ಬೆಂಗಳೂರು : ಕರಾವಳಿ, ಮಲೆನಾಡು, ಹಳೆ ಮೈಸೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಅನಾಪೇಕ್ಷಿತ ಮಳೆ ದೀಪಾವಳಿ ಹಬ್ಬದ ಉತ್ಸಾಹಕ್ಕೆ ತಣ್ಣೀರೆರಚುತ್ತಿದೆ. ರಾತ್ರಿ ಮನೆಯ ಹೊರಗೆ ದೀಪ ಹಚ್ಚುವುದಕ್ಕೆ, ಪಟಾಕಿ ಹೊಡೆಯುವುದಕ್ಕೆ ಅಡ್ಡಿಯಾಗುತ್ತಿದೆ. ಹಲವೆಡೆ ಗದ್ದೆಗಳಲ್ಲಿ ಭತ್ತ ಬೆಳೆ ಬಲಿತು ನಿಂತಿದ್ದು, ಹಬ್ಬ ಮುಗಿದ ಬಳಿಕ ಕೊಯ್ಲಿಗೆ ಸಿದ್ಧವಾಗಿದ್ದ ರೈತರು ಆತಂಕಕ್ಕೀಡಾಗಿದ್ದಾರೆ.
ಮಲೆನಾಡು ಭಾಗದಲ್ಲಿ ಅಡಕೆ ಕೊಯ್ಲು ಆರಂಭವಾಗಬೇಕಾಗಿತ್ತು. ಆದರೆ, ನಿರಂತರ ಮಳೆಯಿಂದ ಬೆಳೆಗಾರರು ಮರದಿಂದ ಅಡಕೆ ಕೆಡವುದನ್ನು ಸ್ವಲ್ಪ ದಿನದ ಮಟ್ಟಿಗೆ ಮುಂದೂಡುತ್ತಿದ್ದಾರೆ. ಇದೇ ರೀತಿಯಲ್ಲಿ ಹೆಚ್ಚಿನ ದಿನವನ್ನು ಮುಂದೂಡಿದರೆ ಅಡಕೆ ಗುಣಮಟ್ಟದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಮಳೆಯು ಅಡಕೆ ಬೆಳೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ.
ಕುಂದಾಪುರ ತಾಲೂಕಿನಲ್ಲಿ ಸಿಡಿಲಿಗೆ 5 ಮನೆಗಳು ಭಾಗಶಃ ಹಾನಿಗೊಳಗಾಗಿವೆ. ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆಯಾಗುತ್ತಿದ್ದು, ತರೀಕೆರೆ, ಕಡೂರು ಹಾಗೂ ಅಜ್ಜಂಪುರ ತಾಲೂಕುಗಳಲ್ಲಿನ ಹಲವು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಹಾಸನ ಜಿಲ್ಲೆಯ ಹಲವೆಡೆಯೂ ಮಳೆಯಾಗುತ್ತಿದ್ದು, ಹಲವು ಕೆರೆಗಳು ಭರ್ತಿಯಾಗಿ ಕೋಡಿ ಬಿದ್ದಿವೆ. ಜಿಲ್ಲೆಯಾದ್ಯಂತ 15ಕ್ಕೂ ಹೆಚ್ಚು ಮನೆಗಳು ಹಾನಿಗೆ ಒಳಗಾಗಿವೆ.
ಈ ಮಧ್ಯೆ, ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಧಾರವಾಡ, ಗದಗ, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ 10ಕ್ಕೂ ಅಧಿಕ ಜಿಲ್ಲೆಗಳಲ್ಲಿ 6 ಲಕ್ಷ ಹೆಕ್ಟೇರ್‌ನಷ್ಟು ಬೆಳೆ ಹಾನಿ ಸಂಭವಿಸಿದೆ.