ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ವೀಟ್ - 14

Published : Jun 19, 2026, 01:27 PM IST
rachita ram

ಸಾರಾಂಶ

ರಚಿತಾ ರಾಮ್‌ ಚಿತ್ರರಂಗಕ್ಕೆ ಬಂದು 14 ವರ್ಷ. ರಕ್ಷಿತಾ, ರಮ್ಯ, ರಾಧಿಕಾರಂತೆ ಇವರೂ ‘ರ’ಕಾರಿಣಿ. ರಕ್ಷಿತಾ, ರಮ್ಯ ಮತ್ತು ರಾಧಿಕಾ ಒಂದು ದಶಕ ಸಕ್ರಿಯವಾಗಿದ್ದರು. ಇವರಿಗೆ ಈಗ ಸಿಗುತ್ತಿರುವ ಪಾತ್ರಗಳನ್ನು ನೋಡಿದರೆ ಎರಡು ದಶಕ ಕ್ರಮಿಸಿ, ಬೆಳ್ಳಿಹಬ್ಬ ಆಚರಿಸುವಂತೆ ಕಾಣುತ್ತಿದೆ

ರಚಿತಾ ರಾಮ್ ಸ್ಪೀಕಿಂಗ್

ಹದಿನಾಲ್ಕು ವರ್ಷ, ಹತ್ತಾರು ಹರ್ಷ, ನೂರೊಂದು ನೆನಪು 

ಜೋಗಿ

ರಚಿತಾ ರಾಮ್‌ ಚಿತ್ರರಂಗಕ್ಕೆ ಬಂದು 14 ವರ್ಷ. ರಕ್ಷಿತಾ, ರಮ್ಯ, ರಾಧಿಕಾರಂತೆ ಇವರೂ ‘ರ’ಕಾರಿಣಿ. ರಕ್ಷಿತಾ, ರಮ್ಯ ಮತ್ತು ರಾಧಿಕಾ ಒಂದು ದಶಕ ಸಕ್ರಿಯವಾಗಿದ್ದರು. ಇವರಿಗೆ ಈಗ ಸಿಗುತ್ತಿರುವ ಪಾತ್ರಗಳನ್ನು ನೋಡಿದರೆ ಎರಡು ದಶಕ ಕ್ರಮಿಸಿ, ಬೆಳ್ಳಿಹಬ್ಬ ಆಚರಿಸುವಂತೆ ಕಾಣುತ್ತಿದೆ. ಹತ್ತು ಪ್ಲಸ್ ನಾಲ್ಕು ವರ್ಷ ಪೂರೈಸಿದ ಪ್ರಯುಕ್ತ ಇವರನ್ನು ಸಂದರ್ಶಿಸಲು ಯತ್ನಿಸಿದಾಗ ಮಾತಿಗೂ ಸಿಕ್ಕರು. ಅವರು ಅಭಿಮಾನಿಗಳಿಂದ ಡಿಂಪಲ್ ಕ್ವೀನ್ ಅಂತ ಕರೆಸಿಕೊಂಡ ರಚಿತಾ ರಾಮ್, ಹೀರೋಯಿನ್‌ಗಳ ಪೈಕಿ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದವರು. ಇವತ್ತೂ ಭಾನುವಾರ ಅವರ ಮನೆಯ ಮುಂದೆ ಒಂದೆರಡು ನೂರು ಮಂದಿ ಅವರ ದರ್ಶನಕ್ಕಾಗಿ ಕಾಯುತ್ತಿರುತ್ತಾರೆ. ಕೂಲಿ ಚಿತ್ರದಲ್ಲಿ ಅಚ್ಚರಿಯ ಅಭಿನಯ ನೀಡಿ, ಲ್ಯಾಂಡ್ ಲಾರ್ಡ್ ಚಿತ್ರದ ಮೂಲಕ ಗಮನ ಸೆಳೆದು, ಈಗ ಚಿರಂಜೀವಿಗೆ ನಾಯಕಿಯಾಗಿರುವ ರಚಿತಾ ಜತೆಗೆ ನಾಲ್ಕು ಮಾತು.

