ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ ಪ್ರಕರಣ ತನಿಖೆಗೆ ಇ.ಡಿ. ಲಗ್ಗೆ

Published : Oct 11, 2026, 05:45 AM IST
annabhagya

ಸಾರಾಂಶ

ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ವಿತರಿಸಲೆಂದು ಇರುವ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಪಾಲಿಷ್‌ ಮಾಡಿಸಿ ವಿವಿಧ ಬ್ರ್ಯಾಂಡ್‌ ಹೆಸರುಗಳ ಅಡಿಯಲ್ಲಿ ವಿದೇಶಕ್ಕೆ ರಫ್ತು ಮಾಡುವ ಪ್ರಕರಣಕ್ಕೆ ಈಗ ಜಾರಿ ನಿರ್ದೇಶಲಯ (ಇ.ಡಿ) ಪ್ರವೇಶಿಸಿದೆ.

 ಆನಂದ್‌ ಎಂ. ಸೌದಿ

 ಯಾದಗಿರಿ : ಬಿಪಿಎಲ್‌ ಮತ್ತು ಎಪಿಎಲ್‌ ಪಡಿತರ ಚೀಟಿ ಹೊಂದಿರುವವರಿಗೆ ವಿತರಿಸಲೆಂದು ಇರುವ ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿ ಪಾಲಿಷ್‌ ಮಾಡಿಸಿ ವಿವಿಧ ಬ್ರ್ಯಾಂಡ್‌ ಹೆಸರುಗಳ ಅಡಿಯಲ್ಲಿ ವಿದೇಶಕ್ಕೆ ರಫ್ತು ಮಾಡುವ ಪ್ರಕರಣಕ್ಕೆ ಈಗ ಜಾರಿ ನಿರ್ದೇಶಲಯ (ಇ.ಡಿ) ಪ್ರವೇಶಿಸಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದೆ.ಇದರೊಂದಿಗೆ ಕನ್ನಡಪ್ರಭ ಬಯಲಿಗೆಳೆದ ಮತ್ತೊಂದು ಪ್ರಕರಣಕ್ಕೆ ಜಾರಿ ನಿರ್ದೇಶನಾಲಯ ಪ್ರವೇಶ ಮಾಡಿದಂತಾಗಿದ್ದು, ಪ್ರಕರಣದಲ್ಲಿ ಭಾಗಿಯಾಗಿದ್ದವರಿಗೆ ಭಾರೀ ಆತಂಕ ಎದುರಾಗಿದೆ.

ಏನಿದು ಪ್ರಕರಣ?

ಗುರುಮಠಕಲ್‌ನ ಮಿಲ್‌ವೊಂದರ ಮೇಲೆ ಆಹಾರ ಅಧಿಕಾರಿಗಳು ದಾಳಿ ಮಾಡಿ 6000 ಟನ್‌ಗಳಷ್ಟು ಪಡಿತರ ಅಕ್ಕಿ ಜಪ್ತಿ ಮಾಡಿದ್ದ ಹಗರಣವನ್ನು ಕಳೆದ ವರ್ಷ ಸೆ.8ರಂದು ‘ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ’ ಶೀರ್ಷಿಕೆಯಡಿ ‘ಕನ್ನಡಪ್ರಭ’ ವರದಿ ಮಾಡಿತ್ತು.

ಇದರ ಬೆನ್ನಲ್ಲೇ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಜೊತೆಗೆ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಪ್ರಕರಣ ಸಿಐಡಿಗೆ ವಹಿಸಬೇಕೆಂದು ಕೋರಿದ್ದರು.

ಈ ಸಂಬಂಧ ಗುರುಮಠಕಲ್ ಠಾಣೆಯಲ್ಲಿ 2025ರ ಸೆ.8ರಂದು ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆಗಿರುವ ಶಂಕೆಯ ಹಿನ್ನೆಲೆಯಲ್ಲಿ ಇದೀಗ ಅಂದು ದಾಖಲಾಗಿದ್ದ ಎಫ್‌ಐಆರ್ ಸಂಖ್ಯೆ 0169/2025 ರ ಆಧಾರದ ಮೇಲೆ ಇ.ಡಿಯು ಬೆಂಗಳೂರು ಕಚೇರಿಯಲ್ಲಿ ದೂರು ದಾಖಲಿಸಿಕೊಂಡು, ತನಿಖೆ ಆರಂಭಿಸಿದೆ. ಈ ಪ್ರಕರಣದ ಕುರಿತು, ಇದೇ ಆ.20ರಂದು ಬೆಂಗಳೂರಿನ ಜಾರಿ ನಿರ್ದೇಶನಾಲಯದ ಉಪ ನಿರ್ದೇಶಕ ಬಿಕ್ರಮ್ ಗಂಗ್ವಾರ್ ಅವರು, ಗುರುಮಠಕಲ್ ಠಾಣಾಧಿಕಾರಿಗಳಿಗೆ ಪತ್ರ ಬರೆದು, ಪಿಎಂಎಲ್‌ಎ ಕಾಯ್ದೆಯ ಸೆಕ್ಷನ್ 54 ರ ಅಡಿಯಲ್ಲಿ ಅತ್ಯಂತ ತುರ್ತು ಎಂದು ಪರಿಗಣಿಸಿ, ತನಿಖೆಗೆ ಅಗತ್ಯವಿರುವ ಎಂಟು ಪ್ರಮುಖ ದಾಖಲೆಗಳ ದೃಢೀಕೃತ ಪ್ರತಿಗಳನ್ನು ನೀಡುವಂತೆ ಪೊಲೀಸರಿಗೆ ಕೇಳಿದ್ದಾರೆ.

