ಕಾಂಗ್ರೆಸ್‌ನ್ನು ಗೆಲ್ಲಿಸದಿದ್ರೆ ಮಾಜಿ ಆಗ್ತೀರಿ : ಡಿಕೆಶಿ

Published : Apr 06, 2024, 08:02 AM ISTUpdated : Apr 06, 2024, 08:04 AM IST
DK Shivakumar

ಸಾರಾಂಶ

ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು. ಕೊಟ್ಟ ಕೆಲಸ ಸಮರ್ಥವಾಗಿ ಮಾಡದಿದ್ದರೆ ಚುನಾವಣೆ ನಂತರ ಮಾಜಿಯಾಗುತ್ತೀರಿ ಎಂಬುದು ತಲೆಯಲ್ಲಿ ಇರಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು :  ಕೆಪಿಸಿಸಿ ಪ್ರಚಾರ ಸಮಿತಿ ನೂತನ ಅಧ್ಯಕ್ಷರು ಹಾಗೂ ಐದು ಮಂದಿ ಕಾರ್ಯಾಧ್ಯಕ್ಷರು ಸಮರ್ಥವಾಗಿ ಕೆಲಸ ಮಾಡಿ ಲೋಕಸಭೆ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಬೇಕು. ಕೊಟ್ಟ ಕೆಲಸ ಸಮರ್ಥವಾಗಿ ಮಾಡದಿದ್ದರೆ ಚುನಾವಣೆ ನಂತರ ಮಾಜಿಯಾಗುತ್ತೀರಿ ಎಂಬುದು ತಲೆಯಲ್ಲಿ ಇರಲಿ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ತಮ್ಮ ನೇತೃತ್ವದಲ್ಲಿ ನಡೆದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ ಕುಮಾರ್‌ ಸೊರಕೆ ಹಾಗೂ ಕಾರ್ಯಾಧ್ಯಕ್ಷರಾದ ತನ್ವೀರ್‌ ಸೇಠ್, ಜಿ.ಸಿ. ಚಂದ್ರಶೇಖರ್‌, ವಿನಯ್‌ ಕುಲಕರ್ಣಿ, ಮಂಜುನಾಥ್ ಭಂಡಾರಿ, ವಸಂತಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಕೆಲಸ ಮಾಡಬೇಕು. ಪಕ್ಷ ನೀಡಿರುವುದು ಮಹತ್ವದ ಜವಾಬ್ದಾರಿ ಎಂಬುದರ ಅರಿವು ಇರಬೇಕು. ನೀವು ಅಲ್ಲಿ ಲೀಡರ್‌ಗಿರಿ ತೋರಿಸಬಾರದು. ನೀವು ಶ್ರಮ ಪಟ್ಟರೆ ಮಾತ್ರ ನಿಮ್ಮ ಜವಾಬ್ದಾರಿ ಮುಂದುವರಿಯುತ್ತದೆ. ಇಲ್ಲದಿದ್ದರೆ ಚುನಾವಣೆ ನಂತರ ಈ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡಲಾಗುವುದು. ಸಮರ್ಥವಾಗಿ ಕೆಲಸ ಮಾಡದವರು ಮಾಜಿಯಾಗುತ್ತೀರಿ ಎಂಬುದು ತಲೆಯಲ್ಲಿ ಇರಲಿ ಎಂದು ಹೇಳಿದರು.

ಮನೆಮನೆಗೆ ಗ್ಯಾರಂಟಿ ಕಾರ್ಡ್‌ ತಲುಪಿಸಿ:ರಾಜ್ಯ ಕಾಂಗ್ರೆಸ್‌ ಮಾದರಿಯಲ್ಲೇ ಎಐಸಿಸಿ ಮಟ್ಟದಲ್ಲಿ ಐದು ಗ್ಯಾರಂಟಿ ಘೋಷಣೆ ಮಾಡಿದೆ. ಮಹಾಲಕ್ಷ್ಮಿ ಯೋಜನೆಯಡಿ ಬಿಪಿಎಲ್‌ ಕುಟುಂಬದ ಮಹಿಳೆಗೆ ವಾರ್ಷಿಕ 1 ಲಕ್ಷ ರು., ಸಾಲಮನ್ನಾ ಪ್ರಾಧಿಕಾರ ರಚನೆ, ಬೆಂಬಲ ಬೆಲೆ, ಜಾತಿ ಗಣತಿ, ನಗರ ಉದ್ಯೋಗ ಖಾತ್ರಿ ಯೋಜನೆ ಜಾರಿ ಮಾಡುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹಾಗೂ ರಾಹುಲ್ ಗಾಂಧಿ ಅವರು ಗ್ಯಾರಂಟಿ ಕಾರ್ಡಿಗೆ ಸಹಿ ಹಾಕಿದ್ದಾರೆ. ಇವುಗಳನ್ನು ಮನೆ-ಮನೆಗೆ ತಲುಪಿಸಿ ಎಂದು ಕರೆ ನೀಡಿದರು.

ರಾಜ್ಯದಲ್ಲಿ ಬಿಜೆಪಿ 10 ಸ್ಥಾನವೂ ಗೆಲ್ಲಲ್ಲ: ಸೊರಕೆ

ಪ್ರಚಾರ ಸಮಿತಿ ಅಧ್ಯಕ್ಷ ವಿನಯ್‌ ಕುಮಾರ್‌ ಸೊರಕೆ ಮಾತನಾಡಿ, ಸೋಲಿನ ಭೀತಿಯಿಂದ ಬಿಜೆಪಿ ಸರ್ವಾಧಿಕಾರಿ ಧೋರಣೆ ತೋರುತ್ತಿದೆ. ಐಟಿ, ಇಡಿ ದುರ್ಬಳಕೆಗೆ ಮುಂದಾಗಿದೆ. ನಮ್ಮ ಗ್ಯಾರಂಟಿಗಳು ರಾಜ್ಯದಲ್ಲಿ ಕೈ ಹಿಡಿಯಲಿವೆ. ಮತಗಳು ಶೇ.15 ರಷ್ಟು ಕಾಂಗ್ರೆಸ್‌ಗೆ ಬದಲಾಗಿದ್ದು, ರಾಜ್ಯದಲ್ಲಿ ಬಿಜೆಪಿ 10 ಸ್ಥಾನವನ್ನೂ ಗೆಲ್ಲಲ್ಲ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ಮಾತನಾಡಿ, ಪಕ್ಷಕ್ಕೆ ಯುದ್ಧದ ಸಂದರ್ಭವಿದು. ನಮ್ಮ ಪಕ್ಷ ನುಡಿದಂತೆ ನಡೆದಿದ್ದು ಮತಯಾಚನೆ ಮಾಡಲು ಯಾರಿಗೂ ಸಂಕೋಚ ಬೇಡ. ಭಿನ್ನಾಭಿಪ್ರಾಯ ಇಲ್ಲದೆ ಕೆಲಸ ಮಾಡಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಕರೆ ನೀಡಿದರು.

PREV

Recommended Stories

ಕಠಿಣ ಅಭ್ಯಾಸ ಮಾಡಿದರೆ ಸಾಧನೆ ಸುಲಭ: ಎಸ್ಪಿ ರೋಹನ್‌ ಜಗದೀಶ್
ಜಾತಿ ಗಣತಿ ಈಗ ಕಗ್ಗಂಟು