ಡೋಪಿಂಗ್ ಕೇಸ್‌: ಬಾಸ್ಕೆಟ್‌ಬಾಲ್ ಆಟಗಾರನ ಸಸ್ಪೆಂಡ್‌ ಆದೇಶ ರದ್ದು

Published : Jun 01, 2025, 07:05 AM IST
karnataka highcourt

ಸಾರಾಂಶ

ಡೋಪಿಂಗ್‌ ಆರೋಪದಲ್ಲಿ ರಾಷ್ಟ್ರೀಯ ಬಾಸ್ಕೆಟ್​ಬಾಲ್​ ಆಟಗಾರ ಶಶಾಂಕ್ ಜೆ. ರೈ ಅವರನ್ನು ನಾಲ್ಕು ವರ್ಷಗಳ ಕಾಲ ಕ್ರೀಡಾಕೂಟಗಳಿಂದ ಅನರ್ಹಗೊಳಿಸಿ ಡೋಪಿಂಗ್ ತಡೆ ಶಿಸ್ತು ಸಮಿತಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

 ಬೆಂಗಳೂರು : ಡೋಪಿಂಗ್‌ ಆರೋಪದಲ್ಲಿ ರಾಷ್ಟ್ರೀಯ ಬಾಸ್ಕೆಟ್​ಬಾಲ್​ ಆಟಗಾರ ಶಶಾಂಕ್ ಜೆ. ರೈ ಅವರನ್ನು ನಾಲ್ಕು ವರ್ಷಗಳ ಕಾಲ ಕ್ರೀಡಾಕೂಟಗಳಿಂದ ಅನರ್ಹಗೊಳಿಸಿ ಡೋಪಿಂಗ್ ತಡೆ ಶಿಸ್ತು ಸಮಿತಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದುಗೊಳಿಸಿದೆ.

ಮಾದರಿ ಸಂಗ್ರಹಿಸುವ ದಿನ ಹಿಂದಿನ ರಾತ್ರಿ ನೈಸರ್ಗಿಕವಾಗಿ ಸಿಗುವ ಹಂದಿ ಮಾಂಸವನ್ನು ಅರ್ಜಿದಾರರು ಸೇವಿಸಿದ್ದಾರೆ. ನೈಸರ್ಗಿಕವಾಗಿ ಬೆಳೆದ ಹಂದಿ ಮಾಂಸದಲ್ಲಿ ಎನ್ಎ-19 ಅಂಶ ಕಂಡು ಬರುತ್ತದೆ ಎಂದು ತಜ್ಞರು ಅಭಿಪ್ರಾಯ ನೀಡಿದ್ದಾರೆ. ಅದಕ್ಕೆ ಪೂರಕವಾದ ದಾಖಲೆಗಳನ್ನು ಒದಗಿಸಿದ್ದಾರೆ. ಮೂತ್ರದ ಮಾದರಿಯನ್ನು ಮೊದಲು ಪೌಚ್‌ನಲ್ಲಿ ಸಂಗ್ರಹಿಸಿ, ನಂತರ ಅದನ್ನು ಬಾಟಲಿಗೆ ವರ್ಗಾಯಿಸಿ ಲ್ಯಾಬ್‌ಗೆ ರವಾನಿಸಲಾಗಿದೆ. ಮಾದರಿ ಸಂಗ್ರಹಿಸಲು ಪಾಲಿಸಬೇಕಾದ ಮಾರ್ಗಸೂಚಿಗಳನ್ನು ಉಲ್ಲಂಘಿಸಲಾಗಿದೆ. ನಿರ್ಬಂಧಿತ ಅಂಶವನ್ನು ಅರ್ಜಿದಾರರು ತಮ್ಮ ಕ್ರೀಡಾ ಸಾಮರ್ಥ್ಯ ವೃದ್ಧಿಗಾಗಿ ಉದ್ದೇಶಪೂರ್ವಕವಾಗಿ ಸೇವಿಸಿಲ್ಲ ಎನ್ನುವ ಅಂಶಗಳನ್ನು ಪರಿಗಣಿಸಿದ ಕೋರ್ಟ್, ಶಿಸ್ತು ಸಮಿತಿ ಆದೇಶ ನಿಯಮ ಬಾಹಿರ ಎಂದು ಹೇಳಿದೆ.