ಅಕ್ಕಿ ಅಕ್ರಮದಲ್ಲಿ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ನಡೆದಿದೆಯೇ? ಹಗರಣದ ಹಣದಿಂದ ಆಸ್ತಿ ಮಾಡಲಾಗಿದೆಯೇ? ಎಂಬುದರ ಬಗ್ಗೆ ಇ.ಡಿ. ತನಿಖೆ ನಡೆಸಲಿದೆ. ಪೊಲೀಸ್ ತನಿಖೆಯಲ್ಲಿ ಆಸ್ತಿ ಮತ್ತು ಬ್ಯಾಂಕ್ ಖಾತೆಗಳ ವಿವರ ಬಹಿರಂಗವಾದರೆ, ಇ.ಡಿ.ಯು ಆ ಆಸ್ತಿಗಳನ್ನು ಜಪ್ತಿ ಮಾಡುವ ಸಾಧ್ಯತೆ ಇದೆ ಎಂದು ‘ಕನ್ನಡಪ್ರಭ’ಕ್ಕೆ ಮೂಲಗಳು ತಿಳಿಸಿವೆ.

ಇದಕ್ಕೆ ಪ್ರತಿಯಾಗಿ ಉತ್ತರಿಸಿರುವ ಪೊಲೀಸ್‌ ಅಧಿಕಾರಿಗಳು, ಈ ಪ್ರಕರಣ ನಮ್ಮ ಬಳಿ ಇಲ್ಲ, ಸಿಐಡಿ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಹೋಗಿದೆ ಎಂದು ತಿಳಿಸಿದ್ದಾರೆ. ಹೀಗಾಗಿ, ಇ.ಡಿ. ಅಧಿಕಾರಿಗಳು ಇನ್ನು ಮುಂದೆ ಸಿಐಡಿಯನ್ನು ಸಂಪರ್ಕಿಸಬೇಕು ಎಂದು ತಿಳಿಸಿದ್ದಾರೆ. ಅಲ್ಲದೇ, ಸಿಐಡಿಗೂ ಇ.ಡಿ. ಕೋರಿರುವ ದಾಖಲೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಏನಿದು ಅಕ್ಕಿ ಅಕ್ರಮ ಪ್ರಕರಣ ?

ಗುರುಮಠಕಲ್‌ನ ಲಕ್ಷ್ಮೀ ವೆಂಕಟೇಶ್ವರ ಹಾಗೂ ಲಕ್ಷ್ಮೀ ಬಾಲಾಜಿ ಇಂಡಸ್ಟ್ರೀಸ್‌ ಹೆಸರಿನ ರೈಸ್‌ಮಿಲ್‌ಗಳಲ್ಲಿ ಸುಮಾರು ₹1.21 ಕೋಟಿ ಮೌಲ್ಯದ 3,985 ಕ್ವಿಂಟಲ್‌ನಷ್ಟು ಪಡಿತರ ಅಕ್ಕಿ ದಾಸ್ತಾನು ಪತ್ತೆಯಾಗಿ, ಸೆ.8, 2025ರಂದು ದೂರು ದಾಖಲಾಗಿತ್ತು. ಯಾದಗಿರಿ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ಕಿ ಅಕ್ರಮ ಬಗ್ಗೆ ಹಾಗೂ ಬಡವರಿಗೆ ಸಿಗಬೇಕಾದ ಅನ್ನಭಾಗ್ಯ ಅಕ್ಕಿಯನ್ನು ಕಾಳಸಂತೆಯಲ್ಲಿ ಖರೀದಿಸಿ, ರೈಸ್‌ಮಿಲ್‌ಗಳಲ್ಲಿ ಪಾಲಿಷ್‌ ಮಾಡಿ, ಖಾಸಗಿ ಕಂಪನಿಗಳ ಹೆಸರಲ್ಲಿ ಪ್ಯಾಕಿಂಗ್‌ ಮಾಡಿ, ವಿದೇಶಗಳಿಗೆ ಕಳುಹಿಸುತ್ತಿರುವ ಜಾಲದ ಬಗ್ಗೆ ‘ಕನ್ನಡಪ್ರಭ’ ಸೆ.8ರಂದು ‘ಅನ್ನಭಾಗ್ಯ ಅಕ್ಕಿ ಫಾರಿನ್‌ಗೆ’ ಶೀರ್ಷಿಕೆಯಡಿ ಸರಣಿ ವರದಿಗಳನ್ನು ಪ್ರಕಟಿಸಿತ್ತು. ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದರು. ಸಿಐಡಿಗೆ ವಹಿಸುವಂತೆ ಸಚಿವ ಪ್ರಿಯಾಂಕ್‌ ಖರ್ಗೆ ಕೋರಿದ ಹಿನ್ನೆಲೆಯಲ್ಲಿ, ಸರ್ಕಾರ ಸಿಐಡಿ ತನಿಖೆಗೆ ಒಪ್ಪಿಸಿತ್ತು.

