ಪತ್ರಕರ್ತರಿಗೆ ನಿವೇಶನ ಹಂಚಿಕೆಗೆ ಚಿಂತನೆ - ಶೀಘ್ರ ನಿರ್ಧಾರ - ಆರೋಗ್ಯ ವಿಮೆ ಬಗ್ಗೆ ಸಿಎಂ ಜತೆ ಚರ್ಚೆ : ಡಿಕೆಶಿ

Published : Feb 04, 2025, 04:28 AM IST
Awrd

ಸಾರಾಂಶ

ರಾಜ್ಯದ ಸ್ಥಳೀಯ ಪ್ರಾಧಿಕಾರಗಳಿಂದ ನಿವೇಶನ ಹಂಚಿಕೆ ವೇಳೆಗೆ ಆದ್ಯತೆ ಮೇರೆಗೆ ಪತ್ರಕರ್ತರಿಗೆ ನಿವೇಶನ ನೀಡುವ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಘೋಷಿಸಿದರು.

ಬೆಂಗಳೂರು : ರಾಜ್ಯದ ಸ್ಥಳೀಯ ಪ್ರಾಧಿಕಾರಗಳಿಂದ ನಿವೇಶನ ಹಂಚಿಕೆ ವೇಳೆಗೆ ಆದ್ಯತೆ ಮೇರೆಗೆ ಪತ್ರಕರ್ತರಿಗೆ ನಿವೇಶನ ನೀಡುವ ಕುರಿತು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಘೋಷಿಸಿದರು.

ಕರ್ನಾಟಕ ಮಾಧ್ಯಮ ಅಕಾಡೆಮಿಯಿಂದ ಜೆ.ಎನ್‌. ಟಾಟಾ ಸಭಾಂಗಣದಲ್ಲಿ ಸೋಮವಾರ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅಕಾಡೆಮಿಯ 2023 ಮತ್ತು 2024ನೇ ಸಾಲಿನ ಪ್ರಶಸ್ತಿಯನ್ನು ಪುರಸ್ಕೃತರಿಗೆ ಪ್ರದಾನ ಮಾಡಿ ಮಾತನಾಡಿದರು.

ಪತ್ರಕರ್ತರಿಗೆ ಆರೋಗ್ಯ ಭದ್ರತೆ ನೀಡುವ ಉದ್ದೇಶದಿಂದಾಗಿ ಆರೋಗ್ಯ ವಿಮೆ ನೀಡುವ ಕುರಿತು ಚರ್ಚೆಗಳನ್ನು ನಡೆಸಲಾಗಿದೆ. ಈ ಕುರಿತು ಮುಖ್ಯಮಂತ್ರಿಗಳು ಶೀಘ್ರದಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ. ಈಗಾಗಲೇ ಗ್ರಾಮೀಣ ಪತ್ರಕರ್ತರಿಗೆ ಬಸ್‌ ಪಾಸ್‌ ನೀಡುವ ವಿಚಾರ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ವಿತರಣಾ ಕಾರ್ಯ ಆರಂಭವಾಗಲಿದೆ. ಅದರ ಜತೆಗೆ ಗ್ರಾಮೀಣ ಮತ್ತು ನಗರ ಭಾಗದ ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ಹಂಚಿಕೆ ಬಗ್ಗೆ ಆಲೋಚಿಸಲಾಗುತ್ತಿದೆ. ಸ್ಥಳೀಯ ಪ್ರಾಧಿಕಾರಿಗಳು ನಿವೇಶನ ಹಂಚಿಕೆ ವೇಳೆ ಪತ್ರಕರ್ತರಿಗೆ ಆದ್ಯತೆ ಮೇರೆಗೆ ನಿವೇಶನ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಮುಂದಿನ ದಿನಗಳಲ್ಲಿ ಆ ಬಗ್ಗೆ ನಿರ್ಧರಿಸಲಾಗುವುದು ಎಂದರು.

ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಪತ್ರಕರ್ತರಿಗೆ ಸಾಕಷ್ಟು ಸ್ವಾತಂತ್ರ್ಯವಿದೆ. ಪ್ರತಿದಿನ ಮಾಧ್ಯಮದವರು ನಮ್ಮನ್ನು ಟೀಕಿಸಿ ಹಳ್ಳಕ್ಕೆ ಹಾಕುತ್ತಾರೆ. ಅವರು ಸಂತೋಷದಿಂದಿದ್ದರೆ ನಮ್ಮನ್ನು ಮೇಲ್ಕೆಕ್ಕೇರಿಸುತ್ತಾರೆ. ಮಾಧ್ಯಮದವರನ್ನು ಬಿಟ್ಟು ನಾವು ಇರಲಾಗದು ಎಂದರು.

ಊಹಾ ಪತ್ರಿಕೋದ್ಯಮದ ಸವಾಲುಎದುರಿಸಬೇಕು: ಕೆ.ವಿ. ಪ್ರಭಾಕರ್‌

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್‌ ಮಾತನಾಡಿ, ಪತ್ರಕರ್ತರು ತಮಗಾಗಿ ಏನನ್ನೂ ಕೇಳುವುದಿಲ್ಲ. ಅದನ್ನರಿತು ಸರ್ಕಾರ ಗ್ರಾಮೀಣ ಪತ್ರಕರ್ತರಿಗೆ ಬಸ್‌ ಪಾಸ್‌ ನೀಡುವ ವ್ಯವಸ್ಥೆ ಮಾಡಿದೆ. ಜತೆಗೆ ಪತ್ರಕರ್ತರ ಆರೋಗ್ಯ ಕಾಪಾಡಲು ಆರೋಗ್ಯ ವಿಮಾ ಯೋಜನೆ ಜಾರಿಗೊಳಿಸುತ್ತಿದೆ ಎಂದರು.

ಸದ್ಯದ ಪರಿಸ್ಥಿತಿಯಲ್ಲಿ ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನದ ಬಳಕೆ ಸಮರ್ಥವಾಗಿ ಆಗಬೇಕು. ಹೊಸ ಪೀಳಿಗೆಯ ಪತ್ರಕರ್ತರಿಗೆ ಅದನ್ನು ತಿಳಿಸಬೇಕು. ಅದರ ಜತೆಗೆ ಸಮಾಜದಲ್ಲಿ ಹೆಚ್ಚುತ್ತಿರುವ ಊಹಾ ಪತ್ರಿಕೋದ್ಯಮದ ಸವಾಲನ್ನು ಸಮರ್ಥವಾಗಿ ಎದುರಿಸಬೇಕಿದೆ. ಸತ್ಯ ವಿಚಾರಗಳನ್ನು ಬಿತ್ತರಿಸುವ ಕೆಲಸವಾಗಬೇಕು. ಸಾಮಾಜಿಕ ಮಾಧ್ಯಮಗಳಿಂದಾಗುತ್ತರಿವ ದುಷ್ಪರಿಣಾಮ ತಡೆಯುವತ್ತಲೂ ಗಮನಹರಿಸಬೇಕು ಎಂದು ಹೇಳಿದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮವು, ಸರ್ಕಾರ, ಅಧಿಕಾರಿಗಳು, ನ್ಯಾಯಾಲಯ ತಪ್ಪು ಮಾಡಿದಾಗ ತಿದ್ದುವ ಕೆಲಸ ಮಾಡುತ್ತದೆ. ಸರ್ಕಾರ ಬದಲಿಸುವ, ನಾಯಕರನ್ನು ಬೆಳೆಸುವ ಶಕ್ತಿ ಪತ್ರಿಕೋದ್ಯಮಕ್ಕಿದೆ. ಹಾಗೆಯೇ, ಸುಳ್ಳು ಸುದ್ದಿಗಳ ಮೇಲೆ ನಿಯಂತ್ರಣ ಹೇರುವ ಅವಶ್ಯಕತೆಯಿದೆ. ಮಾಧ್ಯಮಗಳು ಕರ್ನಾಟಕದ ಸ್ವಾಭಿಮಾನಕ್ಕೆ ಧಕ್ಕೆ ಬಾರದ ರೀತಿ ಕೆಲಸ ಮಾಡಬೇಕು ಎಂದು ಹೇಳಿದರು.

