11,000 ಕೋಟಿ ಆದಾಯ ಸಂಗ್ರಹಕ್ಕೆ ಸರ್ಕಾರ ಪ್ಲಾನ್‌ : ಕರ್ನಾಟಕದಲ್ಲಿ ಹೊಸ ತೆರಿಗೆ, ಗಣಿ ಭೂಮಿಗೂ ಟ್ಯಾಕ್ಸ್‌

Published : Dec 07, 2024, 07:27 AM IST
Advance tax payment

ಸಾರಾಂಶ

 ಗಣಿಗಾರಿಕೆ ಮಾಡುವವರಿಗಷ್ಟೇ ತೆರಿಗೆ ಹಾಕುತ್ತಿದ್ದ ಸರ್ಕಾರ ಇದೀಗ ಗಣಿ ಭೂಮಿಯ ಮಾಲೀಕರಿಗೂ ತೆರಿಗೆ ಹಾಕಲು ಮುಂದಾಗಿದೆ. ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ಭೂಮಿ ಮಾಲೀಕರಿಂದ ಪ್ರತಿ ಟನ್‌ ಖನಿಜಕ್ಕೆ 100 ರು.ನಂತೆ ಹೊಸದಾಗಿ ಖನಿಜ ಹಕ್ಕುಗಳ ತೆರಿಗೆ ಸಂಗ್ರಹ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಬೆಂಗಳೂರು : ರಾಜ್ಯದಲ್ಲೀಗ ಹೊಸ ತೆರಿಗೆ ಜಾರಿಗೆ ಬರಲಿದೆ. ಈ ಹಿಂದೆ ಗಣಿಗಾರಿಕೆ ಮಾಡುವವರಿಗಷ್ಟೇ ತೆರಿಗೆ ಹಾಕುತ್ತಿದ್ದ ಸರ್ಕಾರ ಇದೀಗ ಗಣಿ ಭೂಮಿಯ ಮಾಲೀಕರಿಗೂ ತೆರಿಗೆ ಹಾಕಲು ಮುಂದಾಗಿದೆ. ಗಣಿಗಾರಿಕೆ ನಡೆಯುತ್ತಿರುವ ಪ್ರದೇಶಗಳ ಭೂಮಿ ಮಾಲೀಕರಿಂದ ಪ್ರತಿ ಟನ್‌ ಖನಿಜಕ್ಕೆ 100 ರು.ನಂತೆ ಹೊಸದಾಗಿ ಖನಿಜ ಹಕ್ಕುಗಳ ತೆರಿಗೆ ಸಂಗ್ರಹ ಮಾಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.

ಅಲ್ಲದೆ, ಕಟ್ಟಡ ಕಲ್ಲು ಉಪ ಖನಿಜಗಳ ಮೇಲಿನ ರಾಜಧನ ಪರಿಷ್ಕರಣೆ ಹಾಗೂ ಕಟ್ಟಡಕಲ್ಲುಗಳ ಅಕ್ರಮ ಗಣಿಗಾರಿಕೆಗೆ ವಿಧಿಸಿರುವ 6,105 ಕೋಟಿ ರು. ದಂಡ ಮೊತ್ತವನ್ನು ಓಟಿಎಸ್ (ಒನ್‌ಟೈಂ ಸೆಟ್ಸ್ಮೆಂಟ್) ಮೂಲಕ ಸಂಗ್ರಹಿಸಲು ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಖನಿಜ ಗಣಿಗಾರಿಕೆ ಹಾಗೂ ಕಲ್ಲು ಗಣಿಗಾರಿಕೆ ಕುರಿತ ಮೂರು ಮಹತ್ವದ ತೀರ್ಮಾನಗಳ ಮೂಲಕ ರಾಜ್ಯ ಸರ್ಕಾರ ಬರೋಬ್ಬರಿ 11,128 ಕೋಟಿ ರು. ಆದಾಯ ನಿರೀಕ್ಷೆ ಮಾಡಿದೆ.

