ಸ್ಟಿಂಗ್‌ ತನಿಖೆಗಾಗಿ ಮೊದಲ ಬಾರಿ ಬೀದಿ ಹೋರಾಟ

Published : Oct 18, 2026, 05:42 AM IST
JDS

ಸಾರಾಂಶ

ರಾಜ್ಯ ರಾಜಕಾರಣದಲ್ಲಿ ಸಂದಿಗ್ದ ವಾತಾವರಣ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಹಗರಣ ವಿರುದ್ಧ ಇದೇ ಮೊದಲ ಬಾರಿಗೆ ಬೀದಿ ಹೋರಾಟ ಆರಂಭಗೊಂಡಿದ್ದು, ಜೆಡಿಎಸ್‌ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ನಡೆಯಿತು.

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಸಂದಿಗ್ದ ವಾತಾವರಣ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ಹಗರಣ ವಿರುದ್ಧ ಇದೇ ಮೊದಲ ಬಾರಿಗೆ ಬೀದಿ ಹೋರಾಟ ಆರಂಭಗೊಂಡಿದ್ದು, ಜೆಡಿಎಸ್‌ ರಾಜ್ಯಾಧ್ಯಕ್ಷ, ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ಹಾಗೂ ರಾಜ್ಯಪೊಲೀಸ್‌ ಮಹಾನಿರ್ದೇಶಕರ ಕಚೇರಿಗೆ ಮುತ್ತಿಗೆ ಹಾಕಲು ಯತ್ನ ನಡೆಯಿತು.

ಸ್ಟಿಂಗ್‌ ಆಪರೇಷನ್‌ ರೂವಾರಿಗಳನ್ನು ಬಂಧಿಸಲು ನೀಡಿದ್ದ 2 ದಿನಗಳ ಗಡುವು ಮುಕ್ತಾಯವಾದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಅವರು ಶನಿವಾರ ಪೊಲೀಸ್‌ ಮಹಾನಿರ್ದೇಶಕರ ಕಚೇರಿಗೆ ಮುಖಂಡರೊಂದಿಗೆ ತೆರಳಿ ಮನವಿ ಸಲ್ಲಿಸಿದರು. ನಂತರ ವಿಜಯದಶಮಿ ನಂತರ ಸ್ಟಿಂಗ್ ಆಪರೇಷನ್‌ ವಿರುದ್ಧ ರಾಜ್ಯಾದ್ಯಂತ ತೀವ್ರವಾಗಿ ಹೋರಾಟ ಮಾಡುವುದಾಗಿ ಘೋಷಿಸಿದರು.

ಜೆಡಿಎಸ್‌ ಕಚೇರಿಯಿಂದ ಪಾದಯಾತ್ರೆ:

ಇದಕ್ಕೂ ಮುನ್ನ ಸ್ಟಿಂಗ್ ಸಂಚುಕೋರರನ್ನು ಬಂಧಿಸದ ಹಿನ್ನೆಲೆಯಲ್ಲಿ ಪಕ್ಷದ ಕಚೇರಿಯಲ್ಲಿ ಶಾಸಕರು ಹಾಗೂ ಮುಖಂಡರ ಜತೆ ಸಭೆ ನಡೆಸಿದ ಕುಮಾರಸ್ವಾಮಿ, ಡಿ.ಜಿ.ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ಮುತ್ತಿಗೆ ಹಾಕುವ ನಿರ್ಧಾರ ಕೈಗೊಂಡರು.

ಶೇಷಾದ್ರಿಪುರದ ಜೆಡಿಎಸ್ ಕಚೇರಿಯಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಕಾರ್ಯಕರ್ತರು, ಮುಖಂಡರೊಂದಿಗೆ ಪಾದಯಾತ್ರೆ ಎಚ್‌.ಡಿ.ಕುಮಾರಸ್ವಾಮಿ ಪಾದಯಾತ್ರೆ ನಡೆಸಿದರು. ಪೊಲೀಸರು ಹೆಜ್ಜೆ ಹೆಜ್ಜೆಗೂ ಪಾದಯಾತ್ರೆಗೆ ಅಡ್ಡಿಪಡಿಸಿದರು, ಪಾದಯಾತ್ರೆ ಕೈಬಿಡುವಂತೆ ಸಚಿವರ ಮನವೊಲಿಸಲು ವಿಫಲ ಪ್ರಯತ್ನ ನಡೆಸಿದರು.

