ಬೆಂಗಳೂರು : ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯಲ್ಲಿ ಡಬಲ್‌ ಡೆಕ್ಕರ್‌ ಯೋಜನೆಗಾಗಿ ಟೆಂಡರ್‌ ಆಹ್ವಾನ

Published : Nov 11, 2024, 05:45 AM IST
Namma Metro

ಸಾರಾಂಶ

ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯಲ್ಲಿ ಡಬಲ್‌ ಡೆಕ್ಕರ್‌ ಯೋಜನೆಗಾಗಿ ಈಗಾಗಲೇ ಜಿಯೋಟೆಕ್ನಿಕಲ್‌ ಸರ್ವೆ ನಡೆಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಈಗ ಎತ್ತರಿಸಿದ ಮಾರ್ಗ, ನಿಲ್ದಾಣಗಳ ವಿನ್ಯಾಸ ರೂಪಿಸಿಕೊಳ್ಳಲು ಮುಂದಾಗಿದೆ.

ಬೆಂಗಳೂರು : ನಮ್ಮ ಮೆಟ್ರೋ ಮೂರನೇ ಹಂತದ ಯೋಜನೆಯಲ್ಲಿ ಡಬಲ್‌ ಡೆಕ್ಕರ್‌ ಯೋಜನೆಗಾಗಿ ಈಗಾಗಲೇ ಜಿಯೋಟೆಕ್ನಿಕಲ್‌ ಸರ್ವೆ ನಡೆಸುತ್ತಿರುವ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌) ಈಗ ಎತ್ತರಿಸಿದ ಮಾರ್ಗ, ನಿಲ್ದಾಣಗಳ ವಿನ್ಯಾಸ ರೂಪಿಸಿಕೊಳ್ಳಲು ಮುಂದಾಗಿದೆ.

ಮೂರನೇ ಹಂತದ ಮೆಟ್ರೋ ಯೋಜನೆಯು ಜೆ.ಪಿ.ನಗರ 4ನೇ ಹಂತದಿಂದ ಕೆಂಪಾಪುರದವರೆಗೆ ಹಾಗೂ ಹೊಸಹಳ್ಳಿಯಿಂದ ಕಡಬಗೆರೆವರೆಗೆ ಸೇರಿ 2 ಕಾರಿಡಾರ್‌ಗಳನ್ನು ಒಳಗೊಂಡಿದೆ. ಆಗಸ್ಟ್‌ನಲ್ಲಿ ಕೇಂದ್ರ ಸರ್ಕಾರ ₹ 15,611 ಕೋಟಿ ಮೊತ್ತದ ಯೋಜನೆಗೆ ಅನುಮತಿ ಕೊಟ್ಟ ಬಳಿಕ ಯೋಜನೆ ಅನುಷ್ಠಾನದ ಪ್ರಕ್ರಿಯೆ ಚುರುಕುಗೊಂಡಿದೆ. ಇದೀಗ 3 ಹಂತದಲ್ಲಿ ಡಬಲ್‌ ಡೆಕ್ಕರ್‌ ಯೋಜನೆಯ ವಿನ್ಯಾಸಕ್ಕಾಗಿ ಬಿಎಂಆರ್‌ಸಿಎಲ್‌ 3 ಹಂತಗಳಲ್ಲಿ ಟೆಂಡರ್‌ ಕರೆದಿದೆ.

