ಗೇಮ್ಸ್‌ ಕ್ರಾಫ್ಟ್‌ನ 526 ಕೋಟಿ ಇ.ಡಿ. ವಶಕ್ಕೆ

Published : May 15, 2026, 07:18 AM IST
ED Raid on Gameskraft

ಸಾರಾಂಶ

ಆನ್‌ಲೈನ್ ಗೇಮಿಂಗ್ ಕಂಪನಿಯಾದ ಗೇಮ್ಸ್‌ ಕ್ರಾಫ್ಟ್‌ ಟೆಕ್ನಾಲಜಿಗೆ ಸೇರಿದ್ದ ಬೆಂಗಳೂರು, ದೆಹಲಿಯ 17 ಸ್ಥಳಗಳ ಮೇಲೆ ಹಾಗೂ ನಿರ್ದೇಶಕರ ನಿವಾಸ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು 526 ಕೋಟಿ ರು.ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

 ಬೆಂಗಳೂರು :  ಆನ್‌ಲೈನ್ ಗೇಮಿಂಗ್ ಕಂಪನಿಯಾದ ಗೇಮ್ಸ್‌ ಕ್ರಾಫ್ಟ್‌ ಟೆಕ್ನಾಲಜಿಗೆ ಸೇರಿದ್ದ ಬೆಂಗಳೂರು, ದೆಹಲಿಯ 17 ಸ್ಥಳಗಳ ಮೇಲೆ ಹಾಗೂ ನಿರ್ದೇಶಕರ ನಿವಾಸ ಮೇಲೆ ಇತ್ತೀಚೆಗೆ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು 526 ಕೋಟಿ ರು.ಮೌಲ್ಯದ ಚರಾಸ್ತಿಗಳನ್ನು ವಶಕ್ಕೆ ಪಡೆದಿದ್ದಾರೆ.

ಗೇಮ್ಸ್‌ ಕ್ರಾಫ್ಟ್‌ ಟೆಕ್ನಾಲಜಿ ಪ್ರೈವೇಟ್‌ ಲಿ. ನಿರ್ದೇಶಕರಾದ ಪೃಥ್ವಿ ರಾಜ್ ಸಿಂಗ್, ವಿಕಾಸ್ ತನೇಜಾ ಮತ್ತು ದೀಪಕ್ ಸಿಂಗ್ ಅಹ್ಲಾವತ್‌ನನ್ನು ಬಂಧಿಸಿ 3.5 ಕೋಟಿ ರು. ಮೌಲ್ಯದ 2.5 ಕೆ.ಜಿ ಚಿನ್ನ ಮತ್ತು ವಜ್ರದ ಆಭರಣ ಮತ್ತು 11 ಲಕ್ಷ ನಗದು ಸೇರಿ 526.49 ಕೋಟಿ ಮೌಲ್ಯದ ಚರಾಸ್ತಿ ವಶಪಡಿಸಿಕೊಳ್ಳಲಾಗಿದೆ ಎಂದು ಇ.ಡಿ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಇ.ಡಿ.ಅಧಿಕಾರಿಗಳು ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್‌ನ ನಿರ್ದೇಶಕರು ಮತ್ತು ಪ್ರಮುಖ ಉದ್ಯೋಗಿಗಳ ಕಚೇರಿ, ನಿವಾಸಗಳ ಮೇಲೆ ಮೇ 7 ರಿಂದ 13 ರವರೆಗೆ ದಾಳಿ ನಡೆಸಿ ಶೋಧ ಕಾರ್ಯಾಚರಣೆ ನಡೆಸಿದ್ದರು. ದಾಳಿ ವೇಳೆ ಮಹತ್ವದ ದಾಖಲೆಗಳು, ಎಲೆಕ್ಟ್ರಾನಿಕ್ ದಾಖಲೆಗಳು ಮತ್ತು ಬ್ಯಾಂಕ್ ಬ್ಯಾಲೆನ್ಸ್, ಪೇಮೆಂಟ್‌ ಗೇಟ್‌ವೇ ಬ್ಯಾಲೆನ್ಸ್, ಮ್ಯೂಚುವಲ್ ಫಂಡ್‌ಗಳು, ಬಾಂಡ್‌ಗಳು ಮತ್ತು ಸ್ಥಿರ ಠೇವಣಿಗಳು ಸೇರಿ ಚರ ಆಸ್ತಿಗಳನ್ನು ಸ್ಥಗಿತಗೊಳಿಸಲಾಗಿದೆ. ಇವುಗಳ ಮೌಲ್ಯ ಸುಮಾರು 526.49 ಕೋಟಿ ಆಗಿದೆ.

