ರಾಜ್ಯಾದ್ಯಂತ ಪೆಟ್ರೋಲ್‌, ಗ್ಯಾಸ್‌ಗೆ ಪರದಾಟ

Published : Mar 27, 2026, 11:08 AM IST
LPG gas Connection

ಸಾರಾಂಶ

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಇಂಧನ ಸಂಕಷ್ಟ ಮುಂದುವರಿದಿದ್ದು, ಕೊಪ್ಪಳ, ರಾಯಚೂರು,  ಕಲಬುರಗಿ ಸೇರಿ ರಾಜ್ಯದ ಹಲವೆಡೆ ಪೆಟ್ರೋಲ್‌ ಬಂಕ್‌ಗಳಿಗೆ ವಾಹನ ಸವಾರರು ಮುಗಿ ಬೀಳುತ್ತಿದ್ದಾರೆ.

  ಬೆಂಗಳೂರು: ಮಧ್ಯಪ್ರಾಚ್ಯ ಯುದ್ಧದಿಂದಾಗಿ ಇಂಧನ ಸಂಕಷ್ಟ ಮುಂದುವರಿದಿದ್ದು, ಕೊಪ್ಪಳ, ರಾಯಚೂರು, ಕಲಬುರಗಿ ಸೇರಿ ರಾಜ್ಯದ ಹಲವೆಡೆ ಪೆಟ್ರೋಲ್‌ ಬಂಕ್‌ಗಳಿಗೆ ವಾಹನ ಸವಾರರು ಮುಗಿ ಬೀಳುತ್ತಿದ್ದಾರೆ. ಇದೇ ವೇಳೆ, ಬೀದರ್‌, ಕಂಪ್ಲಿ, ಕೊಪ್ಪಳ, ನರಗುಂದ ಸೇರಿ ರಾಜ್ಯದ ಹಲವೆಡೆ ಅಡುಗೆ ಅನಿಲಕ್ಕಾಗಿ ಗ್ರಾಹಕರ ಪರದಾಟ ಗುರುವಾರವೂ ಮುಂದುವರಿಯಿತು.

ನಯಾರ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಏರಿಕೆ ಮಾಡಿರುವುದು ನಾನಾ ವದಂತಿಗೆ ಕಾರಣವಾಗಿದ್ದು, ಇತರ ಬಂಕ್‌ಗಳ ಮುಂದೆ ವಾಹನ ಸವಾರರು ‘ಕ್ಯೂ’ ನಿಲ್ಲುವಂತಾಗಿದೆ. ಬಹುತೇಕ ವಾಹನ ಸವಾರರು ಫುಲ್‌ ಟ್ಯಾಂಕ್‌ ಮಾಡಿಸುತ್ತಿದ್ದು, ಇಂಧನ ಬೇಗನೆ ಖಾಲಿಯಾಗುತ್ತಿದೆ. ಕೊಪ್ಪಳದ ಕಾರ್ಗಿಲ್ ಪೆಟ್ರೋಲ್ ಬಂಕ್‌ಗೆ ವಾಹನ ಸವಾರರು ಮುಗಿಬಿದ್ದ ಕಾರಣ, ಬಂಕ್‌ ಮುಂದೆ ‘ನೋ ಸ್ಟಾಕ್, ದಯಮಾಡಿ ಗ್ರಾಹಕರು ಸಹಕರಿಸಬೇಕು’ ಎಂದು ಬೋರ್ಡ್ ಹಾಕಲಾಗಿದೆ.

ರಾಯಚೂರು ಜಿಲ್ಲೆಯಾದ್ಯಂತ 192 ಪೆಟ್ರೋಲ್ ಬಂಕ್‌ಗಳಿದ್ದು, ಬುಧವಾರದಿಂದ ರಾಯಚೂರು ನಗರದ 8 ಬಂಕ್‌ಗಳು ಬಂದ್ ಆಗಿವೆ. ಹೀಗಾಗಿ, ಇತರ ಬಂಕ್‌ಗಳ ಮುಂದೆ ರಶ್‌ ಇತ್ತು. ವಾಹನ ಸವಾರರನ್ನು ನಿಯಂತ್ರಿಸಲು ರಾಯಚೂರಿನ ರಾಮಮಂದಿರ ಪೆಟ್ರೋಲ್‌ ಬಂಕ್‌ನಲ್ಲಿ ಪೊಲೀಸ್‌ ಭದ್ರತೆ ಆಯೋಜಿಸಲಾಗಿತ್ತು. ಕಲಬುರಗಿಯ ಅವಿನಾಶ್ ಪೆಟ್ರೋಲ್ ಬಂಕ್‌ ನಲ್ಲಿ ಬುಧವಾರ ತಡರಾತ್ರಿವರೆಗೂ ಕಾದು ವಾಹನ ಸವಾರರು ಪೆಟ್ರೋಲ್‌ ಹಾಕಿಸಿಕೊಂಡಿದ್ದು ಕಂಡು ಬಂತು.

