ಸಮ್ಮತಿಯ ಲೈಂಗಿಕ ಕ್ರಿಯೆ ರೇ* ಅಲ್ಲ : ಕೋರ್ಟ್‌

| N/A | Published : Oct 28 2025, 11:08 AM IST

court case

ಸಾರಾಂಶ

ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿ ಓಯೋ ರೂಮಿಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಯುವಕನ ವಿರುದ್ಧ ಮಹಿಳೆ ದಾಖಲಿಸಿದ್ದ ಅತ್ಯಾಚಾರ ಪ್ರಕರಣ ರದ್ದುಪಡಿಸಿರುವ ಹೈಕೋರ್ಟ್‌, ‘ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ’ ಎಂದು ತೀರ್ಪು ನೀಡಿದೆ.

  ಬೆಂಗಳೂರು :  ಡೇಟಿಂಗ್ ಆ್ಯಪ್ ಮೂಲಕ ಪರಿಚಯವಾಗಿ ಓಯೋ ರೂಮಿಗೆ ಕರೆದುಕೊಂಡು ಹೋಗಿ ಲೈಂಗಿಕ ಕ್ರಿಯೆ ನಡೆಸಿದ ಆರೋಪದ ಮೇಲೆ ಯುವಕನ ವಿರುದ್ಧ ಮಹಿಳೆ ದಾಖಲಿಸಿದ್ದ ಅತ್ಯಾ*ರ ಪ್ರಕರಣ ರದ್ದುಪಡಿಸಿರುವ ಹೈಕೋರ್ಟ್‌, ‘ಸಮ್ಮತಿಯ ಲೈಂಗಿಕ ಕ್ರಿಯೆ ಅಪರಾಧವಲ್ಲ’ ಎಂದು ತೀರ್ಪು ನೀಡಿದೆ.

ಅತ್ಯಾ*ರ ಆರೋಪದ ಮೇಲೆ ಮಹಿಳೆಯೊಬ್ಬರು ನೀಡಿದ್ದ ದೂರು ಆಧರಿಸಿ ತಮ್ಮ ವಿರುದ್ಧ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬನ್ನೇರುಘಟ್ಟ ರಸ್ತೆಯ ನಿವಾಸಿ ಸಂಪ್ರಾಸ್‌ ಆ್ಯಂಥೋನಿ ಎಂಬ ಯುವಕ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.

ವ್ಯತ್ಯಾಸವನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ

ಪ್ರಕರಣವೊಂದರಲ್ಲಿ ಸಮ್ಮತಿಯ ಲೈಂಗಿಕ ಸಂಬಂಧ ಮತ್ತು ಅತ್ಯಾ*ರ ಆರೋಪದ ನಡುವಿನ ಸೂಕ್ಷ್ಮ ವ್ಯತ್ಯಾಸವನ್ನು ಸುಪ್ರೀಂ ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ. ಪರಸ್ಪರ ಇಚ್ಛೆಯಿಂದ ಹುಟ್ಟಿದ ಸಂಬಂಧ, ಅದು ನಿರಾಶೆಯಲ್ಲಿ ಸ್ಥಾಪಿತವಾದರೂ ಸ್ಪಷ್ಟ ಪ್ರಕರಣಗಳನ್ನು ಹೊರತುಪಡಿಸಿ ಕ್ರಿಮಿನಲ್ ಕಾನೂನಿನಡಿ ಅಪರಾಧವಾಗಿ ಪರಿವರ್ತಿಸಲು ಸಾಧ್ಯವಿಲ್ಲ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಪ್ರಕರಣದ ದೂರು, ದೋಷಾರೋಪಟ್ಟಿ ಮತ್ತು ದೂರುದಾರೆ ಹಾಗೂ ಆರೋಪಿ ನಡುವಿನ ವಿನಿಮಯಗೊಂಡಿರುವ ಸಂದೇಶದ (ಚಾಟ್‌) ವಿವರಗಳನ್ನು ಪರಿಶೀಲಿಸಿದ ಪೀಠ, ಆರೋಪಿ ಮತ್ತು ದೂರುದಾರೆಯ ನಡುವಿನ ಸಂದೇಶಗಳು ಉತ್ತಮ ಅಭಿರುಚಿಯಿಂದ ಕೂಡಿಲ್ಲ. ಅವರ ನಡುವಿನ ಎಲ್ಲ ಚಟುವಟಿಕೆಗಳು ಸಮ್ಮತಿಯಿಂದ ಕೂಡಿವೆ ಎಂಬುದನ್ನು ಸೂಚಿಸುತ್ತವೆ. ಪ್ರಸ್ತುತ ಅರ್ಜಿದಾರನ ವಿರುದ್ಧ ವಿಚಾರಣೆಗೆ ಅವಕಾಶ ನೀಡಿದರೆ, ಅದು ಕಾನೂನು ಪ್ರಕ್ರಿಯೆ ದುರುಪಯೋಗವಾಗುತ್ತದೆ ಮತ್ತು ತಪ್ಪಾದ ನ್ಯಾಯದಾನವಾಗುತ್ತದೆ ಎಂದು ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

