ಮೆಟ್ರೋಗೆ ಹೆಬ್ಬಾಳ ಭೂಮಿ ನೀಡಿ- ರಿಯಲ್‌ ಎಸ್ಟೇಟ್‌ ಲಾಬಿಗೆ ಮಣಿಬೇಡಿ : ಸುರೇಶ್‌ ಕುಮಾರ್‌ ಬಹಿರಂಗ ಪತ್ರ

Published : Feb 28, 2025, 08:20 AM ISTUpdated : Feb 28, 2025, 09:55 AM IST
Suresh kumar

ಸಾರಾಂಶ

 ರಿಯಲ್‌ ಎಸ್ಟೇಟ್‌ ಲಾಬಿಗೆ ಮಣಿದು ಹೆಬ್ಬಾಳದಲ್ಲಿ ನಮ್ಮ ಮೆಟ್ರೋಗೆ ನೀಡಲು ಪ್ರಸ್ತಾಪಿಸುವ 45 ಎಕರೆ ಜಾಗವನ್ನು ಖಾಸಗಿ ಸಂಸ್ಥೆಯ ಹೋಟೆಲ್‌, ರೆಸ್ಟೋರೆಂಟ್‌, ಮಾಲ್‌ ಸೇರಿದಂತೆ ಪ್ರೀಮಿಯಂ ಟೌನ್‌ಶಿಪ್‌ ನಿರ್ಮಾಣಕ್ಕೆ ನೀಡಬಾರದು ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ಆಗ್ರಹಿಸಿದ್ದಾರೆ.

 ಬೆಂಗಳೂರು : ರಾಜ್ಯ ಸರ್ಕಾರವು ರಿಯಲ್‌ ಎಸ್ಟೇಟ್‌ ಲಾಬಿಗೆ ಮಣಿದು ಹೆಬ್ಬಾಳದಲ್ಲಿ ನಮ್ಮ ಮೆಟ್ರೋಗೆ ನೀಡಲು ಪ್ರಸ್ತಾಪಿಸುವ 45 ಎಕರೆ ಜಾಗವನ್ನು ಖಾಸಗಿ ಸಂಸ್ಥೆಯ ಹೋಟೆಲ್‌, ರೆಸ್ಟೋರೆಂಟ್‌, ಮಾಲ್‌ ಸೇರಿದಂತೆ ಪ್ರೀಮಿಯಂ ಟೌನ್‌ಶಿಪ್‌ ನಿರ್ಮಾಣಕ್ಕೆ ನೀಡಬಾರದು ಎಂದು ಬಿಜೆಪಿ ಶಾಸಕ ಎಸ್‌.ಸುರೇಶ್‌ ಕುಮಾರ್‌ ಆಗ್ರಹಿಸಿದ್ದಾರೆ.

ಈ ಕುರಿತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹಾಗೂ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್‌ ಅವರಿಗೆ ಬಹಿರಂಗ ಪತ್ರ ಬರೆದಿರುವ ಅವರು, ತಾವುಗಳು ಶುಕ್ರವಾರ ನಡೆಸುವ ಸಭೆಯಲ್ಲಿ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಿಸುವ ನಮ್ಮ ಮೆಟ್ರೋ ಸಂಸ್ಥೆ ಬೇಡಿಕೆಗಳನ್ನು ಪುರಸ್ಕರಿಸುವುದು ಸರ್ಕಾರದ ಮೊದಲ ಆದ್ಯತೆ ಆಗಬೇಕು. ಬಿಎಂಆರ್‌ಸಿಎಲ್‌ 2024ರ ಮಾರ್ಚ್‌ನಲ್ಲಿಯೇ ಸರ್ಕಾರಕ್ಕೆ ಸಲ್ಲಿಕೆ ಮಾಡಿರುವ ಪ್ರಸ್ತಾವನೆಯಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ಮಂಡಳಿ (ಕೆಐಎಡಿಬಿ) ಹೆಬ್ಬಾಳದ ಬಳಿ ಸ್ವಾಧೀನಪಡಿಸಿಕೊಳ್ಳುವ 45 ಎಕರೆ ಭೂಮಿ ಕೋರಿದೆ. ಭೂ ಮಾಲೀಕರಿಗೆ ಪಾವತಿಸುವ ಮೊತ್ತವನ್ನೂ ನೀಡಲು ಬಿಎಂಆರ್‌ಸಿಎಲ್‌ ಸಿದ್ಧವಾಗಿದೆ. ಆದರೆ, ಭೂಮಿ ವರ್ಗಾಯಿಸುವುದಕ್ಕೆ ನಗರಾಭಿವೃದ್ಧಿ ಇಲಾಖೆ ಹಾಗೂ ಕೈಗಾರಿಕೆ ಇಲಾಖೆ ತಮ್ಮದೇ ಆದ ಕಾರಣಗಳಿಂದ ವಿಳಂಬ ಮಾಡುತ್ತಿದೆ. ಇದು ಹಲವು ಸಂದೇಶಗಳಿಗೆ ಎಡೆ ಮಾಡಿಕೊಟ್ಟಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ ಅಲ್ಲ. ಮೂಲಸೌಕರ್ಯ ಯೋಜನೆಗಳ ವಿಚಾರದಲ್ಲಿ ಸರ್ಕಾರ ವಿಳಂಬ ಮಾಡಬಾರದು.

