ಸಭಾಪತಿ ಹೊರಟ್ಟಿ ಎಂಎಲ್ಸಿಯಾಗಿ 45 ವರ್ಷ ಪೂರ್ಣ, ಮತ್ತೊಮ್ಮೆ ಗೆದ್ದರೆ ಹೊಸ ದಾಖಲೆ

Published : Jul 07, 2025, 12:42 PM IST
Karnataka Legislative Council Chairman Basavaraj Horatti

ಸಾರಾಂಶ

ಅತ್ಯುತ್ತಮ ಮಾರ್ಗ ಇದ್ದ ಕಾಲದಿಂದ ಹೆಜ್ಜೆ ಇಟ್ಟು ಸಾಗಿ ಬಂದಿರುವ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಈಗ ಸದಸ್ಯರಾಗಿ 45 ವರ್ಷಗಳನ್ನು ಪೂರೈಸಿ ದಾಖಲೆ ಮಾಡಿದ್ದಾರೆ.

ಪ್ರಸ್ತುತ ರಾಜಕಾರಣ, ರಾಜಕೀಯ ಎಂದರೆ ಒಳ್ಳೆಯ ಅರ್ಥ ಕೊಡದಂತಹ ಸ್ಥಿತಿ ಇದೆ. ಆದರೆ ಈ ಮಾತು ನಾಲ್ಕೈದು ದಶಕಗಳ ಹಿಂದೆ ಇರಲಿಲ್ಲ. ಸಮಾಜ ಸೇವೆ, ಬದ್ಧತೆ, ಪ್ರಾಮಾಣಿಕತೆ, ನಾಡಿನ ಅಭಿವೃದ್ಧಿಗೆ ರಾಜಕಾರಣ ಅತ್ಯುತ್ತಮ ಮಾರ್ಗ ಎಂದೇ ಹೆಸರಾಗಿತ್ತು. ಇಂಥ ಅತ್ಯುತ್ತಮ ಮಾರ್ಗ ಇದ್ದ ಕಾಲದಿಂದ ಹೆಜ್ಜೆ ಇಟ್ಟು ಸಾಗಿ ಬಂದಿರುವ ವಿಧಾನಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ ಈಗ ಸದಸ್ಯರಾಗಿ 45 ವರ್ಷಗಳನ್ನು ಪೂರೈಸಿ ದಾಖಲೆ ಮಾಡಿದ್ದಾರೆ.

ಕಲುಷಿತ ರಾಜಕೀಯದ ಮಧ್ಯ ಕಪ್ಪು ಚುಕ್ಕೆ ಇಲ್ಲದೆ ತಮ್ಮದೇ ಆದ ಛಾಪು ಮೂಡಿಸಿರುವ ಅಜಾತ ಶತ್ರು ಹೊರಟ್ಟಿ ಅವರು ನಿರಂತರವಾಗಿ 1980ರಿಂದ ಶಿಕ್ಷಕರ ಕ್ಷೇತ್ರದಿಂದ ಸದಸ್ಯರಾಗಿರುವುದು ಸಾಮಾನ್ಯ ಮಾತಲ್ಲ. ಇಡೀ ದೇಶದ ರಾಜಕೀಯ ಇತಿಹಾಸದಲ್ಲಿ ಇಷ್ಟೊಂದು ದೀರ್ಘಕಾಲ ನಿರಂತರವಾಗಿ ಸದನದ ಸದಸ್ಯರಾಗಿರುವವರು ಮತ್ತೊಬ್ಬರಿಲ್ಲ. ಅವರು ಶಿಕ್ಷಣ, ಶಿಕ್ಷಕರ ಕ್ಷೇತ್ರಕ್ಕೆ ನೀಡಿರುವ ಕೊಡುಗೆ, ಬದ್ಧತೆ, ಪ್ರಾಮಾಣಿಕತೆ ಅಂಶಗಳ ಕಾರಣ ದಶಕಗಳ ಕಾಲ ಶಿಕ್ಷಕರು ಅವರ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದಾರೆ. ತಮ್ಮನ್ನು ಆಯ್ಕೆ ಮಾಡಿದವರು ಸಹ ಹೆಮ್ಮೆಪಡುವ ರೀತಿಯಲ್ಲಿ ಸದಸ್ಯರಾಗಿ, ಸಚಿವರಾಗಿ ತಮ್ಮ ಛಾಪು ಮೂಡಿಸಿದ್ದಾರೆ.

