ಕಳೆದ ಆರು ತಿಂಗಳಿನಿಂದ ಬಿಬಿಎಂಪಿ ಕೇವಲ 5 ಲಕ್ಷ ಆಸ್ತಿಗಳನ್ನು ಮಾತ್ರ ಡಿಜಿಟಲೀಕರಣ ಮಾಡಿದ್ದು, ಸದ್ಯಕ್ಕೆ ಡಿಜಿಟಲೀಕರಣ ಬೆ ಮುಕ್ತಾಯಗೊಳ್ಳುವಂತೆ ಕಾಣುತ್ತಿಲ್ಲ
ಬೆಂಗಳೂರು : ಕಳೆದ ಆರು ತಿಂಗಳಿನಿಂದ ಬಿಬಿಎಂಪಿ ಕೇವಲ 5 ಲಕ್ಷ ಆಸ್ತಿಗಳನ್ನು ಮಾತ್ರ ಡಿಜಿಟಲೀಕರಣ ಮಾಡಿದ್ದು, ಸದ್ಯಕ್ಕೆ ಡಿಜಿಟಲೀಕರಣ ಬೆ ಮುಕ್ತಾಯಗೊಳ್ಳುವಂತೆ ಕಾಣುತ್ತಿಲ್ಲ. ಆಸ್ತಿ ತೆರಿಗೆ ವಂಚನೆಗೆ ಕಡಿವಾಣ ಹಾಕಲು ಹಾಗೂ ತೆರಿಗೆ ವಸೂಲಾತಿ ಪ್ರಮಾಣವನ್ನು ಹೆಚ್ಚಿಸಲು ಮುಂದಾಗಿರುವ ಬಿಬಿಎಂಪಿಯು ಕಳೆದ ಡಿಸೆಂಬರ್‌ನಲ್ಲಿ ನಗರದ ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸುವ ಪ್ರಕ್ರಿಯೆ ಆರಂಭಿಸಿತ್ತು. ಕೇವಲ ಮೂರು ತಿಂಗಳ ಅವಧಿಯಲ್ಲಿ ಆಸ್ತಿ ದಾಖಲೆಗಳ ಡಿಜಿಟಲೀಕರಣ ಕಾರ್ಯವನ್ನು ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿತ್ತು. ಆದರೆ, ಆರು ತಿಂಗಳಲ್ಲಿ ಶೇ.25 ರಷ್ಟು ಮಾತ್ರ ಆಸ್ತಿಗಳ ಡಿಜಿಟಲೀಕರಣ ಮಾಡಲಾಗಿದ್ದು, ಇನ್ನೂ 3 ರಿಂದ 6 ತಿಂಗಳು ಬೇಕಾಗಲಿದೆ ಎನ್ನಲಾಗಿದೆ.
ನಗರದಲ್ಲಿ ಆಸ್ತಿ ತೆರಿಗೆ ವ್ಯಾಪ್ತಿಗೆ 20 ಲಕ್ಷ ಆಸ್ತಿಗಳಿದ್ದು, ಈವರೆಗೆ ಕೇವಲ 150 ವಾರ್ಡ್ ಗಳ ಆಸ್ತಿ ಡಿಜಿಟಲೀಕರಣ ಆರಂಭಿಸಲಾಗಿದೆ. ಯಾವುದೇ ವಾರ್ಡ್ ಹಾಗೂ ಉಪ ಕಂದಾಯ ವಿಭಾಗದಲ್ಲಿ ಡಿಜಿಟಲೀಕರಣ ಪೂರ್ಣಗೊಂಡಿಲ್ಲ. ಉಳಿದಂತೆ ಹಲವು ವಾರ್ಡ್‌ನಲ್ಲಿ ಇನ್ನೂ ಡಿಜಿಟಲೀಕರಣ ಕಾರ್ಯವೇ ಆರಂಭಗೊಂಡಿಲ್ಲ.
ನಗರದಲ್ಲಿ 5 ಸಾವಿರಕ್ಕೂ ಅಧಿಕ ಆಸ್ತಿಗಳ ಖಾತಾ ರಿಜಿಸ್ಟರ್ ಗಳಿವೆ. ಈ ರಿಜಿಸ್ಟರ್ ಗಳನ್ನು ಸ್ಕ್ಯಾನ್ ಮಾಡುವುದಕ್ಕೆ ಖಾಸಗಿ ಏಜೆನ್ಸಿ ನೇಮಕ ಮಾಡಲಾಗಿದೆ. ಕಂದಾಯ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದು, ಈ ಕಾರ್ಯ ಮಾಡಿಸಬೇಕಿದೆ. ಆದರೆ, ಲೋಕಸಭಾ ಚುನಾವಣೆಗೆ ಕಂದಾಯ ವಿಭಾಗದ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಆಸ್ತಿಗಳ ಡಿಜಿಟಲೀಕರಣ ಕಾರ್ಯಕ್ಕೆ ಹಿನ್ನಡೆಯಾಗಿದೆ ಎಂದು ಕಂದಾಯ ವಿಭಾಗದ ಅಧಿಕಾರಿಗಳು ಹೇಳುತ್ತಿದ್ದಾರೆ.
ಆಸ್ತಿ ಮಾಲೀಕರಿಗೆ ಆಸ್ತಿ ಕಾರ್ಡ್
ಬಿಬಿಎಂಪಿಯು ಮಾಲೀಕರಿಗೆ ಕರಡು ಆಸ್ತಿ ಕಾರ್ಡ್‌ಗಳನ್ನು ನೀಡುತ್ತದೆ. ಯಾವುದೇ ಆಕ್ಷೇಪಣೆಗಳನ್ನು ಸಲ್ಲಿಸಲು ಅಥವಾ ತಿದ್ದುಪಡಿಗಳನ್ನು ಕೋರಲು ಒಂದು ತಿಂಗಳ ಸಮಯವನ್ನು ನೀಡಲಾಗುತ್ತದೆ. ಆಸ್ತಿ ಮಾಲೀಕರು ತಮ್ಮ ಆಕ್ಷೇಪಣೆಗಳನ್ನು ಸಲ್ಲಿಸಲು ಪಾಲಿಕೆಯು ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ, ಅಲ್ಲಿಯೇ ಆಕ್ಷೇಪಣೆ ಸಲ್ಲಿಕೆ ಮಾಡಬಹುದು. ಅದಕ್ಕಾಗಿ ಬಿಬಿಎಂಪಿಯ ಸಹಾಯಕ ಕಂದಾಯ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವಿಲ್ಲ.
ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರ ಮತ್ತು ಉಪ ನೋಂದಣಾಧಿಕರಿ ಕಚೇರಿಗಳಲ್ಲಿ ಲಭ್ಯವಿರುವ ಮಾರಾಟ ಪತ್ರಗಳಲ್ಲಿ ಲಭ್ಯವಿರುವ ಹೆಸರು ಮತ್ತು ಇತರ ಮಾಹಿತಿಯೊಂದಿಗೆ ಹೊಂದಾಣಿಕೆ ಮಾಡಿದ ನಂತರ ಪಾಲಿಕೆಯು ಆಸ್ತಿ ಕಾರ್ಡ್ ಅನ್ನು ನೀಡುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.