ಬಾಲ್ಯ ವಿವಾಹ ತಡೆಗೆ ಸರ್ಕಾರ ಕಠಿಣ ಕ್ರಮ : ಅಪ್ರಾಪ್ತರ ವಿವಾಹ ನಿಶ್ಚಿತಾರ್ಥ ಮಾಡಿದರೆ ಇನ್ನು ಜೈಲು ಶಿಕ್ಷೆ!

Published : Jul 25, 2025, 05:25 AM IST
Child marriage mandya

ಸಾರಾಂಶ

ಬಾಲ್ಯ ವಿವಾಹವನ್ನು ಶಿಕ್ಷಾರ್ಹ ಅಪರಾಧ ಎಂದು ತಿಳಿಸಲಾಗಿದೆ. ಬಾಲ್ಯ ವಿವಾಹ ಮಾಡಿದ ವಧು, ವರರ ಕುಟುಂಬದವರು ಶಿಕ್ಷೆಗೆ ಗುರಿಯಾಗುತ್ತಾರೆ. ಇದೀಗ ಅಂತಹ ವಿವಾಹಗಳನ್ನು ನಿಶ್ಚಯ ಮಾಡುವವರನ್ನೂ ಶಿಕ್ಷೆಗೆ ಒಳಪಡಿಸಲು ಅವಕಾಶ ನೀಡಿ ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ-2025 ರೂಪಿಸಲಾಗಿದೆ.

ಬೆಂಗಳೂರು : ಬಾಲ್ಯ ವಿವಾಹ ಮಾತ್ರವಲ್ಲ, ಬಾಲ್ಯ ನಿಶ್ಚಿತಾರ್ಥ ಮಾಡುವವರನ್ನೂ ಶಿಕ್ಷೆಗೊಳಪಡಿಸುವ ತಿದ್ದುಪಡಿ ವಿಧೇಯಕ, ರಾಜ್ಯಾದ್ಯಂತ ಹೊಸ ಬಹುಮಹಡಿ ಕಟ್ಟಡಗಳಿಗೆ ಶೇ.1ರಷ್ಟು ಅಗ್ನಿ ಸುರಕ್ಷತಾ ಕರ(ಫೈರ್‌ ಸೆಸ್‌) ವಿಧಿಸುವ ತಿದ್ದುಪಡಿ ವಿಧೇಯಕ ಸೇರಿ 11 ತಿದ್ದುಪಡಿ ಮಸೂದೆಗಳಿಗೆ ಗುರುವಾರ ನಡೆದ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದ್ದು, ಅವುಗಳನ್ನು ಮುಂಬರುವ ವಿಧಾನ ಮಂಡಲ ಅಧಿವೇಶನದಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ಗುರುವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಭೆಯ ನಿರ್ಣಯಗಳ ಬಗ್ಗೆ ವಿವರಣೆ ನೀಡಿದ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಅವರು, ಈವರೆಗಿನ ಕಾಯ್ದೆಯಲ್ಲಿ ಬಾಲ್ಯ ವಿವಾಹವನ್ನು ಶಿಕ್ಷಾರ್ಹ ಅಪರಾಧ ಎಂದು ತಿಳಿಸಲಾಗಿದೆ. ಬಾಲ್ಯ ವಿವಾಹ ಮಾಡಿದ ವಧು, ವರರ ಕುಟುಂಬದವರು ಶಿಕ್ಷೆಗೆ ಗುರಿಯಾಗುತ್ತಾರೆ. ಇದೀಗ ಅಂತಹ ವಿವಾಹಗಳನ್ನು ನಿಶ್ಚಯ ಮಾಡುವವರನ್ನೂ ಶಿಕ್ಷೆಗೆ ಒಳಪಡಿಸಲು ಅವಕಾಶ ನೀಡಿ ಬಾಲ್ಯವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕ-2025 ರೂಪಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮಂಡಿಸಿದ ಈ ಪ್ರಸ್ತಾವನೆಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು. ನಿಶ್ಚಿತಾರ್ಥ ಪ್ರಕ್ರಿಯೆಯಲ್ಲಿ ಭಾಗಿಯಾದವರು, ಸಮಾರಂಭಕ್ಕೆ ಬಂದವರ ವಿರುದ್ಧವೂ ಪ್ರಕರಣ ದಾಖಲಿಸಲಾಗುತ್ತದೆ.