ಶಿಕ್ಷಕರ ಮಗನಾಗಿ, ಸ್ವತಃ ಶಿಕ್ಷಕರಾಗಿ ಕೊನೆಗೆ ಪರಿಷತ್ತಿನಲ್ಲಿ ಶಿಕ್ಷಕರ ಪ್ರತಿನಿಧಿಯಾಗಿ, ಶಿಕ್ಷಣ ಸಚಿವರಾಗಿ ಈಗ ಸಭಾಪತಿಯಾಗಿರುವ ಹೊರಟ್ಟಿ ಅವರು ಒಂದು ರೀತಿಯಲ್ಲಿ ಬಹು ಅದೃಷ್ಟವಂತರು. ಹಲವು ಮುಖ್ಯಮಂತ್ರಿಗಳು, ವಿವಿಧ ಸರ್ಕಾರ, ನೂರಾರು ಸಚಿವರು, ಅಧಿಕಾರಿಗಳ ಆಡಳಿತ ವೈಖರಿಗೆ ಸಾಕ್ಷಿಯಾಗಿದ್ದಾರೆ. ಶಿಕ್ಷಕರು, ಶಿಕ್ಷಣದ ಸಮಸ್ಯೆಯನ್ನು ತಳಮಟ್ಟದಿಂದ ಅರಿತಿರುವ ಹೊರಟ್ಟಿ ಅವರು ಪಟ್ಟು ಹಿಡಿದು ಪರಿಹರಿಸುತ್ತಾ ಬಂದಿದ್ದಾರೆ. ಯಾವುದೇ ಪಕ್ಷ ಇರಲಿ, ಸರ್ಕಾರ ಇರಲಿ, ಶಿಕ್ಷಕರ ವಿಚಾರದಲ್ಲಿ ಮುಲಾಜಿಲ್ಲದೆ ಚಾಟಿ ಬೀಸಿ ಸರ್ಕಾರದ ತಪ್ಪು-ಒಪ್ಪುಗಳನ್ನು ಹೇಳುವಂತಹ ಗುಣ ಅಪರೂಪ.

''ವಜ್ರಾದಪಿ ಕಠೋರಾಣಿ, ಮೃದೂನಿ ಕುಸುಮಾದಪಿ’

ಪರಿಷತ್ತಿಗೆ ಹೊಸದಾಗಿ ಬಂದ ಸದಸ್ಯರಿರಬಹುದು ಅಥವಾ ತಮ್ಮ ವಯೋಮಾನದವರೇ ಇರಬಹುದು. ಯಾವುದೇ ಹಮ್ಮು-ಬಿಮ್ಮು ಇಲ್ಲದೆ ಸ್ನೇಹಿತನ ರೀತಿ ಮಾತನಾಡಿಸುತ್ತಾರೆ. ಹೊಸ ಸದಸ್ಯರಿಗೆ ಸದನದಲ್ಲಿ ಮಾತನಾಡಲು ಅವಕಾಶ ನೀಡುವುದು ಸೇರಿ ಸದನದ ನೀತಿ-ನಿಯಮ, ಶಿಷ್ಟಾಚಾರಗಳನ್ನು ತಿಳಿಹೇಳುವ ಕೆಲಸ ಮಾಡುತ್ತಾರೆ. ತಪ್ಪು ಮಾಡಿದಾಗ ಮುಲಾಜಿಲ್ಲದೆ ಸದನದೊಳಗೆ ಸಿಟ್ಟಿನಿಂದ ಹೇಳಿದ ಪ್ರಸಂಗಗಳು ಇತ್ತೀಚೆಗಂತು ಬೇಕಾದಷ್ಟು ನಡೆಯುತ್ತಿವೆ. ಚರ್ಚೆಗೆ ಇಲ್ಲವೇ ಮಾತನಾಡಲು ಅವಕಾಶ ನೀಡಿಲ್ಲವೆಂದಾಗ ಸಹಜವಾಗಿ ತಮ್ಮ ವಿರುದ್ಧ ಮಾತನಾಡಿದ ಸದಸ್ಯರ ವಿರುದ್ಧ ಕಠಿಣವಾಗಿ ಪ್ರತಿಕ್ರಿಯಿಸಿದರೂ ಮರುಕ್ಷಣವೇ ಅಂಥ ಸದಸ್ಯರನ್ನು ಸಮಾಧಾನಪಡಿಸುವ ವಿಶೇಷ ಗುಣ ಹೊರಟ್ಟಿ ಅವರದ್ದು.