1. ಈ ಹದಿನಾಲ್ಕು ವರ್ಷಗಳನ್ನು ಮೂರು ಭಾಗ ಮಾಡಿದರೆ, ಪ್ರತಿಯೊಂದು ಭಾಗದ ವಿಶೇಷ ಏನು?

ಪ್ರತಿಯೊಂದು ಹಂತದಲ್ಲೂ ತುಂಬ ಏರಿಳಿತ ಕಂಡಿದ್ದೀನಿ, ಸೋಲು ಗೆಲುವು ಜತೆಜತೆಯಾಗಿಯೇ ಬಂದಿದೆ. ಆದರೆ ಅದ್ಯಾವುದೂ ನನ್ನನ್ನು ತುಂಬ ಕಾಡಿಲ್ಲ. ಈಗಲೂ ಹೊಸ ಸಿನಿಮಾ ಒಪ್ಪಿಕೊಂಡಾಗ ಸಣ್ಣ ಅಧೀರತೆ ಕಾಡುತ್ತದೆ. ಇದೇ ಮೊದಲ ಸಿನಿಮಾ ಎಂಬಂತೆ ಅಂಜುತ್ತಾ ಸೆಟ್ಟಿಗೆ ಹೋಗುತ್ತೇನೆ. ಫಸ್ಟ್ ಶಾಟ್ ಒಪ್ಪಿತವಾಗುತ್ತಿದ್ದಂತೆ ಆತ್ಮವಿಶ್ವಾಸ ಮರಳುತ್ತದೆ. ಮೊದಲ ಚಿತ್ರ ಮಾಡುವಾಗ ಇದ್ದ ಮುಗ್ಧತೆ ಈಗಲೂ ನನ್ನಲ್ಲಿ ಉಳಿದಿದೆ ಅಂತ ನನಗೆ ಅನ್ನಿಸುತ್ತೆ. ಅಭಿನಯದ ವಿಚಾರಕ್ಕೆ ಬಂದರೆ ಬೆಳೆದಿದ್ದೀನಿ, ಬೆಳೆಯಲೇ ಬೇಕಲ್ಲ, ಮಿಕ್ಕಂತೆ ಆಗ ಹೇಗಿದ್ದೆನೋ ಹಾಗೆಯೇ ಇದ್ದೇನೆ.

2. ಹೆಣ್ಮಕ್ಕಳಿಗೆ ಒಳ್ಳೆಯ ಪಾತ್ರ ಸಿಗುವ ಕಾಲ ಇದಲ್ಲ. ನಿಮಗೆ ಇತ್ತೀಚೆಗೆ ಒಳ್ಳೆಯ ಪಾತ್ರಗಳು ಸಿಕ್ಕವು. ಆದರೆ ಅವೆಲ್ಲ ತಡವಾಗಿ ಬಂದವು ಅನ್ನಿಸುತ್ತಿಲ್ಲವೇ?