ಈ ಬಗ್ಗೆ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್, 'ಸರ್ಕಾರಕ್ಕೆ ಆದಾಯ ಸಂಗ್ರಹ ಹೆಚ್ಚಳ ಮಾಡುವ ಉದ್ದೇಶದಿಂದಲೇ ನೂತನ ತಿದ್ದುಪಡಿಗ ಳನ್ನು ತರಲಾಗಿದೆ. ಆದರೆ ಇದು ಗ್ಯಾರಂಟಿಗಳಿಗೆ ಹಣ ಕೊರತೆಯಾಗಿದೆ ಎಂದಲ್ಲ, ಬದಲಿಗೆ ಅಭಿವೃದ್ಧಿ ಕಾರ್ಯಗಳನ್ನು ಮತ್ತಷ್ಟು ಹೆಚ್ಚು ಮಾಡುವ ಉದ್ದೇಶದಿಂದ ಮಾಡಲಾಗುತ್ತಿದೆ. ಈ ಕುರಿತು ತಿದ್ದುಪಡಿ ವಿಧೇಯಕಗ ಇನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಾಗುವುದು' ಎಂದು ಸಮರ್ಥನೆ ನೀಡಿದರು.

ಜಮೀನು ಮಾಲೀಕರಿಗೂ ತೆರಿಗೆ:

ಈವರೆಗೆ ಖನಿಜ ಹೊಂದಿರುವ ಭೂಮಿಗಳಲ್ಲಿ ಗಣಿಗಾರಿಕೆ ಮಾಡುತ್ತಿರುವ ಗುತ್ತಿಗೆದಾರರು ತೆರಿಗೆ, ರಾಜಧನ ಪಾವತಿ ಸುತ್ತಿದ್ದರು. ಇದೀಗ ನಿಜ ಹಕ್ಕುಗಳ ತೆರಿಗೆ ತಿದ್ದುಪಡಿ ವಿಧೇಯಕ-2024 ಪ್ರಸ್ತಾ ಪಿಸಲಾಗಿದೆ. ಈ ಮೂಲಕ ತಮ್ಮ ಜಮೀನಿನಲ್ಲಿ ಬಾಕ್ಸಿಟ್, ಕ್ರೋಮೈಟ್, ಕಬ್ಬಿಣ ಸೇರಿ ವಿವಿಧ ಅದಿರು ನಿಕ್ಷೇಪ ಹೊಂದಿದ್ದು ಗಣಿಗಾರಿಕೆಗೆ ಅವಕಾಶ ನೀಡಿರುವ ಮಾಲೀಕರು ಜಮೀನಿನಿಂದ ಹೊರ ತೆಗೆದ ಪ್ರತಿ ಟನ್ ಅದಿರಿಗೆ 100 ರು.ಗಳಂತೆ ಏಕರೂಪದ ತೆರಿಗೆ ದರ ಪ್ರಸ್ತಾಪ ಮಾಡಲಾಗಿದೆ. ಇದರಿಂದ ಪ್ರತಿ ವರ್ಷ 505.90 ಕೋಟಿ ರು.ಆದಾಯ ನಿರೀಕ್ಷೆ ಮಾಡಲಾಗಿದೆ. ಉಳಿದಂತೆ ಹರಾಜು ಮಾರ್ಗದಿಂದ ನೀಡಲಾದ ಗಣಿಗಾರಿಕೆ ಬ್ಲಾಕ್ ಹೊರತುಪಡಿಸಿ ಉಳಿದ ಎಲ್ಲಾ ವರ್ಗಗಳ ಗಣಿ ಗುತ್ತಿಗೆಗಳಿಗೆ ರಾಜಧನದ ಮೇಲೆ 0.25% ಖನಿಜ ಹಕ್ಕುಗಳ ತೆರಿಗೆಯಾಗಿ ವಿಧಿಸಲು ಪ್ರಸ್ತಾಪಿಸಲಾಗಿದೆ. ಇದರಿಂದ 4,207.95 ಕೋಟಿ ಹೆಚ್ಚುವರಿ ಆದಾಯ ನಿರೀಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪ ಖನಿಜ ರಾಜಧನ ಪರಿಷ್ಕರಣೆ:

ಕರ್ನಾಟಕ ಉಪ ಖನಿಜ ರಿಯಾಯಿತಿ (ತಿದ್ದುಪಡಿ) ನಿಯ ಮಗಳು-2024ಕ್ಕೆ ಸಚಿವ ಸಂಪುಟ ಅನುಮೋದಿಸಿದೆ. ಈ ಮೂಲಕ ಕಟ್ಟಡ ಕಲ್ಲು ಉಪಖನಿಜಗಳ ಮೇಲಿನ ರಾಜಧನವನ್ನು 3 ವರ್ಷಗಳ ಅವಧಿಯಲ್ಲಿ ಒಮ್ಮೆ ಪರಿಷ್ಕರಿಸಲು ಅವಕಾಶ ಕಲ್ಪಿಸಲಾಗಿದೆ. ಇದ ರಿಂದ ರಾಜಧನ ಪರಿಷ್ಕರಣೆಗೆ ಅವಕಾಶ ದೊರೆ ತಿದ್ದು 311.55 ಕೋಟಿ ರು. ಹೆಚ್ಚುವರಿ ಆದಾಯ ನಿರೀಕ್ಷೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ದಂಡ ವಸೂಲಿ ಮಾಡಲು ಓ.ಟಿ.ಎಸ್ ವ್ಯವಸ್ಥೆ

