;Resize=(412,232))
ಬೆಂಗಳೂರು : ‘ನನಗೆ ಜೀವ ಭೀತಿ ಇದೆ. ನನ್ನ ಜೀವಕ್ಕೆ ಸೂಕ್ತ ಭದ್ರತೆ ಒದಗಿಸುವವರೆಗೂ ರಾಜ್ಯಕ್ಕೆ ಬರುವುದಿಲ್ಲ ಹಾಗೂ ಪೊಲೀಸರ ವಿಚಾರಣೆಗೂ ಹಾಜರಾಗುವುದಿಲ್ಲ’ ಎಂದು ವಿವಾದಿತ ‘ಬಸವ ಮಂಟಪ’ ಕೃತಿಯ ಲೇಖಕ ರವಿ ಹಂಜ್ ಹೇಳಿದ್ದಾರೆ. ಅಲ್ಲದೆ, ಕೃತಿ ಮುಟ್ಟುಗೋಲು ಹಾಕಿಕೊಂಡರೆ ಸರ್ಕಾರದ ವಿರುದ್ಧ ಕೋರ್ಟ್‌ನಲ್ಲಿ ಕೇಸ್ ದಾಖಲಿಸುವುದಾಗಿ ಎಚ್ಚರಿಸಿದ್ದಾರೆ.
‘ಸಚಿವರು ಸೇರಿ ಮುಗ್ಧ ಜನರು ಅಪಪ್ರಚಾರಕ್ಕೆ ಬಲಿಯಾಗಿದ್ದಾರೆ. ಸಾಮಾಜಿಕ ತಲ್ಲಣ ಸೃಷ್ಟಿಸಿ ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿರುವ ಕುತಂತ್ರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದೂ ಆಗ್ರಹಿಸಿದ್ದಾರೆ.
ಭಾನುವಾರ ಅಜ್ಞಾತ ಸ್ಥಳದಿಂದಲೇ ಖಾಸಗಿ ಸುದ್ದಿವಾಹಿನಿಗಳಿಗೆ ದೂರವಾಣಿ ಮೂಲಕ ಪ್ರತಿಕ್ರಿಯಿಸಿರುವ ಅವರು, ನಾನು ವೀರಶೈವ-ಲಿಂಗಾಯತ ಪ್ರತ್ಯೇಕಿಸಬೇಕೆನ್ನುವ ಹೋರಾಟಗಾರರನ್ನು ‘ಲಿಂಗಾಹತರು’ ಎಂದಿದ್ದೇನೆಯೇ ಹೊರತು ಬಸವಣ್ಣ ಹಾಗೂ ಲಿಂಗಾಯತ ಸಮುದಾಯವನ್ನು ನಿಂದಿಸಿಲ್ಲ ಎಂದು ಹೇಳಿದರು.
ನನ್ನ ವಿರುದ್ಧ ಫತ್ವಾ ಹೊರಡಿಸಿದವರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು. ನನಗೆ ಜೀವ ಭೀತಿ ಇದೆ. ನನ್ನ ಜೀವಕ್ಕೆ ಸೂಕ್ತ ಭದ್ರತೆ ಒದಗಿಸುವವರೆಗೂ ರಾಜ್ಯಕ್ಕೂ ಬರುವುದಿಲ್ಲ ಹಾಗೂ ಪೊಲೀಸರ ವಿಚಾರಣೆಗೂ ಹಾಜರಾಗುವುದಿಲ್ಲ. ಈ ಸಂಬಂಧ ಕೇಂದ್ರ ಗೃಹ ಇಲಾಖೆ ಜತೆ ಅಮೆರಿಕ ದೇಶದ ರಾಯಭಾರಿ ಕಚೇರಿ ಸಂಪರ್ಕದಲ್ಲಿದೆ ಎಂದು ತಿಳಿಸಿದರು.
ಇನ್ನು ನನಗೆ ಇಂಥದ್ದೇ ದಿನ ವಿಚಾರಣೆಗೆ ಬರುವಂತೆ ಪೊಲೀಸರು ಸೂಚಿಸಿಲ್ಲ. ಅನುಕೂಲವಾದಾಗ ವಿಚಾರಣೆಗೆ ಬರುವಂತೆ ಪೊಲೀಸರು ತಿಳಿಸಿದ್ದಾರೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.
