ಬಿಬಿಎಂಪಿಯಿಂದಲೇ ಕನ್ನಡದ ಕಗ್ಗೊಲೆ! - ನಮ್ಮ ರಸ್ತೆ ಕಾರ್ಯಾಗಾರದಲ್ಲಿ ಎಲ್ಲವೂ ಇಂಗ್ಲಿಷ್‌ ಮಯ

ಸಾರಾಂಶ

ಬಿಬಿಎಂಪಿಯು ಆಯೋಜಿಸಿದ್ದ ನಮ್ಮ ರಸ್ತೆ ಕಾರ್ಯಾಗಾರದಲ್ಲಿ ಕನ್ನಡ ಭಾಷೆ ಕಡೆಗಣಿಸಿ ಇಂಗ್ಲಿಷ್‌ಗೆ ಪ್ರಾಧ್ಯಾನತೆ ನೀಡುವ ಜತೆಗೆ ಅಲ್ಲಲ್ಲಿ ಬಳಕೆ ಮಾಡಿದ ದೋಷ ಪೂರಿತ ಕನ್ನಡದ ಸಾಲುಗಳು ಕನ್ನಡಾಭಿಮಾನಿಗ‍ಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

 ಬೆಂಗಳೂರು : ಬಿಬಿಎಂಪಿಯು ಆಯೋಜಿಸಿದ್ದ ನಮ್ಮ ರಸ್ತೆ ಕಾರ್ಯಾಗಾರದಲ್ಲಿ ಕನ್ನಡ ಭಾಷೆ ಕಡೆಗಣಿಸಿ ಇಂಗ್ಲಿಷ್‌ಗೆ ಪ್ರಾಧ್ಯಾನತೆ ನೀಡುವ ಜತೆಗೆ ಅಲ್ಲಲ್ಲಿ ಬಳಕೆ ಮಾಡಿದ ದೋಷ ಪೂರಿತ ಕನ್ನಡದ ಸಾಲುಗಳು ಕನ್ನಡಾಭಿಮಾನಿಗ‍ಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಬಿಬಿಎಂಪಿಯ ಎಂಜಿನಿಯರಿಂಗ್‌ ವಿಭಾಗದಿಂದ ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿರುವ ನಮ್ಮ ರಸ್ತೆ ಕಾರ್ಯಾಗಾರದಲ್ಲಿ ಬೆಂಗಳೂರಿನ ರಸ್ತೆಗಳ ಕುರಿತು ಸಾಕಷ್ಟು ಮಾಹಿತಿಯನ್ನು ಪ್ರದರ್ಶಿಸಲಾಗಿತ್ತು. ಪ್ರದರ್ಶಿಸಿದ ಮಾಹಿತಿ ಎಲ್ಲವೂ ಬಹುತೇಕ ಇಂಗ್ಲಿಷ್‌ನಲ್ಲಿ ಇತ್ತು. ನೆಪ ಮಾತ್ರಕ್ಕೆ ಅಲ್ಲಲ್ಲಿ ಕನ್ನಡದ ಸಾಲುಗಳನ್ನು ಬರೆಯಲಾಗಿತ್ತು.

ನಗರದ ರಸ್ತೆಗಳಲ್ಲಿ ಸಾರ್ವಜನಿಕರು ಅನುಭವಿಸುವ ತೊಂದರೆ ಮತ್ತು ಅವರು ವ್ಯಕ್ತಪಡಿಸುವ ಭಾವನೆಗಳನ್ನು ಚಿತ್ರ ಸಹಿತ ಪ್ರದರ್ಶಿಸಲಾಗಿತ್ತು. ಅದರಲ್ಲಿ ಸಂಚಾರ ದಟ್ಟಣೆಯಲ್ಲಿ ಸಿಲುಕಿದ ನಾಗರಿಕರೊಬ್ಬರು ‘ಬೇಗ ಮೆಟ್ರೋ ನಿಲ್ದಾಣಕ್ಕೆ ಹೋದರೆ ಸಾಕು’ ಎಂಬ ಅರ್ಥೈಸಬೇಕಾದ ಸಾಲನ್ನು ಬಿಬಿಎಂಪಿಯು ‘ಮೆಟ್ರೋ ಸ್ಟೇಷನ್‌ ಬೇಗ ಹೋದ್ರೆ ಸಾಕು’ ಎಂದು ಬರೆದಿತ್ತು.