ಪೊಲೀಸ್ ಕೋಟೆ ನಿರ್ಮಾಣ:

ಸ್ವಾತಂತ್ರ್ಯ ಉದ್ಯಾನದಿಂದ ಮುಂದಕ್ಕೆ ಹೋಗಲು ಅವಕಾಶ ಆಗದಂತೆ ಪೊಲೀಸರು ಬಸ್ಸುಗಳನ್ನು ರಸ್ತೆಗೆ ಅಡ್ಡಲಾಗಿ ನಿಲ್ಲಿಸಿ ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರು. ಇಡೀ ಪ್ರದೇಶದಲ್ಲಿ ಪೊಲೀಸ್ ಕೋಟೆ ನಿರ್ಮಾಣ ಮಾಡಿದ್ದರು. ಈ ವೇಳೆ ತಳ್ಳಾಟ ನೂಕಾಟ ನಡೆದಿದ್ದು, ಭಾರೀ ಹೈಡ್ರಾಮಾವೇ ನಡೆಯಿತು. ಆದರೆ ಯಾವುದೇ ಕಾರಣಕ್ಕೂ ಅಶಾಂತಿಗೆ ಅವಕಾಶ ಕೊಟ್ಟು ಪಾದಯಾತ್ರೆ ಹಳಿ ತಪ್ಪುವುದು ಬೇಡ ಎಂದು ಮುಖಂಡರು ಮತ್ತು ಕಾರ್ಯಕರ್ತರಿಗೆ ಕುಮಾರಸ್ವಾಮಿ ಹೇಳಿದರು.

ಪ್ರತಿಭಟನೆ-ಸಂಚಾರ ಅಸ್ತವ್ಯಸ್ತ:

ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಮಹಾನಿರ್ದೇಶಕರ (ಡಿ.ಜಿ) ಕಚೇರಿ ಆವರಣದಲ್ಲಿ ಹೈಡ್ರಾಮಾ ನಡೆಯಿತು. ಎಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್‌ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಡಿ.ಜಿ. ಕಚೇರಿಯ ಗೇಟ್ ಬಳಿ ಜಮಾಯಿಸಿ, ಪಾದಚಾರಿ ಮಾರ್ಗ ಹಾಗೂ ರಸ್ತೆ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು. ಇದರಿಂದ ಕೆಲಕಾಲ ವಾಹನ ಸಂಚಾರ ದಟ್ಟಣೆ ಉಂಟಾಯಿತು.

ಇದೇ ವೇಳೆ, ಡಿ.ಜಿ. ಕಚೇರಿ ಗೇಟ್ ಬಳಿ ಸೇರಿದ್ದ ಪ್ರತಿಭಟನಾಕಾರರು ಒಳಗೆ ನುಗ್ಗಲು ಯತ್ನಿಸಿದರಾದರೂ ಪೊಲೀಸರು ಅವರನ್ನು ತಡೆದರು. ದಿಢೀರ್‌ ಪ್ರತಿಭಟನೆಯಿಂದಾಗಿ ಕೆ.ಆರ್.ವೃತ್ತದಿಂದ ಹಡ್ಸನ್ ವೃತ್ತ ಕಡೆಗೆ ಸಾಗುವ ವಾಹನಗಳು ಸೇರಿದಂತೆ ನೃಪತುಂಗ ರಸ್ತೆಯಲ್ಲಿನ ಸಂಚಾರ ಒಂದು ಗಂಟೆಗೂ ಹೆಚ್ಚು ಕಾಲ ಅಸ್ತವ್ಯಸ್ತಗೊಂಡಿತು.