ರಾಜ್ಯ ಸರ್ಕಾರ ದುರ್ಬಲ ಮತ್ತು ನಿಷ್ಕ್ರಿಯವಾಗಿದೆ. ನನ್ನ ಕೃತಿ ಮುಟ್ಟುಗೋಲಿಗೆ ಸಚಿವ ಸಂಪುಟದಲ್ಲಿ ತೀರ್ಮಾನವಾಗಿದೆ. ಆದರೆ ಇನ್ನೂ ಕಾನೂನಾತ್ಮಕವಾಗಿ ಮುಟ್ಟುಗೋಲಿನ ತೀರ್ಮಾನವಾಗಿಲ್ಲ. ಈಗಾಗಲೇ ಆ ಕೃತಿ ಒಂದೇ ಒಂದು ಪ್ರತಿ ಉಳಿಯದಂತೆ ಮಾರಾಟವಾಗಿವೆ. ಸರ್ಕಾರ ಕಾನೂನಾತ್ಮಕವಾಗಿ ನಿಷೇಧ ಮಾಡಿದ ಬಳಿಕ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ರವಿ ಹಂಜ್ ಕಿಡಿಕಾರಿದರು.
ಕೃತಿ ಮುಟ್ಟುಗೋಲು ಹಾಕಿದರೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುತ್ತೇನೆ. ನನ್ನ ವಿರುದ್ಧ ಆರೋಪ ಮಾಡುತ್ತಿರುವ ಯಾರೊಬ್ಬರು ಆ ಪುಸ್ತಕದ ಒಂದು ಹಾಳೆ ಕೂಡ ಓದಿಲ್ಲ. ಇನ್ನು ನನ್ನ ಸಂದರ್ಶನದ 90 ನಿಮಿಷಗಳ ವಿಡಿಯೋವನ್ನು ವೀಕ್ಷಿಸಿಲ್ಲ. ಯಾರೋ ಇಬ್ಬರು ಕುತಂತ್ರಿಗಳ ಕುತಂತ್ರಕ್ಕೆ ಹಲವರು ಬಲಿಯಾಗಿದ್ದಾರೆ. ಅಪಪ್ರಚಾರ ಮತ್ತು ಸಾಮಾಜಿಕ ತಲ್ಲಣಕ್ಕೆ ತಾವು ಹೊಣೆಯಲ್ಲ ಎಂದು ವಾಗ್ದಾಳಿ ನಡೆಸಿದರು.
ಸರ್ಕಾರ ನನ್ನ ವಿರುದ್ಧ ಕ್ರಮ ಕೈಗೊಳ್ಳುವುದಾದರೆ ಹರಿಹರನ ಬಸವರಾಜ ದೇವರ ರಗಳೆ ಹಾಗೂ ಪಾಲ್ಕುರಿಕೆ ಸೋಮನಾಥನ ಬಸವ ಪುರಾಣಗಳನ್ನು ಮೊದಲು ನಿಷೇಧಿಸಬೇಕು ಎಂದು ಇದೇ ವೇಳೆ ಹಂಜ್ ಆಗ್ರಹಿಸಿದರು.
ನಾನು ಬಸವಣ್ಣನನ್ನು ಅವಹೇಳನ ಮಾಡಿಲ್ಲ. ಬಸವಣ್ಣನ ಪುರಾಣ, ಚನ್ನಬಸವಣ್ಣನ ಪುರಾಣಗಳಲ್ಲಿನ ಚಿತ್ರಣವನ್ನೇ ಪ್ರಸ್ತುತಪಡಿಸಿದ್ದೇನೆ. ಹರಿಹರನ ಬಸವರಾಜ ದೇವರ ರಗಳೆ ಮತ್ತು ಪಾಲ್ಕುರಿಕೆ ಸೋಮನಾಥನ ಬಸವ ಪುರಾಣದಲ್ಲಿನ ಅಂಶಗಳನ್ನೇ ಪುಸ್ತಕದಲ್ಲಿ ಉಲ್ಲೇಖಿಸಿದ್ದೇನೆ. ಸರ್ಕಾರದ ವತಿಯಿಂದಲೇ ಹರಿಹರನ ರಗಳೆ ಮೇಲೆ ನೂರಾರು ಸಂಶೋಧನೆಗಳಾಗಿವೆ. ಹಾಗಾದರೆ ಸರ್ಕಾರವೇ ಬಸವಣ್ಣನನ್ನು ಕೊಲೆಗಡುಕ ಎಂದು ಮಾಡಿದೆ. ಸರ್ಕಾರಿ ಪ್ರಾಯೋಜಕತ್ವದಲ್ಲಿ ಪ್ರೊ.ಎಂ.ಎಂ.ಕಲ್ಬುರ್ಗಿ ಅವರು ಈ ಎಲ್ಲ ರಗಳೆ ಪುರಾಣಗಳ ಬಗ್ಗೆ ಪುಸ್ತಕ ಮರು ಮುದ್ರಿಸಿದ್ದಾರೆ. ಸರ್ಕಾರವೇ ಇಂತಹ ತಪ್ಪು ಮಾಡಿ ನನ್ನನ್ನು ಹೇಗೆ ತಪ್ಪಿತಸ್ಥ ಹೇಳಲು ಸಾಧ್ಯ? ಎಂದು ದೂರಿದರು.