ನಾನು ಜೀವನವನ್ನು ಬಹಳ ಸಹಜವಾಗಿ ಸ್ವೀಕಾರ ಮಾಡ್ತೀನಿ. ಏನು ಬರುತ್ತದೋ ಅದನ್ನು ಹಾಗೇ ತಗೊಳ್ತೀನಿ, ಒಳ್ಳೆಯದನ್ನು ತೆಗೆದುಕೊಳ್ಳೋಣ. ಕೆಟ್ಟದ್ದನ್ನು ಬಿಡೋಣ ಅನ್ನೋದು ನನ್ನ ಪಾಲಿಸಿ. ತಡವಾಗಿ ಬಂತೇ ಅಂತ ಕೇಳಿಕೊಳ್ಳುವಾಗ, ಬೇಗನೇ ಬಂದಿದ್ದರೆ ಬೇಗನೇ ಮನೆಗೆ ಬಂದುಬಿಡುತ್ತಿದ್ದೆನೇನೋ ಅಂತಲೂ ಅನ್ನಿಸುತ್ತದೆ. ನಾನು ಕನ್ನಡದ ಹುಡುಗಿ, ಬೆಂಗಳೂರು ಹುಡುಗಿ, ಹತ್ತು ವರ್ಷ ಇಲ್ಲಿಯೇ ಕಂಪ್ಲೀಟ್ ಮಾಡಬೇಕು ಅನ್ನಿಸಿತ್ತು. ನಮ್ಮ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸಬೇಕು ಅಂತ ಪಣ ತೊಟ್ಟಿದ್ದೆ. ಬೇರೆ ಭಾಷೆಗಳಲ್ಲಿ ಅವಕಾಶ ಬಂದಿಲ್ಲ ಅಂತೇನಲ್ಲ. ಆದರೆ ಹತ್ತು ವರ್ಷ ಪಟ್ಟು ಹಿಡಿದು ಇಲ್ಲೇ ಇರಲು ನಿರ್ಧರಿಸಿದ್ದೆ. ಮಧ್ಯೆ ಒಂದು ಬ್ರೇಕ್ ಸಿಕ್ಕಾಗ, ಮನೆಯಲ್ಲೇ ಕೂತಿದ್ದಾಗ ಒಂದು ತೆಲುಗು ಸಿನಿಮಾದಲ್ಲಿ ನಟಿಸಿದೆ.

3. ಡಿಂಪಲ್ ಕ್ವೀನ್ ಅಂತ ಅಭಿಮಾನಿಗಳು ಕರೆದರು. ನಂತರ ಪ್ರಬುದ್ಧವಾದ ಪಾತ್ರಗಳನ್ನು ಮಾಡ್ತಿದ್ದೀರಿ, ಈಗ ಏನಂತ ಕರೆಸಿಕೊಳ್ಳೋ ಆಸೆಯಿದೆ?

ಅತ್ಯುತ್ತಮ ನಟಿ ಅನ್ನಿಸಿಕೊಳ್ಳುವ ಆಸೆ. ಆ ಕಾಲಕ್ಕೆ ಜನ ಪ್ರೀತಿಯಿಂದ ಡಿಂಪಲ್ ಕ್ವೀನ್ ಅಂದರು. ಪ್ರೀತಿಯಿಂದ ಸ್ವೀಕರಿಸಿದೆ. ಪ್ರೇಕ್ಷಕರು ಹೇಗೆ ಕರೆದರೂ ಮೆಚ್ಚಿಕೊಂಡರೂ ನನಗೆ ಇಷ್ಟ. ನೆಗೆಟಿವ್ ಕಾಮೆಂಟುಗಳನ್ನು ಒಪ್ಪಿಕೊಳ್ಳೋ ಈ ಕಾಲದಲ್ಲಿ ಹೊಗಳಿಕೆ ಒಪ್ಪಿಕೊಳ್ಳಲಿಕ್ಕೆ ಯಾಕೆ ಹಿಂಜರಿಯಬೇಕು. ನಾನಿಲ್ಲಿಗೆ ಬಂದಿದ್ದು ಕೆಲಸ ಮಾಡೋದಕ್ಕೆ ಅಷ್ಟೇ. ಅದನ್ನು ಮೆಚ್ಚಿಕೊಂಡು ಅವರು ಕ್ವೀನ್ ಅಂತ ಕರೆದರೆ ಸಂತೋಷ ಆಗುತ್ತೆ. ತಡವಾಗಿ ಬಂದಾಗಲೇ ಎಲ್ಲಕ್ಕೂ ಬೆಲೆ, ಹೆಚ್ಚು ಮಜಾ ಸಿಗುತ್ತೆ. ಕನ್ನಡದಲ್ಲಿ ಒಂದರ ಹಿಂದೊಂದರಂತೆ ದೊಡ್ಡ ಸಿನಿಮಾ ಮಾಡಿದ್ದೀನಿ. ರಕ್ಷಿತಾ ಮತ್ತು ರಮ್ಯಾರ ನಂತರ ಎಲ್ಲರ ಜತೆಗೂ ವರ್ಕ್ ಮಾಡಿದವಳು ನಾನು.

