ಮತ್ತೆ ಸರ್ಕಾರ ವರ್ಸಸ್‌ ಗುತ್ತಿಗೆದಾರರ ಕದನ - ಬಾಕಿ ಬಿಲ್‌ ಪಾವತಿಸಲು 1 ತಿಂಗಳ ಗಡುವು

Published : Oct 18, 2025, 04:11 AM IST
Vidhan soudha

ಸಾರಾಂಶ

ಬಾಕಿ ಬಿಲ್‌ ಪಾವತಿಗಾಗಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಲು ಸಜ್ಜಾಗಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಇನ್ನೊಂದು ತಿಂಗಳಲ್ಲಿ ಬಾಕಿ ಬಿಲ್ ಮೊತ್ತ ಪಾವತಿ ಮಾಡದಿದ್ದರೆ ಈ ಸರ್ಕಾರದಲ್ಲಿ ನಡೆದಿರುವ ಕಮಿಷನ್ ದಂಧೆ ವಿಚಾರ ಬಹಿರಂಗಪಡಿಸುವುದಾಗಿಯೂ ಎಚ್ಚರಿಸಿದೆ.

ಬೆಂಗಳೂರು : ಬಾಕಿ ಬಿಲ್‌ ಪಾವತಿಗಾಗಿ ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ನೀಡಲು ಸಜ್ಜಾಗಿರುವ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ, ಇನ್ನೊಂದು ತಿಂಗಳಲ್ಲಿ ಬಾಕಿ ಬಿಲ್ ಮೊತ್ತ ಪಾವತಿ ಮಾಡದಿದ್ದರೆ ಈ ಸರ್ಕಾರದಲ್ಲಿ ನಡೆದಿರುವ ಕಮಿಷನ್ ದಂಧೆ ವಿಚಾರ ಬಹಿರಂಗಪಡಿಸುವುದಾಗಿಯೂ ಎಚ್ಚರಿಸಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಆರ್‌.ಮಂಜುನಾಥ್‌, ರಾಜ್ಯ ಸರ್ಕಾರ ಒಂದು ತಿಂಗಳೊಳಗೆ ಬಾಕಿ ಉಳಿಸಿಕೊಂಡಿರುವ 32 ಸಾವಿರ ಕೋಟಿ ರು. ಬಿಲ್‌ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದರೆ, ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಅವರಿಗೆ ದೂರು ನೀಡುತ್ತೇವೆ. ಅಲ್ಲದೆ, ಯಾರ್‍ಯಾರು ಎಷ್ಟು ಕಮಿಷನ್ ಪಡೆಯುತ್ತಿದ್ದಾರೆ ಎನ್ನುವ ಬಗ್ಗೆ ಡಿಸೆಂಬರ್ ಬಳಿಕ ಬಹಿರಂಗಪಡಿಸುತ್ತೇವೆ ಎಂದೂ ಎಚ್ಚರಿಸಿದರು.

ಲೋಕೋಪಯೋಗಿ, ಜಲಸಂಪನ್ಮೂಲ, ಕಾರ್ಮಿಕ, ವಸತಿ, ನಗರಾಭಿವೃದ್ಧಿ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸೇರಿ ಎಂಟು ಇಲಾಖೆಗಳು ಗುತ್ತಿಗೆದಾರರ ಬಾಕಿ ಹಣವನ್ನು ಈವರೆಗೆ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.

ಗುತ್ತಿಗೆದಾರರು ನಿರ್ವಹಿಸಿದ್ದ ಕಾಮಗಾರಿಗಳಿಗೆ ಬಾಕಿ ಹಣ ಬಿಡುಗಡೆ ಮಾಡುವುದು ಸೇರಿ ಇತರ ಸಮಸ್ಯೆ ಕುರಿತು ಎರಡೂವರೆ ವರ್ಷಗಳಿಂದ ನಿರಂತರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇವೆ. ಬಳಿಕ, ಐದಾರು ಬಾರಿ ಸಿಎಂ ಅವರು ನಮ್ಮ ಜೊತೆ ಸಭೆ ನಡೆಸಿದ್ದರೂ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ. ಡಿಸೆಂಬರ್‌ನೊಳಗೆ ನಮ್ಮ ಸಮಸ್ಯೆಗಳಿಗೆ ಪರಿಹಾರ ಸಿಗದಿದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್‌ಗಾಂಧಿ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಸಂಸದ ಕೆ.ಸಿ.ವೇಣುಗೋಪಾಲ್‌ ಅವರಿಗೆ ದೂರು ಸಲ್ಲಿಸುವುದಾಗಿ ಹೇಳಿದರು.