ಕೇಂದ್ರ ಸರ್ಕಾರವು, ನಮ್ಮ ಮೆಟ್ರೋ ಯೋಜನೆಗೆ ಸಕಾಲಕ್ಕೆ ತನ್ನ ನೆರವು ನೀಡುವುದಕ್ಕೆ ಒಂದು ಹೆಜ್ಜೆ ಮುಂದಿದೆ. ಭೂ ಸ್ವಾಧೀನ ವಿಳಂಭದಿಂದ ಸಮಯ ಮತ್ತು ವೆಚ್ಚ ಹೆಚ್ಚಾಗುವುದಕ್ಕೆ ಕಾರಣವಾಗುತ್ತಿದೆ. ಇದು ಕೇಂದ್ರ ಸರ್ಕಾರದ ಅನುದಾನ ಬಿಡುಗಡೆಗೆ ಮತ್ತು ಮೆಟ್ರೋ ಸೇವೆಗೆ ಬಹು ದೊಡ್ಡ ಸಮಸ್ಯೆಯಾಗುತ್ತಿದ್ದು, ಆದಷ್ಟು ಬೇಗನೆ ಸಮಸ್ಯೆ ಬಗೆಹರಿಸಿ ಎಂದು ಡಿಕೆಶಿ ಹಾಗೂ ಎಂಬಿಪಾ ಅವರಿಗೆ ಒತ್ತಾಯಿಸಿದ್ದಾರೆ.

ಬಿಎಂಆರ್‌ಸಿಎಲ್‌ ಹೆಬ್ಬಾಳದಲ್ಲಿ ಅತ್ಯಾಧುನಿಕ ಬಹು ಮಾದರಿಯ ಸಾರಿಗೆ ಕೇಂದ್ರ, ಬಹುಮಹಡಿ ಕಾರು ಪಾರ್ಕಿಂಗ್‌, ಡಿಪೋ ಸೇರಿದಂತೆ ಮೊದಲಾದ ಮೂಲಸೌರ್ಕಯ ಅಭಿವೃದ್ಧಿ ಪಡಿಸುವುದಕ್ಕೆ ಯೋಜನೆ ರೂಪಿಸಿದೆ. ನೀಲಿ, ಕಿತ್ತಳೆ ಹಾಗೂ ಕೆಂಪು ಮೆಟ್ರೋ ಮಾರ್ಗಗಳಲ್ಲಿನ ಮೂರು ನಿಲ್ದಾಣ ಸಹ ಈ ಸ್ಥಳದಲ್ಲಿ ನಿರ್ಮಿಸುವುದಕ್ಕೆ ಪ್ರಸ್ತಾಪಿಸಿದೆ.

ಕೈಗಾರಿಕೆ ಹಾಗೂ ರಾಜ್ಯ ಮೂಲಸೌರ್ಕಯ ಅಭಿವೃದ್ಧಿ ಸಚಿವ ಎಂ.ಬಿ ಪಾಟೀಲ್‌ ಆಸಕ್ತಿ ವಹಿಸಿ ನಗರದ ಮೂಲಸೌಕರ್ಯ ಅಭಿವೃದ್ಧಿಗೆ ಚುರುಕು ಮುಟ್ಟಿಸಬೇಕು. ಶುಕ್ರವಾರದ ಸಭೆಯಲ್ಲಿ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಖಾಸಗಿ ಹಿತಾಸಕ್ತಿಗಿಂತ ಸಾರ್ವಜನಿಕ ಹಿತಾಸಕ್ತಿ ಮುಖ್ಯವಾಗಿರಬೇಕು. ಈನಿಟ್ಟಿನಲ್ಲಿ ತಮ್ಮ ನಿರ್ಣಯ ಮಹತ್ವದಾಗಿದೆ. ಜತೆಗೆ, ಕೆಐಎಡಿಬಿಗೆ ಭೂಮಿ ಬಿಟ್ಟುಕೊಟ್ಟ ರೈತರಿಗೆ ಉತ್ತಮ ಮೊತ್ತದ ಪರಿಹಾರವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೋರಿದ್ದಾರೆ. 

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಮೆಕ್ಕೆಜೋಳ ಖರೀದಿಯ ಮಿತಿ 50 ಕ್ವಿಂಟಲ್‌ಗೇರಿಕೆ
ಬೆಂಗಳೂರು ನಗರದಲ್ಲಿ ಮತ್ತೆ 150 ಇಂಡಿಗೋ ವಿಮಾನಗಳ ಸಂಚಾರ ರದ್ದು