ಪುಟ್ಟ ಮಗುವಿನೊಂದಿಗೆ ರಸ್ತೆ ದಾಟುತ್ತಿರುವ ಮಹಿಳೆಯು ‘ಸರ್ಕಾರವು ರಸ್ತೆಗಳನ್ನು ಸುಲಭವಾಗಿ ದಾಟುವಂತೆ ನಿರ್ಮಿಸಬೇಕು’ ಎಂದು ವ್ಯಕ್ತಪಡಿಸಬೇಕಾದ ಸಾಲನ್ನು ಬಿಬಿಎಂಪಿಯು, ‘ಸರ್ಕಾರ ಈ ರಸ್ತೆಗಳನ್ನು ಸುಲಭವಾಗಿ ದಾಟಲು ಕೆಲಸ ಮಾಡಬೇಕು’ ಎಂದು ಬರೆದಿತ್ತು. ಇದೇ ರೀತಿಯ ಹಲವು ಲೋಪದೋಷಗಳು ಇವೆ. ಇನ್ನು ಇಂಗ್ಲಿಷ್‌ನಿಂದ ಕನ್ನಡಕ್ಕೆ ಭಾಷಾಂತರ ಮಾಡಿದ ಸಾಲುಗಳು, ಕಾಗುಣಿತ, ವಾಕ್ಯ ರಚನೆ, ಒತ್ತಕ್ಷರಗಳು ಆ ದೇವರಿಗೆ ಪ್ರೀತಿ ಎಂಬಂತಿತ್ತು ಎಂದು ಕನ್ನಡಾಭಿಮಾನಿಗಳು ಆರೋಪಿಸಿದ್ದಾರೆ.

ನಗರದಲ್ಲಿ ಅಳವಡಿಸಲಾದ ನಾಮಫಲಕದಲ್ಲಿ ಶೇ.60:40 ರಷ್ಟು ಕನ್ನಡ- ಅನ್ಯ ಭಾಷೆ ಅನುಪಾತ ಅನುಕರಣೆ ಮಾಡಬೇಕೆಂದು ನಿಯಮ ರೂಪಿಸಿಕೊಂಡಿರುವ ಬಿಬಿಎಂಪಿಯ ಅಧಿಕಾರಿಗಳೇ ಈ ರೀತಿ ಅದ್ವಾನ ಮಾಡಿದರೆ ಹೇಗೆಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ಲೋಪ ಸರಿ ಪಡಿಸಿ: ಡಿಸಿಎಂ ತಾಕೀತು

ತಪ್ಪು-ತಪ್ಪಾಗಿ ಕನ್ನಡ ಬಳಕೆಯ ಬಗ್ಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಕಾರ್ಯಕ್ರಮದ ಸಂಪೂರ್ಣ ಜವಾಬ್ದಾರಿ ವಹಿಸಿಕೊಂಡ ಪಾಲಿಕೆ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಬಿ.ಎಸ್‌.ಪ್ರಹ್ಲಾದ್‌ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ತಕ್ಷಣ ಸರಿಪಡಿಸಬೇಕು ಎಂದು ತಾಕೀತು ಮಾಡಿದ್ದಾರೆ.

ಇನ್ನು ಕನ್ನಡ ತಪ್ಪಾಗಿ ಬಳಕೆ ಮಾಡಿರುವುದನ್ನು ಕಣ್ಣಾರೆ ಕಂಡ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ತಲೆತಗ್ಗಿಸಿಕೊಂಡು ಮಾಧ್ಯಮಗಳಿಗೆ ಉತ್ತರಿಸದೇ ಸಭಾಂಗಣದಿಂದ ಹೊರ ಹೋದ ಪ್ರಸಂಗವೂ ನಡೆಯಿತು. ಬಳಿಕ ಮಾತನಾಡಿ, ಸಂಬಂಧಪಟ್ಟ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ತಪ್ಪುಗಳನ್ನು ಸರಿಪಡಿಸಲಾಗುವುದು ಎಂದು ತುಷಾರ್‌ ಗಿರಿನಾಥ್‌ ಮಾಧ್ಯಮಗಳಿಗೆ ತಿಳಿಸಿದರು.

Share this article