ಮುಂದುವರಿದ ಸಿಲಿಂಡರ್ ಸಮಸ್ಯೆ:

ಇದೇ ವೇಳೆ, ರಾಜ್ಯದ ಹಲವೆಡೆ ಅಡುಗೆ ಅನಿಲದ ಸಮಸ್ಯೆ ಕೂಡ ಮುಂದುವರಿದಿದೆ. ಕೊಪ್ಪಳ ಜಿಲ್ಲೆಯಾದ್ಯಂತ ಸಿಲಿಂಡರ್ ಸಮಸ್ಯೆ ಮುಂದುವರಿದಿದ್ದು, ಗುರುವಾರವೂ ಸಹ ಕೊಪ್ಪಳದ ಭಾರತ್‌ ಗ್ಯಾಸ್ ಎಜೆನ್ಸಿ ಬೀಗ ಹಾಕಿದ್ದರಿಂದ ಗ್ರಾಹಕರು ಪರದಾಡಿದರು. ಸ್ಥಳಕ್ಕೆ ಧಾವಿಸಿದ ಪೊಲೀಸರು, ಗ್ರಾಹಕರನ್ನು ಸಂತೈಸಿ ಕಳುಹಿಸಿದರು. ಈ ಮಧ್ಯೆ, ವಾಣಿಜ್ಯ ಸಿಲಿಂಡರ್ ಅಭಾವದಿಂದಾಗಿ ಕೊಪ್ಪಳದ ಹಲವೆಡೆ ಸಣ್ಣಪುಟ್ಟ ಹೋಟೆಲ್‌ಗಳು ಬಂದ್‌ ಆಗಿವೆ. ಕೊಪ್ಪಳದ ಹಲವು ಟೀ ಅಂಗಡಿಗಳಲ್ಲಿ ಬರೀ ಮಜ್ಜಿಗೆ ಮಾರಾಟ ಮಾಡಲಾಗುತ್ತಿದೆ.

ಗದಗ ಜಿಲ್ಲೆ ನರಗುಂದದಲ್ಲಿ ಸಿದ್ದಲಿಂಗೇಶ್ವರ ಗ್ಯಾಸ್ ಏಜೆನ್ಸಿ ಮುಂದೆ ಬೆಳಗ್ಗೆ 4 ಗಂಟೆಯಿಂದಲೇ ಗ್ರಾಹಕರು ಸರದಿಯಲ್ಲಿ ನಿಂತಿದ್ದರು. ಬಳಿಕ, ಪೊಲೀಸ್ ಹಾಗೂ ಗೃಹರಕ್ಷಕ ದಳ ಸಿಬ್ಬಂದಿಯ ರಕ್ಷಣೆಯಲ್ಲಿ ಗ್ರಾಹಕರಿಗೆ ಸಿಲಿಂಡರಗಳನ್ನು ವಿತರಿಸಲಾಯಿತು. ಬಳ್ಳಾರಿ ಜಿಲ್ಲೆ ಕಂಪ್ಲಿ ಪಟ್ಟಣದ ಶರತ್ ಎಂಟರ್‌ಪ್ರೈಸಸ್‌ ಗ್ಯಾಸ್ ಏಜೆನ್ಸಿ ಮುಂದೆ ಮುಂಜಾನೆ 5 ಗಂಟೆಯಿಂದಲೇ ಗ್ರಾಹಕರು ಕ್ಯೂ ನಿಂತಿದ್ದರು.

ಪರೀಕ್ಷೆ ಇದ್ದರೂ ಗ್ಯಾಸ್‌ಗಾಗಿ ‘ಕ್ಯೂ’ನಿಂತ ಬೀದರ್‌ ವಿದ್ಯಾರ್ಥಿ:

ಬೀದರ್‌ ಜಿಲ್ಲಾ ಕ್ರೀಡಾಂಗಣ ಬಳಿಯ ಎಚ್‌ಪಿ ಗ್ಯಾಸ್ ಏಜೆನ್ಸಿ ಮುಂದೆ 8ನೇ ಕ್ಲಾಸ್‌ ವಿದ್ಯಾರ್ಥಿ ವಿವೇಕಾನಂದ ಎಂಬಾತ ಪರೀಕ್ಷೆ ಇದ್ದರೂ ಗ್ಯಾಸ್‌ಗಾಗಿ ಬೆಳಗ್ಗೆ 7ರಿಂದಲೇ ಕ್ಯೂ ನಿಂತ ದೃಶ್ಯ ಕಂಡುಬಂತು. ಬೆಳಗ್ಗೆ 11 ಗಂಟೆಗೆ ಗಣಿತ ಪರೀಕ್ಷೆಯಿತ್ತು. ಆದರೆ, ಮನೆಯಲ್ಲಿ ಅಡುಗೆ ಗ್ಯಾಸ್ ಖಾಲಿಯಾದ ಕಾರಣ, ಆತ ಕಳೆದ 8 ದಿನಗಳಿಂದ ಏಜೆನ್ಸಿ ಮುಂದೆ ‘ಕ್ಯೂ’ ನಿಲ್ಲುತ್ತಿದ್ದಾನೆ ಎಂದು ತಿಳಿಯಿತು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ಎಲ್ಲರಿಗೂ ಮಧುಮೇಹ ಚಿಕಿತ್ಸೆ ಲಭ್ಯತೆ ಸವಾಲಿನ ಕೆಲಸ:ಡಾ.ಬಂಸಿ
1ನೇ ತರಗತಿಯ ಪ್ರವೇಶಕ್ಕೆ ಇದ್ದ ವಯಸ್ಸು ಸಡಿಲ