ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ಆರೋಪಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮುಂದಿನ ಪ್ರಕ್ರಿಯೆ ನಡೆಸದಂತೆ ವಿಚಾರಣಾ ನ್ಯಾಯಾಲಯಕ್ಕೆ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಬೆಂಗಳೂರು : ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ಆರೋಪಿಯಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮುಂದಿನ ಪ್ರಕ್ರಿಯೆ ನಡೆಸದಂತೆ ವಿಚಾರಣಾ ನ್ಯಾಯಾಲಯಕ್ಕೆ (ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ) ಹೈಕೋರ್ಟ್ ಮಧ್ಯಂತರ ಆದೇಶ ಮಾಡಿದೆ.
ಪ್ರಕರಣ ಸಂಬಂಧ ಹಾಸನ ಜಿಲ್ಲೆಯ ಹೊಳೆನರಸೀಪುರ ಠಾಣೆಯಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ರೇವಣ್ಣ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ಸಂತ್ರಸ್ತೆಯು ಅರ್ಜಿದಾರರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ನಾಲ್ಕು ವರ್ಷಗಳ ಹಿಂದೆ ಸಂತ್ರಸ್ತೆಯು ರೇವಣ್ಣ ಅವರ ಮನೆಯನ್ನು ತೊರೆದಿದ್ದಾರೆ. ಆದರೆ, 2024ರ ಏ.28ರಂದು ದೂರು ದಾಖಲಿಸಿದ್ದಾರೆ. ಐಪಿಸಿ ಸೆಕ್ಷನ್ 354ಎ ಪ್ರಕಾರ ಆರೋಪಿಸಲಾದ ಘಟನೆ ನಡೆದ ನಂತರ ನಿಗದಿತ ಅವಧಿಯಲ್ಲಿ ದೂರು ದಾಖಲಿಸಬೇಕು. ಈ ಪ್ರಕರಣದಲ್ಲಿ ಹಲವು ವರ್ಷಗಳ ನಂತರ ದೂರು ದಾಖಲಿಸಲಾಗಿದೆ. ಹೀಗಿದ್ದರೂ ಆ ದೂರನ್ನು ವಿಚಾರಣೆಗೆ ಪರಿಗಣಿಸಿರುವ ವಿಚಾರಣಾ ನ್ಯಾಯಾಲಯದ ಕ್ರಮ ಕಾನೂನು ಬಾಹಿರ ಕ್ರಮವಾಗಿದ್ದು, ವಿಚಾರಣೆಗೆ ತಡೆಯಾಜ್ಞೆ ನೀಡಬೇಕು ಎಂದು ತಿಳಿಸಿದರು.
ಈ ವಾದ ಆಕ್ಷೇಪಿಸಿದ ವಿಶೇಷ ಸರ್ಕಾರಿ ಅಭಿಯೋಜಕರಾದ ಪ್ರೊ.ರವಿವರ್ಮ ಕುಮಾರ್, ಪ್ರಕರಣ ಸಂಬಂಧ ಆ.23ರಂದು ಆರೋಪಪಟ್ಟಿ ಸಲ್ಲಿಸಲಾಗಿದೆ. ಆರೋಪ ಪಟ್ಟಿಯನ್ನು ನ್ಯಾಯಾಲಯದ ಮುಂದೆ ಇಡಲಾಗುವುದು. ಲೈಂಗಿಕ ದೌರ್ಜನ್ಯ, ಜೀವ ಬೆದರಿಕೆ, ಮಹಿಳೆಯ ಘನತೆಗೆ ಚ್ಯುತಿ ತಂದ ಅಪರಾಧಗಳ ಸಂಬಂಧ ದೂರು ದಾಖಲಾಗಿದೆ. ಇವು ಅತ್ಯಂತ ಹೀನ ಅಪರಾಧ ಕೃತ್ಯವಾಗಿದೆ ಎಂದರು.
ಅಂತಿಮವಾಗಿ ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈ ಅರ್ಜಿ ಕುರಿತ ಮುಂದಿನ ವಿಚಾರಣೆವರೆಗೆ ವಿಚಾರಣಾ ನ್ಯಾಯಾಲಯವು ಪ್ರಕರಣ ಸಂಬಂಧ ಯಾವುದೇ ಪ್ರಕ್ರಿಯೆ ನಡೆಸಬಾರದು ಎಂದು ನಿರ್ದೇಶಿಸಿ ವಿಚಾರಣೆಯನ್ನು ಸೆ.19ಕ್ಕೆ ಮುಂದೂಡಿತು.