ಚೀನಾದ ಸಿಎಂಆರ್‌ಎಸ್‌ಯಿಂದ ಚಾಲಕ ರಹಿತ ರೈಲಿನ ತಪಾಸಣೆ - ಮೆಟ್ರೋ ಹಳದಿ ಮಾರ್ಗ ಪ್ರಾರಂಭಕ್ಕೆ ಮಹತ್ವದ ಬೆಳವಣಿಗೆ

ಸಾರಾಂಶ

 ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ತೆರೆಯುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಸೋಮವಾರ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡವು (ಸಿಎಂಆರ್‌ಎಸ್‌) ಈ ಮಾರ್ಗಕ್ಕಾಗಿ ಚೀನಾದ ಸಿಆರ್‌ಆರ್‌ಸಿ ಕಂಪನಿ ಪೂರೈಸಿರುವ ಚಾಲಕ ರಹಿತ ರೈಲಿನ ಶಾಸನಬದ್ಧ ತಪಾಸಣೆ ನಡೆಸಿದೆ.

  ಬೆಂಗಳೂರು : ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕಿಸಲಿರುವ ನಮ್ಮ ಮೆಟ್ರೋ ಹಳದಿ ಮಾರ್ಗವನ್ನು ತೆರೆಯುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಸೋಮವಾರ ಮೆಟ್ರೋ ರೈಲು ಸುರಕ್ಷತಾ ಆಯುಕ್ತರ ತಂಡವು (ಸಿಎಂಆರ್‌ಎಸ್‌) ಈ ಮಾರ್ಗಕ್ಕಾಗಿ ಚೀನಾದ ಸಿಆರ್‌ಆರ್‌ಸಿ ಕಂಪನಿ ಪೂರೈಸಿರುವ ಚಾಲಕ ರಹಿತ ರೈಲಿನ ಶಾಸನಬದ್ಧ ತಪಾಸಣೆ ನಡೆಸಿದೆ.

ಆರ್‌.ವಿ.ರಸ್ತೆ-ಬೊಮ್ಮಸಂದ್ರ (19.15ಕಿಮೀ) ಸಂಪರ್ಕಿಸುವ ಹಳದಿ ಮಾರ್ಗಕ್ಕಾಗಿ ಕಳೆದ ವರ್ಷ ಫೆಬ್ರವರಿಯಲ್ಲಿ ಈ ರೈಲು ಬಂದಿದೆ. ಈವರೆಗೆ ಸುಮಾರು 37 ಪರೀಕ್ಷೆಗೆ ಒಳಪಟ್ಟಿದೆ. ರೈಲಿನ ವೇಗ, ನಿಲ್ಲುವ ಬಗೆ, ಸಿಗ್ನಲಿಂಗ್‌ ಹಾಗೂ ಎಲೆಕ್ಟ್ರಿಫಿಕೇಶನ್‌, ಪ್ರಯಾಣಿಕರ ಸುರಕ್ಷತೆ ಸೇರಿ ಇತರೆ ತಪಾಸಣೆಗಳನ್ನು ಮಾಡಲಾಗಿದೆ. ಇದೀಗ ಸಿಎಂಆರ್‌ಎಸ್‌ ತಂಡವು ರೋಲಿಂಗ್‌ ಸ್ಟಾಕ್‌ ತಪಾಸಣೆ ನಡೆಸಿದ್ದು, ಶೀಘ್ರವೇ ಇದರ ವರದಿಯನ್ನು ರೈಲ್ವೆ ಸಚಿವಾಲಯಕ್ಕೆ ನೀಡಲಿದೆ. ಸಚಿವಾಲಯದ ಒಪ್ಪಿಗೆ ಬಳಿಕ ಸಿಎಂಆರ್‌ಎಸ್‌ ತಂಡವನ್ನು ಪುನಃ ಆಹ್ವಾನಿಸಿ ಹಳದಿ ಮೆಟ್ರೋ ಮಾರ್ಗ ಹಾಗೂ ನಿಲ್ದಾಣಗಳನ್ನು ತಪಾಸಣೆ ನಡೆಸಲು ಕೋರಲಾಗುವುದು. ನಂತರವಷ್ಟೇ ವಾಣಿಜ್ಯ ಸಂಚಾರಕ್ಕೆ ಮಾರ್ಗವನ್ನು ಮುಕ್ತಗೊಳಿಸಲಾಗುವುದು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮವು ತಿಳಿಸಿದೆ.

