ರಾಜ್ಯಪಾಲರು ವಾಪಸ್ ಕಳುಹಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿವಿ ಸೇರಿ ಆರು ಪ್ರಮುಖ ತಿದ್ದುಪಡಿ ವಿಧೇಯಕಗಳನ್ನು ರಾಜ್ಯ ಸರ್ಕಾರ ಸ್ಪಷ್ಟನೆಯೊಂದಿಗೆ ಮತ್ತೆ ರಾಜ್ಯಪಾಲರಿಗೆ ರವಾನಿಸಿದೆ.
ಬೆಂಗಳೂರು : ರಾಜಭವನ ಮತ್ತು ರಾಜ್ಯ ಸರ್ಕಾರದ ನಡುವಿನ ವಿಧೇಯಕಗಳ ತಿಕ್ಕಾಟ ಮುಂದುವರೆದಿದ್ದು, ರಾಜ್ಯಪಾಲರು ವಾಪಸ್ ಕಳುಹಿಸಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿವಿ ಸೇರಿ ಆರು ಪ್ರಮುಖ ತಿದ್ದುಪಡಿ ವಿಧೇಯಕಗಳನ್ನು ರಾಜ್ಯ ಸರ್ಕಾರ ಸ್ಪಷ್ಟನೆಯೊಂದಿಗೆ ಮತ್ತೆ ರಾಜ್ಯಪಾಲರಿಗೆ ರವಾನಿಸಿದೆ.
ಆರ್‌ಡಿಪಿಆರ್ ವಿವಿಗೆ ಕುಲಪತಿ ನೇಮಿಸಲು ರಾಜ್ಯಪಾಲರು ಒಂದು ತಿಂಗಳ ಗುಡುವು ನೀಡಿದ್ದರು. ವಿಧೇಯಕ ತಿದ್ದುಪಡಿ ಬಾಕಿ ಇದ್ದರೆ ಹಾಲಿ ಕಾನೂನು ಅಡಿಯಲ್ಲೇ ನೇಮಕ ಮಾಡುವಂತೆ ಸೂಚಿಸಿದ್ದರು. ಹೀಗಿದ್ದರೂ ಕುಲಪತಿ ನೇಮಿಸದ ರಾಜ್ಯ ಸರ್ಕಾರ ಮೇ 3 ರಂದು ಕಾನೂನು ತಿದ್ದುಪಡಿ ವಿಧೇಯಕಕ್ಕೆ ಅನುಮೋದನೆ ನೀಡುವಂತೆ ಪಟ್ಟು ಹಿಡಿದು ಮತ್ತೆ ರಾಜಭವನಕ್ಕೆ ಪ್ರಸ್ತಾವನೆ ಕಳುಹಿಸಿಕೊಟ್ಟಿದೆ.
6 ವಿಧೇಯಕ ಮತ್ತೆ ರಾಜ್ಯಪಾಲರಿಗೆ:
ಹೀಗೆ ಏ.28 ರಿಂದ ಮೇ 6 ರವರೆಗೆ ಒಟ್ಟು ಆರು ವಿಧೇಯಕಗಳನ್ನು ಮತ್ತೆ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ -2024, ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕ -2024, ಗದಗ-ಬೆಟಗೇರಿ ವ್ಯಾಪಾರ, ಸಾಂಸ್ಕೃತಿಕ ಮತ್ತು ಪ್ರದರ್ಶನ ಪ್ರಾಧಿಕಾರ ವಿಧೇಯಕ -2024, ಕರ್ನಾಟಕ ಸಹಕಾರ ಸಂಘಗಳ ತಿದ್ದುಪಡಿ ವಿಧೇಯಕ -2024, ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ವಿಧೇಯಕ -2024, ಕರ್ನಾಟಕ ಲೋಕಸೇವಾ ಆಯೋಗ ಕಾರ್ಯನಿರ್ವಹಣೆ ಮತ್ತು ಇತರ ಪ್ರಕಾರ್ಯಗಳು ತಿದ್ದುಪಡಿ ವಿಧೇಯಕ -2024ಕ್ಕೆ ಅನುಮೋದನೆ ನೀಡುವಂತೆ ರಾಜ್ಯಪಾಲರಿಗೆ ಸಲ್ಲಿಕೆ ಮಾಡಿದೆ.