4. ಲ್ಯಾಂಡ್ ಲಾರ್ಡ್ ಮತ್ತು ಕೂಲಿ ಚಿತ್ರಗಳಲ್ಲಿ ಮೇಕಪ್ ಇಲ್ಲದೇ ನಟಿಸಿದ್ದು ಹೇಗಿತ್ತು?

ತುಂಬಾ ಚಾಲೆಂಜಿಂಗ್. ಕೂಲಿ ಚಿತ್ರದಲ್ಲಿ ಸನ್‌ಸ್ಕ್ರೀನ್, ಮಾಯಿಶ್ಚರೈಸರ್ ಅಷ್ಟೇ. ಕಾಡಿಗೆ ಹಾಕೋದಕ್ಕೂ ಬಿಡುತ್ತಿರಲಿಲ್ಲ. ಲ್ಯಾಂಡ್ ಲಾರ್ಡ್ ಚಿತ್ರದಲ್ಲಿ ಟ್ಯಾನ್ ಮೇಕಪ್ ಅಂದರೆ ಬಿಸಿಲಿಗೆ ಸುಟ್ಟಂತೆ ಕಾಣುವ ಹಾಗೆ ಮೇಕಪ್ ಮಾಡಿದ್ದಾರೆ. ಗ್ರೇಡಿಂಗ್‌ನಲ್ಲೂ ಬಹಳ ಡಲ್ ಮಾಡಿದ್ದಾರೆ. ಕೂಲಿಯಲ್ಲಿ ನಾನು ಹೇಗಿದ್ದೇನೋ ಹಾಗೇ ತೋರಿಸಿದ್ದಾರೆ. ಎಷ್ಟೇ ಆದರೂ ಮೇಕಪ್ ಇಲ್ಲದೇ ನಟಿಸೋದು ನಿಜಕ್ಕೂ ಸವಾಲು.

5. ಕಮರ್ಷಿಯಲ್ ಸಿನಿಮಾಗಳಲ್ಲೇ ನಟಿಸೋದು ನಿಮ್ಮ ಆಯ್ಕೆಯಾಗಿತ್ತಾ?

ನೆವರ್. ನನಗೆ ಒಂದೇ ಥರದ ಪಾತ್ರಗಳಲ್ಲಿ ನಟಿಸಿ ಬೇಜಾರಾಗಿತ್ತು. ಯಾಕೆ ಹೊಸ ಥರದ ಪಾತ್ರ ಸಿಗುತ್ತಿಲ್ಲ ಅಂತ ಯೋಚಿಸುತ್ತಿದ್ದೆ. ಒಮ್ಮೊಮ್ಮೆ ಅನ್ನಿಸುತ್ತೆ, ಇಲ್ಲಿ ಒಂಥರ ಈಗೋ ಇದೆ. ಅವರನ್ನೇನು ಕರೆಯೋದು, ಅವರನ್ನು ಯಾಕೆ ಕರೀಬೇಕು ಅಂತೆಲ್ಲ ಅಂದುಕೊಳ್ಳುತ್ತಾರೆ. ಒಂದು ವರ್ಕ್‌ಶಾಪ್ ಮಾಡಿದರೆ ತಾನೇ ನಾವೇನು ಅಂತ ನಿರ್ದೇಶಕರಿಗೆ ಗೊತ್ತಾಗೋದು, ವೆಟ್ರಿಮಾರನ್ ಸಿನಿಮಾ ಮಾಡೋ ಮೊದಲು ವರ್ಕ್‌ಶಾಪ್ ಮಾಡ್ತಾರೆ. ಇಲ್ಲಿ ಅಂಥ ಅಭ್ಯಾಸವೇ ಇಲ್ಲ. ಸುಮ್ಮನೆ ಅವರು ಒಪ್ಪೋದಿಲ್ಲ, ಸೂಟ್ ಆಗೋದಿಲ್ಲ ಅಂದು ಬಿಡುತ್ತಾರೆ. ಕನ್ನಡ ಸಿನಿಮಾಗಳಲ್ಲಿ ವೃತ್ತಿಪರತೆಯೇ ಇಲ್ಲ ಅಂತ ಕೆಲವೊಂದು ಸಲ ಅನ್ನಿಸುತ್ತೆ.