2018-19ನೇ ಸಾಲಿನಲ್ಲಿ ಚಾಲ್ತಿಯಲ್ಲಿದ್ದ 2,438 ಕಟ್ಟಡ ಕಲ್ಲು ಗಣಿ ಗುತ್ತಿಗೆಗಳನ್ನು ಡೋನ್ ಬಳಸಿ ಸರ್ವೇ ಮಾಡಲಾಗಿದೆ. ಈ ಸರ್ವೇ ಮೂಲಕ ಖನಿಜ ಪರವಾನಗಿ ಪಡೆಯದೆ ಸಾಗಣೆ ಮಾಡಿದ ಪ್ರಮಾಣ ಮತ್ತು ಗುತ್ತಿಗೆ ಪ್ರದೇಶವನ್ನು ಒತ್ತುವರಿ ಮಾಡಿರುವ ಪ್ರಮಾಣ ಅಂದಾಜಿಸಿ ಪ್ರತಿ ಮೆಟ್ರಿಕ್ ಟನ್‌ಗೆ 60 ರು. ರಾಜಧನದಂತೆ 1,221 ಕೋಟಿ ರು.ಗೆ 5 ಪಟ್ಟು ಎಂದರೆ 6105.98 ಕೋಟಿ ರು. ದಂಡ ವಸೂಲಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ನೋಟಿಸ್ ನೀಡಿದೆ.

ಇದೀಗ ನ್ಯಾಯಾಲಯದ ಆದೇಶದಂತೆ ಡಿಫರೆನ್ಸಿಯಲ್ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ (ಡಿಜಿಪಿಎಸ್) ಪ್ರಕಾರ 11 ಜಿಲ್ಲೆಗಳಲ್ಲಿ ಹೊಸದಾಗಿ ಸರ್ವೆ ಮಾಡಿದ್ದು, 2018-19ನೇ ಸಾಲಿನ ಸರ್ವೆಗಿಂತ 2023-24ನೇ ಸಾಲಿನ ಸರ್ವೆಯಲ್ಲಿ ಗುತ್ತಿಗೆ ಪ್ರದೇಶದ ಒತ್ತುವರಿ ಪ್ರಮಾಣ ಹೆಚ್ಚಾಗಿದೆ. ಈ ಸರ್ವೆ ಇನ್ನೂ 20 ಜಿಲ್ಲೆಗಳಲ್ಲಿ ಬಾಕಿಯಿದೆ. ಇದೀಗ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಪ್ರದೇಶದಲ್ಲಿ ಗಣಿಗಾರಿಕೆ ಮಾಡಿರುವ ಗಣಿ ಮಾಲೀಕರಿಗೆ ವಿಧಿಸಿರುವ 6,105.98 ಕೋಟಿ ದಂಡ ವಸೂಲಿಗಾಗಿ ಒನ್ ಟೈಂ ಸೆಟ್ಸ್ ಮೆಂಟ್ ಗೆ (ಓಟಿಎಸ್) ಅವಕಾಶ ನೀಡಲು ಸಂಪುಟ ತೀರ್ಮಾನಿಸಿದೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ಪೆರಿಫೆರಲ್‌ ರಿಂಗ್‌ ರಸ್ತೆಗಾಗಿ ಭೂಸ್ವಾಧೀನಕ್ಕೆ ಸಂಪುಟ ಗ್ರಿನ್ ಸಿಗ್ನಲ್‌
ನೀರಿನ ಬಿಲ್‌ ಬಾಕಿ ಪಾವತಿಸಲು ‘ಜಲ ಸಮಾಧಾನ’ ಹೆಸರಲ್ಲಿ ಒಟಿಎಸ್‌: 6.21ಲಕ್ಷ ಜನಕ್ಕೆ ಲಾಭ