಳಲ್ಲಿ ವರದಿ ನೀಡಬೇಕಿದೆ. ಹೀಗಾಗಿ ಎಲ್ಲಾ ಜಿಲ್ಲಾಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ಬರ ಪರಿಸ್ಥಿತಿ ಬಗ್ಗೆ ಪರಿಶೀಲೀಸಬೇಕು. ವಾರದೊಳಗೆ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಖಡಕ್ಕಾಗಿ ತಾಕೀತು ಮಾಡಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಮತದಾರರ ಪಟ್ಟಿಯಿಂದ ಯಾರೂ ಹೊರಗುಳಿಯಬಾರದು
ವೇಶ್ಯಾವಾಟಿಕೆಯ ಆಮಿಷವೊಡ್ಡಿಸುಲಿಗೆ : 11 ಆರೋಪಿಗಳ ಬಂಧನ