ಇನ್ನಷ್ಟು ಮಸೂದೆ:

ಖಾಸಗಿ ಆ್ಯಂಬುಲೆನ್ಸ್‌ ಸೇವಾ ನಿರ್ವಾಹಕರನ್ನು ನಿಯಂತ್ರಿಸಲು ಮತ್ತು ಸಂಚಾರಿ ವೈದ್ಯಕೀಯ ಘಟಕಗಳನ್ನು ಖಾಸಗಿ ವೈದ್ಯಕೀಯ ಸಂಸ್ಥೆಯೆಂದು ನೋಂದಣಿ ಜಾರಿಗೆ ತರಲು ರೂಪಿಸಿರುವ ‘ಕರ್ನಾಟಕ ರಾಜ್ಯ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ವಿಧೇಯಕ, 2025’ , ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರ, ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸೇರಿ ಕಂದಾಯ ಇಲಾಖೆಯಡಿಯ ಏಳು ಪ್ರಾಧಿಕಾರಗಳಿಗೆ ಮುಖ್ಯಮಂತ್ರಿಯವರ ಬದಲು ಕಂದಾಯ ಸಚಿವರನ್ನು ಅಧ್ಯಕ್ಷರನ್ನಾಗಿ ಮಾಡುವ ತಿದ್ದುಪಡಿ ವಿಧೇಯಕಗಳಿಗೆ ಸಂಪುಟ ಒಪ್ಪಿಗೆ ನೀಡಿದೆ ಎಂದು ತಿಳಿಸಿದರು.

ಗಿಗ್‌ ಕಾರ್ಮಿಕರಿಗೆ ವಿಮೆ ನೀಡಲು ಬಿಲ್‌ ಮಂಡನೆ

ಸ್ವಿಗ್ಗಿ, ಝೊಮ್ಯಾಟೊ, ಅಮೆಜಾನ್‌ ಸೇರಿ ಇ-ಕಾಮರ್ಸ್‌, ಫ್ಲಾಟ್‌ ಫಾರ್ಮ್‌ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 2.30 ಲಕ್ಷ ಗಿಗ್‌ ಕಾರ್ಮಿಕರ ಸಾಮಾಜಿಕ ಭದ್ರತೆಗಾಗಿ 2 ಲಕ್ಷ ರು. ಜೀವವಿಮೆ ಒದಗಿಸುವ, ಅಪಘಾತದಲ್ಲಿ ಮರಣಹೊಂದಿದರೆ ಜೀವವಿಮೆ ಸೇರಿ ಒಟ್ಟು 4 ಲಕ್ಷ ರು. ಪರಿಹಾರ ನೀಡುವ ಕುರಿತು ಸುಗ್ರೀವಾಜ್ಞೆ ಜಾರಿಗೊಳಿಸಲಾಗಿತ್ತು. ಈ ಸುಗ್ರೀವಾಜ್ಞೆ ಸಂಬಂಧ ಈಗ ಕರ್ನಾಟಕ ಫ್ಲಾಟ್‌ಫಾರ್ಮ್ ಆಧಾರಿತ ಗಿಗ್‌ ಕಾರ್ಮಿಕರ(ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ) ವಿಧೇಯಕ 2025ಕ್ಕೆ ಸಂಪುಟ ಅನುಮೋದಿಸಿದ್ದು, ವಿಧಾನ ಮಂಡಲದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲು ತೀರ್ಮಾನಿಸಲಾಗಿದೆ ಎಂದರು.

ಬಹುಮಹಡಿ ಕಟ್ಟಡಗಳಿಗೆ ಇನ್ನು ಶೇ.1 ಫೈರ್‌ ಸೆಸ್‌

- ಹೊಸದಾಗಿ ನಿರ್ಮಿಸುವ ಕಟ್ಟಡಗಳಿಗೆ ಅನ್ವಯ

ಹೊಸ ಬಹುಮಹಡಿ ಕಟ್ಟಡಗಳಿಗೆ ರಾಜ್ಯದಲ್ಲಿ ಆಸ್ತಿ ತೆರಿಗೆಯೊಂದಿಗೆ ಶೇ.1ರ ದರದಲ್ಲಿ ಫೈರ್‌ ಸೆಸ್‌ ವಿಧಿಸುವ ಸಂಬಂಧದ ಕರ್ನಾಟಕ ಅಗ್ನಿಶಾಮಕ (ತಿದ್ದುಪಡಿ) ವಿಧೇಯಕ, 2025ಕ್ಕೆ ಸಂಪುಟ ಅನುಮೋದನೆ ನೀಡಿದ್ದು, ಬರುವ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ. ಅಗ್ನಿಶಾಮಕ ಇಲಾಖೆಯ ಕಾರ್ಯಕ್ಷಮತೆ ಹೆಚ್ಚಿಸಲು ಮೊದಲು ಕರ್ನಾಟಕ ಫೈರ್‌ ಫೋರ್ಸ್‌ ಕಾಯ್ದೆ 1964ರ ಕಲಂ 15ಕ್ಕೆ ತಿದ್ದುಪಡಿ ತಂದು ನಂತರ ರಾಜ್ಯದಲ್ಲಿ ಹೊಸದಾಗಿ ನಿರ್ಮಾಣವಾಗುವ ಬಹುಮಹಡಿ ಕಟ್ಟಡಗಳ ಆಸ್ತಿ ತೆರಿಗೆಯೊಂದಿಗೆ ಶೇ.1ರ ದರದಲ್ಲಿ ಫೈರ್‌ ಸೆಸ್‌ ವಿಧಿಸಲು ಕ್ರಮವಹಿಸಲು ಪ್ರಸ್ತಾಪಿಸಲಾಗಿದೆ ಎಂದು ಸಚಿವರು ತಿಳಿಸಿದರು.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.
Read more Articles on

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''