ನಿಂತುಹೋಗಿದ್ದ ಪ್ರಶಸ್ತಿಗಳಿಗೆ ಮರುಜೀವ:

ಹಿಂದಿನ ಸರ್ಕಾರ ಪ್ರತಿಷ್ಠಿತ ಟಿಎಸ್‌ಆರ್‌ ಪ್ರಶಸ್ತಿ, ಮೊಹರೆ ಹನುಮಂತರಾಯ ಪ್ರಶಸ್ತಿ, ಪರಿಸರ ಮತ್ತು ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿಗಳನ್ನು ನೀಡದೇ ನಿರ್ಲಕ್ಷ್ಯ ತೋರಿತ್ತು. ನಮ್ಮ ಸರ್ಕಾರ ಆ ಎಲ್ಲ ಪ್ರಶಸ್ತಿಗಳನ್ನು ನೀಡಲು ಆರಂಭಿಸಿದೆ. ಅದರ ಜತೆಗೆ ಹಿರಿಯ ಪತ್ರಕರ್ತ ರಘುರಾಮ್‌ ಶೆಟ್ಟಿ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡಬೇಕೆಂಬ ಬೇಡಿಕೆಯಿದ್ದು, ಶೀಘ್ರದಲ್ಲಿ ಅದನ್ನು ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ವಾರ್ತಾ ಇಲಾಖೆ ಕಾರ್ಯದರ್ಶಿ ಕಾವೇರಿ. ಆಯುಕ್ತ ಹೇಮಂತ್‌ ನಿಂಬಾಳ್ಕರ್‌, ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನಂ, ಕಾರ್ಯದರ್ಶಿ ಎಂ.ಸಹನಾ ಇದ್ದರು.

ಕನ್ನಡಪ್ರಭ-ಏಷ್ಯಾನೆಟ್‌ ಸುವರ್ಣ ನ್ಯೂಸ್‌ನ ಐವರಿಗೆ ಪ್ರಶಸ್ತಿ ಪ್ರದಾನ

ಕನ್ನಡಪ್ರಭದ ಹುಬ್ಬಳ್ಳಿ ಆವೃತ್ತಿಯ ವಿಶೇಷ ವರದಿಗಾರ ಶಿವಾನಂದ ಗೊಂಬಿ, ಸುವರ್ಣ ನ್ಯೂಸ್‌ನ ರಾಜಕೀಯ ವಿಭಾಗದ ಮುಖ್ಯಸ್ಥ ಆನಂದ ಬೈದನಮನೆ, ನಿರೂಪಣಾ ವಿಭಾಗದ ಮುಖ್ಯಸ್ಥೆ ಭಾವನಾ ನಾಗಯ್ಯ, ಹಿರಿಯ ವರದಿಗಾರ ನಂದೀಶ್‌ ಮಲ್ಲೇನಹಳ್ಳಿ, ಸುವರ್ಣ ನ್ಯೂಸ್‌ ವೆಬ್‌ಸೈಟ್‌ ಮುಖ್ಯಸ್ಥೆ ಕೆ.ಎಸ್‌. ನಿರುಪಮಾ ಅವರಿಗೆ ವಿವಿಧ ವಿಭಾಗದಲ್ಲಿ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಅವರೊಂದಿಗೆ 2023ನೇ ಸಾಲಿನ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಯನ್ನು ಅ.ಚ. ಶಿವಣ್ಣ ಹಾಗೂ 2024ನೇ ಸಾಲಿನ ಜೀವಮಾನ ಸಾಧನೆ ವಿಶೇಷ ಪ್ರಶಸ್ತಿಯನ್ನು ಅಬ್ದುಸ್ಸಲಾಂ ಪುತ್ತಿಗೆ ಅವರಿಗೆ ಸೇರಿದಂತೆ ಒಟ್ಟಾರೆ 61 ಪತ್ರಕರ್ತರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!