ಪ್ರಕರಣದ ವಿವರ:

ದೂರುದಾರೆ ಮತ್ತು ಅರ್ಜಿದಾರರು ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಿತರಾಗಿ ಸಾಕಷ್ಟು ಸಮಯ ಸಂಪರ್ಕದಲ್ಲಿದ್ದರು. ಇನ್‌ಸ್ಟ್ರಾಗ್ರಾಂ ಮೂಲಕ ಪೋಟೋ ಹಾಗೂ ಸಂದೇಶಗಳನ್ನು ಪರಸ್ಪರ ವಿನಿಯಮ ಮಾಡಿಕೊಂಡಿದ್ದರು. 2024ರ ಆ.11ರಂದು ಅರ್ಜಿದಾರ, ದೂರುದಾರೆಯನ್ನು ಅಪಾರ್ಟ್‌ಮೆಂಟ್‌ನಿಂದ ರೆಸ್ಟೋರೆಂಟ್‌ಗೆ ಕರೆದುಕೊಂಡು ಹೋಗಿ ಊಟ ಮಾಡಿದ ಬಳಿಕ ಇಬ್ಬರು ಓಯೋ ಹೋಟೆಲ್‌ಗೆ ತೆರಳಿದ್ದರು. ಮರುದಿನ ದೂರುದಾರೆಯನ್ನು ಅಪಾರ್ಟ್‌ಮೆಂಟ್‌ ಬಳಿ ಯುವಕ ಡ್ರಾಪ್‌ ಮಾಡಿದ್ದ.

ಅದೇ ದಿನ ದೂರು ನೀಡಿದ್ದ ಮಹಿಳೆ, ದೈಹಿಕ ಅಸ್ವಸ್ಥತೆ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ತೆರಳಿ ಪರೀಕ್ಷೆ ಮಾಡಿಸಿಕೊಂಡೆ. ಆಗ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬುದು ತಿಳಿಯಿತು. ಕೂಡಲೇ ದೂರು ದಾಖಲಿಸಿದ್ದೆ. ಓಯೋ ರೂಮಿನಲ್ಲಿ ಲೈಂಗಿಕ ಕ್ರಿಯೆಗೆ ಆರೋಪಿ ಪುಸಲಾಯಿಸಿದ. ಅದಕ್ಕೆ ನಾನು ಅಸಮ್ಮತಿ ಸೂಚಿಸಿದರೂ ಒತ್ತಾಯಿಸಿದ. ನನ್ನ ಆಕ್ಷೇಪಣೆ ಮೀರಿ ಲೈಂಗಿಕ ಕ್ರಿಯೆ ನಡೆಸಿದ’ ಎಂದು ಆರೋಪಿಸಿದ್ದರು.