ಶಿಕ್ಷಕರ ದನಿಯಾಗಿ ಹೊರಟ್ಟಿ

2004ರಲ್ಲಿ ಅಸ್ತಿತ್ವಕ್ಕೆ ಬಂದ ಜೆಡಿಎಸ್‌-ಕಾಂಗ್ರೆಸ್‌ ಸರ್ಕಾರ ನಂತರ 2006ರಲ್ಲಿನ ಬಿಜೆಪಿ-ಜೆಡಿಎಸ್‌ ಸರ್ಕಾರದದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಕಾನೂನು ಸಚಿವರಾಗಿ ಸೇವೆ ಸಲ್ಲಿಸಿದ್ದ ಹೊರಟ್ಟಿ ಅವರು ವಿಶೇಷವಾಗಿ ಶಿಕ್ಷಣ ಸಚಿವರಾಗಿದ್ದ ವೇಳೆ ಅನೇಕ ವರ್ಷಗಳಿಂದ ಶಿಕ್ಷಕರು ಎದುರಿಸುತ್ತಿದ್ದ ವಿವಿಧ ಸಮಸ್ಯೆಗಳನ್ನು ಪರಿಹರಿಸಿದ್ದನ್ನು ಈಗಲೂ ಶಿಕ್ಷಕರು ಸ್ಮರಿಸಿಕೊಳ್ಳುತ್ತಾರೆ. ವಿಶೇಷವಾಗಿ ಶಿಕ್ಷಕರ ವರ್ಗಾವಣೆ, ಪತಿ-ಪತ್ನಿ ಒಂದೇ ಕಡೆ ಸೇವೆ ಸಲ್ಲಿಸಲು ಅವಕಾಶ ನೀಡಿಕೆ, ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ, ಖಾಸಗಿ ಶಾಲೆಗಳನ್ನು ಅನುದಾನಕ್ಕೆ ಒಳಪಡಿಸುವಂತೆ ಮಾಡಿದರು.

ಹಲವಾರು ಸಮಿತಿಗಳಲ್ಲಿ ಸೇವೆ

ಇಷ್ಟು ವರ್ಷಗಳ ಅವಧಿಯಲ್ಲಿ ವಿಧಾನ ಮಂಡಲದ ವಿವಿಧ ಸಮಿತಿಗಳ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ವಿಷಯ ಸಮಿತಿ, ಸರ್ಕಾರಿ ಭರವಸೆಗಳ ಸಮಿತಿ, ಕಾಲ್ಪನಿಕ ವೇತನ ನಿಗದಿ ಪರಿಶೀಲನಾ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕೆನಡಾದಲ್ಲಿ ಜರುಗಿದ 65ನೇ ಕಾಮನ್‌ವೆಲ್ತ್‌ ರಾಷ್ಟ್ರಗಳ ವಿಧಾನ ಪರಿಷತ್ತಿನ ಪ್ರತಿನಿಧಿ, ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ನಡೆದ ಅಖಿಲ ಭಾರತ ಪೀಠಾಸೀನಾಧಿಕಾರಿಗಳ ಸಮ್ಮೇಳನದಲ್ಲಿ ಪರಿತ್ತಿನ ಪ್ರತಿನಿಧಿಯಾಗಿ ಬಸವರಾಜ ಹೊರಟ್ಟಿ ಪಾಲ್ಗೊಂಡಿದ್ದರು.

