ಗಿರೀಶ್ ಗರಗ
ಬೆಂಗಳೂರು : ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ಸಿಹಿ ಸುದ್ದಿ ನೀಡಲು ಮುಂದಾಗಿರುವ ರಾಜ್ಯ ಸರ್ಕಾರ ರಾಗಿ, ಜೋಳ ಮಾದರಿಯಲ್ಲಿ ಕಿರು ಸಿರಿಧಾನ್ಯಗಳನ್ನೂ ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿಗೆ ಅಧಿಕೃತ ಆದೇಶ ಹೊರಡಿಸಿದೆ. 2025-26ನೇ ಸಾಲಿನಲ್ಲಿ ಬೆಳೆಯಲಾಗುವ ಕಿರು ಸಿರಿಧಾನ್ಯಗಳಿಗೆ ರಾಗಿಗೆ ನಿಗದಿ ಮಾಡಲಾಗುತ್ತಿರುವ ಬೆಂಬಲ ಬೆಲೆಯನ್ನೇ ನಿಗದಿ ಮಾಡಲಾಗಿದೆ.
ರಾಜ್ಯದಲ್ಲಿ ಸದ್ಯ ಭತ್ತ, ಗೋಧಿ, ರಾಗಿ, ಜೋಳ, ಕಡಲೆಕಾಯಿ, ತೊಗರಿ, ಕೊಬ್ಬರಿ ಸೇರಿದಂತೆ 20ಕ್ಕೂ ಹೆಚ್ಚಿನ ಬೆಳೆಗಳಿಗೆ ಬೆಂಬಲ ಬೆಲೆ ನಿಗದಿ ಮಾಡಿ ಖರೀದಿಸಲಾಗುತ್ತಿದೆ. ಅದರಲ್ಲಿ ಸಿರಿಧಾನ್ಯಗಳಡಿ ಬರುವ ರಾಗಿ ಮತ್ತು ಜೋಳಗಳನ್ನೂ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಮೂಲಕ ಸರ್ಕಾರವೇ ಖರೀದಿಸುತ್ತಿದೆ. ಅದರ ಜತೆಗೆ ಇತರ ಕಿರು ಸಿರಿಧಾನ್ಯಗಳಾದ ಸಾಮೆ, ನವಣೆ, ಊದಲು, ಹರಕು, ಬರಗ ಬೆಳೆಗಳನ್ನೂ ಎಂಎಸ್‌ಪಿ ಅಡಿಯಲ್ಲಿ ಖರೀದಿಗೆ ರೈತರು ಆಗ್ರಹಿಸುತ್ತಿದ್ದರು. ರೈತರ ಈ ಬೇಡಿಕೆಯ ಬಗ್ಗೆ ಬೆಂಬಲ ಬೆಲೆ ನಿಗದಿ ಕುರಿತ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರ ಅಧ್ಯಕ್ಷತೆಯ ಸಚಿವ ಸಂಪುಟ ಉಪಸಮಿತಿಯಲ್ಲಿ ಚರ್ಚೆ ನಡೆಸಿ, ಕಿರು ಸಿರಿಧಾನ್ಯಗಳಾದ ಸಾಮೆ ಮತ್ತು ನವಣೆಯನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿಗೆ ನಿರ್ಧರಿಸಲಾಗಿತ್ತು. ಆ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಇದೀಗ ಕೇಂದ್ರ ಸರ್ಕಾರ ಕಿರು ಸಿರಿಧಾನ್ಯಗಳ ಖರೀದಿಗೆ ಅನುಮತಿಸಿದ್ದು, ಅದರ ಆಧಾರದಲ್ಲಿ 2025-26ನೇ ಸಾಲಿನಲ್ಲಿ ಬೆಳೆಯಲಾಗುವ ಸಾಮೆ ಮತ್ತು ನವಣೆಯನ್ನು ಎಂಎಸ್‌ಪಿ ಅಡಿಯಲ್ಲಿ ಖರೀದಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
29 ಸಾವಿರ ಮೆಟ್ರಿಕ್ ಟನ್ ಖರೀದಿ:
ರಾಜ್ಯದಲ್ಲಿ ಅಂದಾಜು 29 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ 1 ಲಕ್ಷ ಮೆಟ್ರಿಕ್ ಟನ್ ಕಿರು ಸಿರಿಧಾನ್ಯ ಬೆಳೆಯಲಾಗುತ್ತದೆ. ಅದರಲ್ಲಿ ಇದೀಗ 29 ಸಾವಿರ ಮೆಟ್ರಿಕ್ ಟನ್ ಸಾಮೆ ಮತ್ತು ನವಣೆಯನ್ನು ಎಂಎಸ್‌ಪಿ ಅಡಿ ಖರೀದಿಸಲು ನಿರ್ಧರಿಸಲಾಗಿದೆ. ಈ ಕುರಿತು ಅಧಿಕೃತ ಆದೇಶ ಹೊರಡಿಸಿರುವ ಸರ್ಕಾರ, ರಾಗಿಗೆ ನಿಗದಿ ಮಾಡಲಾಗಿರುವ ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಾಲ್‌ಗೆ 4,886 ರು.ಗಳನ್ನು ಸಾಮೆ ಮತ್ತು ನವಣೆಗೂ ನಿಗದಿ ಮಾಡಲಾಗಿದೆ. ಅಲ್ಲದೆ, ಪ್ರತಿ ಎಕರೆಗೆ 10 ಕ್ವಿಂಟಾಲ್‌ನಂತೆ ಒಬ್ಬ ರೈತರಿಂದ ಗರಿಷ್ಠ 50 ಕ್ವಿಂಟಾಲ್‌ವರೆಗೆ ಎಂಎಸ್‌ಪಿ ಅಡಿಯಲ್ಲಿ ಸಾಮೆ ಮತ್ತು ನವಣೆಯನ್ನು ಖರೀದಿ ಮಾಡಲಾಗುತ್ತದೆ.