6. ಪ್ಯಾನ್‌ ಇಂಡಿಯಾ ಬಂದ ನಂತರ ನಟಿಯರಿಗೆ, ಪೋಷಕ ನಟರಿಗೆ ಅವಕಾಶ ವಂಚನೆಯಾಗಿದೆ ಅಲ್ಲವೇ?

ನನಗೆ ಈ ಪರಿಕಲ್ಪನೆಯೇ ಅರ್ಥ ಆಗೋಲ್ಲ. ಪಾನ್ ಇಂಡಿಯಾ ಆಗಬೇಕಿದ್ದರೆ ಬೇರೆ ಭಾಷೆಯವರನ್ನೇ ಹಾಕಿಕೊಳ್ಳಬೇಕಾ? ಕನ್ನಡದವರನ್ನೇ ಹಾಕಿಕೊಂಡು ಪ್ಯಾನ್‌ ಇಂಡಿಯಾ ಚಿತ್ರ ಮಾಡೋದಕ್ಕಾಗಲ್ವಾ? ಕಾಂತಾರದ ಥರ ಕನ್ನಡದ ಸಿನಿಮಾ ಮಾಡಿ ಪ್ಯಾನ್ ಇಂಡಿಯಾ ಆಗಬಹುದಲ್ಲ. ಕೂಲಿಯಲ್ಲಿ ನಾನು, ಉಪೇಂದ್ರ ಹಾಗೂ ಎಲ್ಲಾ ಭಾಷೆಯವರೂ ಇದ್ದಾರೆ. ಟಾಕ್ಸಿಕ್ ಸಿನಿಮಾದಲ್ಲೂ ಎಲ್ಲಾ ದಕ್ಷಿಣ ಭಾರತೀಯ ಭಾಷೆಯವರಿಗೂ ಅವಕಾಶ ಕೊಟ್ಟಿದ್ದಾರೆ. ಲೋಕಲ್ ಆಗಿದ್ದೇ ಗ್ಲೋಬಲ್ ಆಗಬೇಕು,

7. ನೀವು ಸೆಟ್‌ನಲ್ಲಿ ಹೇಗಿರುತ್ತೀರಿ?

ನಾನು ಸಿಂಪಲ್ ಹುಡುಗಿ. ಕ್ಯಾರವಾನ್‌ನಿಂದ ಹೆಚ್ಚಿನ ಸಮಯ ಹೊರಗೇ ಇರ್ತೀನಿ. ಟೀಮ್ ಚೆನ್ನಾಗಿದ್ದಾಗ ಅವರ ಜತೆ ಮಾತಾಡ್ತಿರೋಣ ಅನ್ನಿಸುತ್ತೆ. ಆರು ಗಂಟೆಗೆ ನಿಗದಿಯಾಗಿರುವ ಶೂಟಿಂಗ್ ಒಂಬತ್ತರ ತನಕ ಮುಂದೆ ಹೋದರೂ ಸಂತೋಷವಾಗಿ ಮಾಡ್ತೀನಿ. ಟೀಮ್ ಹೇಗಿರುತ್ತೆ ಅನ್ನೋದು ಮುಖ್ಯ. ನೀವು ಜಂಭದಿಂದ ಇದ್ದರೆ ನಾನೂ ಹಾಗೇ ಇರ್ತೀನಿ. ಇಲ್ಲದೇ ಹೋದರೆ ನನಗೆ ಎಲ್ಲರ ಜತೆ ಒಡನಾಟ ಇಷ್ಟ.

8. ವಿಮರ್ಶೆ ಬಂದಾಗ ಹೇಗೆ ತಗೋತೀರಿ?