ನಾನು ಅಮೆರಿಕಕ್ಕಲ್ಲ ದುಬೈಗೆ ಹೊರಟಿದ್ದೆ
ಜೀವ ಬೆದರಿಕೆ ಹಿನ್ನೆಲೆಯಲ್ಲಿ ನಾನು ಆತ್ಮರಕ್ಷಣೆಗೆ ಅಮೆರಿಕಕ್ಕೆ ಹೊರಟಿದ್ದೆ ಎಂಬುದು ಸುಳ್ಳು. ಬೆಂಗಳೂರಿನಲ್ಲಿ ಪ್ರತಿಭಟನೆಗಳು ಶುರುವಾದ ಕಾರಣಕ್ಕೆ ನಾಲ್ಕು ದಿನಗಳ ಕಾಲ ದುಬೈಗೆಂದು ಹೊರಟಿದ್ದೆ ಎಂದು ರವಿ ಹೇಳಿದರು. ಕೇರಳದ ಕೊಚ್ಚಿಯಿಂದ ದುಬೈಗೆ ತೆರಳಲು ನಿರ್ಧರಿಸಿದ್ದೆ. ರಾಜ್ಯದ ಪರಿಸ್ಥಿತಿ ತಿಳಿಯಾದ ಬಳಿಕ ಮತ್ತೆ ಮರಳಿ ಬರುವುದರಲ್ಲಿದ್ದೆ. ಕೊಚ್ಚಿಯಲ್ಲಿ ನನ್ನನ್ನು ವಶಕ್ಕೆ ಪಡೆದ ಕೂಡಲೇ ಅಮೆರಿಕ ರಾಯಭಾರಿ ಕಚೇರಿ ರಕ್ಷಣೆಗೆ ಧಾವಿಸಿತು. ಕೊಚ್ಚಿಯಿಂದ ನನ್ನ ಒಂದು ಕೂದಲೂ ಕೊಂಕದಂತೆ ಗೌರವಪೂರ್ವಕವಾಗಿ ಚೆನ್ನೈಗೆ ಕರೆತಂದು ಸುರಕ್ಷಿತ ತಾಣದಲ್ಲಿರಿಸಲಾಗಿದೆ ಎಂದರು.
ಕೊಚ್ಚಿಯಲ್ಲಿ ಅಮೆರಿಕ ನನ್ನ ನೆರವಿಗೆ ಬಂತು
ಬೆಂಗಳೂರಿನಲ್ಲಿ ಪ್ರತಿಭಟನೆಗಳು ಶುರುವಾದ ಕಾರಣಕ್ಕೆ ನಾಲ್ಕು ದಿನಗಳ ಕಾಲ ದುಬೈಗೆಂದು ಹೊರಟಿದ್ದೆ. ಕೊಚ್ಚಿಯಲ್ಲಿ ನನ್ನನ್ನು ವಶಕ್ಕೆ ಪಡೆದ ಕೂಡಲೇ ಅಮೆರಿಕ ರಾಯಭಾರ ಕಚೇರಿ ರಕ್ಷಣೆಗೆ ಧಾವಿಸಿತು. ಕೊಚ್ಚಿಯಿಂದ ನನ್ನ ಒಂದು ಕೂದಲೂ ಕೊಂಕದಂತೆ ಗೌರವಪೂರ್ವಕವಾಗಿ ಚೆನ್ನೈಗೆ ಕರೆತಂದು ಸುರಕ್ಷಿತ ತಾಣದಲ್ಲಿರಿಸಲಾಗಿದೆ.
- ರವಿ ಹಂಜ್, ವಿವಾದಿತ ಲೇಖಕ
26ಕ್ಕೆ ವಿಚಾರಣೆಗೆ ಬರಲು ಬೆಳಗಾವಿ ಪೊಲೀಸ್ ನೋಟಿಸ್
ಬೆಳಗಾವಿ: ವಿವಾದಿತ ‘ಬಸವ ಮಂಟಪ’ ಕೃತಿಯ ಲೇಖಕ ರವಿ ಹಂಜಗಿಮಠ (ಹಂಜ್) ಅವರು ನ.26ರಂದು ತನಿಖಾಧಿಕಾರಿ ಎದುರು ವಿಚಾರಣೆಗೆ ಖುದ್ದು ಹಾಜರಾಗಬೇಕೆಂದು ಬೆಳಗಾವಿಯ ಮಾರ್ಕೆಟ್ ಠಾಣೆ ಪೊಲೀಸರು ನೋಟಿಸ್ ನೀಡಿದ್ದಾರೆ. ಬಸವಣ್ಣ ಅವರ ಬಗ್ಗೆ ಅವಹೇಳನ ಮಾಡಿರುವ ಸಂಬಂಧ ಹಂಜ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.