ಅರ್ಧ ಗಂಟೆಗೂ ಹೆಚ್ಚು ಕಾಲ ಚರ್ಚೆ:

ಸ್ಟಿಂಗ್ ಆಪರೇಷನ್‌ ಪ್ರಕರಣ ಸಂಬಂಧ ಡಿಜಿ-ಐಜಿಪಿ ಡಾ.ಎಂ.ಎ.ಸಲೀಂ ಅವರನ್ನು ಭೇಟಿಯಾದ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಪ್ರಕರಣ ಕುರಿತು ಚರ್ಚೆ ನಡೆಸಿ ಮನವಿ ಅರ್ಪಿಸಿದರು.

ಈ ವೇಳೆ ಮಾಧ್ಯಮದ ಮೂಲಕ ನೇರವಾಗಿ ನಾನೇ ಸ್ಟಿಂಗ್ ಮಾಡಿದ್ದು, ನನ್ನದೇ ಧ್ವನಿ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾನೆ. ಆದರೆ, ಪೊಲೀಸ್ ಇಲಾಖೆ ಮಾತ್ರ ಆತನಿಗೆ ಕನಿಷ್ಠ ಒಂದು ನೋಟಿಸ್‌ ಕೂಡ ಕೊಡುತ್ತಿಲ್ಲ. ಈತನ ವಿರುದ್ಧದ 13 ಪ್ರಕರಣಗಳಲ್ಲಿ ವಾರೆಂಟ್‌ ಇದ್ದು, ಈವರೆಗೂ ಯಾಕೆ ಕ್ರಮಕೈಗೊಂಡಿಲ್ಲ? ಆತನಿಗೆ ಶಸ್ತ್ರಸಜ್ಜಿತ ಪೊಲೀಸ್ ಭದ್ರತೆ ಯಾವ ಕಾರಣಕ್ಕೆ ಕೊಡಲಾಗಿದೆ. ಯಾವ ಮಾನದಂಡದಲ್ಲಿ ಕೊಡಲಾಗಿದೆ ಎಂದು ಪ್ರಶ್ನಿಸಿದರು.

ವೈರಲ್ ಆಗಿರುವ ಮತ್ತೊಂದು ವಿಡಿಯೋದಲ್ಲಿ ಕಾಂಗ್ರೆಸ್ ನಾಯಕಿಯೊಬ್ಬರು ಸಂತ್ರಸ್ತೆ ಎನ್ನಲಾದ ಮಹಿಳೆ ಜತೆಯೂ ಸ್ಟಿಂಗ್ ಬಗ್ಗೆ ಮಾತನಾಡುತ್ತಾರೆ. ಅಲ್ಲದೆ, ಬಾಗೇಪಲ್ಲಿ ರೌಡಿಶೀಟರ್ ಪ್ರಶಾಂತ್‌ ಸ್ಟಿಂಗ್‌ ಆಪರೇಷನ್‌ನಲ್ಲಿ ಭಾಗಿಯಾಗಿದ್ದಾನೆ ಎಂಬುದು ಬೆಳಕಿಗೆ ಬಂದಿದೆ. ಆದರೂ ಆತನನ್ನು ಪೊಲೀಸ್ ಇಲಾಖೆ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿಲ್ಲ. ಪ್ರಕರಣದ ಗಂಭೀರತೆ ಅರಿತು ತಪ್ಪಿತಸ್ಥರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವಂತೆ ಡಿಜಿಪಿ ಅವರಿಗೆ ಕೋರಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿಜಿಪಿ ಎಂ.ಎ.ಸಲೀಂ ಅವರು, ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಕೆಲ ದಿನಗಳ ಸಮಯವಕಾಶ ಕೊಡಿ. ಅಷ್ಟರೊಳಗೆ ಆರೋಪಿಗಳ ಬಂಧಿಸಿ ಕ್ರಮಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.

ಈ ವೇಳೆ ಶಾಸಕರಾದ ಸುರೇಶ್‌ ಬಾಬು, ಕರೆಮ್ಮನಾಯಕ್‌, ಮಾಜಿ ಶಾಸಕರಾದ ಸಾ.ರಾ.ಮಹೇಶ್‌. ಅಖಂಡ ಶ್ರೀನಿವಾಸ್ ಮೂರ್ತಿ, ಡಿ.ಸಿ.ತಮ್ಮಣ್ಣ, ಬಂಡೆಪ್ಪ ಕಾಶೆಂಪುರ, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಸಿ.ಎನ್‌.ಮಂಜೇಗೌಡ ಹಾಗೂ ಇತರೆ ಮುಖಂಡರು ಇದ್ದರು.

ಟಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ

ಮತ್ತೊಂದೆಡೆ ಸ್ಟಿಂಗ್‌ ಆಪರೇಷನ್‌ ರೂವಾರಿಗಳನ್ನು ಬಂಧಿಸುವಂತೆ ಆಗ್ರಹಿಸಿ ಕಾರ್ಪೋರೇಷನ್‌ ವೃತ್ತದ ಬಳಿ ಜಿಬಿಎ ಜೆಡಿಎಸ್ ಕಾರ್ಯಾಧ್ಯಕ್ಷರು ಟಿ.ಆರ್.ತುಳಸಿರಾಮ್ ಅವರ ನೇತೃತ್ವದಲ್ಲಿ ಟೈಯರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ತನಿಖೆ ಆಗಲಿ

ವ್ಯಕ್ತಿಯೊಬ್ಬ ನಾನೇ ಸ್ಟಿಂಗ್ ಮಾಡಿದ್ದು, ನನ್ನದೇ ಧ್ವನಿ ಎಂದು ಘಂಟಾಘೋಷವಾಗಿ ಹೇಳುತ್ತಿದ್ದಾನೆ. ಆದರೆ, ಪೊಲೀಸರು 1 ನೋಟಿಸ್‌ ಕೂಡ ಕೊಡುತ್ತಿಲ್ಲ. ಸಂತ್ರಸ್ತೆ ಎನ್ನಲಾದ ಮಹಿಳೆ ಜತೆಯೂ ಸ್ಟಿಂಗ್ ಬಗ್ಗೆ ಮಾತನಾಡುತ್ತಾರೆ. ಈ ಬಗ್ಗೆ ತನಿಖೆ ಆಗಲಿ.

- ಎಚ್.ಡಿ. ಕುಮಾರಸ್ವಾಮಿ, ಕೇಂದ್ರ ಸಚಿವ

ಆಗಿದ್ದೇನು?

- ಗಣ್ಯರ ಮೇಲಿನ ಸ್ಟಿಂಗ್‌ ಆಪರೇಷನ್‌ ಪ್ರಕರಣಕ್ಕೆ ತಿರುವು

- ‘ಸ್ಟಿಂಗ್‌’ ವಿರುದ್ಧ ತನಿಖೆಗೆ ಹೋರಾಟಕ್ಕೆ ಧುಮುಕಿದ ದಳ

- ಡಿ.ಜಿ ಕಚೇರಿಗೆ ಪಾದಯಾತ್ರೆ ತೆರಳಿ ಮುತ್ತಿಗೆಗೆ ಪ್ರಯತ್ನ

- ಸ್ಟಿಂಗ್‌ ಬಗ್ಗೆ ತನಿಖೆಗೆ ಆಗ್ರಹಿಸಿ ಕುಮಾರಸ್ವಾಮಿ ಮನವಿ

- ಡಿಜಿ ಕಚೇರಿಗೆ ಮುಖಂಡರ ಜತೆ ತೆರಳಿ ಮನವಿ ಪತ್ರ ಸಲ್ಲಿಕೆ

- ವಿಜಯದಶಮಿ ನಂತರ ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ

- ಈ ಬಗ್ಗೆ ಪರಿಶೀಳಿಸಿ ಕ್ರಮ: ಡಿಜಿ-ಐಜಿ ಎಂ.ಎ. ಸಲೀಂ ಭರವಸೆ

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಜೋಶಿ ಮನೆ ಮುಂದೆ ರೈತ ಹೋರಾಟಕ್ಕೆ ಕೋರ್ಟ್‌ ಬ್ರೇಕ್‌
ಆರೋಗ್ಯಕರ ಸಮಾಜಕ್ಕೆ ಶಿಬಿರಗಳು ಪೂರಕ: ವಿಠಲ್‌ ಕವಾಳೆ