ಬೆಂಗಳೂರು : ಬಿಜೆಪಿಯಿಂದ ಚಾಮುಂಡೇಶ್ವರಿ ದೇವಾಲಯ ಉಳಿಸಿ ಎಂಬ ಹೋರಾಟ ರೂಪಿಸಲಾಗುತ್ತಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ದಸರಾ ಉತ್ಸವದಲ್ಲಿ ಮೊದಲು ನಂದಿ ಧ್ವಜ ಹಾಗೂ ಗೋ ಪೂಜೆಯಾಗಬೇಕು. ಹಸು ತಿನ್ನುವ ಬಾನು ಮುಷ್ತಾಕ್ ಪೂಜೆ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಎಲ್ಲವೂ ಹಿಂದೂ ಶಾಸ್ತ್ರ ಪ್ರಕಾರ ನಡೆಯುತ್ತದೆ. ಹಿಂದೂ ಪಂಚಾಂಗದ ಪ್ರಕಾರ ದಿನಾಂಕ ನಿಗದಿಯಾಗುತ್ತದೆ. ಇಷ್ಟೆಲ್ಲ ಇದ್ದರೂ ಇದು ಹಿಂದೂಗಳದ್ದಲ್ಲ ಎನ್ನುತ್ತಾರೆ. ಮುಸ್ಲಿಮರು ಮೂರ್ತಿ ಪೂಜೆ ಮಾಡುವುದಿಲ್ಲ. ಸಚಿವ ಜಮೀರ್ ಅಹ್ಮದ್ ಅವರು ಮೂರ್ತಿ ಪೂಜೆ ಬಗ್ಗೆ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅಶೋಕ್, ದಸರಾ ಸಾಂಸ್ಕೃತಿಕ ಕಾರ್ಯಕ್ರಮ ಅಲ್ಲ. ಅದು ಹಿಂದೂಗಳ ಹಬ್ಬ. ನಾಡದೇವತೆಯನ್ನು, ನಾಡಹಬ್ಬವನ್ನು ಕಾಂಗ್ರೆಸ್‌ನವರು ವೋಟಿನ ಹಬ್ಬ ಮಾಡಿಕೊಂಡಿದ್ದಾರೆ ಎಂದು ಕಿಡಿ ಕಾರಿದರು.
ಕನ್ನಡಾಂಬೆ ಹೇಳಿಕೆಗೆ ಸ್ಪಷ್ಟೀಕರಣ
ಕೊಟ್ಟು ಉದ್ಘಾಟಿಸಿ: ಯದುವೀರ್
ಮೈಸೂರು : ಬಾನು ಮುಷ್ತಾಕ್ ಅವರು ಕನ್ನಡಾಂಬೆ ಕುರಿತ ಹೇಳಿಕೆಗೆ ಮೊದಲು ಸ್ಪಷ್ಟೀಕರಣ ನೀಡಿ, ನಂತರ ದಸರಾ ಉದ್ಘಾಟಿಸಲಿ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಬಾನು ಮುಷ್ತಾಕ್ ಅವರನ್ನ ಆಯ್ಕೆ ಮಾಡಿದಾಗ ನಾನು ಸ್ವಾಗತಿಸಿದ್ದೆ. ಅವರ ಹಳೇ ಭಾಷಣ ನಂತರ ನೋಡಿದ್ದೇನೆ. ಆ ಭಾಷಣಕ್ಕೆ ಅವರು ಸ್ಪಷ್ಟೀಕರಣ ಕೊಡಲಿ ಅಥವಾ ಹೇಳಿಕೆಯನ್ನ ವಾಪಸ್ ಪಡೆಯಲಿ ಎಂದು ಹೇಳಿದರು.
ಅವರ ಧರ್ಮರ ಆಚರಣೆ ಬಗ್ಗೆ ನಾನು ಮಾತನಾಡುವುದಿಲ್ಲ. ನಮ್ಮ ಧರ್ಮದಲ್ಲಂತೂ ಮೂರ್ತಿ ಪೂಜೆ ಶ್ರೇಷ್ಠ. ಅವರು ಚಾಮುಂಡಿಶ್ವರಿ ದೇವಿಯನ್ನು ಗೌರವಿಸಿ ಬರಬೇಕು. ಭಕ್ತಿಯಿಂದ ದೇವರನ್ನ ಪೂಜಿಸಬೇಕು. ಇದಕ್ಕೂ ಮೊದಲು ತಮ್ಮ ಹಳೆಯ ಹೇಳಿಕೆಗೆ ಸ್ಪಷ್ಟೀಕರಣ ಕೊಡಬೇಕು ಎಂದರು.
ಸದಾ ಹಿಂದೂ ದೇವಸ್ಥಾನ:
ಚಾಮುಂಡಿಬೆಟ್ಟ ಕುರಿತ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ಹಾಸ್ಯಾಸ್ಪದ. ಇದು ಸದಾ ಕಾಲದಿಂದಲೂ ಹಿಂದೂ ದೇವಸ್ಥಾನ. ಇದು ಹೇಗೆ ಬೇರೆಯವರ ಶ್ರದ್ಧಾ ಕೇಂದ್ರ ಆಗಲು ಸಾಧ್ಯ ಎಂದು ಯದುವೀರ್ ಪ್ರಶ್ನಿಸಿದರು.