ಬೆಂಗಳೂರು: ರಾಜ್ಯದಲ್ಲಿ ಹೃದಯಾಘಾತಕ್ಕೆ ಬಲಿಯಾಗುವವರ ಸಂಖ್ಯೆ ಏರಿಕೆಯಾಗುತ್ತಿದ್ದು, ಕಳೆದ 2 ದಿನದಲ್ಲಿ ಹಾರ್ಟ್ ಅಟ್ಯಾಕ್‌ಗೆ ಐವರು ಮೃತಪಟ್ಟಿದ್ದಾರೆ. ದಾವಣಗೆರೆ ತಾಲೂಕಿನ ನಾಗರಕಟ್ಟೆ ನಿವಾಸಿ ಮಂಜಾ ನಾಯ್ಕ್ (31) ಆಟೋ ಓಡಿಸುತ್ತಿದ್ದಾಗಲೇ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಇನ್ನು ದಾವಣಗೆರೆ ರೇಲ್ವೆ ನಿಲ್ದಾಣ ಬಳಿ ಆಟೋದಲ್ಲಿ ಕುಳಿತಲ್ಲಿಯೇ ಚಾಲಕ ಎಸ್.ಸಂಗಪ್ಪ ಕೊನೆಯುಸಿರೆಳೆದಿದ್ದಾರೆ. ದಕ್ಷಿಣ ಕನ್ನಡದ ಮೂಲ್ಕಿ ಬಳಿಯ ನಿವಾಸಿ, ಡಿಪ್ಲೋಮಾ ವಿದ್ಯಾರ್ಥಿ ಅಫ್ತಾಬ್ (18) ಸೋಮವಾರ ಮನೆಯಲ್ಲಿ ಸ್ನಾನಕ್ಕೆ ಹೋಗುತ್ತಿದ್ದಾಗ ಕುಸಿದು ಬಿದ್ದು, ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಅಟ್ಟುವನಹಳ್ಳಿ ನಿವಾಸಿ ಪುಟ್ಟಸ್ವಾಮಿ (55) ಜಮೀನಿನಿಂದ ಮೇಕೆಗಳಿಗೆ ಮೇವು ತಂದಿದ್ದು, ನೀರು ಕುಡಿಯುವಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದ ಕರೀಗೌಡ (65) ಇದ್ದಕ್ಕಿದ್ದಂತೆ ಮನೆಯಲ್ಲಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ ಹೋಗುವ ಮಾರ್ಗ ಮಧ್ಯೆ ಸಾವಿಗೀಡಾಗಿದ್ದಾರೆ.