ನೆಗೆಟಿವ್ ಬಂದಾಗಲೂ ತಿದ್ದಿಕೊಳ್ಳೋದು ಇದ್ದಾಗ ತಿದ್ದಿಕೊಳ್ತೀನಿ. ಕೆಟ್ಟದ್ದು ಮಾಡಿದಾಗ ಒಮ್ಮೆ ಯೋಚಿಸ್ತೀನಿ. ಹೌದಲ್ವಾ, ಇದನ್ನು ತಿದ್ದಿಕೊಂಡರೆ ನನಗೇ ಒಳ್ಳೇದಾಗುತ್ತಲ್ಲ ಅನ್ನಿಸಿದಾಗ ತಗೋತೀನಿ. ಆದರೆ ಸಾಮಾನ್ಯವಾಗಿ ಹೊಗಳಿಕೆ ತೆಗಳಿಕೆ ಯಾವುದನ್ನೂ ತುಂಬ ಹಚ್ಚಿಕೊಳ್ಳೋದಿಲ್ಲ.

9. ಸೋಷಲ್ ಮೀಡಿಯಾದ ಕಾಮೆಂಟಿನಿಂದ ಮೂಡ್ ಆಫ್ ಆಗೋದಿಲ್ವಾ?

- ಪ್ರತಿ ತಿಂಗಳೂ ಇಎಂಐ ಕಟ್ಟಬೇಕಾಗಿ ಬಂದಾಗ, ಬ್ಯಾಂಕಿನಿಂದ ದುಡ್ಡು ಹೋದಾಗ ಮೂಡ್ ಆಫ್ ಆಗುತ್ತೆ. ಮಿಕ್ಕಂತೆ ಸಂತೋಷವಾಗಿಯೇ ಇರ್ತೀನಿ.

10. ಸಿಟ್ಟು ಎಷ್ಟಿದೆ?

-ನನಗೆ ಬಹಳ ಬೇಗ ಸಿಟ್ಟು ಬರುತ್ತೆ. ಸಿಕ್ಕಾಪಟ್ಟೆ ಸಿಟ್ಟು ಬರುತ್ತೆ. ಸುಳ್ಳು ಹೇಳಿದರೆ, ನಾಟಕ ಮಾಡಿದರೆ ಬಹಳ ಕೋಪ ಬರುತ್ತೆ. ಹೊರಗೆ ಸಿಟ್ಟು ಬಂದಾಗ ಕಿರುಚೋದಿಲ್ಲ, ಸುಮ್ಮನೆ ಎದ್ದು ಬರ್ತೀನಿ. ಅಪ್ಪ ಹೇಳುತ್ತಿರುತ್ತಾರೆ, ದುಷ್ಟರನ್ನು ಕಂಡರೆ ದೂರ ಇರು ಅಂತ. ಎದ್ದು ಬಂದುಬಿಡ್ತೀನಿ. ಒಂದು ಅರ್ಧ ಗಂಟೇಲಿ ಇಳಿದೂ ಹೋಗುತ್ತೆ.

11. ರಾಷ್ಟ್ರಪ್ರಶಸ್ತಿಯ ಮೇಲೆ ಕಣ್ಣಿಟ್ಟಿದ್ದೀರಾ?

- ಇಲ್ಲಿಯ ತನಕ ಅಂಥ ಅವಕಾಶ, ಸನ್ನಿವೇಶ ಬಂದಿಲ್ಲ. ಮುಂದೆ ಬರಬಹುದು, ಭಗವಂತ ನನಗೆ ಮೋಸ ಮಾಡೋದಿಲ್ಲ, ಅಂಥ ಒಂದು ಪಾತ್ರ ಬರಬಹುದು. ನಟಿಸೋದಕ್ಕೆ ಅವಕಾಶ ಕೊಟ್ಟ ದೇವರು ಪ್ರಶಸ್ತಿ ಕೊಡದೇ ಇರುತ್ತಾನಾ? ಟೈಮ್ ಬರಲಿ ಅಂತ ಕಾಯುತ್ತೇನೆ. ನನಗೆ ತುಂಬ ಅಭಿಮಾನಿಗಳಿದ್ದಾರೆ. ನಾನು ಯಾವ ಊರಿಗೆ ಹೋದರೂ ಸಂಭ್ರಮಿಸುತ್ತಾರೆ. ಅದೇ ನನ್ನ ಸಂತೋಷ.

