ಬೆಂಗಳೂರು : ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿ 5 ನಗರ ಪಾಲಿಕೆ ರಚನೆ ಕುರಿತಂತೆ ಯಾವುದೇ ಆಕ್ಷೇಪಣೆಗಳಿದ್ದರೂ ಸಾರ್ವಜನಿಕರಷ್ಟೇ ಅಲ್ಲದೆ ಜನಪ್ರತಿನಿಧಿಗಳೂ ಸಲ್ಲಿಸಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಸದಾಶಿವನಗರ ತಮ್ಮ ನಿವಾಸದ ಬಳಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ 5 ನಗರ ಪಾಲಿಕೆ ರಚನೆ ಕುರಿತಂತೆ ಯಾರು ಬೇಕಾದರೂ ಆಕ್ಷೇಪಣೆ ಸಲ್ಲಿಸಬಹುದು. ಅದರಲ್ಲಿ ತಪ್ಪೇನಿಲ್ಲ. ಅದು ಅವರ ಹಕ್ಕು. ಅದನ್ನು ಮೊಟಕುಗೊಳಿಸಲು ಆಗುವುದಿಲ್ಲ. ಈ ವಿಚಾರದಲ್ಲಿ ತಪ್ಪು ಮಾಡಿದ್ದರೆ ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಬೆಂಗಳೂರಿಗೆ 5 ಪಾಲಿಕೆ ಮಾಡಲು ಸರ್ಕಾರ ಬದ್ಧವಾಗಿದೆ ಎಂದರು.
5 ನಗರ ಪಾಲಿಕೆ ರಚನೆ ಸಂಬಂಧ ಈ ಹಿಂದೆಯೇ ಬಿಜೆಪಿ ನಾಯಕರ ಜತೆ ಸಭೆ ನಡೆಸಿ, ಚರ್ಚಿಸಿ ಸಲಹೆಗಳನ್ನು ಸ್ವೀಕರಿಸಿದ್ದೇನೆ. ಜಂಟಿ ಸದನ ಸಮಿತಿ ರಚಿಸಿ ಚರ್ಚೆ ಮಾಡಲಾಗಿದೆ. ಈಗಲೂ ಅವರು ತಮ್ಮ ಆಕ್ಷೇಪಣೆ ಸಲ್ಲಿಸಬಹುದು. ಹಿಂದೆ ಒಪ್ಪಿದ್ದ ಅವರು ಈಗ ರಾಜಕೀಯ ಕಾರಣಕ್ಕೆ ಧ್ವನಿ ಎತ್ತುತ್ತಿದ್ದಾರೆ. ಬೆಂಗಳೂರಿನ ಹಿತಕ್ಕಾಗಿಯೇ 5 ನಗರ ಪಾಲಿಕೆ ರಚನೆಗೆ ಮುಂದಾಗಿದ್ದೇವೆ. ನಗರದಲ್ಲಿನ ಖಾತಾ, ತೆರಿಗೆ ಹಾಗೂ ನಗರ ಪಾಲಿಕೆ ರಚನೆ ವಿಚಾರವಾಗಿ ಶೀಘ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ಪ್ರಾಧಿಕಾರ ಅಧಿಸೂಚನೆ ರದ್ದು ಕೋರಿ ನಾಗಾಭರಣ ಪಿಐಎಲ್
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (ಬಿಬಿಎಂಪಿ) ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ (ಜಿಬಿಎ) ಬದಲಾಯಿಸಿ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಚಲನಚಿತ್ರ ನಿರ್ದೇಶಕ ಟಿ.ಎಸ್. ನಾಗಾಭರಣ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಈ ಕುರಿತು ಟಿ.ಎಸ್.ನಾಗಾಭರಣ ಅವರು ಹೈಕೋರ್ಟ್‌ಗೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆಯಡಿ ಬಿಬಿಎಂಪಿಯನ್ನು ಜಿಬಿಎಯಾಗಿ ಪರಿವರ್ತಿಸಲಾಗಿದೆ. ಈ ಕಾಯ್ದೆ ಸಂವಿಧಾನ 24ನೇ ತಿದ್ದುಪಡಿಗೆ (ಸ್ಥಳೀಯ ಸಂಸ್ಥೆಗಳಿಗೆ ಸಮಾನ ಸ್ಥಾನಮಾನ ಕಲ್ಪಿಸಿ ಅಧಿಕಾರ ವಿಕೇಂದ್ರಿಕರಣಕ್ಕೆ ಅವಕಾಶ ನೀಡಿರುವುದು) ತದ್ವಿರುದ್ಧವಾಗಿದೆ. ಆದ್ದರಿಂದ ಕಾಯ್ದೆಯನ್ನು ಅಸಾಂವಿಧಾನಿಕ ಎಂಬುದಾಗಿ ಘೋಷಣೆ ಮಾಡಬೇಕು. ಜಿಬಿಎಯಾಗಿ ಪರಿವರ್ತಸಿ ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಮುಂದಿನ 3 ತಿಂಗಳಲ್ಲಿ ಬಿಬಿಎಂಪಿಗೆ ಚುನಾವಣೆ ನಡೆಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದಾರೆ.
ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಅವರ ನೇತೃತ್ವದ ವಿಭಾಗೀಯ ಪೀಠ ಪ್ರತಿವಾದಿಯಾಗಿರುವ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದೆ.
ಅರ್ಜಿಯ ವಿವರ:
ಕೆಎಂಸಿ ಕಾಯ್ದೆಯ ಪ್ರಕಾರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿರುವ ಸದಸ್ಯರು ಮಾತ್ರ ಪಾಲಿಕೆ ಸದಸ್ಯರಾಗುವುದಕ್ಕೆ ಅರ್ಹರಾಗಿರುತ್ತಾರೆ. ಆದರೆ, ಜಿಬಿಎಗೆ ಈ ಮಿತಿ ಇರುವುದಿಲ್ಲ. ಜಿಬಿಎ ಕಾಯ್ದೆ ಪ್ರಕಾರ ಬೆಂಗಳೂರು ನಗರವನ್ನು 7 ನಗರ ಪಾಲಿಕೆಗಳನ್ನಾಗಿ ಮಾಡಲಾಗುತ್ತದೆ. ಒಬ್ಬರು ಮುಖ್ಯ ಆಯುಕ್ತರು ಮತ್ತು ಇತರೆ ಪಾಲಿಕೆಗಳಿಗೆ ಆಯುಕ್ತರನ್ನು ನೇಮಕ ಮಾಡಲಾಗುತ್ತಿದೆ. ಆದರೆ, ಜನರಿಂದ ಆಯ್ಕೆಯಾಗುವ ಮೇಯರ್‌ಗಳು ಹಾಗೂ ಸದಸ್ಯರು ಈ ಮುಖ್ಯ ಆಯುಕ್ತರ ಅಧೀನ ಸ್ಥಾನದಲ್ಲಿರುತ್ತಾರೆ. ಚುನಾಯಿತ ಸದಸ್ಯರು ತಮ್ಮ ಅಧಿಕಾರ ಚಲಾಯಿಸುವುದಕ್ಕೆ ಅವಕಾಶವಿರುವುದಿಲ್ಲ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಜಿಬಿಎಯಲ್ಲಿ ಪದನಿಮಿತ್ತ ಸದಸ್ಯರು ಸ್ಥಳೀಯರೇ ಇರಬೇಕು ಎಂದೇನಿಲ್ಲ. ಬೆಂಗಳೂರಿನ ಹೊರಭಾಗದ ಜನ ಪ್ರತಿನಿಧಿಗಳು ಸದಸ್ಯರಾಗಲಿದ್ದಾರೆ. ಮುಖ್ಯಮಂತ್ರಿಗಳು ಹಾಗೂ ಬೆಂಗಳೂರು ನಗರಾಭಿವೃದ್ದಿ ಉಸ್ತುವಾರಿ ಹೊಂದಿರುವ ಸಚಿವರ ಅಧ್ಯಕ್ಷತೆಯಲ್ಲಿ ನಿರ್ವಹಣೆ ಆಗಲಿದೆ. ಅವರು ಜಿಬಿಎಯನ್ನು ನಿಯಂತ್ರಿಸುತ್ತಾರೆ. ಪಾಲಿಕೆಯ ಆಡಳಿತದಲ್ಲಿ ಸರ್ಕಾರ ನೇರವಾಗಿ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಿದೆ. ಜಿಬಿಎ ವ್ಯಾಪ್ತಿಯಲ್ಲಿ ತೆರಿಗೆ ವಿಧಿಸುವ ಅಧಿಕಾರವನ್ನು ಸರ್ಕಾರವೇ ಪಡೆದುಕೊಳ್ಳಲಿದೆ. ಇದು ಸ್ಥಳೀಯ ಸಂಸ್ಥೆಯ ಆರ್ಥಿಕ ಸ್ವಾತಂತ್ರ್ಯವನ್ನು ಕಳೆದುಕೊಂಡು ದುರ್ಬಲಗೊಳ್ಳುವಂತಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.