ದೇಗುಲ ಆದಾಯ ಬಿಲ್‌ ರಾಷ್ಟ್ರಪತಿಗೆ ಕಳಿಸಲು ರಾಜ್ಯಪಾಲರ ನಿರ್ಧಾರ

‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ’ಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಮತ್ತೆ ತಿರಸ್ಕರಿಸಿದ್ದಾರೆ.

Follow Us

 ಬೆಂಗಳೂರು : ಮುಜರಾಯಿ ಇಲಾಖೆ ವ್ಯಾಪ್ತಿಯ ‘ಎ’ ವರ್ಗದ ದೇವಾಲಯಗಳಲ್ಲಿ ಸಂಗ್ರಹವಾಗುವ ‘ಸಾಮಾನ್ಯ ಸಂಗ್ರಹಣಾ ನಿಧಿ’ಯ ಶೇ. 5ರಿಂದ ಶೇ.10ರಷ್ಟು ಆದಾಯವನ್ನು ‘ಸಿ’ ವರ್ಗದ ದೇವಸ್ಥಾನಗಳ ಅಭಿವೃದ್ಧಿಗೆ ಬಳಕೆ ಕಡ್ಡಾಯಗೊಳಿಸುವ ‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ಮಸೂದೆ’ಯನ್ನು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್‌ ಅವರು ಮತ್ತೆ ತಿರಸ್ಕರಿಸಿದ್ದಾರೆ. ಈ ವಿಧೇಯಕವನ್ನು ರಾಷ್ಟ್ರಪತಿಗಳಿಗೆ ಕಳುಹಿಸಲು ತೀರ್ಮಾನಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ವಾಪಸ್‌ ಕಳುಹಿಸಿದ್ದಾರೆ.

ಮಸೂದೆಗೆ ಸಂಬಂಧಿಸಿ ಸರ್ಕಾರ ನೀಡಿರುವ ಸ್ಪಷ್ಟೀಕರಣ ತಮಗೆ ಸಮರ್ಪಕ ಎಂದು ಮನವರಿಕೆ ಆಗಿಲ್ಲ. ಹೀಗಾಗಿ ಸಂವಿಧಾನದ ಅಡಿ ಲಭ್ಯವಿರುವ ಅಧಿಕಾರ ಚಲಾಯಿಸಿ ಪ್ರಸ್ತಾವನೆಯನ್ನು ರಾಷ್ಟ್ರಪತಿಗಳ ಗಮನಕ್ಕೆ ತರಲು ತೀರ್ಮಾನಿಸಲಾಗಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆಯನ್ನು ವಾಪಸ್‌ ಕಳುಹಿಸಿದ್ದಾರೆ.

ಈ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಗಳಿಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್‌. ಪ್ರಭುಶಂಕರ್‌ ಅವರು ಪತ್ರ ಬರೆದಿದ್ದು, ‘ ಮಸೂದೆ ವಿಚಾರದಲ್ಲಿ ಇರುವ ಸಾಂವಿಧಾನಿಕ ತೊಡಕುಗಳು ಮತ್ತು ನಿರ್ಬಂಧಗಳ ನಿವಾರಣೆಗೆ ರಾಷ್ಟ್ರಪತಿಗಳ ಅವಗಾಹನೆಗೆ ತರುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ತಿರಸ್ಕರಿಸಲು ಕಾರಣವೇನು?:

‘ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ-1997’ ಅನ್ನು ಉಲ್ಲೇಖಿಸಿರುವ ರಾಜ್ಯಪಾಲರು, ಇದಕ್ಕೆ ಸಂಬಂಧಿಸಿ ಹೈಕೋರ್ಟ್‌ಗೆ ರಿಟ್ ಪಿಟಿಷನ್ ಸಲ್ಲಿಕೆಯಾಗಿತ್ತು. ಆಗ ನ್ಯಾಯಾಲಯ ಕಾಯ್ದೆ ಜಾರಿಯು ಪರಿಚ್ಛೇದ 14, 25 ಮತ್ತು 26ರ ಉಲ್ಲಂಘನೆ ಆಗುತ್ತದೆ ಎಂದು ಹೇಳಿತ್ತು. ಇದನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ಇದಕ್ಕೆ ತಡೆಯಾಜ್ಞೆ ಕೂಡ ನೀಡಲಾಗಿದೆ.