ಸಂಘರ್ಷ ಬೇಕಿಲ್ಲ:

ಈ ಹಿಂದೆ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದು, ಗುತ್ತಿಗೆದಾರರಿಗೆ ಹಣ ಬಿಡುಗಡೆ ವಿಚಾರದಲ್ಲಿ ಕಮಿಷನ್ ದುಪ್ಪಟ್ಟು ಆಗಿದೆ ಎಂದು ನಾನು ಪತ್ರದಲ್ಲಿ ಹೇಳಿದ್ದೇನೆ. ಆದರೆ, ಶೇ.40, 60 ಅಥವಾ 80 ಎಂದು ಹೇಳಿಲ್ಲ. ಸಣ್ಣಪುಟ್ಟ ಗುತ್ತಿಗೆದಾರರು ವಿಷ ಕುಡಿಯುವ ಪರಿಸ್ಥಿತಿಗೆ ಬಂದಿದ್ದಾರೆ. ದಯವಿಟ್ಟು ಹಣ ಕೊಡಿಸಿ ಎಂದು ಕರೆ ಮಾಡಿ ಅವಲತ್ತುಕೊಳ್ಳುತ್ತಾರೆ. ಕಾಂಗ್ರೆಸ್‌ ಸರ್ಕಾರದಲ್ಲಿ ಲಂಚ, ಕಮಿಷನ್‌ ಇಲ್ಲ ಎಂದು ಹೇಳುವುದಿಲ್ಲ. ಮುಂದೆ ಡಿಸೆಂಬರ್‌ನಲ್ಲಿ ಎಷ್ಟು ಪರ್ಸೆಂಟ್‌ ಕಮಿಷನ್‌ ಎಂಬುದನ್ನು ಹೇಳುತ್ತೇವೆ ಎಂದರು.

ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಸಣ್ಣ, ಮಧ್ಯಮ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ. ಮುಖ್ಯಮಂತ್ರಿ ಮೇಲಿನ ಭರವಸೆಯಿಂದ ಎಲ್ಲ ಜಿಲ್ಲೆಗಳ ಗುತ್ತಿಗೆದಾರರು ಈವರೆಗೆ ಸಮಾಧಾನದಿಂದ ಇದ್ದೇವೆ. ಸರ್ಕಾರದ ಜೊತೆ ನಮಗೆ ಸಂಘರ್ಷ ಬೇಕಿಲ್ಲ ಎಂದು ಆರ್.ಮಂಜುನಾಥ್ ತಿಳಿಸಿದರು.

ಪ್ಯಾಕೇಜ್‌ ಟೆಂಡರ್‌ :

ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಎಂ.ರವೀಂದ್ರ ಮಾತನಾಡಿ, ಕಾರ್ಮಿಕ ಇಲಾಖೆ, ಪೌರಾಡಳಿತ, ನಗರಾಭಿವೃದ್ಧಿ, ನಗರ ಯೋಜನೆ ಇಲಾಖೆ ಸೇರಿ ಇತರ ಇಲಾಖೆಗಳಲ್ಲಿ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿನ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆ ಉಲ್ಲಂಘಿಸಿ ಟೆಂಡರ್‌ಗಳನ್ನು ಪ್ಯಾಕೇಜ್ ರೂಪದಲ್ಲಿ ಪರಿವರ್ತಿಸಿ ತಮಗೆ ಬೇಕಾದ ಬಲಾಢ್ಯ ಗುತ್ತಿಗೆದಾರರಿಗೆ ನೀಡಲಾಗುತ್ತಿದೆ. ಕಾರ್ಮಿಕ ಇಲಾಖೆಯಲ್ಲಿ 784 ಕೋಟಿ ರು. ಮೊತ್ತದ ಟೆಂಡರ್‌ ಅನ್ನು 4 ಪ್ಯಾಕೇಜ್ ಆಗಿ ಮಾಡಲಾಗುತ್ತಿದೆ. ಇಂತಹ ಪ್ಯಾಕೇಜ್‌ ಟೆಂಡರ್ ನಡೆಸಲು ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ. ಹಿಂದಿನ ಸರ್ಕಾರ ಪ್ಯಾಕೇಜ್‌ ಟೆಂಡರ್, ಕಮಿಷನ್ ದಂಧೆಗೆ ಬಲಿಯಾಗಿತ್ತು. ಈಗಿನ ಸರ್ಕಾರವೂ ಅದಕ್ಕೆ ಬಲಿಯಾಗಬಾರದು ಹೇಳಿದರು.

