ರಾಜ್ಯದ 1000 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ

Published : Apr 13, 2024, 06:46 AM IST
Drinking Water

ಸಾರಾಂಶ

ಹಳ್ಳ-ಕೊಳ್ಳ, ಕೆರೆ-ಕುಂಟೆ ಸೇರಿದಂತೆ ಜಲ ಮೂಲಗಳು ಸಂಪೂರ್ಣವಾಗಿ ಬರಿದಾಗಿರುವುದರಿಂದ ರಾಜ್ಯದಲ್ಲಿ ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ಹಳ್ಳಿಯಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು :  ಹಳ್ಳ-ಕೊಳ್ಳ, ಕೆರೆ-ಕುಂಟೆ ಸೇರಿದಂತೆ ಜಲ ಮೂಲಗಳು ಸಂಪೂರ್ಣವಾಗಿ ಬರಿದಾಗಿರುವುದರಿಂದ ರಾಜ್ಯದಲ್ಲಿ ಬರೋಬ್ಬರಿ ಒಂದು ಸಾವಿರಕ್ಕೂ ಅಧಿಕ ಹಳ್ಳಿಯಲ್ಲಿ ಹನಿ ನೀರಿಗೂ ಪರದಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ಕಂದಾಯ ಇಲಾಖೆಯ (ವಿಪತ್ತು ನಿರ್ವಹಣೆ) ಅಧಿಕಾರಿಗಳೇ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದ 236 ತಾಲೂಕುಗಳ ಪೈಕಿ ಬಹುತೇಕ ಎಲ್ಲಾ ತಾಲೂಕುಗಳನ್ನು ಈಗಾಗಲೇ ಬರ ಪೀಡಿತ ತಾಲೂಕುಗಳು ಎಂದು ಘೋಷಣೆ ಮಾಡಲಾಗಿದೆ. ಇದೀಗ 133 ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಗುರುತಿಸಲಾಗಿದೆ. ಈ ಪೈಕಿ 803 ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ಒಂದು ಸಾವಿರಕ್ಕೂ ಅಧಿಕ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದೆ.

 ಜಿಲ್ಲೆಗಳಲ್ಲಿ ಟ್ಯಾಂಕರ್‌ ನೀರು 

ರಾಜ್ಯದಲ್ಲಿ 31 ಜಿಲ್ಲೆಗಳ ಪೈಕಿ 15 ಜಿಲ್ಲೆಗಳ 352 ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ಜನರಿಗೆ ಕುಡಿಯುವ ನೀರಿನ ಪೂರೈಕೆ ಮಾಡುವ ಸ್ಥಿತಿ ಇದೆ. ಅದರಲ್ಲೂ ವಿಜಯಪುರದ ಅತಿ ಹೆಚ್ಚು 80 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಉಳಿದಂತೆ ಬೆಳಗಾವಿಯ 76 ಗ್ರಾಮ, ಚಿತ್ರದುರ್ಗದ 62, ಬೆಂಗಳೂರು ನಗರ ಜಿಲ್ಲೆಯ 47 ಗ್ರಾಮ, ರಾಮನಗರದ 25 ಗ್ರಾಮ, ಚಿಕ್ಕಮಗಳೂರಿನ 16, ತುಮಕೂರಿನ 14, ಕೊಡಗಿನ 11 ಗ್ರಾಮಗಳು ಒಳಗೊಂಡದಂತೆ ದಿನಕ್ಕೆ 579 ಟ್ಯಾಂಕ್ ನೀರು ಪೂರೈಕೆ ಮಾಡಲಾಗುತ್ತಿದೆ.

ಜತೆಗೆ, ವಿವಿಧ ಜಿಲ್ಲೆಗಳಲ್ಲಿ 1,202 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಮೂಲಕ ಜಿಲ್ಲಾಡಳಿತ ಪಡೆದುಕೊಂಡು 997 ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತಿದೆ.