ಕನ್ನಡಪ್ರಭ ಬಯಲಿಗೆಳೆದ ಹಗರಣ

ಅನ್ನಭಾಗ್ಯದ ಅಕ್ಕಿ ಫಾರಿನ್‌ಗೆ ಪೂರೈಕೆ ಕುರಿತು 2025 ಸೆ.8ರಂದು ಕನ್ನಡಪ್ರಭ ಮಾತ್ರ ವರದಿ ಮಾಡಿತ್ತು.

ಏನಿದು ಹಗರಣ?

ಗುರುಮಠಕಲ್‌ನ ಎರಡು ಮಿಲ್‌ಗಳ ಮೇಲೆ ಅಧಿಕಾರಿಗಳ ದಾಳಿ

ಈ ವೇಳೆ ಎರಡು ಮಿಲ್‌ಗಳಲ್ಲಿ ಒಟ್ಟಾರೆ 6000 ಟನ್‌ ಅಕ್ಕಿ ವಶ

ವಿಚಾರಣೆ ವೇಳೆ ಇದು ಅನ್ನಭಾಗ್ಯದ ಅಕ್ಕಿ ಎಂದು ಪತ್ತೆಯಾಗಿತ್ತು

ಪಡಿತರ ಅಕ್ಕಿಯನ್ನು ಪಾಲಿಶ್‌ ಮಾಡಿ ವಿದೇಶಕ್ಕೆ ರವಾನೆ ಬೆಳಕಿಗೆ

ಈ ಬಗ್ಗೆ ಗುರುಮಠಕಲ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು

ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ನಡೆದ ಶಂಕೆ ವ್ಯಕ್ತ

ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದಿಂದಲೂ ಕೇಸು ದಾಖಲು

ಈ ಸಂಬಂಧ ಅಗತ್ಯ ದಾಖಲೆ ನೀಡುವಂತೆ ಪೊಲೀಸರಿಗೆ ಸೂಚನೆ

ಇ.ಡಿ ತನಿಖೆ ಏಕೆ?

ಅಕ್ಕಿ ಅಕ್ರಮದಲ್ಲಿ ಸಾರ್ವಜನಿಕ ಹಣದ ಅಕ್ರಮ ವರ್ಗಾವಣೆ ನಡೆದಿದೆಯೇ? ಹಗರಣದ ಹಣದಿಂದ ಆಸ್ತಿ ಮಾಡಲಾಗಿದೆಯೇ? ಎಂಬುದರ ಬಗ್ಗೆ ಇ.ಡಿ. ತನಿಖೆ ನಡೆಸಲಿದೆ. ತನಿಖೆಯಲ್ಲಿ ಆಸ್ತಿ ಮತ್ತು ಬ್ಯಾಂಕ್ ಖಾತೆಗಳ ವಿವರ ಬಹಿರಂಗವಾದರೆ, ಇ.ಡಿ.ಯು ಆ ಆಸ್ತಿಗಳನ್ನು ಜಪ್ತಿ ಮಾಡುವ ಸಾಧ್ಯತೆ ಇದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ವಿಶ್ವವೇ ಭಾರತದತ್ತ ತಿರುಗಿ ನೋಡುವ ಅಭಿವೃದ್ಧಿ: ನಾರಾಯಣಸ್ವಾಮಿ
ಹಿಪ್ಪುನೇರಳೆಯಲ್ಲಿ ಕೀಟ ನಿರ್ವಹಣೆ ಮುಂಚೂಣಿ ಪ್ರಾತ್ಯಕ್ಷಿಕೆ