ವಸತಿ ಇಲಾಖೆಯಲ್ಲಿ ನಿವೃತ್ತ ಸರ್ಕಾರಿ ಅಧಿಕಾರಿ ಇಟ್ಟುಕೊಂಡು ಜಮೀರ್ ಅಹ್ಮದ್, ವ್ಯವಹಾರ ನಡೆಸುತ್ತಿದ್ದಾರೆ. ಈ ಅಧಿಕಾರಿ ಕಡು ಭ್ರಷ್ಟ. ಲೋಕಾಯುಕ್ತದಲ್ಲಿ ಈತನ ವಿರುದ್ಧ ಸಾಕಷ್ಟು ದೂರುಗಳಿವೆ. ಇಂತಹ ಅಧಿಕಾರಿಯನ್ನು ಕೂಡಲೇ ವಜಾಗೊಳಿಸಬೇಕು ಎಂದು ವಸತಿ ಸಚಿವ ಜಮೀರ್ ಅಹ್ಮದ್‌ ಅವರಿಗೆ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಬಿ.ಸಿ.ದಿನೇಶ್, ಕಾರ್ಯಾಧ್ಯಕ್ಷ ಎಂ.ಎಸ್.ಸಂಕಾಗೌಡಶಾನಿ, ಖಜಾಂಚಿ ಡಿ.ಎಂ.ನಾಗರಾಜು, ಜಿಬಿಎ ಗುತ್ತಿಗೆದಾರರ ಸಂಘದ ಅಧ್ಯಕ್ಷ ನಂದಕುಮಾರ್ ಸೇರಿ ಮತ್ತಿತರರಿದ್ದರು.

ಇಲಾಖೆವಾರು ಬಾಕಿ ಬಿಲ್‌ಗಳ ವಿವರ:

ಇಲಾಖೆ ಬಾಕಿ ಮೊತ್ತ

ಜಲಸಂಪನ್ಮೂಲ 12 ಸಾವಿರ ಕೋಟಿ ರು.

ಲೋಕೋಪಯೋಗಿ 9 ಸಾವಿರ ಕೋಟಿ ರು.

ಆರ್‌ಡಿಪಿಆರ್ 3,800 ಕೋಟಿ ರು.

ಸಣ್ಣ ನೀರಾವರಿ ಇಲಾಖೆ 3 ಸಾವಿರ ಕೋಟಿ ರು.

ನಗರಾಭಿವೃದ್ಧಿ 2 ಸಾವಿರ ಕೋಟಿ ರು.

ವಸತಿ 1,200 ಕೋಟಿ ರು.

ಕಾರ್ಮಿಕ 800 ಕೋಟಿ ರು.

ಇತರ ಇಲಾಖೆ 1,200 ಕೋಟಿ ರು.

ಒಟ್ಟು 33 ಸಾವಿರ ಕೋಟಿ ರು.

ಕಲ್ಯಾಣ ಕರ್ನಾಟಕದಲ್ಲಿ ಈಗಲೂ

ಟೆಂಡರ್‌ಗೂ ಮುನ್ನವೇ ಕಮಿಷನ್‌!

ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಲೂ ಕಮಿಷನ್‌ ನಡೆಯುತ್ತಿದೆ. ಹಂಚಿಕೆಯಾಗುವ ಅನುದಾನದಲ್ಲಿ ಶಾಸಕರಿಗೂ ಕಮಿಷನ್‌ ಕೊಡಬೇಕಿದೆ. ಶೇ.70 ಶಾಸಕರು ಕಮಿಷನ್‌ ಪಡೆಯುತ್ತಿದ್ದಾರೆ. ಅದನ್ನು ಹೇಳುವುದರಲ್ಲಿ ನನಗೆ ಯಾವುದೇ ಅಂಜಿಕೆ ಇಲ್ಲ. ಟೆಂಡರ್‌ಗೂ ಮುಂಚಿತವಾಗಿ ಶೇ.15ರಿಂದ 20 ಪರ್ಸೆಂಟ್‌ ಕಮಿಷನ್‌ ಕೊಡಬೇಕು. ಇಲ್ಲದಿದ್ದರೆ ಟೆಂಡರ್‌ ಅಪ್ಲಿಕೇಷನ್‌ ತಿರಸ್ಕರಿಸಲಾಗುತ್ತದೆ. ಕೆಲ ಶಾಸಕರು ಇನ್ನೂ ಜಾಸ್ತಿ ಕಮಿಷನ್‌ ಕೇಳುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಗೌರವ ಅಧ್ಯಕ್ಷ ಜಗನ್ನಾಥ ಬಿ.ಶೇಗಜಿ ಹೇಳಿದರು.

ಆರೋಪ ಏನು?

- ಲೋಕೋಪಯೋಗಿ ಸೇರಿ 8 ಇಲಾಖೆಗಳು ಗುತ್ತಿಗೆದಾರರ ಬಾಕಿ ಹಣ ಬಿಡುಗಡೆ ಮಾಡಿಲ್ಲ

- ಬಾಕಿ ಹಣ ಬಿಡುಗಡೆ ಸೇರಿ ಇತರೆ ಸಮಸ್ಯೆ ಬಗ್ಗೆ ನಿರಂತರವಾಗಿ ಸಿಎಂ ಗಮನಕ್ಕೆ ತಂದಿದ್ದೇವೆ

- 5-6 ಬಾರಿ ಸಿಎಂ ನಮ್ಮ ಜೊತೆ ಸಭೆ ನಡೆಸಿದ್ದರೂ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ

- ಸಣ್ಣಪುಟ್ಟ ಗುತ್ತಿಗೆದಾರರು ವಿಷ ಕುಡಿವ ಸ್ಥಿತಿಗೆ ಬಂದಿದ್ದಾರೆ, ಹಣಕೊಡಿಸಿ ಅಂತ ಕರೆ ಮಾಡ್ತಾರೆ

- ಡಿಸೆಂಬರ್‌ನೊಳಗೆ ಗುತ್ತಿಗೆದಾರರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ಸಿಗಬೇಕು

- ಇಲ್ಲದಿದ್ದರೆ ಖರ್ಗೆ, ರಾಹುಲ್‌ಗಾಂಧಿ, ಸುರ್ಜೇವಾಲಾ, ವೇಣುಗೋಪಾಲ್‌ಗೆ ದೂರು ನೀಡ್ತೇವೆ

- ಜತೆಗೆ ಈ ಸರ್ಕಾರದಲ್ಲಿ ಎಷ್ಟು ಪರ್ಸೆಂಟ್‌ ಕಮಿಷನ್‌ ಇದೆ ಎಂದು ಬಹಿರಂಗಪಡಿಸುತ್ತೇವೆ

- ಹಿಂದಿನ ಸರ್ಕಾರ ಪ್ಯಾಕೇಜ್‌ ಟೆಂಡರ್, ಕಮಿಷನ್‌ಗೆ ಬಲಿಯಾಗಿತ್ತು, ಆ ಸ್ಥಿತಿ ಈ ಸರ್ಕಾರಕ್ಕೆ ಬೇಡ

PREV
Read more Articles on

Recommended Stories

ಗ್ರಾಪಂ ವ್ಯಾಪ್ತಿ ಎಲ್ಲಾ ಆಸ್ತಿ ತೆರಿಗೆಗೆ ನಿಯಮ ಪ್ರಕಟ
ತರಬೇತಿ ನೀಡಿದಾಕ್ಷಣ ಯುವನಿಧಿ ನಿಲ್ಲಲ್ಲ : ಸಿಎಂ