ಸುಮನಹಳ್ಳಿ ಕ್ರಾಸ್‌ ಸ್ಟೇಷನ್‌ನಿಂದ ಕಡಬಗೆರೆವರೆಗೆ, ಸುಮನಹಳ್ಳಿ ಕ್ರಾಸ್‌ನಿಂದ ಕೆಂಪಾಪುರದವರೆಗೆ ಹಾಗೂ ಜೆ.ಪಿ.ನಗರ ಸ್ಟೇಷನ್‌ನಿಂದ ಬಿಡಿಎ ಕಾಂಪ್ಲೆಕ್ಸ್‌ ನಾಗರಬಾವಿ ಸ್ಟೇಷನ್‌ವರೆಗೆ ಡಬಲ್‌ ಡೆಕ್ಕರ್‌, ಎತ್ತರಿಸಿದ ಮಾರ್ಗ, ನಿಲ್ದಾಣಗಳು, ರಸ್ತೆ ಮಾರ್ಗ, ರ್ಯಾಂಪ್‌ಗಳ ನಿರ್ಮಾಣಕ್ಕಾಗಿ ವಿನ್ಯಾಸ ರೂಪಿಸಿಕೊಳ್ಳಲು ಮುಂದಾಗಲಾಗಿದೆ. ಇದರ ಜೊತೆಗೆ ಪೀಣ್ಯ ಹಾಗೂ ಸುಮನಹಳ್ಳಿ ಬಳಿ ಡಿಪೊ, ಸ್ಕೈವಾಕ್‌, ಬಹುಮಾದರಿ ಸಾರಿಗೆ ವ್ಯವಸ್ಥೆ ನಿರ್ಮಾಣವನ್ನು ಯಾವ ರೀತಿ ನಿರ್ಮಿಸಬೇಕು ಎಂಬುದರ ಬಗ್ಗೆ ನಿಗಮ ಸಲಹಾ ವರದಿ ಪಡೆಯಲಿದೆ.

ಮೆಟ್ರೋ ಮೂರನೇ ಹಂತದ 44.65 ಕಿಮೀ ಮಾರ್ಗಕ್ಕಾಗಿ ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆಯೂ ನಡೆಯುತ್ತಿದೆ. ಮೊದಲ ಪ್ಯಾಕೇಜ್‌ನಲ್ಲಿ ಹೊರ ವರ್ತುಲ ರಸ್ತೆ ಮಾರ್ಗದಲ್ಲಿ 299 ಆಸ್ತಿಗಳನ್ನು ಗುರುತಿಸಲಾಗಿದೆ. ಸ್ವಾಧೀನಪಡಿಸಿಕೊಳ್ಳಲು ಪ್ರಾಥಮಿಕ ಅಧಿಸೂಚನೆಯನ್ನು ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಗೆ (ಕೆಐಎಡಿಬಿ) ಸಲ್ಲಿಸಲಾಗಿದೆ. ಎರಡನೇ ಪ್ಯಾಕೇಜ್‌ನಲ್ಲಿ ಭೂಸ್ವಾಧೀನಕ್ಕಾಗಿ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೇಂದ್ರ ಸರ್ಕಾರಕ್ಕೆ ಮೂರನೇ ಹಂತದ ಮೆಟ್ರೋ ನಿರ್ಮಾಣದ ಪ್ರಸ್ತಾವನೆ ಸಲ್ಲಿಸಿದ ಬಳಿಕ ಈ ಮಾರ್ಗದಲ್ಲಿ ಡಬಲ್ ಡೆಕ್ಕರ್‌ ರೂಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿತ್ತು. ಹೀಗಾಗಿ ಕೇಂದ್ರದಿಂದ ಸದ್ಯದ ಯೋಜನಾ ವೆಚ್ಚ ಮೆಟ್ರೋ ಮಾರ್ಗ ನಿರ್ಮಾಣಕ್ಕೆ ಮಾತ್ರ ಸೀಮಿತವಾಗಿದೆ. ಡಬಲ್‌ ಡೆಕ್ಕರ್‌ ಯೋಜನೆಗೆ ಬೇಕಾಗುವ ಹಣವನ್ನು ಹೇಗೆ ಹೊಂದಿಸಬೇಕೆನ್ನುವುದರ ಬಗ್ಗೆ ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

PREV
Get the latest news from Bengaluru (ಬೆಂಗಳೂರು ಸುದ್ದಿ): Bengaluru city politics, civic issues, traffic updates, development projects, crime reports, weather, culture and community events on Kannada Prabha. Stay informed about everything that matters in India’s Garden City.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''