ಉತ್ತರ ಕರ್ನಾಟಕ ಅಭಿವೃದ್ಧಿಯ ಕನಸು

ಶಿಕ್ಷಕರ ಕ್ಷೇತ್ರದ ಪ್ರತಿನಿಧಿಯಾಗಿದ್ದರೂ ಹೊರಟ್ಟಿ ಅವರು ಉತ್ತರ ಕರ್ನಾಟಕ, ಹೈದ್ರಾಬಾದ್‌ ಕರ್ನಾಟಕದ ಅಭಿವೃದ್ಧಿಯಾಗುವ ನಿಟ್ಟಿನಲ್ಲಿ ಸದನದ ಹೊರಗೆ ಮತ್ತು ಒಳಗೆ ಸದಾ ಕಾಲ ದನಿ ಎತ್ತುತ್ತಲೇ ಬಂದವರು. ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನದಲ್ಲಿ ಕಿತ್ತೂರು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗಾಗಿ ವಿಶೇಷ ಚರ್ಚೆಗೆ ಅವಕಾಶ ಕಲ್ಪಿಸಿರುವುದು ಈ ಎರಡು ಭಾಗಗಳ ಅಭಿವೃದ್ಧಿಗೆ ಅವರು ಇಟ್ಟಿರುವ ಕಾಳಜಿಗೆ ಸ್ಪಷ್ಟ ಸಾಕ್ಷಿ.

50 ವರ್ಷಕ್ಕೆ ಎರಡೇ ವರ್ಷ ಬಾಕಿ

ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್‌ ಸದಸ್ಯರಾಗಿ ಜೂನ್‌ 30ಕ್ಕೆ 45 ವರ್ಷ ಪೂರ್ಣಗೊಂಡಿದ್ದರೂ ಅವರ ಸದಸ್ಯತ್ವ ಅವಧಿ 2028 ಜುಲೈ 21ರವರೆಗೆ ಇದೆ. ಹೀಗಾಗಿ ಅವಧಿ ಪೂರ್ಣಗೊಂಡರೆ ಸದಸ್ಯರಾಗಿರುವ ಅವಧಿ 48 ತಲುಪುತ್ತದೆ. ಪರಿಷತ್ತಿನ ಸದಸ್ಯರಾಗಿ 50 ವರ್ಷವಾಗಲು ಇನ್ನೂ ಎರಡು ವರ್ಷ ಬೇಕು. ಇತ್ತೀಚೆಗೆ ರಾಜಕೀಯ ವ್ಯವಸ್ಥೆ ಬಗ್ಗೆ ಬೇಸರಗೊಂಡಿರುವ ಹೊರಟ್ಟಿ ಅವರು ಹಲವು ಬಾರಿ ರಾಜಕೀಯ ಸಾಕು ಎಂಬ ಮಾತುಗಳನ್ನು ಹೇಳುತ್ತಾ ಬಂದಿದ್ದಾರೆ. ಒಂದು ವೇಳೆ ಮತ್ತೊಂದು ಬಾರಿ ಚುನಾವಣೆಗೆ ನಿಂತರೆ ಬಸವರಾಜ ಹೊರಟ್ಟಿ ಅವರು ‘ಸುವರ್ಣ ಸದಸ್ಯತ್ವ’ ಎಂಬ ಕೀರ್ತಿಗೆ ಭಾಜನರಾಗುವುದಂತೂ ನಿಶ್ಚಿತ.

PREV
Read more Articles on