ಆರ್‌ಡಿಪಿಆರ್ ಕುಲಪತಿ ತಿಕ್ಕಾಟ:
ಕುಲಪತಿ ನೇಮಕ ಒಳಗೊಂಡು ಆರ್‌ಡಿಪಿಆರ್ ವಿಶ್ವವಿದ್ಯಾಲಯದ ವಿಚಾರದಲ್ಲಿ ರಾಜ್ಯಪಾಲರ ಅಧಿಕಾರ ಮೊಟಕುಗೊಳಿಸಿ ಮುಖ್ಯಮಂತ್ರಿಗೆ ನೀಡುವ ಸಂಬಂಧ ಕಳೆದ ಬೆಳಗಾವಿ ಅವೇಶನದಲ್ಲಿ ಕಾನೂನು ತಿದ್ದುಪಡಿ ವಿಧೇಯಕ ಅಂಗೀಕರಿಸಲಾಗಿತ್ತು. ಈ ವಿಧೇಯಕಕ್ಕೆ ರಾಜ್ಯಪಾಲರ ಒಪ್ಪಿಗೆ ನಿರೀಕ್ಷೆಯಲ್ಲಿ 2024ರ ಮೇ 25ರಿಂದ ಖಾಲಿಯಿರುವ ಈ ವಿ.ವಿ ಕುಲಪತಿ ಹುದ್ದೆಗೆ ಸರ್ಕಾರ ಯಾವುದೇ ನೇಮಕ ಮಾಡಿಲ್ಲ. ರಾಜ್ಯಪಾಲರು ವಿಧೇಯಕಕ್ಕೆ ಅಂಕಿತ ಬಾಕಿ ಉಳಿಸಿಕೊಂಡಿದ್ದರೆ ಹಠಕ್ಕೆ ಬಿದ್ದ ಸರ್ಕಾರವೂ ಕುಲಪತಿ ನೇಮಕ ಮಾಡುತ್ತಿಲ್ಲ. ಹೀಗಾಗಿ ತಿಕ್ಕಾಟ ಏರ್ಪಟಿದೆ ಎಂದು ಮೂಲಗಳು ತಿಳಿಸಿವೆ.
ಇನ್ನು ಕುಲಪತಿ ಹುದ್ದೆ ಭರ್ತಿ ಮಾಡದ ಸರ್ಕಾರದ ಧೋರಣೆ ತೀವ್ರವಾಗಿ ಆಕ್ಷೇಪಿಸಿದ್ದ ರಾಜ್ಯಪಾಲ ಥಾವರ್ ಚಂದ್ ಗೆಹಲೋತ್, ‘ಕುಲಪತಿ ನೇಮಕ ವಿಚಾರದಲ್ಲಿ ಹೊಸ ಕಾನೂನು ತಿದ್ದುಪಡಿಗೆ ಅಂಕಿತ ಬಾಕಿಯಿದ್ದರೆ, ಹಾಲಿ ಇರುವ ಕಾನೂನಿನಡಿಯಲ್ಲೇ ಏಕೆ ಈ ನೇಮಕ ಮಾಡಿಲ್ಲ’ ಎಂದು ಪ್ರಶ್ನಿಸಿ ಕಳೆದ ತಿಂಗಳು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ನೇಮಕ ಪ್ರಕ್ರಿಯೆ ಕೈಗೊಳ್ಳಲು ಸರ್ಕಾರಕ್ಕೆ ತಿಂಗಳ ಗಡುವು ನೀಡಿದ್ದ ರಾಜ್ಯಪಾಲರು, ತಪ್ಪಿದರೆ ತಾವೇ ಈ ಪ್ರಕ್ರಿಯೆಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ ಎಂಬ ಖಡಕ್ ಎಚ್ಚರಿಕೆ ನೀಡಿದ್ದರು.
ಆದರೆ, ರಾಜ್ಯಪಾಲರ ಈ ವಾರ್ನಿಂಗ್‌ಗೆ ಸರ್ಕಾರ ತಲೆಕೆಡಿಸಿಕೊಂಡಿಲ್ಲ. ಬದಲಿಗೆ ಕಾನೂನು ತಿದ್ದುಪಡಿ ವಿಧೇಯಕವನ್ನು ಸಮರ್ಥಿಸಿಕೊಂಡು ಸೂಕ್ತ ಸಮಜಾಯಿಷಿಗಳೊಂದಿಗೆ ಮೇ 3 ರಂದು ಮತ್ತೊಮ್ಮೆ ರಾಜಭವನಕ್ಕೆ ಕಳಿಸಿಕೊಟ್ಟಿದೆ.
ಮತ್ತೊಂದೆಡೆ ವ್ಯಾಪಕ ಅಕ್ರಮ ಮತ್ತು ಭ್ರಷ್ಟಾಚಾರದ ಆಪಾದನೆಗೆ ಗುರಿಯಾಗಿರುವ ಲೋಕಸೇವಾ ಆಯೋಗದ ಕಾರ್ಯ ಶೈಲಿಯಲ್ಲಿ ಸಮಗ್ರ ಸುಧಾರಣೆಗಾಗಿ ಕಳೆದ ಮಾರ್ಚ್ ಅವೇಶನದಲ್ಲಿ ಅಂಗೀಕರಿಸಲಾಗಿದ್ದ ‘ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯವಿಧಾನ ಮತ್ತು ಇತರ ಕಾರ್ಯಗಳು ವಿಧೇಯಕ -2024’ ವಿಧೇಯಕಕ್ಕೆ ಒಪ್ಪಿಗೆ ನೀಡುವಂತೆ ಮನವಿ ಮಾಡಿ ಸರ್ಕಾರ ಮಂಗಳವಾರ (ಮೇ 6) ವಿಧೇಯಕವನ್ನು ಮತ್ತೊಮ್ಮೆ ರಾಜಭವನಕ್ಕೆ ರವಾನಿಸಿದೆ.