 ದಿನದಿಂದ ದಿನಕ್ಕೆ ಸಮಸ್ಯೆ ಉಲ್ಬಣ 

ಕಳೆದ ಒಂದು ತಿಂಗಳ ಅವಧಿಯಲ್ಲಿ ನೀರಿನ ಸಮಸ್ಯೆ ಇರುವ ತಾಲೂಕುಗಳ ಸಂಖ್ಯೆ 100 ರಿಂದ 133ಕ್ಕೆ ಹೆಚ್ಚಾಗಿದೆ. ಅದೇ ರೀತಿ ಗ್ರಾಪಂಗಳ ಸಮಸ್ಯೆ 447 ರಿಂದ 803ಕ್ಕೆ ಏರಿಕೆಯಾಗಿದ್ದು, ಗ್ರಾಮಗಳ ಸಂಖ್ಯೆ ದ್ವಿಗುಣಗೊಂಡಿದೆ. ಅದೇ ರೀತಿ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುವ ಗ್ರಾಮಗಳು ಹಾಗೂ ಕೊಳವೆ ಬಾವಿ ಬಾಡಿಗೆ ಪಡೆದು ನೀರು ಪೂರೈಕೆ ಮಾಡುವ ಗ್ರಾಮಗಳ ಸಂಖ್ಯೆಯಲ್ಲಿಯೂ ಬಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಮೇ ಮೊದಲ ವಾರದ ವೇಳೆಗೆ ಇನ್ನಷ್ಟು ಗ್ರಾಮಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಮೇವು ನೀರಿನ ಸಮಸ್ಯೆ-ಜಾನುವಾರು ಮಾರಾಟ 

ಮುಂಗಾರು ಹಾಗೂ ಹಿಂಗಾರು ಅವಧಿಯಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟ ಹಿನ್ನೆಲೆಯಲ್ಲಿ ರೈತರು ಬೆಳೆ ನಾಶದ ಜತೆಗೆ ಜಾನುವಾರುಗಳಿಗೆ ಮೇವು ಸಹ ಸಿಕ್ಕಿಲ್ಲ. ಇದೀಗ ಕುಡಿಯುವ ನೀರಿಗೂ ಸಮಸ್ಯೆ ಉಂಟಾಗಿರುವುದರಿಂದ ರೈತರು ತಮ್ಮ ಜಾನುವಾರುಗಳನ್ನು ಮಾರಾಟಕ್ಕೆ ಮುಂದಾಗಿದ್ದಾರೆ. ಆದರೆ, ಖರೀದಿ ಮಾಡುವವರಿಲ್ಲದೇ ದಿಕ್ಕು ತೋಚದ ಸಂದಿಗ್ಧ ಸ್ಥಿತಿ ಹಳ್ಳಿಗಳಲ್ಲಿ ನಿರ್ಮಾಣವಾಗಿದೆ.

ಕಣ್ಮುಚಿ ಕುಳಿತ ಅಧಿಕಾರಿ ವರ್ಗ

ರಾಜ್ಯದಲ್ಲಿ ಭಾರೀ ಪ್ರಮಾಣದ ಬರ ಸೃಷ್ಟಿಯಾಗಿದ್ದು, ಗ್ರಾಮೀಣ ಜನರು ನೀರಿಗಾಗಿ ಪರದಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿ ಸಿಬ್ಬಂದಿ ನೀರಿನ ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದಂತೆ ನಿಗಾ ವಹಿಸುತ್ತಿಲ್ಲ. ನೀರಿನ ಸಮಸ್ಯೆ ಬಗ್ಗೆ ನಿಖರ ಮಾಹಿತಿಯನ್ನು ನೀಡುತ್ತಿಲ್ಲ. ಎಲ್ಲರೂ ಚುನಾವಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಸರ್ಕಾರದ ಅಂಕಿ ಅಂಶಗಳಿಗೂ ಹಾಗೂ ಗ್ರಾಮೀಣ ಭಾಗದ ನೀರಿನ ಸಮಸ್ಯೆಯ ವಾಸ್ತವಾಂಶಗಳಿಗೆ ಭಾರೀ ವ್ಯತ್ಯಾಸವಿದೆ ಎಂಬ ಆರೋಪಗಳನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ನೀರಿನ ಸಮಸ್ಯೆಯ ಹಳ್ಳಿಗಳ ವಿವರ

ವಿವರ ಜಿಲ್ಲೆ ತಾಲೂಕು ಗ್ರಾಪಂ ಸಂಖ್ಯೆ ಟ್ಯಾಂಕರ್‌ ನೀರು ನೀಡುವ ಗ್ರಾಮಗಳು ಬಾಡಿಗೆ ಪಡೆದ ಖಾಸಗಿ ಕೊಳವೆ ಬಾವಿ ಖಾಸಗಿ ಕೊಳವೆ ಬಾವಿಯಿಂದ ನೀರು ಪೂರೈಕೆಯ ಗ್ರಾಮ

ಮಾರ್ಚ್‌ 23 100 447 182 651 553

ಏಪ್ರಿಲ್‌ 25 133 803 352 1202 997

PREV

Recommended Stories

KAPPEC ಮೌನ ಕ್ರಾಂತಿ : ಸಾಲ ಪಡೆದವರಲ್ಲಿ ಶೇ.85 ಉದ್ದಿಮೆಗಳು ಯಶಸ್ಸು
ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?