ಕ್ವಿನ್‌ ಸಿಟಿ ನಿರ್ಮಾಣದ ಮೊದಲ ಹಂತದ ಪ್ರಕ್ರಿಯೆಗೆ ಚಾಲನೆ : 40 ಸಾವಿರ ಕೋಟಿ ರು. ಹೂಡಿಕೆ

ಸಾರಾಂಶ

ಕ್ವಿನ್‌ (ಕೆಡಬ್ಲ್ಯುಐಎನ್‌) ಸಿಟಿ ನಿರ್ಮಾಣಕ್ಕೆ ಆರಂಭಿಕ ಪ್ರಕ್ರಿಯೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ   ಚಾಲನೆ ನೀಡಿದ್ದು, ಬರೋಬ್ಬರಿ 5,800 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಕ್ವಿನ್‌ ಸಿಟಿಗೆ ಮಾಸ್ಟರ್‌ ಪ್ಲ್ಯಾನ್‌ ರೂಪಿಸಲು ಖಾಸಗಿ ಸಂಸ್ಥೆ ನೇಮಕಕ್ಕೆ ಮುಂದಾಗಿದೆ.

ಗಿರೀಶ್‌ ಗರಗ

 ಬೆಂಗಳೂರು : ರಾಜ್ಯದ ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸಂಬಂಧಿಸಿದಂತೆ ನಿರ್ಮಿಸಲು ಮುಂದಾಗಿರುವ ಕ್ವಿನ್‌ (ಕೆಡಬ್ಲ್ಯುಐಎನ್‌) ಸಿಟಿ ನಿರ್ಮಾಣಕ್ಕೆ ಆರಂಭಿಕ ಪ್ರಕ್ರಿಯೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಚಾಲನೆ ನೀಡಿದ್ದು, ಬರೋಬ್ಬರಿ 5,800 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿರುವ ಕ್ವಿನ್‌ ಸಿಟಿಗೆ ಮಾಸ್ಟರ್‌ ಪ್ಲ್ಯಾನ್‌ (ಮಹಾಯೋಜನೆ) ರೂಪಿಸಲು ಖಾಸಗಿ ಸಂಸ್ಥೆ ನೇಮಕಕ್ಕೆ ಮುಂದಾಗಿದೆ.

ಗುಜರಾತ್‌ನ ಗಿಫ್ಟ್‌ ಸಿಟಿ ಮಾದರಿಯ, ಆದರೆ, ಅದಕ್ಕಿಂತ 6 ಪಟ್ಟು ದೊಡ್ಡದಾದ ಕ್ವಿನ್‌ ಸಿಟಿ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಸ್ಮಾರ್ಟ್ ಲಿವಿಂಗ್‌ ಪರಿಕಲ್ಪನೆಯಲ್ಲಿ ನಿರ್ಮಾಣಗೊಳ್ಳಲಿರುವ ಕ್ವಿನ್‌ ಸಿಟಿಯು ಜ್ಞಾನ, ಆರೋಗ್ಯ ಮತ್ತು ನಾವೀನ್ಯತೆಯ ನಗರವಾಗಿ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಯೋಜನೆ ಘೋಷಿಸಲಾಗಿತ್ತು. ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕುಗಳ ನಡುವೆ 5,800 ಎಕರೆ ಪ್ರದೇಶದಲ್ಲಿ ಕ್ವಿನ್‌ ಸಿಟಿ ನಿರ್ಮಿಸಲು ನಿರ್ಧರಿಸಲಾಗಿದ್ದು, ಕೆಐಎಡಿಬಿ ನಿರ್ವಹಣೆಯಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದೆ.

ಮಾಸ್ಟರ್‌ ಪ್ಲ್ಯಾನ್‌-ಡಿಪಿಆರ್‌:

ಕ್ವಿನ್‌ ಸಿಟಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಆರಂಭಿಕ ಪ್ರಕ್ರಿಯೆಗೆ ಕೆಐಎಡಿಬಿ ಚಾಲನೆ ನೀಡಿದೆ. ಕ್ವಿನ್‌ ಸಿಟಿಯು ದೊಡ್ಡಬಳ್ಳಾಪುರ ಮತ್ತು ನೆಲಮಂಗಲ ತಾಲೂಕು ವ್ಯಾಪ್ತಿಯ 5,800 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳಲಿದೆ. ಆದರೆ, ಮೊದಲ ಹಂತದಲ್ಲಿ 2 ಸಾವಿರ ಎಕರೆ ಭೂಮಿಯಲ್ಲಿ ಕ್ವಿನ್‌ ಸಿಟಿ ನಿರ್ಮಾಣಗೊಳ್ಳಲಿದೆ. ಈ ಯೋಜನೆಗೆ ಸಂಬಂಧಿಸಿದಂತೆ ಈಗಲೇ ಒಟ್ಟು 5,800 ಎಕರೆಗೆ ಮಾಸ್ಟರ್‌ ಪ್ಲ್ಯಾನ್‌ ಸಿದ್ಧಪಡಿಸುವುದು ಹಾಗೂ ಕ್ವಿನ್‌ ಸಿಟಿ ಮೊದಲ ಹಂತದ ನಿರ್ಮಾಣಕ್ಕೆ ವಿವರ ಯೋಜನಾ ವರದಿ ಸಿದ್ಧಪಡಿಸಲು ಖಾಸಗಿ ಸಂಸ್ಥೆ ನೇಮಿಸಲು ನಿರ್ಧರಿಸಲಾಗಿದ್ದು, ಅದಕ್ಕಾಗಿ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಒಂದು ತಿಂಗಳಲ್ಲಿ ವರದಿ ಸಲ್ಲಿಕೆ:

ಕೆಐಎಡಿಬಿ ಚಾಲನೆ ನೀಡಿರುವ ಟೆಂಡರ್‌ ಪ್ರಕ್ರಿಯೆಯಲ್ಲಿ ಮಾಸ್ಟರ್ ಪ್ಲ್ಯಾನ್ ಹಾಗೂ ಡಿಪಿಆರ್‌ ಸಿದ್ಧಪಡಿಸುವ ಸಂಸ್ಥೆ ಒಂದೂವರೆ ತಿಂಗಳಲ್ಲಿ (6 ವಾರಗಳಲ್ಲಿ) ವರದಿ ಸಲ್ಲಿಸಿ ಅನುಮೋದನೆ ಪಡೆಯಬೇಕಿದೆ. ಅಲ್ಲದೆ, ಒಂದು ತಿಂಗಳಲ್ಲಿ (4 ವಾರ) ಕರಡು ಮಾಸ್ಟರ್ ಪ್ಲ್ಯಾನ್ ಹಾಗೂ ಡಿಪಿಆರ್‌ ಸಲ್ಲಿಸಬೇಕು, ನಂತರದ ಒಂದು ವಾರದಲ್ಲಿ ಕರಡು ವರದಿಯಲ್ಲಿ ತಿದ್ದುಪಡಿ ಮಾಡಿ ಅಂತಿಮ ಅನುಮೋದನೆಗೆ ಸಲ್ಲಿಸಬೇಕು ಎಂದು ಕೆಐಎಡಿಬಿ ತಿಳಿಸಿದೆ.

ಜತೆಗೆ, ಮಾಸ್ಟರ್ ಪ್ಲ್ಯಾನ್ ಹಾಗೂ ಡಿಪಿಆರ್‌ ಸಿದ್ಧಪಡಿಸಲು ಟೆಂಡರ್ ಪಡೆಯುವ ಸಂಸ್ಥೆಯ ಕಾರ್ಯದ ಮೇಲೆ ನಿಗಾವಹಿಸಲು ಕೆಐಎಡಿಬಿ ಸಮಿತಿಯನ್ನು ನೇಮಿಸಲಿದೆ. ಕೆಐಎಡಿಬಿ ಮುಖ್ಯ ಎಂಜಿನಿಯರ್‌ ಜತೆಗೆ ಕೆಐಎಡಿಬಿಯ ಸೂಪರಿಟೆಂಡ್‌ ಎಂಜಿನಿಯರ್‌, ಇಇ, ಎಇಇ, ಎಇ ಹಾಗೂ ವಲಯ ಅಧಿಕಾರಿಗಳು ಸಮಿತಿಯಲ್ಲಿ ಇರಲಿದ್ದಾರೆ.

5 ಲಕ್ಷ ಜನಕ್ಕೆ ವಸತಿ ಸಾಮರ್ಥ್ಯ

ಕ್ವಿನ್‌ ಸಿಟಿಯು 5 ಲಕ್ಷ ಜನ ವಸತಿ ಸಾಮರ್ಥ್ಯ ಹೊಂದಿರುವಂತೆ ನಿರ್ಮಿಸಲಾಗುತ್ತದೆ. ಅಲ್ಲದೆ, ಸೋಲಾರ್‌ ವಿದ್ಯುತ್‌, ಹಸಿರು ಪರಿಕಲ್ಪನೆ, ತ್ಯಾಜ್ಯ ಮರುಬಳಕೆ ಸೇರಿದಂತೆ ಪರಿಸರ ಸ್ನೇಹಿ ಕ್ರಮಗಳು ಹಾಗೂ ಆಧುನಿಕ ಮೂಲಸೌಕರ್ಯಗಳು ಇರಲಿವೆ. ಕ್ವಿನ್‌ ಸಿಟಿಯು ಸ್ಮಾರ್ಟ್‌ ನಗರವಾಗಿ ನಿರ್ಮಾಣವಾಗಲಿದ್ದು, ಇದರಲ್ಲಿ 40 ಸಾವಿರ ಕೋಟಿ ರು. ಹೂಡಿಕೆ ಹಾಗೂ 1 ಲಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆ ಹೊಂದಲಾಗಿದೆ.

ಕ್ವಿನ್‌ ಸಿಟಿಯನ್ನು ಕೈಗಾರಿಕಾಭಿವೃದ್ಧಿಯ ಜತೆಗೆ ಜ್ಞಾನ, ಆರೋಗ್ಯ ಹಾಗೂ ನಾವಿನ್ಯತಾ ನಗರವನ್ನಾಗಿ ನಿರ್ಮಿಸಲಾಗಿಸಲಾಗುತ್ತದೆ. ಅದರಂತೆ 500ಕ್ಕೂ ಹೆಚ್ಚಿನ ದೇಶಿ ಮತ್ತು ವಿದೇಶಿ ಶಿಕ್ಷಣ ಸಂಸ್ಥೆಗಳ ಸ್ಥಾಪನೆ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಆಸ್ಪತ್ರೆಗಳ ನಿರ್ಮಾಣ, ಬಾಹ್ಯಾಕಾಶ ತಂತ್ರಜ್ಞಾನ, ಸೆಮಿ ಕಂಡಕ್ಟರ್‌, ವೈಮಾಂತರಿಕ್ಷ ಮತ್ತು ರಕ್ಷಣೆ ಕ್ಷೇತ್ರಗಳ ಕೈಗಾರಿಕೆಗಳ ಸ್ಥಾಪನೆ ಹಾಗೂ ಸಂಶೋಧನಾ ಕ್ಷೇತ್ರಕ್ಕೆ ಕ್ವಿನ್‌ ಸಿಟಿಯಲ್ಲಿ ಒತ್ತು ನೀಡಲಾಗುತ್ತದೆ.

Share this article