ಆ ದೂರು ಆಧರಿಸಿದ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ 64 ಅಡಿ ಅತ್ಯಾಚಾರ ಅಪರಾಧದಡಿ ಎಫ್‌ಐಆರ್‌ ದಾಖಲಿಸಿ, ಆರೋಪಿಯನ್ನು ಬಂಧಿಸಿದ್ದರು. ತನಿಖೆ ನಡೆಸಿ ಅಧೀನ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಇದರಿಂದ ಎಫ್‌ಐಆರ್‌, ಎಸಿಎಂಎಂ ನ್ಯಾಯಾಲಯದ ವಿಚಾರಣೆ ರದ್ದುಪಡಿಸುವಂತೆ ಕೋರಿ ಸಂಪ್ರಾಸ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲರು, ಇಬ್ಬರೂ ಪೋಟೋ, ವಿಡಿಯೋ ಹಂಚಿಕೊಂಡಿದ್ದರು. ಇನ್‌ಸ್ಟ್ರಾಗ್ರಾಂನಲ್ಲೂ ಚಾಟಿಂಗ್‌ ಮಾಡಿದ್ದಾರೆ. ಆ ಫೊಟೋಗಳಿಂದ ದೂರುದಾರೆ ಮಾಡಿರುವ ಆರೋಪಗಳು ಶುದ್ಧ ಸುಳ್ಳು ಎಂಬುದು ದೃಢಪಡುತ್ತದೆ. ಈ ಸಂಗತಿಗಳನ್ನು ತನಿಖಾಧಿಕಾರಿ ಉದ್ದೇಶಪೂರ್ವಕವಾಗಿಯೇ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿಲ್ಲ ಎಂದು ವಿವರಿಸಿದರು

ಫೋಟೋ, ವಿಡಿಯೋ ಮತ್ತು ಇನ್‌ಸ್ಟ್ರಾಗ್ರಾಂ ಚಾಟಿಂಗ್‌ ವಿವರಗಳನ್ನು ಲಗತ್ತಿಸಿ ಮೋಮೊ ಸಲ್ಲಿಸಿದ ಅರ್ಜಿದಾರರ ಪರ ವಕೀಲರು, ಇಬ್ಬರ ನಡುವಿನ ಲೈಂಗಿಕ ಕ್ರಿಯೆ ಸಂಪೂರ್ಣವಾಗಿ ಸಮ್ಮತಿ ಮೇರೆಗೆ ನಡೆದಿದೆ. ಆದ್ದರಿಂದ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಬೇಕು ಎಂದು ಕೋರಿದರು.

ಅರ್ಜಿದಾರರ ವಾದ ಅಲ್ಲಗೆಳೆದ ಪೊಲೀಸರ ಪರ ವಾದ ಮಂಡಿಸಿದ ಸರ್ಕಾರಿ ವಕೀಲರು, ದೂರುದಾರೆಯ ಮೇಲೆ ಅರ್ಜಿದಾರ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಅದನ್ನು ಸಮ್ಮತಿ ಸೆಕ್ಸ್‌ ಎಂದು ಪರಿಗಣಿಸಲಾಗದು. ಮದುವೆಯಾಗುವುದಾಗಿ ಭರವಸೆ ನೀಡಿ ಲೈಂಗಿಕ ಕ್ರಿಯೆ ನಡೆಸುವುದು ಸಹ ಭಾರತೀಯ ನ್ಯಾಯ ಸಂಹಿತೆ ಅಡಿ ಅಪರಾಧವಾಗುತ್ತದೆ. ಇದು ಅಂತಹ ಪ್ರಕರಣವಾಗಿರದಿದ್ದರೂ, ಸಮ್ಮತಿ ಸೆಕ್ಸ್‌ ನಡೆದಿದೆಯೇ ಅಥವಾ ಇಲ್ಲವೇ ಎಂಬುದು ವಿಚಾರಣಾ ನ್ಯಾಯಾಲಯದ ವಿಚಾರಣೆಯಲ್ಲಿ ತೀರ್ಮಾನವಾಗಬೇಕಿದೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದರು.

Read more Articles on