ದಳ ರಾಜ್ಯಾಧ್ಯಕ್ಷ ಆಯ್ಕೆಗೆ ಏಪ್ರಿಲ್‌ನೊಳಗೆ ಚುನಾವಣೆ : ಯಾರನ್ನು ಆಯ್ಕೆ ಮಾಡಬೇಕೆಂಬ ಚರ್ಚೆ ಇನ್ನೂ ಆಗಿಲ್ಲ

ಸಾರಾಂಶ

ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಮುಂದಿನ ಏಪ್ರಿಲ್ ತಿಂಗಳೊಳಗೆ ಚುನಾವಣೆ ಮೂಲಕ ನಡೆಸುವ ಮೂಲಕ ಕೈಗೊಳ್ಳಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರು : ಜೆಡಿಎಸ್ ರಾಜ್ಯಾಧ್ಯಕ್ಷರ ಆಯ್ಕೆಯನ್ನು ಮುಂದಿನ ಏಪ್ರಿಲ್ ತಿಂಗಳೊಳಗೆ ಚುನಾವಣೆ ಮೂಲಕ ನಡೆಸುವ ಮೂಲಕ ಕೈಗೊಳ್ಳಲಾಗುವುದು ಎಂದು ಪಕ್ಷದ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.

ಭಾನುವಾರ ನಗರದಲ್ಲಿ ಪಕ್ಷದ ಮುಖಂಡರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಬಗ್ಗೆ ಸಭೆಯಲ್ಲಿ ಯಾವುದೇ ರೀತಿಯ ಚರ್ಚೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.

ಅಲ್ಲದೆ, ಪಕ್ಷದ ದ್ವೈವಾರ್ಷಿಕ ಸಾಂಸ್ಥಿಕ ಚುನಾವಣೆ, ಸದಸ್ಯತ್ವ ಅಭಿಯಾನವನ್ನು ಚುರುಕುಗೊಳಿಸುವುದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆ ತಯಾರಿ ಹಾಗೂ ಪಕ್ಷ ಸಂಘಟನೆ ವಿಷಯಗಳ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಮಾಡಲಾಗಿದೆ ಎಂದು ಹೇಳಿದರು.

ಪಕ್ಷದ ಸಂಘಟನೆ ಬಗ್ಗೆ ಪಕ್ಷದ ನಾಯಕರಿಗೆ ಕಠಿಣವಾಗಿಯೇ ಹೇಳಿದ್ದೇನೆ. ಯಾರು ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಗೆ ದುಡಿಯುತ್ತಾರೋ ಅಂಥವರಿಗೆ ಆದ್ಯತೆ ಕೊಡುತ್ತೇವೆ. ನಾನೂ ಪಕ್ಷ ಸಂಘಟನೆಯಲ್ಲಿ ನಿಯಮಿತವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಕುಮಾರಸ್ವಾಮಿ, ವಾರದಲ್ಲಿ ನಾಲ್ಕು ದಿನ ನವದೆಹಲಿಯ ಸಚಿವಾಲಯದಲ್ಲಿ ಕೆಲಸ ಮಾಡುತ್ತೇನೆ. ಒಂದು ಅಥವಾ ಎರಡು ದಿನ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವಾಲಯದ ಕಾರ್ಖಾನೆಗಳಿಗೆ ಭೇಟಿ ಕೊಡುತ್ತೇನೆ. ಉಳಿದ ಸಮಯವನ್ನು ಪಕ್ಷದ ಕೆಲಸಕ್ಕೆ ಮಿಸಲಿಡುತ್ತೇನೆ. ಪಕ್ಷದ ಸಂಘಟನೆ, ಸಭೆ, ಪ್ರವಾಸ, ಮಂಡ್ಯ ಕ್ಷೇತ್ರಕ್ಕೆ ಭೇಟಿ ಇತ್ಯಾದಿಗಳ ಬಗ್ಗೆ ವೇಳಾಪಟ್ಟಿ ಸಿದ್ಧ ಮಾಡಿಕೊಂಡಿದ್ದೇನೆ. ಇನ್ನು ಮುಂದೆ ಅದರಂತೆಯೇ ಕೆಲಸ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಪಕ್ಷ ಜೆಡಿಎಸ್ ಶಾಸಕರನ್ನು ಆಪರೇಷನ್ ಮಾಡುತ್ತಿದೆ, ಜೆಡಿಎಸ್‌ನಲ್ಲಿ ಗಡಗಡ, ಸಂಕ್ರಾಂತಿ ನಂತರ ಜೆಡಿಎಸ್ ಇರುವುದೇ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸಚಿವರೇ, ಮೊದಲು ನಿಮ್ಮ ಪಕ್ಷದ ಕಥೆ ನೋಡಿಕೊಳ್ಳಿ. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್‌ ಅನ್ನು ದೂರ ಇಟ್ಟು ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದೆ. ಇಂಡಿ ಕೂಟವನ್ನು ವಿಸರ್ಜನೆ ಮಾಡಿ ಎಂದು ಓಮರ್ ಅಬ್ದುಲ್ಲಾ ಹೇಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ನಾವು ಏಕಾಂಗಿಯಾಗಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸುತ್ತೇವೆ ಎಂದು ಶಿವಸೇನೆ ಹೇಳುತ್ತಿದೆ. ಅಲ್ಲೆಲ್ಲ ಎಲ್ಲಿದೆ ಕಾಂಗ್ರೆಸ್? ನಿಮ್ಮ ಪಕ್ಷದೊಳಗೆ ಏನಾಗುತ್ತಿದೆ ಎನ್ನುವುದನ್ನು ಮೊದಲು ನೋಡಿಕೊಳ್ಳಿ. ಪಾಟೀಲರೇ.. ನಿಮ್ಮ ಪಕ್ಷದ ತಟ್ಟೆಯಲ್ಲಿಯೇ ಹೆಗ್ಗಣ ಸತ್ತು ಬಿದ್ದಿದೆ ಎಂದು ಇದೇ ವೇಳೆ ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.

Share this article