ಅಭಿಮಾನಿಗಳಿಗೆ ಸಂಡೇ ಸಡಗರ

ಪ್ರತಿ ಭಾನುವಾರ ಮನೆ ಮುಂದೆ 100-150 ಮಂದಿ ಮನೆ ಮುಂದೆ ಕಾಯುತ್ತಾರೆ. ನಾನು ಅವರನ್ನು ಭೇಟಿ ಮಾಡುತ್ತೀನಿ. ದರ್ಶನ್ ಹೇಳಿಕೊಟ್ಟ ಪಾಠ ಇದು. ಅಭಿಮಾನಿಗಳು ಪ್ರೀತಿಯಿಂದ ಬಂದಾಗ ಭೇಟಿ ಮಾಡಿ, ಒಂದು ಫೋಟೋ ತಗೊಂಡು ಹೋಗ್ತಾರೆ ಅಷ್ಟೇ. ಅವರಿಗೆ ನಿರಾಸೆ ಮಾಡಬಾರದು ಅಂತ ದರ್ಶನ್ ಹೇಳಿದ್ದರು. ನಾನು ಅದನ್ನು ಈಗಲೂ ಪಾಲಿಸುತ್ತಾ ಬಂದಿದ್ದೀನಿ.

ನನ್ನನ್ನು ಕಾರಿಗೇ ಹತ್ತಿಸುತ್ತಿರಲಿಲ್ಲ

ನನಗೆ ಕಾರೆಂದರೆ ಆಕರ್ಷಣೆ. ನಾನು ಬಾಲ್ಯದಲ್ಲಿದ್ದಾಗ ಒಂದು ಘಟನೆ ನಡೆದಿತ್ತು. ನಮ್ಮ ಸಂಬಂಧಿಕರು ನನಗೆ ಕಾರು ಹತ್ತಿಸುತ್ತಿರಲಿಲ್ಲ. ನಮ್ಮ ಹತ್ತಿರವೂ ಕಾರು ಇರಲಿಲ್ಲ. ಕಾರಿಗೆ ಹತ್ತಿಸಿಕೊಂಡರೆ ನಾನು ವಾಂತಿ ಮಾಡ್ಕೋತೀನಿ ಅಂತ ಕಾರಿಗೆ ಹತ್ತೋದಕ್ಕೇ ಬಿಡ್ತಿರಲಿಲ್ಲ. ಹೀಗಾಗಿ ನಾನು ತಗೊಳ್ಳಲೇಬೇಕು ಅಂತ ಹಠ ಬಂತು. ಅಪ್ಪನಿಗೆ ಒತ್ತಾಯ ಮಾಡಿದೆ. ಆಗ ಕಪ್ಪು ಸ್ಯಾಂಟ್ರೋ ಕಾರು ಬಂತು. ಆದರೂ ನನಗೆ ತೃಪ್ತಿ ಆಗಿರಲಿಲ್ಲ. ಆಮೇಲೆ ನಾನೇ ಕಾರು ತಗೊಂಡೆ. ನನಗೆ ಇವತ್ತು ಪ್ರತಿ ಕಾರಲ್ಲೂ ಕೂತರೂ ಹೆಮ್ಮೆ ಅನ್ನಿಸುತ್ತೆ. ಇದು ನನ್ನ ಕಾರು. ನಾನು ತಗೊಂಡಿರೋದು ಅನಿಸುತ್ತೆ. ತುಂಬ ಖುಷಿಯಾಗುತ್ತೆ.

ಮದುವೆ ಆಗಲು ಸಕಾರಣಗಳಿಲ್ಲ!

