ಉಗ್ರರ ಮೇಲಿನ ದಾಳಿಯಿಂದ ಖುಷಿ : ಪಹಲ್ಗಾಂನಲ್ಲಿ ಹತರಾದ ರಾವ್‌ ತಾಯಿ

Follow Us

ಸಾರಾಂಶ

ಪಾಕಿಸ್ತಾನ ಉಗ್ರರ ನೆಲಗಳ ಮೇಳೆ ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆದ ದಾಳಿಯನ್ನು ಪಹಲ್ಗಾಂನಲ್ಲಿ ಉಗ್ರರಿಂದ ಹತ್ಯೆಗೊಳಗಾದ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ತಾಯಿ ಸುಮತಿ ಅವರು ಸ್ವಾಗತಿಸಿದ್ದಾರೆ.

ಶಿವಮೊಗ್ಗ : ಪಾಕಿಸ್ತಾನ ಉಗ್ರರ ನೆಲಗಳ ಮೇಳೆ ಆಪರೇಷನ್ ಸಿಂದೂರ ಹೆಸರಿನಲ್ಲಿ ನಡೆದ ದಾಳಿಯನ್ನು ಪಹಲ್ಗಾಂನಲ್ಲಿ ಉಗ್ರರಿಂದ ಹತ್ಯೆಗೊಳಗಾದ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ ರಾವ್ ತಾಯಿ ಸುಮತಿ ಅವರು ಸ್ವಾಗತಿಸಿದ್ದಾರೆ.

ಬುಧವಾರ ಇಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಕೇಂದ್ರ ಸರ್ಕಾರ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸುವ ಮೂಲಕ ತಕ್ಕ ಉತ್ತರ ನೀಡಿದೆ. ನನ್ನ ಮಗ ಪ್ರಕೃತಿ ಸೌಂದರ್ಯ ನೋಡಲೆಂದು ಕಾಶ್ಮೀರದ ಪಹಲ್ಗಾಂಗೆ ಹೋಗಿ ಸಾವನ್ನಪ್ಪಿದ. ಮಗನನ್ನು ಕಳೆದುಕೊಂಡ ದುಃಖದಲ್ಲಿದ್ದರೂ ಪಾಕಿಸ್ತಾನದ ಉಗ್ರರ ಮೇಲೆ ಭಾರತವು ದಾಳಿ ನಡೆಸಿದ್ದು ಸಂತೋಷ ತಂದಿದೆ ಎಂದು ಹೇಳಿದರು.

ಕುಟುಂಬದಲ್ಲಿ ಯಜಮಾನ ಯಾವುದೇ ತೀರ್ಮಾನ ಕೈಗೊಂಡರೂ ನಾವೆಲ್ಲ ಬದ್ಧರಾಗಿರುತ್ತೇವೆ. ಹಾಗೆಯೇ ಯಜಮಾನನ ಸ್ಥಾನದಲ್ಲಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಸರಿಯಾದ ನಿರ್ಧಾರವನ್ನು ಕೈಗೊಂಡಿದ್ದಾರೆ ಎಂದು ಹೇಳಿದರು.

ಇದೇ ವೇಳೆ ತಮ್ಮ ಮಗನ ಹತ್ಯೆಯ ಬಗ್ಗೆ ನಡೆಯುತ್ತಿರುವ ತನಿಖೆಯ ಕುರಿತು ಮಾಹಿತಿ ನೀಡಿದ ಸುಮತಿ ಅವರು ‘ಕಳೆದ ರಾತ್ರಿ ಎರಡ್ಮೂರು ಜನ ಎನ್‌ಐಎ ಅಧಿಕಾರಿಗಳು ಬಂದಿದ್ದರು. ಹಲವು ಪ್ರಶ್ನೆ ಕೇಳಿ ಉತ್ತರ ಪಡೆದರು’ ಎಂದು ತಿಳಿಸಿದರು.