ಇನ್ನು ಅಧಿನಿಯಮ 25-ಇ ಅನ್ನು ಮಸೂದೆಯಲ್ಲಿ ಸೇರಿಸಲಾಗಿದೆ. ಅದರಂತೆ ರಾಜ್ಯ ಸರ್ಕಾರವು ಶ್ರೀಮಂತ ದೇಗುಲಗಳು ಅಂದರೆ ‘ಎ’ ವರ್ಗದ ದೇವಾಲಯಗಳ ವ್ಯಾಪ್ತಿಯಲ್ಲಿ ಜಿಲ್ಲಾ ಮತ್ತು ರಾಜ್ಯ ಉನ್ನತ ಮಟ್ಟದ ಸಮಿತಿಗಳನ್ನು ರಚಿಸಲಾಗುವುದು ಎಂದು ಹೇಳಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿ ಈ ಮೊದಲೇ ಹೈಕೋರ್ಟ್ ವ್ಯತಿರಿಕ್ತವಾದ ತೀರ್ಪು ನೀಡಿದೆ. ಹೀಗಿರುವಾಗ ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಅಂತಿಮ ತೀರ್ಪು ನೀಡುವವರೆಗೆ ಅನುಮೋದನೆ ನೀಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ಏನಿದು ವಿಧೇಯಕ?:

ವಾರ್ಷಿಕ ಆದಾಯ ಒಂದು ಕೋಟಿ ಮೀರುವ ದೇವಾಲಯಗಳಿಂದ ಸಂಗ್ರಹವಾಗುವ ಮೊತ್ತದಲ್ಲಿ ‘ಸಾಮಾನ್ಯ ಸಂಗ್ರಹಣಾ ನಿಧಿ’ ಅಡಿ ಶೇ.10ರಷ್ಟನ್ನು ಹಾಗೂ ಹತ್ತು ಲಕ್ಷದಿಂದ ಒಂದು ಕೋಟಿ ರು.ವರೆಗೆ ಆದಾಯ ಸಂಗ್ರಹವಾಗುವ ದೇವಾಲಯಗಳಲ್ಲಿ ಸಂಗ್ರಹವಾಗುವ ಮೊತ್ತದಲ್ಲಿನ ಶೇ.5ರಷ್ಟನ್ನು ‘ಸಿ’ ವರ್ಗದ ದೇವಸ್ಥಾನಗಳಿಗೆ ನೀಡುವ ಮಸೂದೆ ಇದಾಗಿದೆ. ಇದನ್ನು ಅನುಮೋದನೆಗೆ ಕಳುಹಿಸಿದಾಗ, ರಾಜ್ಯಪಾಲರು ಸ್ಪಷ್ಟೀಕರಣ ಕೇಳಿ ವಾಪಸ್ ಕಳುಹಿಸಿದ್ದರು. ಸರ್ಕಾರ ನೀಡಿದ ಸ್ಪಷ್ಟೀಕರಣ ಮನವರಿಕೆಯಾಗದ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳಿಗೆ ಕಳುಹಿಸಲು ರಾಜ್ಯಪಾಲರು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.

- ಎ ವರ್ಗದ ದೇಗುಲದ ಹಣ ಸಿ ವರ್ಗದ ದೇಗುಲಕ್ಕೆ

- ಶೇ.5ರಿಂದ 10ರಷ್ಟು ಆದಾಯ ಬಳಕೆಗೆ ವಿಧೇಯಕ

- ಈ ವಿಧೇಯಕಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಗವರ್ನರ್‌

Read more Articles on