ಪ್ರಜ್ವಲ್‌ ರೇ‍ವಣ್ಣ ಸಂಕಷ್ಟ ನೋಡಿ ಸರ್ಕಾರಕ್ಕೆ ಸಂತೋಷ : ವಕೀಲ

Published : Jun 17, 2025, 11:41 AM IST
Prajwal revanna

ಸಾರಾಂಶ

ಪ್ರಜ್ವಲ್‌ ರೇವಣ್ಣ ಒಂದೂವರೆ ವರ್ಷದಿಂದ ಜೈಲಿನಲ್ಲಿ ಕಠಿಣ ಪರಿಸ್ಥಿತಿಯಲ್ಲಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಸಂತೋಷವಾಗಿದೆ - ವಕೀಲ ಪ್ರಭುಲಿಂಗ ನಾವದಗಿ

  ಬೆಂಗಳೂರು :  ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ಪ್ರಜ್ವಲ್‌ ರೇವಣ್ಣ ಒಂದೂವರೆ ವರ್ಷದಿಂದ ಜೈಲಿನಲ್ಲಿ ಕಠಿಣ ಪರಿಸ್ಥಿತಿಯಲ್ಲಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ ಸಂತೋಷವಾಗಿದೆ ಎಂದು ಮಾಜಿ ಸಂಸದರ ಪರ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಸೋಮವಾರ ಹೈಕೋರ್ಟ್‌ನಲ್ಲಿ ಮೌಖಿಕವಾಗಿ ಆಕ್ಷೇಪಿಸಿದರು.

ಪ್ರಕರಣ ಸಂಬಂಧ ಜಾಮೀನು ಕೋರಿ ಪ್ರಜ್ವಲ್‌ ಸಲ್ಲಿಸಿರುವ ಅರ್ಜಿ, ನ್ಯಾಯಮೂರ್ತಿ ಎಸ್‌.ಆರ್‌. ಕೃಷ್ಣ ಕುಮಾರ್‌ ಅವರ ಪೀಠದ ಮುಂದೆ ಸೋಮವಾರ ವಿಚಾರಣೆಗೆ ಬಂದಿತ್ತು.

ಈ ವೇಳೆ ಪ್ರಜ್ವಲ್‌ರ ವಕೀಲ ನಾವದಗಿ ಅವರು, ಮೇಲ್ನೋಟಕ್ಕೆ ಪ್ರಜ್ವಲ್‌ ವಿರುದ್ಧದ ಆರೋಪಗಳಿಗೆ ಸಾಕ್ಷ್ಯಧಾರ ಇದೆ ಮತ್ತು ಜಾಮೀನು ನೀಡಿದರೆ ಆರೋಪಿ ನಾಪತ್ತೆಯಾಗುವ ಸಾಧ್ಯತೆಯಿದೆ ಎಂಬ ಕಾರಣಕ್ಕೆ ನ್ಯಾಯಾಲಯದಿಂದ ಈ ಹಿಂದೆ ಜಾಮೀನು ಅರ್ಜಿ ವಜಾಗೊಂಡಿತ್ತು. ಸದ್ಯ ಪ್ರಕರಣದಲ್ಲಿ ಪ್ರಜ್ವಲ್‌ ಮತ್ತು ಅವರ ತಂದೆ ಎಚ್‌.ಡಿ.ರೇವಣ್ಣ ಆರೋಪಿಗಳಾಗಿದ್ದಾರೆ. ರೇವಣ್ಣ ವಿರುದ್ಧದ ವಿಚಾರಣೆಗೆ ತಡೆ ನೀಡಲಾಗಿದೆ. ಪ್ರಕರಣದಲ್ಲಿ 157 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದ್ದು, ಪ್ರಕರಣವನ್ನು ವಿಭಜಿಸಲಾಗಿಲ್ಲ. ಇಂದು ಪ್ರಜ್ವಲ್‌ ಕಷ್ಟದಲ್ಲಿದ್ದು, ಅದರಿಂದ ಸರ್ಕಾರ ಸಂತೋಷವಾಗಿದೆ ಎಂದರು.

ರಾಜ್ಯ ಸರ್ಕಾರಿ ವಕೀಲರು, ಪ್ರಜ್ವಲ್‌ ವಿರುದ್ಧ ನಾಲ್ಕು ಅತ್ಯಾಚಾರ ಪ್ರಕರಣಗಳು ದಾಖಲಾಗಿವೆ. ಎರಡು ಪ್ರಕರಣದಲ್ಲಿ ಈಗಾಗಲೇ ವಿಚಾರಣೆ ಆರಂಭವಾಗಿದೆ. ಅವುಗಳು ಪ್ರಾಥಮಿಕ ಹಂತದಲ್ಲಿವೆ. ಆಕ್ಷೇಪಣೆ ಸಲ್ಲಿಸಲಿದ್ದು, ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪ್ರಕರಣಗಳ ವಿಚಾರಣೆ ವಿಳಂಬವಾಗುತ್ತಿದೆ. ಇದೇ ಅಂಶ ಆಧರಿಸಿ ಜಾಮೀನು ನೀಡಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರಲ್ಲವೇ? ಎಂದು ಸರ್ಕಾರಿ ವಕೀಲರನ್ನು ಪ್ರಶ್ನಿಸಿತು. ನಂತರ ಸರ್ಕಾರಿ ವಕೀಲರ ಮನವಿ ಮೇರೆಗೆ ಅರ್ಜಿ ವಿಚಾರಣೆಯನ್ನು ಜೂ.20ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:

ಮನೆ ಕೆಲಸದಾಕೆ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹಾಸನದ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮತ್ತು ಅವರ ಪುತ್ರ ಪ್ರಜ್ವಲ್‌ ವಿರುದ್ಧ 2024ರಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಸಿಐಡಿ ಪೊಲೀಸರು ಅಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ. ಈ ಪ್ರಕರಣದಲ್ಲಿ ಪ್ರಜ್ವಲ್‌ ಜಾಮೀನು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಇದಲ್ಲದೆ ಇನ್ನೂ ಮೂರು ಅತ್ಯಾಚಾರ ಆರೋಪದ ಪ್ರಕರಣಗಳು ಪ್ರಜ್ವಲ್‌ ವಿರುದ್ಧ ಬಾಕಿಯಿವೆ.

PREV
Read more Articles on

Recommended Stories

ಬಿಹಾರ ರೀತಿ ಮತಪಟ್ಟಿ ಪರಿಷ್ಕರಣೆಗೆ ರಾಜ್ಯ ಸಜ್ಜು
ಲಿಂಗಾಯತರಿಗೆ ‘ಇತರೆ’ ಗೊಂದಲ