2022ರ ಫೆಬ್ರವರಿ ತಿಂಗಳಲ್ಲಿ ಅಭ್ಯಾಸದ ವೇಳೆ ಶಶಾಂಕ್ ಮೂತ್ರದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದಾಗ ನಿಗದಿಗಿಂತ ಹೆಚ್ಚಿನ ಪ್ರಮಾಣದಲ್ಲಿ ನಿರ್ಬಂಧಿತ 19-ಎನ್‌ಎ ಅಂಶ ಕಂಡು ಬಂದಿತ್ತು. ಇದು ಕ್ರೀಡಾಪಟುವಿನ ಸಾಮರ್ಥ್ಯ ವೃದ್ಧಿಸುವ ಅಂಶ ಎಂದ ಡೋಪಿಂಗ್ ತಡೆ ಶಿಸ್ತು ಸಮಿತಿ ಶಶಾಂಕ್‌ರನ್ನು ಅಮಾನತುಗೊಳಿಸಿತ್ತು. ಮೇಲ್ಮನವಿ ವಜಾಗೊಂಡ ಹಿನ್ನೆಲೆಯಲ್ಲಿ ಶಶಾಂಕ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಮೂತ್ರದಲ್ಲಿ ನಿಷೇಧಿತ ಅಂಶ ಎಷ್ಟು ಪ್ರಮಾಣದಲ್ಲಿತ್ತು ಎಂಬ ನಿಖರ ಮಾಹಿತಿ ಒದಗಿಸಿಲ್ಲ. ಅಮಾನತು ಆದೇಶದಲ್ಲೂ ಬಹಿರಂಗಗೊಳಿಸಿಲ್ಲ. ನಾಲ್ಕು ವರ್ಷದ ಅಮಾನತಿನಿಂದ ಅರ್ಜಿದಾರರ ಕ್ರೀಡಾ ಜೀವನ ಸಂಪೂರ್ಣವಾಗಿ ತೊಂದರೆಗೆ ಸಿಲುಕಿದೆ. ಅವರ ಖ್ಯಾತಿಗೆ ಕುಂದುಂಟಾಗಿದೆ ಎಂದು ಶಶಾಂಕ್ ಪರ ವಕೀಲರು ವಾದ ಮಂಡಿಸಿದ್ದರು.

ಡೋಪಿಂಗ್‌ ಆರೋಪದಿಂದ ಕ್ರೀಡಾಪಟುಗಳಿಗೆ ಅಗೌರವ ಉಂಟಾಗಿ ಕೆಟ್ಟ ಹೆಸರು ಬರುತ್ತದೆ. ವೃತ್ತಿ ಜೀವನಕ್ಕೆ ಧಕ್ಕೆಯಾಗುವ ಜೊತೆಗೆ ವೈಯಕ್ತಿಕ ಜೀವನ, ಪರಂಪರೆ, ಪ್ರತಿಷ್ಠೆ ಮತ್ತು ಅವರ ಗುರುತಿಗೂ ಕಪ್ಪು ಚುಕ್ಕೆಯಾಗುತ್ತದೆ. ಅವರ ಹಿಂದಿನ ಸಾಧನೆಗಳ ಬಗ್ಗೆ ಶಂಕೆ ವ್ಯಕ್ತಪಡಿಸುವ ಸಾಧ್ಯತೆಯಿರುತ್ತದೆ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.

PREV
Read more Articles on

Recommended Stories

ಮಕ್ಕಳ ಕುಬ್ಜ ಬೆಳವಣಿಗೆ: 2 ಜಿಲ್ಲೆಯ ಸ್ಥಿತಿ ಕಳವಳ
ಕೊಪ್ಪಳ ಜಿಲ್ಲೆಯಲ್ಲಿ ಮಣ್ಣು ತಿಂದು ರೈತ ಸಿಡಿಮಿಡಿ । ನಿಲ್ಲದ ರೈತರ ಯೂರಿಯಾ ಆಕ್ರೋಶ