ಬೆಂಗಳೂರು : ಸರಣಿ ರಜೆ ಹಿನ್ನೆಲೆಯಲ್ಲಿ ಆ.15ರಂದು ಶುಕ್ರವಾರ ಒಂದೇ ದಿನ ಮೆಟ್ರೋ ರೈಲುಗಳಲ್ಲಿ 10,83,788 ಜನ ಪ್ರಯಾಣಿಸಿದ್ದು, ಹೊಸ ದಾಖಲೆ ನಿರ್ಮಾಣವಾಗಿದೆ.
ಹಳದಿ ಮಾರ್ಗ ಉದ್ಘಾಟನೆಯ ಮರುದಿನವಾದ ಆ.11ರಂದು 10,48,031 ಜನ ಪ್ರಯಾಣಿಸಿದ್ದು ನೂತನ ದಾಖಲೆಯಾಗಿತ್ತು. ಆದರೆ, ಮೂರೇ ದಿನಗಳಲ್ಲಿ ದಾಖಲೆ ಮುರಿದು ಹೊಸ ದಾಖಲೆ ನಿರ್ಮಾಣವಾಗಿದೆ.
ಸ್ವಾತಂತ್ರ್ಯ ದಿನಾಚರಣೆ ಮತ್ತು ವಾರಾಂತ್ಯ ಸೇರಿ ಮೂರು ದಿನಗಳ ಸರಣಿ ರಜೆ ಹಿನ್ನೆಲೆಯಲ್ಲಿ ನಗರದಿಂದ ತಮ್ಮ ತಮ್ಮ ಊರುಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು. ರೈಲು ಮತ್ತು ಬಸ್ ನಿಲ್ದಾಣಗಳಿಗೆ ತಲುಪಲು ಪ್ರಯಾಣಿಕರು ತಮ್ಮ ಸ್ವಂತ ವಾಹನಗಳನ್ನು ಬಳಸುವ ಬದಲು ಮೆಟ್ರೋ ಬಳಕೆ ಮಾಡಿದ್ದಾರೆ. ಹೀಗಾಗಿ, ಪ್ರಯಾಣಿಕರ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದಿದೆ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.
ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆಯ ಸಾರ್ವತ್ರಿಕ ರಜೆಯ ದಿನವೂ ಮೆಟ್ರೋ ರೈಲುಗಳಲ್ಲಿ ಪ್ರಯಾಣಿಕರ ಸಂಖ್ಯೆ ಉತ್ತಮವಾಗಿತ್ತು. ಶುಕ್ರವಾರ ಸಂಜೆ ಆರ್.ವಿ ರಸ್ತೆ ನಿಲ್ದಾಣದ ಮತ್ತು ರೈಲಿನಲ್ಲೂ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿತ್ತು ಎಂದು ಜಾಲತಾಣ ಎಕ್ಸ್‌ನಲ್ಲಿ ಕೆಲವು ಪ್ರಯಾಣಿಕರು ತಮ್ಮ ಅನುಭವ ಹಂಚಿ ಕೊಂಡಿದ್ದಾರೆ.