ದೇಶಾದ್ಯಂತ 3 ಕೋಟಿ ಬಳಕೆದಾರರು:

ಹಲವು ರಾಜ್ಯಗಳಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗಳ ಆಧಾರದ ಮೇಲೆ ಇ.ಡಿ. ತನಿಖೆ ಪ್ರಾರಂಭಿಸಿದ್ದು, ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ ತನ್ನ ಮೊಬೈಲ್ ಅಪ್ಲಿಕೇಶನ್ ಮೂಲಕ, ‘ರಮ್ಮಿಕಾರ್ನರ್’ ಎಂಬ ಹೆಸರಿನ ಬಿ2ಬಿ ಮೊಬೈಲ್ ಅಪ್ಲಿಕೇಶನ್ ಸೇರಿ, ವಿವಿಧ ಬ್ರಾಂಡ್‌ಗಳ ಅಡಿ ರಮ್ಮಿಕಲ್ಚರ್, ರಮ್ಮಿಪ್ರೈಮ್, ಪ್ಲೇಶಿಪ್ ಮತ್ತು ರಮ್ಮಿಟೈಮ್ ಅಡಿ ರಮ್ಮಿ ಆಟಗಳು ಮತ್ತು ಟೂರ್ನಮೆಂಟ್‌ಗಳನ್ನು ರಿಯಲ್‌ ಮನಿ ಗೇಮ್‌ಗಳನ್ನು (ಆರ್‌ಎಂಜಿ) ಆಯೋಜಿಸುವ ವ್ಯವಹಾರದಲ್ಲಿ ತೊಡಗಿತ್ತು. ದೇಶಾದ್ಯಂತ ಸುಮಾರು 3 ಕೋಟಿ ಬಳಕೆದಾರರು ಇದ್ದಾರೆ. ಆನ್‌ಲೈನ್ ರಿಯಲ್ ಮನಿ ಗೇಮಿಂಗ್ ನಿಷೇಧಿಸಲಾದ ರಾಜ್ಯಗಳಾದ ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಸೇರಿ ಇತರೆ ರಾಜ್ಯಗಳಲ್ಲಿ ದೊಡ್ಡ ಮಟ್ಟದ ಬಳಕೆದಾರರು ಇರುವುದು ತನಿಖೆಯಿಂದ ತಿಳಿದುಬಂದಿದೆ.

ಈ ನಿಷೇಧಿತ ರಾಜ್ಯಗಳಲ್ಲಿ ಬಳಕೆದಾರರಿಗೆ ತಮ್ಮ ಆನ್‌ಲೈನ್ ರಮ್ಮಿ ಗೇಮಿಂಗ್ ಸೇವೆ ಒದಗಿಸಲು, ಕಂಪನಿಯು ಅವರ ಜಿಯೋ ಲೊಕೇಶನ್ ತಿರುಚಿದೆ. ಇದಲ್ಲದೆ, ಈ ಸೇವೆಗಳನ್ನು ಒದಗಿಸಲು, ಕಂಪನಿಯು ಬಳಕೆದಾರರ ಪಾಲು/ಪಾವತಿ ಮೊತ್ತದ ಮೇಲೆ ನಿರ್ದಿಷ್ಟ ಶೇಕಡಾವಾರು ಮೊತ್ತವನ್ನು ಕಮಿಷನ್ ರೂಪದಲ್ಲಿ (ಶೇ.10 ರಿಂದ 15ವರೆಗೆ) ವಿಧಿಸುತ್ತದೆ. ಇದಲ್ಲದೆ, ಕಂಪನಿ ತನ್ನ ಗೇಮಿಂಗ್ ಪ್ಲಾಟ್‌ಫಾರ್ಮ್ ಯಾವುದೇ ಬಾಟ್‌ಗಳಿಂದ ಮುಕ್ತವಾಗಿದ್ದು ಪಾರದರ್ಶಕವಾಗಿದೆ ಮತ್ತು ಸುರಕ್ಷಿತವಾಗಿದೆ ಎಂದು ತನ್ನ ಬಳಕೆದಾರರರಿಗೆ ಭರವಸೆಯನ್ನೂ ನೀಡಿತ್ತು.