ಇನ್ನು, ಹಳದಿ ಮೆಟ್ರೋ ಮಾರ್ಗಕ್ಕೆ ಇದೇ ಫೆ.14ರಂದು 6 ಬೋಗಿಗಳ ಎರಡನೇ ರೈಲನ್ನು ಕೊಲ್ಕತ್ತಾದ ತೀತಾಘರ್‌ ರೈಲ್ವೆ ಸಿಸ್ಟ್ಂ ಕಂಪನಿಯಿಂದ ಆಗಮಿಸಿದೆ. ಈ ರೈಲಿನ ತಪಾಸಣೆ, ಪ್ರಾಯೋಗಿಕ ಪರಿಶೀಲನೆಯೂ ನಡೆಯಲಿದೆ. ಈ ಚಾಲಕ ರಹಿತ ರೈಲುಗಳು ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆ (ಸಿಬಿಟಿಸಿ) ತಂತ್ರಜ್ಞಾನ ಆಧಾರಿತವಾಗಿವೆ. ಇದು ‘ಚಾಲಕರಹಿತ ತಂತ್ರಜ್ಞಾನ’ದ ರೈಲಾಗಿದ್ದು, ಬಿಎಂಆರ್‌ಸಿಎಲ್‌ ಸದ್ಯ ಲೋಕೋಪೈಲಟ್ ಇಟ್ಟುಕೊಂಡೇ ಅಂದರೆ ಚಾಲಕರಿಂದಲೇ ಓಡಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ರೈಲುಗಳ ಪೂರೈಕೆ ವಿಳಂಬ

ಇನ್ನು, ಹಳದಿ ಮಾರ್ಗದ ಕಾಮಗಾರಿ ಮುಗಿದು ವರ್ಷ ಕಳೆದಿದ್ದರೂ ರೈಲುಗಳ ಕೊರತೆಯಿಂದ ಇನ್ನು ವಾಣಿಜ್ಯ ಸಂಚಾರ ಆರಂಭವಾಗಿಲ್ಲ. ಕನಿಷ್ಠ 3 ರೈಲುಗಳನ್ನು ಇಟ್ಟುಕೊಂಡು ಸಂಚಾರ ಆರಂಭಸಿಲು ಬಿಎಂಆರ್‌ಸಿಎಲ್‌ ಚಿಂತನೆ ನಡೆಸಿದೆ. ರೈಲುಗಳ ಪೂರೈಕೆ ವಿಳಂಬ ಕಾರಣದಿಂದಲೇ ಪ್ರಯಾಣಿಕರ ಸಂಚಾರ ಕಳೆದ ವರ್ಷದಿಂದ 3 ಬಾರಿ ಮುಂದೂಡಲ್ಪಟ್ಟಿದೆ. ಈ ಮಾರ್ಗವು 2 ಇಂಟರ್‌ಚೇಂಜ್‌ ಹೊಂದಿದ್ದು, ಹಸಿರು ಮಾರ್ಗವನ್ನು ಆರ್.ವಿ. ರಸ್ತೆ ನಿಲ್ದಾಣದಲ್ಲಿ ಸಂಪರ್ಕಿಸುತ್ತದೆ. ಇನ್ನು ಜಯದೇವ ಆಸ್ಪತ್ರೆ ನಿಲ್ದಾಣದಲ್ಲಿ ಗುಲಾಬಿ ಮಾರ್ಗದೊಂದಿಗೆ ಬೆಸೆಯುತ್ತದೆ. ಒಟ್ಟು 16 ಎತ್ತರದ ನಿಲ್ದಾಣಗಳು ಇವೆ. ಇನ್ಫೋಸಿಸ್, ಬಯೋಕಾನ್ ಕಂಪನಿಗಳಿಗೆ ಸಂಪರ್ಕ ಸಾಧಿಸುವ ಕಾರಣ ಐಟಿ ಉದ್ಯೋಗಿಗಳು ಈ ಮಾರ್ಗ ಆದಷ್ಟು ಬೇಗ ಪ್ರಾರಂಭಿಸಲು ಒತ್ತಾಯಿಸಿದ್ದಾರೆ. 

Share this article