ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್‌, ಪವಿತ್ರಾ ಜಾಮೀನು ಅರ್ಜಿ ಡಿ.3ಕ್ಕೆ ಮುಂದೂಡಿದ ಹೈಕೋರ್ಟ್‌

ಸಾರಾಂಶ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಹಾಗೂ ನಟಿ ಪವಿತ್ರಾಗೌಡ ಸೇರಿ ಇತರೆ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಡಿ.3ಕ್ಕೆ ಮುಂದೂಡಿದೆ.

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ನಟ ದರ್ಶನ್‌ ಹಾಗೂ ನಟಿ ಪವಿತ್ರಾಗೌಡ ಸೇರಿ ಇತರೆ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್‌ ಡಿ.3ಕ್ಕೆ ಮುಂದೂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಜಾಮೀನು ಕೋರಿ ಆರೋಪಿಗಳಾದ ನಟ ದರ್ಶನ್‌, ಪವಿತ್ರಾಗೌಡ, ಆರ್‌.ನಾಗರಾಜು, ಎಂ.ಲಕ್ಷ್ಮಣ್, ಅನು ಕುಮಾರ್‌, ಜಗದೀಶ್‌ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾಣೆಯನ್ನು ನ್ಯಾಯಮೂರ್ತಿ ಎಸ್‌.ವಿಶ್ವಜಿತ್‌ ಶೆಟ್ಟಿ ಅವರ ಪೀಠ ಶುಕ್ರವಾರವೂ ಮುಂದುವರಿಸಿತು. ದಶನ್‌ ಮ್ಯಾನೇಜರ್‌ ನಾಗರಾಜ್‌ ಪರ ವಕೀಲರು ಶುಕ್ರವಾರ ವಾದ ಮಂಡನೆಯನ್ನು ಪೂರ್ಣಗೊಳಿಸಿದರು. ದಿನದ ಕಲಾಪದ ಅವಧಿ ಮುಗಿದ ಹಿನ್ನೆಲೆಯಲ್ಲಿ ವಿಚಾರಣೆಯನ್ನು ಡಿ.3ಕ್ಕೆ ಮುಂದೂಡಲಾಗಿದೆ.

ಅಲ್ಲಿಗೆ ದರ್ಶನ್‌ ಮತ್ತು ಆತನ ಮ್ಯಾನೇಜರ್‌ ನಾಗರಾಜು ಪರ ವಕೀಲರ ವಾದ ಮಂಡನೆ ಪೂರ್ಣಗೊಂಡಂತಾಗಿದೆ. ಇನ್ನೂ ಪವಿತ್ರಾಗೌಡ, ಲಕ್ಷ್ಮಣ್‌ ಹಾಗೂ ಅನುಕುಮಾರ್‌ ಅವರ ಪರ ವಕೀಲರ ವಾದ ಮಂಡನೆ ಬಾಕಿಯಿದೆ. ಅವರು ಡಿ.3ರಂದು ತಮ್ಮ ವಾದ ಮಂಡಿಸಬಹುದು.+++

ನಂತರ ಪ್ರಕರಣವನ್ನು ತನಿಖೆ ನಡೆಸಿರುವ ಕಾಮಾಕ್ಷಿಪಾಳ್ಯ ಠಾಣಾ ಪೊಲೀಸರ ಪರ ಸರ್ಕಾರಿ ವಿಶೇಷ ಅಭಿಯೋಜಕ ಪಿ.ಪ್ರಸನ್ನ ಕುಮಾರ್‌ ವಾದ ಮಂಡನೆಯನ್ನು ಆರಂಭಿಸುವ ಸಾಧ್ಯತೆಯಿದೆ.

ವಿಚಾರಣೆ ವೇಳೆ ಆರೋಪಿ ನಾಗರಾಜು ಪರ ವಕೀಲರು, ಪ್ರಕರಣ ಸಂಬಂಧ ವಿಳಂಬವಾಗಿ ಎಫ್‌ಐಆರ್ ದಾಖಲಿಸಲಾಗಿದೆ. ಅರ್ಜಿದಾರರ ಬಂಧನಕ್ಕೆ ಸೂಕ್ತ ಕಾರಣ ಹಾಗೂ ಕಾರಣವನ್ನು ನೀಡಿಲ್ಲ. ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ಬಂಧನಕ್ಕೆ ತನಿಖಾಧಿಕಾರಿಗಳು ಸೂಕ್ತ ಕಾರಣ ಒದಗಿಸುವುದು ಕಡ್ಡಾಯ. ಅಪರಾಧ ಕೃತ್ಯಕ್ಕೆ ಬಳಕೆ ಮಾಡಲಾಗಿದೆ ಎನ್ನಲಾದ ವಸ್ತುಗಳನ್ನು ತ್ವರಿತಗತಿಯಲ್ಲಿ ಪತ್ತೆ ಮಾಡುವಲ್ಲಿ ತನಿಖಾಧಿಕಾರಿಗಳು ವಿಫಲರಾಗಿದ್ದಾರೆ. ಕೊಲೆ ನಡೆದ ಜಾಗ ಪಟ್ಟಣಗೆರೆಯ ಷೆಡ್‌ನಲ್ಲಿನ ಪಂಚನಾಮೆ ನಡೆಸುವಲ್ಲಿ ಮತ್ತು ರೇಣುಕಾಸ್ವಾಮಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸುವುದರಲ್ಲಿ ತಡ ಮಾಡಲಾಗಿದೆ ಎಂದು ದೂರಿದರು.ಅಲ್ಲದೆ, ಮರಣೋತ್ತರ ವರದಿಯಲ್ಲಿ ರೇಣುಕಾಸ್ವಾಮಿ ಸಾವು ನಿರ್ದಿಷ್ಟವಾಗಿ ಯಾವ ಸಮಯದಲ್ಲಿ ಸಂಭವಿಸಿದೆ ಎಂಬ ಬಗ್ಗೆ ವೈದ್ಯರು ಉಲ್ಲೇಖಿಸಿಲ್ಲ. ಇನ್ನೂ ಪ್ರತ್ಯಕ್ಷದರ್ಶಿಗಳ ಹೇಳಿಕೆಯಲ್ಲಿ ಸಾಕಷ್ಟು ವೈರುಧ್ಯಗಳಿವೆ. ದೋಷಾರೋಪಪಟ್ಟಿಯಲ್ಲಿ ಕೊಲೆಯ ಉದ್ದೇಶಕ್ಕೆ ಪೂರಕವಾಗಿರುವ ಅಂಶವನ್ನು ಉಲ್ಲೇಖಿಸಿಲ್ಲ. ಈ ಎಲ್ಲಾ ಅಂಶ ಪರಿಗಣಿಸಿ ಅರ್ಜಿದಾರನಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದರು.

Share this article