ಬಳಕೆದಾರಿಗೆ 1154 ಕೋಟಿ ರು. ನಷ್ಟ:

ಕಂಪನಿಯು ತನ್ನ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್ ರಮ್ಮಿ ಆಟ ಆಯೋಜಿಸುವಲ್ಲಿ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗಿದೆ. ಬಳಕೆದಾರರು ಇದರ ಬಗ್ಗೆ ಹೆಚ್ಚಿನ ಜ್ಞಾನವಿಲ್ಲದೆ ಹಾಗೂ ಅಲ್ಗಾರಿದಂ ಜತೆ ಆಟವಾಡುತ್ತಿದ್ದೇನೆ ಎಂಬ ಮಾಹಿತಿ ಇಲ್ಲದೆ ಭಾರೀ ಆರ್ಥಿಕ ನಷ್ಟ ಹೊಂದುವ ಜತೆಗೆ ಮಾನಸಿಕ ಯಾತನೆಯನ್ನೂ ಅನುಭವಿಸಿದ್ದಾರೆ ಎಂಬುದು ತನಿಖೆಯಲ್ಲಿ ತಿಳಿದು ಬಂದಿದೆ.

ಬಳಕೆದಾರರಿಗೆ ಆರಂಭದಲ್ಲಿ ಸಣ್ಣ ಸಣ್ಣ ಬಹುಮಾನಗಳ ಆಮಿಷಗಳನ್ನು ಒಡ್ಡಿ ಗೆಲ್ಲುವಂತೆ ಮಾಡಲಾಗುತ್ತಿತ್ತು. ಸಣ್ಣ ಮೊತ್ತದ ಹಣ ಹಿಂಪಡೆಯಲು ಅವಕಾಶ ಮಾಡಿಕೊಡಲಾಗಿತ್ತು. ಇದರಿಂದಾಗಿ ನಂಬಿಕೆ ಹೆಚ್ಚಾಗಿ ದೊಡ್ಡ ಮೊತ್ತದೊಂದಿಗೆ ಆಟವಾಡಲು ಪ್ರಾರಂಭಿಸಿದ ನಂತರ, ಕಂಪನಿಯು ಬಾಟ್‌ಗಳನ್ನು ವ್ಯವಸ್ಥಿತವಾಗಿ ಮತ್ತು ಕಾರ್ಯತಂತ್ರದಿಂದ ಬಳಸಿ ಆರ್ಥಿಕ ನಷ್ಟವನ್ನುಂಟು ಮಾಡಿದೆ. ಬಳಕೆದಾರರು ಸುಮಾರು 1,154 ಕೋಟಿ ರು. ನಷ್ಟ ಅನುಭವಿಸಿದ್ದಾರೆ ಎಂಬುದು ತನಿಖೆಯಿಂದ ಬಹಿರಂಗವಾಗಿದೆ.

ವಿದೇಶಿ ಸಂಸ್ಥೆಗಳಲ್ಲಿ ಹಣ ಹೂಡಿಕೆ:

ಕಂಪನಿ ಮತ್ತು ಅದರ ನಿರ್ದೇಶಕರು ಅಕ್ರಮವಾಗಿ ಸಂಪಾದಿಸಿದ ಹಣವನ್ನು ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿದ್ದಾರೆ. ಆರೋಪಿಗಳ ವಿರುದ್ಧ ಪಿಎಂಎಲ್‌ ಸೆಕ್ಷನ್‌ ಅಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಇ.ಡಿ ಮಾಹಿತಿ ನೀಡಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಶಾಲೆ-ಕಾಲೇಜುಗಳಲ್ಲಿ ಕೇಸರಿ ಶಾಲಿಗೆ ಅವಕಾಶವಿಲ್ಲ : ಸಿದ್ದರಾಮಯ್ಯ
7 ಜಿಲ್ಲೆಗಳಲ್ಲಿ ಮಳೆ ಅಬ್ಬರ - ದಾವಣಗೆರೆ, ಉಡುಪಿ ಜಿಲ್ಲೆಯಲ್ಲಿ ಸಿಡಿಲಿಗೆ 2 ಬಲಿ