ಕಳೆದ ವರ್ಷದ ನಂತರ ಬಹಳ ಆಸೆಯಿತ್ತು. ಅಮ್ಮ ಅಪ್ಪಂಗೆ ಮುಂದಿನ ವರ್ಷ ಮದುವೆ ಮಾಡಬೇಕು ಅಂತ ಹೇಳಿ ಕುಣೀತಿದ್ದೆ. ಆದರೆ ಬರ್ತಾ ಬರ್ತಾ ಇಮೋಷನ್‌ಗೆ ಮತ್ತು ರಿಲೇಷನ್‌ಶಿಪ್‌ಗೆ ಯಾರೂ ಮರ್ಯಾದೆ ಕೊಡ್ತಾ ಇಲ್ಲ ಅಂತ ಅನ್ನಿಸೋದಕ್ಕೆ ಶುರುವಾಯ್ತು. ಅದಕ್ಕೆ ಬೆಲೆಯೇ ಇಲ್ಲದಂತಾಗಿದೆ. ಇವತ್ತಿನ ಖುಷಿ, ಇವತ್ತಿಗೆ ಮಾತ್ರ. ಕ್ಷಣ ಕ್ಷಣದ ಬದುಕು ಮುಖ್ಯ ಅಂತ ಎಲ್ಲರಿಗೂ ಅನ್ನಿಸ್ತಿದೆ. ಇವತ್ತು ಚೆನ್ನಾಗಿ ಕುಡಿಯೋಣ, ನಾಳೆಯದು ನಾಳೆಗೆ ಅಂತಾಗಿದೆ. ನಮ್ಮ ಅಪ್ಪ ಅಮ್ಮನ ಸಂಬಂಧದಂತೆ ಏನೇ ಆದರೂ ಜತೆಗಿರಬೇಕು ಅನ್ನೋ ಭಾವನೆ ಕಾಣಿಸ್ತಿಲ್ಲ. ಮಾತು ಮಾತಿಗೆ ಡೈವೋರ್ಸ್ ಅಂತಾಗಿದೆ. ಅಂಥದ್ದಕ್ಕೆ ಯಾಕೆ ಟೈಮ್ ವೇಸ್ಟ್ ಮಾಡಬೇಕು. ಇಬ್ಬರ ಮಧ್ಯೆ ಏನು ನಡೆಯುತ್ತೆ ಅಂತ ಬೇರೆ ಯಾರಿಗೂ ಗೊತ್ತಾಗಲ್ಲ. ಹೇಳೋದಕ್ಕೂ ಆಗಲ್ಲ. ಎಲ್ಲರೂ ತಾಳ್ಮೆ ಕಳ್ಕೊಂಡಿದ್ದಾರೆ. ಸಿನಿಮಾ ನೋಡೋದಕ್ಕೆ ಬಂದಾಗಲೂ ಮೊಬೈಲ್ ನೋಡ್ತಾ ಕೂತ್ಕೋತಾರೆ. ತಾಳ್ಮೆ ಇಲ್ಲದೇ ಹೋದಾಗ ಸಂಬಂಧವನ್ನು ನಿಭಾಯಿಸೋದು ಕಷ್ಟ. ಇದರ ಮಧ್ಯೆ ಈಗೋ, ಸಂಪಾದನೆ, ಅಹಂಕಾರ ಎಲ್ಲ ಬರುತ್ತೆ. ಇದರ ಬಗ್ಗೆ ಇಡೀ ದಿನ ಮಾತಾಡಬಹುದು. ಸದ್ಯಕ್ಕೆ ನಾನು ದೇವರು ಕೊಟ್ಟ ಕೆಲಸವನ್ನು ಮಾಡ್ತಾ ಹೋಗ್ತೀನಿ. ಎಲ್ಲವನ್ನೂ ಅವನಿಗೇ ಬಿಟ್ಟಿದ್ದೀನಿ. ಅಪ್ಪ ಅಮ್ಮನ ಜತೆ ಸಂತೋಷವಾಗಿದ್ದೀನಿ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

13 ಮಂದಿ ಐಎಎಸ್‌ ಅಧಿಕಾರಿಗಳ ವರ್ಗ, ಕೆಲವರಿಗೆ ಹೆಚ್ಚುವರಿ ಹೊಣೆ
ಕೇಸ್‌ನಿಂದ ದರ್ಶನ್‌ ಪರ ವಕೀಲ ನಿವೃತ್ತಿ, ವಿಚಾರಣೆ ಮುಂದೂಡಿಕೆ