2025-26ನೇ ಸಾಲಿನಲ್ಲಿ ಬೆಳೆಯಲಾಗುವ ಬೆಳೆಗಳನ್ನು ಎಂಎಸ್‌ಪಿ ಅಡಿ ಖರೀದಿಸುವ ಸಂಬಂಧ ರೈತರ ನೋಂದಣಿಯನ್ನು 2026ರ ಜ. 1ರಿಂದ ಮಾ. 31ರವರೆಗೆ ನಡೆಸಲಾಗುತ್ತದೆ. ಅಲ್ಲದೆ, ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (ಫ್ರೂಟ್ಸ್) ಅಡಿ ನೋಂದಣಿಯಾಗಿರುವ ರೈತರು ಮಾತ್ರ ಎಂಎಸ್‌ಪಿ ಅಡಿ ಕಿರು ಸಿರಿಧಾನ್ಯ ಮಾರಾಟಕ್ಕೆ ನೋಂದಣಿ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.
ರಾಗಿ ಬದಲಿಗೆ ಸಾಮೆ-ನವಣೆ ಖರೀದಿ:
ಎಂಎಸ್‌ಪಿ ಅಡಿಯಲ್ಲಿ ಖರೀದಿಸಲಾಗುತ್ತಿರುವ ರಾಗಿಯನ್ನು ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಅಡಿಯಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಲಾಗುತ್ತಿದೆ. ಸದ್ಯ ರಾಜ್ಯದಲ್ಲಿ 6 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ಎಂಎಸ್‌ಪಿ ಅಡಿಯಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಅನುಮತಿಸಿದೆ. ಆದರೆ, ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ ಅಡಿಯಲ್ಲಿ ಪಡಿತರ ಚೀಟಿದಾರರಿಗೆ 4.50 ಲಕ್ಷದಿಂದ 5 ಲಕ್ಷ ಮೆಟ್ರಿಕ್ ಟನ್ ರಾಗಿಯನ್ನು ವಿತರಿಸಲಾಗುತ್ತಿದೆ. ಇದನ್ನು ಗಮನಿಸಿದರೆ ಎಂಎಸ್‌ಪಿ ಅಡಿಯಲ್ಲಿ ಖರೀದಿಗೆ ನಿಗದಿ ಮಾಡಲಾಗಿರುವ ಪ್ರಮಾಣಕ್ಕಿಂತ ಕಡಿಮೆ ರಾಗಿಯ ಅವಶ್ಯಕತೆ ರಾಜ್ಯಕ್ಕಿದೆ. ಹೀಗಾಗಿ ಅವಶ್ಯಕತೆಗಿಂತ ಹೆಚ್ಚಿನ ರಾಗಿ ಖರೀದಿಸುವ ಬದಲು, ಅದರ ಜಾಗದಲ್ಲಿ ಸಾಮೆ ಮತ್ತು ನವಣೆಯಂತಹ ಕಿರು ಸಿರಿಧಾನ್ಯ ಖರೀದಿಸಲು ಕೇಂದ್ರ ಸರ್ಕಾರ ಅನುಮತಿಸಿದೆ. ಅದರ ಆಧಾರದಲ್ಲಿ ಇದೀಗ ಸಾಮೆ ಮತ್ತು ನವಣೆಯನ್ನು ಎಂಎಸ್‌ಪಿ ಅಡಿ ಖರೀದಿಸಲು ಸರ್ಕಾರ ಮುಂದಾಗಿದೆ.
ನೋಡಲ್ ಅಧಿಕಾರಿ ನೇಮಕ
ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಈಗಾಗಲೇ ನೇಮಿಸಲಾಗಿರುವ ಖಾಸಗಿ ಏಜೆನ್ಸಿಗಳ ಮೂಲಕ ಕಿರು ಸಿರಿಧಾನ್ಯಗಳ ಖರೀದಿ ಕೇಂದ್ರಗಳನ್ನು ತೆರೆಯುವಂತೆ ಸೂಚಿಸಲಾಗಿದೆ. 2026ರ ಮಾ. 31ರಂದು ರೈತರ ನೋಂದಣಿ ಪೂರ್ಣಗೊಂಡ ನಂತರ ಸಾಮೆ ಮತ್ತು ನವಣೆ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ. ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ನೇತೃತ್ವದ ಸಮಿತಿಯು ಕಿರು ಸಿರಿಧಾನ್ಯಗಳ ಖರೀದಿಗೆ ಬೇಕಾಗುವ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆಯೂ ಸೂಚಿಸಲಾಗಿದೆ. ಅಲ್ಲದೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕರನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆ ಅನುಷ್ಠಾನದ ನೋಡಲ್ ಅಧಿಕಾರಿಯನ್ನಾಗಿಯೂ ನೇಮಿಸಲಾಗಿದೆ.